ಇಂದು ಮಧ್ಯಾಹ್ನ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಸಾರ್ವಜನಿಕರು ವೀಕ್ಷಿಸಲು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದ ಜಿಲ್ಲಾ ಆಟದ ಮೈದಾನಗಳಲ್ಲಿ ಎಲ್.ಇ.ಡಿ. ಸ್ಕ್ರೀನ್ ಅಳವಡಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಯುವ ಮತ್ತು ಸಬಲೀಕರಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ದಿನಾಂಕ 19-11-2023ರಂದು ಭಾನುವಾರ ಮಧ್ಯಾಹ್ನ 2ಗಂಟೆಯಿಂದ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯವನ್ನು ಸಾರ್ವಜನಿಕರು/ಕ್ರೀಡಾಪಟುಗಳು ವೀಕ್ಷಿಸಲು ಅನುಕೂಲವಾಗುವಂತೆ ಜಿಲ್ಲಾ ಆಟದ ಮೈದಾನದ ಸೂಕ್ತ ಸ್ಥಳದಲ್ಲಿ ಅಗತ್ಯ ಅಳತೆಯ ದೊಡ್ಡ ಪರದೆಯನ್ನು ಅಳವಡಿಸಲು ಸೂಚಿಸಿದೆ.
ಈ ಸಂಬಂಧ ಅಗತ್ಯ ಪ್ರಚಾರ ಕೈಗೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸುವಂತೆ ಕ್ರಮವಹಿಸುವುದು ಮತ್ತು ಸೂಕ್ತ ಭದ್ರತೆಯನ್ನು ಒದಗಿಸುವುದು ಎಂದು ತಿಳಿಸಿದೆ.
ಇದರಿಂದಾಗಿ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ಆಟದ ಮೈದಾನದಲ್ಲಿ ಸಾರ್ವಜನಿಕರು ದೊಡ್ಡ ಪರದೆಯಲ್ಲಿ ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳ ನಡುವೆ ಪಂದ್ಯವನ್ನು ಆಸ್ವಾಧಿಸುವ ಅವಕಾಶ ದೊರೆತಂತಾಗುತ್ತದೆ. ಈ ಅವಕಾಶವನ್ನು ಕ್ರಿಕೆಟ್ ಅಭಿಮಾನಿಗಳು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.