ಮೂಡಿಗೆರೆ ತಾಲ್ಲೂಕಿನ ಬಣಕಲ್ ಪಟ್ಟಣದ ಖಾಸಗಿ ಶಾಲೆಯೊಂದರ ಶಿಕ್ಷಕಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬಣಕಲ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆಸಿಯಾ ಎಂಬುವವರು ಬುಧವಾರ ಶಾಲೆಗೆ ಹೋಗಿ ನಂತರ ಕಾರಣಾಂತರದಿಂದ ರಜೆ ಹಾಕಿ ಮನೆಗೆ ಹೋಗುತ್ತೇನೆಂದು ತೆರಳಿದವರು ಮನೆಗೆ ತಲುಪಿಲ್ಲ.
ಚಿಕ್ಕಮಗಳೂರು ಮೂಲದ ಆಸಿಯಾ ಕಳೆದ ಕೆಲ ತಿಂಗಳಿಂದ ಬಣಕಲ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಚಿಕ್ಕಮಗಳೂರು ನಗರದ ರಾಮನಹಳ್ಳಿಯಿಂದ ಬಣಕಲ್ ಶಾಲೆಗೆ ಬರುತ್ತಿದ್ದರು.
ಬುಧವಾರದಂದು ಎಂದಿನಂತೆ ಶಾಲೆಗೆ ಬಂದವರು ಮನೆಗೆ ತುರ್ತಾಗಿ ಹೋಗಬೇಕು ಎಂದು ಮುಖ್ಯ ಶಿಕ್ಷಕರಲ್ಲಿ ರಜೆ ಕೇಳಿ ಹೋಗಿದ್ದರು. ಆದರೆ ಅವರು ಮನೆಗೆ ಬಾರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆಸಿಯಾ ಅವರು ಪತಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಶಿಕ್ಷಕಿ ನಿಗೂಢವಾಗಿ ಕಣ್ಮರೆಯಾಗಿರುವುದು ಕುಟುಂಬದವರಲ್ಲಿ ಮತ್ತು ಶಾಲಾ ಆಡಳಿತ ಮಂಡಳಿಯವರಿಗೆ ಆತಂಕ ಉಂಟುಮಾಡಿದೆ. ಇವರು ಎಲ್ಲಾದರೂ ಪತ್ತೆಯಾದರೆ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಸಾರ್ವಜನಿಕರನ್ನು ಕೋರಲಾಗಿದೆ.