October 5, 2024

ಕಾಡಿನಲ್ಲಿರಬೇಕಾದ ಕಡವೆಯೊಂದು ಊರೊಳಗೆ ಓಡಾಡಿಕೊಂಡಿದ್ದು ರೈತರು ಬೆಳೆದ ಬೆಳೆಯನ್ನೆಲ್ಲ ತಿನ್ನುತ್ತಾ ಉಪಟಳ ನೀಡುತ್ತಿದೆ.
ಹೌದು, ಇಂತಹ ವಿಚಿತ್ರ ಪ್ರಕರಣ ನಡೆಯುತ್ತಿರುವುದು ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ.

ಸುಂಕಸಾಲೆ ಗ್ರಾಮ ಪಂಚಾಯಿತಿಯ ಮಧುಗುಂಡಿ, ಸುಂಕಸಾಲೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಡವೆಯೊಂದು ರಾಜಾರೋಷವಾಗಿ ಓಡಾಡಿಕೊಂಡು ಕಂಡ ಕಂಡ ಬೆಳೆಯನ್ನೆಲ್ಲಾ ತಿನ್ನುತ್ತಾ ಈ ಭಾಗದ ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಕಡವೆ ಮರಿಯಾಗಿದ್ದಾಗಿನಿಂದಲೂ ಮಧುಗುಂಡಿ ಗ್ರಾಮದಲ್ಲಿ ಓಡಾಡಿಕೊಂಡಿದೆ. ಗುಂಪಿನಿಂದ ಬೇರ್ಪಟ್ಟಿದ್ದ ಇದು ಮಧುಗುಂಡಿಯಲ್ಲಿ ಮನೆಗಳ ಬಳಿಯೇ ಓಡಾಡಿಕೊಂಡಿತ್ತು. ಇಲ್ಲಿನ ಜನರು ಇದನ್ನು ಬಹಳ ಪ್ರೀತಿಯಿಂದಲೇ ಕಾಣುತ್ತಾ ಬಂದಿದ್ದರು.  ಇದಕ್ಕೆ ತಿನ್ನಲು ಹುಲ್ಲು, ಸೊಪ್ಪು, ತಿಂಡಿ ನೀಡುತ್ತಿದ್ದರು. ಯಾರೋ ಇದರ ಕೊರಳಿಗೆ ಬೆಲ್ಟ್ ಸಹ ಹಾಕಿದ್ದಾರೆ. ಕಡವೆ ಊರೊಳಗೆ ಯಾರ ಭಯವೂ ಇಲ್ಲದೇ  ಓಡಾಡಿಕೊಂಡಿದೆ.

ಇದು ಚಿಕ್ಕ ಮರಿಯಾಗಿದ್ದಾಗ ಯಾರಿಗೂ ತೊಂದರೆ ಇರಲಿಲ್ಲ. ಆದರೆ ಈಗ ಅದು ಬೆಳೆದು ದೊಡ್ಡದಾಗಿದೆ. ಈಗ ಬೇಲಿ ಹಾರಲು ಶುರುಮಾಡಿದೆ. ಹಾಗಾಗಿ ಈಗ ಈ ಕಡವೆ ಗ್ರಾಮದ ರೈತರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ಊರಲ್ಲಿ ತರಕಾರಿ, ಸೊಪ್ಪು, ಹೂವಿನ ಗಿಡ, ಮೆಣಸಿನ ಗಿಡ ಮುಂತಾದ ಬೆಳೆಗಳನ್ನು ಇದು ತಿಂದು ಹಾಕುತ್ತಿದೆ. ಇದೀಗ ಕಾಫಿ ಹಣ್ಣುಗಳನ್ನು ಸಹ ತಿನ್ನಲು ಅಭ್ಯಾಸ ಮಾಡಿಕೊಂಡಿದೆ.

ಈ ಕಡವೆಯ ಉಪಟಳ ತಾಳಲಾಗದೇ ಇದೀಗ ಸ್ಥಳೀಯರು ಇದನ್ನು ಹಿಡಿದು ಬೇರೆಡೆಗೆ ಸಾಗಿಸಿ ಎಂದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಪ್ರದೇಶವು ಕಳಸ ಅರಣ್ಯ ವಲಯಕ್ಕೆ ಸೇರುತ್ತದೆ. ಅರಣ್ಯ ಇಲಾಖೆಯವರು ಈ ಕಡವೆಯನ್ನು ಹಿಡಿಯಲು ಅನುಮತಿಗಾಗಿ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಕೊಪ್ಪ ಅರಣ್ಯ ಉಪವಿಭಾಗದ ಡಿ.ಸಿ.ಎಫ್. ನಂದೀಶ್ ಅವರನ್ನು ಪತ್ರಿಕೆ ಈ ಬಗ್ಗೆ ವಿಚಾರಿಸಿದಾಗ ; ಕಡವೆಯನ್ನು ಹಿಡಿದು ಸಾಗಿಸಲು ಸ್ಥಳೀಯರು ಮನವಿ ಸಲ್ಲಿಸಿದ್ದಾರೆ, ಕಡವೆ ಹಿಡಿಯಲು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಆದೇಶ ಆಗಬೇಕು. ನಾವು ಈ ಬಗ್ಗೆ ಪ್ರಸ್ತಾವನೆ ಕಳುಹಿಸಿದ್ದು, ಸದ್ಯದಲ್ಲಿಯೇ ಕಡವೆಯನ್ನು ಹಿಡಿದು ಬೇರೆಡೆಗೆ ಸಾಗಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸುತ್ತೇವೆ ಎಂದಿದ್ದಾರೆ.

ಆದಷ್ಟು ಬೇಗ ಈ ಕಡವೆಯನ್ನು ಹಿಡಿದು ಬೇರೆಡೆ ಸಾಗಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಒಟ್ಟಾರೆ ಊರೊಳಗೆ ಓಡಾಡಿಕೊಂಡು ಇದುವರೆಗೆ ಜನರ ಮನಸ್ಸಿಗೆ ಮುದನೀಡುತ್ತಿದ್ದ ಕಡವೆ ಈಗ ಅದೇ ಗ್ರಾಮಸ್ಥರಿಗೆ ಮಗ್ಗಲ ಮುಳ್ಳಾಗಿ ಪರಿಣಮಿಸಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ