October 5, 2024

ಮೂಡನಂಬಿಕೆ, ವಾಮಾಚಾರ ಹಾಗೂ ಕಲಹ, ದೊಂಬಿ, ಭಯೋತ್ಪಾದನೆ ನಡೆಸುವುದು ಇಸ್ಲಾಂ ಕಲಿಸಿದ ಪಾಠವಲ್ಲ. ಅಂತಹ ಕ್ರೂರತೆಗೆ ಗಂಟು ಬಿದ್ದವರಿಗೆ ಇಸ್ಲಾಂನಲ್ಲಿ ಜಾಗವಿಲ್ಲ. ದ್ವೇಷ, ಅಸೂಯೆ, ಕೋಮುವಾದ ಬಿಟ್ಟು ಸರ್ವರೊಂದಿಗೆ ಒಡನಾಟ ಇಟ್ಟುಕೊಂಡು ಉತ್ತಮರಾಗಿ ತಾನು ಬದುಕಿ ಇತರರನ್ನು ಬದುಕಲು ಬಿಡುವುದೆ ಇಸ್ಲಾಂ ಧರ್ಮ ಕಲಿಸಿದ ಪಾಠವಾಗಿದೆ ಎಂದು ಕೇರಳದ ಧಾರ್ಮಿಕ ವಿದ್ವಾಂಸ ಅಲ್ ಹಾಫಿಲ್ ಶಿರಾಜುದ್ದೀನ್ ಖಾಸಿಮಿ ಅಭಿಪ್ರಾಯಪಟ್ಟರು.

ಅವರು ಮೂಡಿಗೆರೆ ತಾಲೂಕಿನ ಅಣಜೂರು ಗ್ರಾಮದ ಮಲ್ ಹರಲ್ ಅನ್ವರ್ ಜುಮ್ಮಾ ಮಸೀದಿಯಲ್ಲಿ ಮಂಗಳವಾರ  ನಡೆದ ಖುತುಬಿಯತ್ ವಾರ್ಷಿಕೋತ್ಸವ, ಮದರಸಾ ಕಟ್ಟಡಕ್ಕೆ ಶಂಕಸ್ಥಾಪನೆ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತು ಹಿಂಸೆಯತ್ತ ಮುಖ ಮಾಡಿರುವುದರಿಂದ ಮಾನವ ಕುಲಕ್ಕೆ ಅಪಾಯ ಎದುರಾಗುವ ಮುನ್ಸೂಚನೆಯಿದೆ. ದೇಶದೊಳಗಿನ ಜನಾಂಗೀಯ ಕಲಹಕ್ಕೆ ವಿದೇಶದಲ್ಲಿ ನಡೆಯುವ ಯುದ್ಧವನ್ನು ಹೋಲಿಸಿ ಅಲ್ಲಿನ ಸಾವು ನೋವಿಗೆ ವಿಕೃತಿ ನಡೆಸುವುದು ವಿನಾಶಕ್ಕೆ ದಾರಿಯಾಗಲಿದೆ. ಯಾವುದೆ ದೇಶಗಳು ಯುದ್ಧವನ್ನು ಮುಂದುವರಿಸಬಾರದು. ಶಾಂತಿ, ನೆಮ್ಮದಿ, ಸಹಬಾಳ್ವೆ ನೆಲೆಸುವಂತಾಗಬೇಕು. ಆಗ ಮಾತ್ರ ಮಾನವ ಜೀವನ ಪಾವನವಾಗುತ್ತದೆ. ಹಿಂಸೆಯಿಂದ ಇನ್ನೊಬ್ಬರ ಮರಣವನ್ನು ಮಾತ್ರ ನೋಡಬಹುದೆ ಹೊರತು ಸುರಕ್ಷಿತ ಜಗತ್ತನ್ನು ನೋಡಲಾಗದು.

ಮನುಷ್ಯ ಕೆಲ ವರ್ಷ ಮಾತ್ರ ಬದುಕಿ ಮರಣದ ನಂತರ ಮಣ್ಣಿಗೆ ಸೇರುವ ದೇಹವನ್ನು ಹಿಂಸೆಯ ಮೂಲಕ ದಂಡಿಸಿಕೊಳ್ಳಲು ಯಾವ ಧರ್ಮದ ಗ್ರಂಥಗಳು ತಿಳಿಸಿಲ್ಲ. ತಾನು ಹುಟ್ಟಿದ ಸಮುದಾಯದ ಪವಿತ್ರ ಗ್ರಂಥವನ್ನು ಧಿಕ್ಕರಿಸುವವರಿಂದಲೆ ಭಯೋತ್ಪಾದನೆ, ಹಿಂಸೆ, ದೊಂಬಿ, ಸಾವು, ನೋವು ಹೆಚ್ಚಾಗುತ್ತದೆ. ಇಂತಹ ಕ್ರೂರವರ್ತನೆಗೆ ಅಂತ್ಯ ಹಾಡಲು ಎಲ್ಲಾ ಸಮುದಾಯಗಳು ಆಸಕ್ತಿ ವಹಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ಅಜೀಜ್ ದಾರಿಮಿ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟಂತೆ ಮದರಸಾದಲ್ಲಿ ಕೂಡ ಉತ್ತಮ ರೀತಿಯ ಪಾಠ ಹೇಳಿಕೊಡಲಾಗುತ್ತದೆ. ಮದರಸಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಮಕ್ಕಳನ್ನು ದಾರಿ ತಪ್ಪಿಸುತ್ತಾರೆ ಎನ್ನುವವರ ವಾದದಲ್ಲಿ ಹುರುಳಿಲ್ಲ. ಮುಸ್ಲಿಮರ ವಿರುದ್ಧದ ದ್ವೇಷವನ್ನು ಮದರಸಾಗಳ ಮೇಲೆ ಆರೋಪ ಹೊರಿಸಿ ತೀರಿಸಿಕೊಳ್ಳುತ್ತಿರುವುದು ಸರಿಯಲ್ಲ. ಮುಸ್ಲಿಂ ಎಂಬುವುದು ಶಾಂತಿ, ಸಹಬಾಳ್ವೆಗೆ ಹೆಸರುವಾಸಿಯಾದ ಧರ್ಮವಾಗಿದೆ. ಇಂತಹ ಅಮೂಲ್ಯ ಗುಣವಿರುವ ಧರ್ಮವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರಕ್ಕೆ ಅಂತ್ಯ ಹಾಡಬೇಕಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಮುಸ್ಲಿಂ ಧರ್ಮಿಯರು ಶಾಂತಿ ಸಮಾಧಾನದಿಂದ ಪ್ರಸಿದ್ಧಿ ಪಡೆದವರು. ಸಂವಿಧಾನ ಪಾಲನೆಯಲ್ಲಿ ಮುಸ್ಲಿಮರ ಪಾತ್ರ ಹಿರಿದಾಗಿದೆ. ಅಂತಹ ಧರ್ಮಕ್ಕೆ ಕಳಂಕ ತರುವ ಪ್ರಯತ್ನ ಬೇಡ. ಯಾವುದೆ ಧರ್ಮವು ಹಿಂಸೆಯನ್ನು ಬೋಧಿಸುವುದಿಲ್ಲ. ಎಲ್ಲಾ ಧರ್ಮಿಯರಿಗೂ ಈ ಭೂಮಿ ಮೇಲೆ ಬದುಕುವ ಹಕ್ಕಿದೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ತಿಳಿಸಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಮಸೀದಿ ಮತ್ತು ಮದರಸಾಗಳಲ್ಲಿ ಶಾಂತಿ, ಸೌಹಾರ್ದತೆ, ಬಾಂಧವ್ಯವನ್ನು ಬೋಧಿಸುತ್ತಾರೆ. ಅದನ್ನು ಮುಸ್ಲಿಮರು ಪರಿಪಾಲನೆ ಮಾಡುವುದರಿಂದ ಅವರಲ್ಲಿ ಹೃದಯ ಶ್ರೀಮಂತಿಕೆ ಇದೆ. ಇತರ ಧರ್ಮಿಯರು ಕಷ್ಟದಲ್ಲಿದ್ದಾಗ ಅವರಿಗೆ ನೆರವಾಗಲು ಮುಸ್ಲಿಮರು ಓಡೋಡಿ ಬರುತ್ತಾರೆ. ಪ್ರತಿ ಮುಸ್ಲಿಮರ ಮನೆಯಿಂದ ಒಬ್ಬೊಬ್ಬರನ್ನು ಸಮಾಜ ಸೇವೆಗೆ ಕಳಿಸಲಾಗುತ್ತದೆ. ಎಲ್ಲಿ ಸಮಾಜಸೇವೆ ನಡೆದರೂ ಅಲ್ಲಿ ಹೆಚ್ಚಾಗಿ ಮುಸ್ಲಿಮರ ಪಾತ್ರ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಾಸನಬ್ಬ, ಸಮಾಜ ಸೇವಕರಾದ ಫಿಶ್ ಮೋಣು, ಆರಿಫ್ ಬಣಕಲ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಅಬ್ದುಲ್ ಕರೀಂ, ಧರ್ಮ ಗುರುಗಳಾದ ಇರ್ಸಾದ್ ದಾರಿಮಿ ಅಲ್ ಜಝಾರಿ, ಸೈಯದ್ ಝೈನುಲ್ ಅಬಿದೀನ್ ತಂಗಳ್, ಶರೀಫ್ ಹರ್ಷದಿ, ಮುಸ್ತಫಾ ಯಮಾನಿ, ಜಮಾಲುದ್ದೀನ್ ಪೈಝಿ, ಸಿನಾನ್ ಫೈಝಿ, ಹೈದರ್ ಮಾಲಿಕಿ, ಸಿ.ಕೆ.ಇಬ್ರಾಹಿಂ ಹಾಜಿ, ಆಕ್ರಮ್ ಹಾಜಿ, ಕೆ.ಮಹಮ್ಮದ್, ಟಿ.ಎಂ.ನಾಸಿರ್ , ಕಿರುಗುಂದ ಅಬ್ಬಾಸ್, ನಜೀರ್ ಹಾಜಿ, ಅಬ್ದುಲ್ಲಾ ಹಾಜಿ, ಬಿ.ಹೆಚ್.ಮಹಮ್ಮದ್, ಅಬ್ದುಲ್ ಲತೀಫ್ ಗುರುಪುರ, ನಾಸಿರ್, ರಿಯಾಜ್, ಜೈನುದ್ದೀನ್, ಮಹಮ್ಮದ್, ಅಬ್ದುಲ್ ಕರೀಂ, ನಜೀರ್, ಅಶ್ರಫ್, ಅಬೂಬಕ್ಕರ್ ಇತರರಿದ್ದರು,

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ