October 5, 2024

ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಸಹಕಾರಿ ಧುರೀಣ ಓ. ಎಸ್. ಗೋಪಾಲಗೌಡ ಅವರಿಗೆ ಈ ಸಾಲಿನ ರಾಜ್ಯಮಟ್ಟದ “ಸಹಕಾರ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನವೆಂಬರ್ 20 ರಂದು ವಿಜಯಪುರದಲ್ಲಿ ನಡೆದ 70ನೇ ರಾಜ್ಯ ಮಟ್ಟದ ಸಹಕಾರ ಸಪ್ತಾಹದಲ್ಲಿ ಓ.ಎಸ್. ಗೋಪಾಲಗೌಡರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ರಾಜ್ಯದ ಹಿರಿಯ ಸಹಕಾರಿಗಳಲ್ಲಿ ಒಬ್ಬರಾಗಿರುವ ಓ.ಎಸ್. ಗೋಪಾಲಗೌಡರು ಕಳೆದ ಆರು ದಶಕಗಳಿಂದ ಸಹಕಾರಿ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸೇವೆ ಸಲ್ಲಿಸಿದ್ದಾರೆ.

ಓ.ಎಸ್. ಗೋಪಾಲಗೌಡರು ಸಹಕಾರಿ ಕ್ಷೇತ್ರದಲ್ಲಿ ನಡೆದುಬಂದ ದಾರಿ
ಓ.ಎಸ್. ಗೋಪಾಲಗೌಡರು ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿಯ ಔಸನ ಗ್ರಾಮದವರಾದ ಗೋಪಾಲಗೌಡರು ಪ್ರಸ್ತುತ ತಾಲ್ಲೂಕಿನ ಪಲ್ಗುಣಿ ಗ್ರಾಮದಲ್ಲಿ ನೆಲೆಸಿದ್ದಾರೆ.

ಔಸನ ಗ್ರಾಮದ ಓ. ಎಸ್. ಶಿವಣ್ಣಗೌಡ ಮತ್ತು ಶ್ರೀಮತಿ ಜಿ. ಬಿ. ರಾಮಮ್ಮ ದಂಪತಿಗಳ ಪ್ರಥಮ ಪುತ್ರರಾಗಿ ದಿನಾಂಕ : 16-06-1930 ರಂದು ಜನಿಸಿದರು.

ವ್ಯಾಸಂಗದ ನಂತರ ಮನೆಗೆ ಮರಳಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡ ಮೇಲೆ ತಮ್ಮ ಗ್ರಾಮ ಹಾಗೂ ಸುತ್ತಲ ಪ್ರದೇಶಗಳ ಸಾರ್ವಜನಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ರಾಜಕೀಯವಾಗಿ  ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡರು. ತಮ್ಮ ಕಾರ್ಯಕ್ಷೇತ್ರವನ್ನು ಮೂಡಿಗೆರೆ ತಾಲ್ಲೂಕು ಮಟ್ಟಕ್ಕೆ ವಿಸ್ತರಿಸಿಕೊಂಡು ಇಲ್ಲಿನ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸತೊಡಗಿದರು. ಅಂದಿನ ಅನೇಕ ಹಿರಿಯ ಮುಖಂಡರ ಸಂಪರ್ಕದಿಂದ ಇವರು ಬಹುಬೇಗ ತಾಲ್ಲೂಕಿನ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುತ್ತಾ ಸಾಗಿದರು.

ಗೋಪಾಲಗೌಡರು ಪ್ರಮುಖವಾಗಿ ಗುರುತಿಸಿಕೊಂಡದ್ದು ಸಹಕಾರಿ ಕ್ಷೇತ್ರದಲ್ಲಿ ಇವರು ಅನೇಕ ಸಹಕಾರಿ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಸಾರ್ವಜನಿಕ ಜೀವನ ತ್ರಿಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಪ್ರಾರಂಭವಾಯಿತು. ಸಂಘದ ನಿರ್ದೇಶಕರಾಗಿ 9 ವರ್ಷ ಸೇವೆ ಸಲ್ಲಿಸಿರುತ್ತಾರೆ. ಕೈಗಾರಿಕಾ ಸಹಕಾರ ಸಂಘ, ಮೂಡಿಗೆರೆ ಇಲ್ಲಿ 6 ವರ್ಷಗಳ ನಿರ್ದೇಶಕನಾಗಿ, ಗೃಹ ನಿರ್ಮಾಣ ಸಹಕಾರ ಸಂಘ, ಮೂಡಿಗೆರೆ ಇದರಲ್ಲಿ 9 ವರ್ಷಗಳ ಕಾಲ ನಿರ್ದೇಶಕನಾಗಿ ಸೇವೆ ಸಲ್ಲಿಸಿರುತ್ತಾರೆ. ಮೂಡಿಗೆರೆಯ ಪಿ.ಸಿ.ಎ.ಆರ್.ಡಿ ಬ್ಯಾಂಕ್ ಹಾಗೂ ಗೋಪಾಲಗೌಡರ ನಡುವೆ ಅವಿನಾಭಾವ ಸಂಬಂಧ. ಅಲ್ಲಿ ಅವರು ಒಟ್ಟು 39 ವರ್ಷಗಳ ಕಾಲ ನಿರ್ದೇಶಕನಾಗಿದ್ದರು. ಇದರಲ್ಲಿ 16 ವರ್ಷಗಳ ಕಾಲ ಬ್ಯಾಂಕಿನ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿರುತ್ತಾರೆ.

ಹಾಲಿ ಮೂಡಿಗೆರೆ ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಇರುವ ಜಾಗವನ್ನು ಇವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಕೊಂಡು ಬ್ಯಾಂಕಿಗೆ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಗೋಪಾಲಗೌಡರು ಮೂಡಿಗೆರೆ ಟಿ.ಎ.ಪಿ.ಸಿ.ಎಂ.ಎಸ್‌ನಲ್ಲಿ 9 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ಕಾಫಿ ಬೆಳೆಯುವ ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ತನ್ನ ಕಾರ್ಯಕ್ಷೇತ್ರ ಹೊಂದಿರುವ ‘ದಿ ಪ್ಲಾಂಟರ್ಸ್ ಕೋ ಆಪರೇಟಿವ್ ಬ್ಯಾಂಕ್’ ಹಾಸನ ಇದರಲ್ಲಿ 38 ವರ್ಷಗಳಿಂದಲೂ ನಿದೇರ್ಶಕನಾಗಿ ಸೇವೆ ಸಲ್ಲಿಸುತ್ತಿರುತ್ತಾರೆ ಈಗಲೂ ನಿರ್ದೇಶಕನಾಗಿರುತ್ತಾರೆ ಅಲ್ಲದೆ 3 ಬಾರಿ ಈ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಕೋಮಾರ್ಕ್’ ಸಂಸ್ಥೆ, ಹಾಸನ ಇದರಲ್ಲಿ 15 ವರ್ಷಗಳಿಂದಲೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂಸ್ಥೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಕಾಫಿ ಮಾರುಕಟ್ಟೆಯ ಸಂಸ್ಥೆಯಾಗಿರುತ್ತದೆ.

ರಾಜಕೀಯ-ಸಾಮಾಜಿಕ ಕ್ಷೇತ್ರ
ಸಹಕಾರ ಕ್ಷೇತ್ರವಲ್ಲದೇ ಇತರ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಓ.ಎಸ್. ಗೋಪಾಲಗೌಡರು ಅಪಾರ ಸೇವೆ ಸಲ್ಲಿಸಿದ್ದಾರೆ. ತ್ರಿಪುರ ಗ್ರಾಮ ಪಂಚಾಯಿತಿಗೆ ಮೂರು ಅವಧಿಗೆ ಅಧ್ಯಕ್ಷರಾಗಿದ್ದ ಇವರು ಮೂಡಿಗೆರೆ ಬ್ಲಾಕ್ ಕಾಂಗ್ರೇಸ್‌ನಲ್ಲಿ ಸತತ 20 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಮೂಡಿಗೆರೆ ತಾಲ್ಲೂಕು ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾಗಿ, ದರಖಾಸ್ತು ಸಮಿತಿಯ ಸದಸ್ಯರಾಗಿ ಇವರು ಅನೇಕ ಬಡವರಿಗೆ ಜಮೀನು ಮಂಜೂರು ಮಾಡಿಕೊಡುವುದರಲ್ಲಿ ತಮ್ಮ ಬದ್ಧತೆ ತೋರ್ಪಡಿಸಿದ್ದರು. ವಿವಿಧ ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಆಗಬೇಕಾದ ಕೆಲಸ ಗಳನ್ನು ಮಾಡಿಸಿಕೊಡುವುದು ಹಾಗೂ ಅರ್ಹರಿಗೆ ನಿವೇಶನ ಮತ್ತು ಮನೆಗಳನ್ನು ಕೊಡಿಸಿಕೊಡುವ ಹಾಗೂ ನ್ಯಾಯ ಒದಗಿಸುವಲ್ಲಿ ಪ್ರಮುಖಪಾತ್ರ ವಹಿಸಿರುತ್ತಾರೆ. ಇವರು ತಾವು ಜವಾಬ್ದಾರಿ ವಹಿಸಿಕೊಂಡ ಎಲ್ಲಾ ಸಂಸ್ಥೆಗಳಲಿ ಪ್ರಾಮಾಣಿಕತೆೆಯಿಂದ ಕಾರ್ಯನಿರ್ವಹಿಸಿದ್ದು ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

ಮಾಕೋನಹಳ್ಳಿ ಕುಟುಂಬದ ಎಂ.ಎಸ್. ಕಸ್ತೂರಮ್ಮನವ ರನ್ನು ವಿವಾಹವಾದ ಓ.ಎಸ್ ಗೋಪಾಲಗೌಡರವರು 70 ವರ್ಷಗಳ ಸುಧೀರ್ಘ, ಯಶಸ್ವಿ ದಾಂಪತ್ಯದ ಸಹಬಾಳ್ವೆಯಿಂದ ಮಾದರಿಯಾಗಿ ದ್ದಾರೆ. ಓ. ಎಸ್. ಗೋಪಾಲಗೌಡರ ಸಾರ್ವಜನಿಕ ಬದುಕಿಗೆ ಅವರ ಪತ್ನಿ ಶ್ರೀಮತಿ ಕಸ್ತೂರಮ್ಮ, ಅವರ ಸಹೋದರರು ಮತ್ತು ಮಕ್ಕಳು ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ.

ಓ. ಎಸ್. ಗೋಪಾಲಗೌಡ ದಂಪತಿಗಳ ಮೊದಲ ಮಗ ಡಾ. ಓ.ಜಿ ಪ್ರಕಾಶ್‌ರವರು ಪ್ರಸಿದ್ಧ ವೈದ್ಯರಾಗಿದ್ದು, ಚಿಕ್ಕಮಗಳೂರು ಜಿಲ್ಲಾ ಸರ್ಜನ್ ಆಗಿ ಸೇವೆಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮಗಳಾದ ಶ್ರೀಮತಿ ಓ.ಜಿ. ವಾಣಿಯವರನ್ನು ಹೆಚ್.ಸಿ. ಆನಂದ ಬಾಗಡೆ ರವರಿಗೆ ವಿವಾಹಮಾಡಿಕೊಟ್ಟಿದ್ದು ಹಾಸನದಲ್ಲಿ ನೆಲೆಸಿದ್ದಾರೆ. ಗೋಪಾಲಗೌಡರ ಎರಡನೆ ಮಗ ಓ.ಜಿ. ರವಿಯವರು ಸಹಕಾರ ಮತ್ತು ಕೃಷಿ ಕ್ಷೇತ್ರದಲ್ಲಿ ಸಕ್ರಿಯರಾಗಿರುತ್ತಾರೆ.

ಓ.ಎಸ್ ಗೋಪಾಲಗೌಡರು 65 ವರ್ಷಗಳಿಂದಲೂ ಸಹಕಾರಿ ಕ್ಷೇತ್ರದಲ್ಲಿದ್ದು ಈಗಲೂ ಅತ್ಯಂತ ಸಕ್ರಿಯವಾಗಿದ್ದು, ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಮಾಜಮುಖಿ ಕೆಲಸವನ್ನು ಪರಿಗಣಿಸಿ ಅವರ 89ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಮತ್ತು ಗೋಪಾಲಗೌಡರು ಮತ್ತು ಶ್ರೀಮತಿ ಕಸ್ತೂರಮ್ಮ ದಂಪತಿಗಳು 67ನೇ ವರ್ಷದ ವಿವಾಹ ವಾರ್ಷಿಕೋತ್ಸ್ಸವವದ ಸಂದರ್ಭದಲಿ ಅವರ ಕುಟುಂಬದವರು, ಬಂಧುಗಳು, ಸ್ನೇಹಿತರು ಮತ್ತು ಹಿತೈಷಿಗಳು ಸೇರಿ ದಿನಾಂಕ 23-06-2018ರಂದು ಮೂಡಿಗೆರೆ ರೈತ ಭವನದಲ್ಲಿ ಅಭಿನಂದನಾ ಕಾರ್ಯಕ್ರಮದ ಮೂಲಕ ನಾಗರೀಕ ಸನ್ಮಾನ ಹಮ್ಮಿಕೊಂಡು ಗೌರವಿಸಿದ್ದರು.

ತಮ್ಮ ಇಳಿವಯಸ್ಸಿನಲ್ಲಿಯೂ ಸದಾ ಲವಲವಿಕೆಯಿಂದ ಇದ್ದು ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತ ಯುವಕರಿಗೆ ಸ್ಪೂರ್ತಿಯುತ ಮಾರ್ಗದರ್ಶಕರಾಗಿರುವ ಗೋಪಾಲಗೌಡರಿಗೆ ತಡವಾಗಿಯಾದರೂ ಸಹಕಾರ ರತ್ನ ಪ್ರಶಸ್ತಿ ಬಂದಿರುವುದು ಅತ್ಯಂತ ಶ್ಲಾಘನೀಯವಾಗಿದೆ.

ಸಹಕಾರ ರತ್ನ ಪ್ರಶಸ್ತಿ ಪಡೆದ ಓ.ಎಸ್. ಗೋಪಾಲಗೌಡರಿಗೆ ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ