October 5, 2024

ಕನ್ನಡ ಸಂಮೃದ್ಧ ಭಾಷೆ. ನಿರಂತರ ಬಳಕೆಯಿಂದ ಭಾಷೆಯ ಬೆಳವಣಿಗೆ ಸಾಧ್ಯ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ನುಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಕಲಾಮಂದಿರದಲ್ಲಿ  ಆಯೋಜಿಸಿದ್ದ ‘ಚಿಕ್ಕಮಗಳೂರು ತಾಲ್ಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನ’ಕ್ಕೆ ಶನಿವಾರ ಬೆಳಗ್ಗೆ ಪರಿಷತ್ತಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ವಚನ ಶ್ರೇಷ್ಠ, ಕವಿಶ್ರೇಷ್ಠ, ದಾಸಶ್ರೇಷ್ಠ ಹೀಗೆ ಎಲ್ಲ ಕನ್ನಡ ಮನಸ್ಸುಗಳಿಂದ ಕನ್ನಡ ಭಾಷೆ ಸಂಮೃದ್ಧವಾಗಿದೆ. ಭಾಷೆಯ ಬೆಳವಣಿಗೆಗೆ ಪೂರಕವಾಗ ವಿವಿಧ ಹಂತಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದುಕೊಂಡು ಬಂದಿವೆ. ತಾಲ್ಲೂಕಿನಲ್ಲೂ ಈಗಾಗಲೇ 4ಸಮ್ಮೇಳನಗಳೂ ಯಶಸ್ವಿಯಾಗಿ ನಡೆದಿವೆ. 13ವರ್ಷಗಳ ಬಳಿಕ 5ನೆಯ ಸಮ್ಮೇಳನ ನಡೆಯುತ್ತಿದೆ ಎಂದರು.

ಸುಂದರ ಮಲೆನಾಡಿನ ಜೊತೆಗೆ ಅರೆಮಲೆನಾಡು-ಬಯಲು ಪ್ರದೇಶಗಳನ್ನೂ ಒಳಗೊಂಡ ವೈವಿಧ್ಯಮಯ ತಾಲ್ಲೂಕು ಇದಾಗಿದು, ವಿವಿಧ ಭಾಷಿಗರು ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಕನ್ನಡ ಪ್ರಧಾನಭಾಷೆಯಾಗಿ ಮೆರೆಯುತ್ತಿದ್ದು ಸಾಹಿತ್ಯಲೋಕಕ್ಕೆ ತಾಲ್ಲೂಕಿನ ಕೊಡುಗೆ ಅನನ್ಯ ಎಂದು ಸೋಮಶೇಖರ್ ನುಡಿದರು.

ಸಮ್ಮೇಳನಾಧ್ಯಕ್ಷ ಡಾ.ಬೆಳವಾಡಿ ಮಂಜುನಾಥ ಮಾತನಾಡಿ : ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಶಕ್ತಿ ಸಾಹಿತ್ಯ ಮತ್ತು ಕಲೆಗಳಿಗಿದೆ. ಇವು ಎಷ್ಟೋ ಮನಸ್ಸುಗಳನ್ನು ಬದಲಿಸಿವೆ. ಸಾಹಿತ್ಯದ ಮೂಲ ಉದ್ದೇಶ ಆನಂದ. ಸಾಹಿತ್ಯದ ಸೊಗಸು, ಪರಿಣಾಮ, ಪ್ರಭಾವವನ್ನು ಎಲ್ಲರಿಗೂ ತಲುಪಿಸುವುದು ಸಮ್ಮೇಳನದ ಉದ್ದೇಶವಾಗಬೇಕು ಎಂದು  ಕರೆ ನೀಡಿದರು.

ಸಾಹಿತ್ಯ ಸಮ್ಮೇಳನ ಒಂದು ನುಡಿ ಹಬ್ಬ. ಎಲ್ಲ ಭೇದ ಮರೆಯುವ ಸಂಭ್ರಮ. ಸಂಘಟನೆಗಾಗಿ ಒಂದಾಗುವ, ಒಂದಷ್ಟು ಜ್ಞಾನ ಸಂಪಾದಿಸುವ ದಾರಿ. ಭಾಷೆ ಮತ್ತು ಸಾಹಿತ್ಯದ ಸಾಂಘಿಕ ಚರ್ಚೆಗೆ ವೇದಿಕೆ ಎಂದವರು ಅರ್ಥೈಸಿದರು.

ಕನ್ನಡದ ತೇರು ಎಳೆಯುವ ಕೈಂಕರ್ಯ ಸಂತಸ ತರುತ್ತದೆ. ಕನ್ನಡ ಮನಸ್ಸುಗಳನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಎಲ್ಲವನ್ನೂ ಜೀರ್ಣಿಸಿಕೊಂಡು ಪ್ರಾದೇಶಿಕ ಬಲ ಹೆಚ್ಚಿಸಿಕೊಳ್ಳಬೇಕು. ಸಮರ್ಪಕ ವಿಚಾರಮಂಥನ ನಡೆದು ಕೈಗೊಳ್ಳುವ ನಿರ್ಣಯಗಳು ಅನುಷ್ಠಾನಗೊಳ್ಳುವಂತೆ ಯೋಜಿಸಬೇಕು. ಭಾಷೆಯೊಂದು ಸಂಸ್ಕøತಿಯ ವಾಹಕ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದ ಡಾ.ಬೆಳವಾಡಿ ಮಂಜುನಾಥ್, ಸ್ಪರ್ಧಾತ್ಮಕ ಪರೀಕ್ಷೆಗಳೆಲ್ಲದರಲ್ಲೂ ಕನ್ನಡಕ್ಕೆ ಆದ್ಯತೆ ಇರಬೇಕು ಎಂದರು.

ನಾಡು ನುಡಿಯ ಅಭಿಮಾನ ಪ್ರತಿಯೊಬ್ಬನ ಹೃದಯ ಸಂಕಲ್ಪವಾಗಬೇಕು. ಅದು ಮನೆಯಿಂದಲೇ ಆರಂಭವಾಗಬೇಕು. ಸಮ್ಮೇಳನಗಳು, ಹೋರಾಟ, ಪ್ರತಿಭಟನೆಗಳಿಂದಾಗಲಿ ಕನ್ನಡ ಭಾಷಾ ಬೆಳವಣಿಗೆ ಪೂರ್ಣಗೊಳ್ಳುವುದಿಲ್ಲ ಅಗತ್ಯವಿದ್ದಲ್ಲಿ ಕಾನೂನಾತ್ಮಕವಾಗಿ ಕಡ್ಡಾಯಗೊಳಿಸುವ ಪೂರಕ ಕಾರ್ಯಯೋಜನೆ ರೂಪಿಸುವ, ಹೊಸ ಹಾದಿಯ ಅನ್ವೇಷಣೆಗೆ ತೆರೆದುಕೊಳ್ಳುವ ಅನಿವಾರ್ಯತೆ ಇದೆ ಎಂದವರು ವಿವರಿಸಿದರು.
ಕನ್ನಡ ಸಂಸ್ಕøತಿ ಸಹಜವಾಗಿ ಉಳಿದಿರುವುದೇ ಹಳ್ಳಿಗಳಲ್ಲಿ. ಶಿಷ್ಟ ಸಾಹಿತ್ಯಕ್ಕೆ ಜಾನಪದವೇ ಪ್ರೇರಣೆ. ಸಾಹಿತ್ಯದ ಮೂಲ ಜಾನಪದದ ನೆಲೆ ಗ್ರಾಮೀಣಪ್ರದೇಶ. ನಿರಕ್ಷರ ಕುಕ್ಷಿಗಳೂ ಅದ್ಭುತ ಸಾಹಿತ್ಯ ರಚಿಸಿದರು. ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿ ಕಂಡುಕೊಂಡು ಅದರ ಸಹವಾಸದಲ್ಲೆ ಬೆಳೆದು ಮುಂದಿನ ಪೀಳಿಗೆಗೂ ಉಳಿಸಿದ್ದಾರೆಂದರು.

20ನೆಯ ಶತಮಾನದಲ್ಲಿ ನಡೆದ ಜಾಗತೀಕರಣದ ಫಲವಾಗಿ ಜ್ಞಾನ ಮೀಮಾಂಸೆ ಬಹುತ್ವದ ಮೇಲೆ ಆಕ್ರಮಣ ಮಾಡಿ ಪಾರಂಪರಿಕವಾದ ದೇಶಿಯ ಭಾಷೆ ಮತ್ತು ಸಂಸ್ಕøತಿಯ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಇದು ಕೇವಲ ಜ್ಞಾನದ ಬಹುತ್ವ ಮಾತ್ರವಲ್ಲ. ಅವುಗಳ ಪ್ರಸಾರಕ್ಕೆ ಮಾಧ್ಯಮವಾದ ಭಾಷೆಯನ್ನೂ ಉಪೇಕ್ಷಿಸುವುದರಿಂದ ಅಂತಥದೊಂದು ಜನಾಂಗ ಮತ್ತು ಸಂಸ್ಕøತಿಗಳ ಅವಸಾನಕ್ಕೂ ಹಿನ್ನಲೆಯಾಗಿದೆ. ನಮ್ಮ ಶಿಕ್ಷಣ ಕೂಡ ಕಾರ್ಮಿಕ ಮಾರುಕಟ್ಟೆಗೆ ಅಗತ್ಯವಾದ ಯುವಪೀಳಿಗೆಯನ್ನು ಸೃಷ್ಟಿಸುತ್ತಿದೆ ಎಂದ ಸಮ್ಮೇಳಾನಾಧ್ಯಕ್ಷರು, ಶಿಕ್ಷಣವು ವೈಯಕ್ತಿಕ ವಿಕಾಸ ಮತ್ತು ಆಸಕ್ತಿಯ ಪ್ರಯೋಗವಾಗಿ ಮನುಷ್ಯ ಕೇಂದ್ರಿತವಾಗದೆ ಮಾರುಕಟ್ಟೆಗನುಗುಣವಾಗಿ ಬದಲಾಗುತ್ತಿರುವುದು ದುರಂತ ಎಂದು ಆತಂಕಿಸಿದರು.

ಸಮಕಾಲೀನ ಸಂದರ್ಭದಲ್ಲಿ ಕನ್ನಡದ ಸಾರ್ವಭೌಮತ್ವ ರಾಷ್ಟ್ರೀಯ ರಾಜಕಾರಣಕ್ಕೆ ಮುಖಾಮುಖಿಯಾಗಿದೆ. ಬಹುಭಾಷೆಗಳ ರಾಷ್ಟ್ರದಲ್ಲಿ ಇದೊಂದು ದೊಡ್ಡ ಸವಾಲು. ಭಾಷೆ, ಸಾಹಿತ್ಯ, ಲಲಿತ ಕಲೆಗಳು ಈ ಸವಾಲಿಗೆ ನೀಡುತ್ತಿರುವ ಅಸ್ಮಿತೆಯ ಉತ್ತರವನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದ ಅವರು, ತ್ರಿಭಾಷಾ ಸೂತ್ರದ ಸಾಧಕ-ಭಾದಕಗಳನ್ನು ಪುನರ್ ಅವಲೋಕಿಸಬೇಕಾಗಿದೆ ಎಂದು ಕರೆ ನೀಡಿದರು.
ಶಿಕ್ಷಣ ಕೇವಲ ಉದ್ಯೋಗ ಪಡೆಯುವ ಸಾಧನವಾಗಿ ವಾಣೀಜ್ಯೀಕರಣಗೊಂಡು ಶಿಕ್ಷಣೋದ್ಯಮವಾಗಿದೆ. ಇಂಗ್ಲೀಷ್ ವ್ಯವಹಾರಿಕ ಭಾಷೆಯಾಗಿ ಸುಲಭೀಕರಣಗೊಂಡಿರುವುದರಿಂದ ದೇಶಿಯ ಭಾಷೆಗಳ ಅಸ್ಥಿತ್ವಕ್ಕೆ ಧಕ್ಕೆ ತಂದಿದೆ. ಆಧುನಿಕತೆಯ ಜನರ ಸಹಜ ಸಂಬಂಧಗಳು ಮತ್ತು ಸಂಸ್ಕøತಿಯ ಅಂತರವನ್ನು ಹೆಚ್ಚಿಸುತ್ತಲೇ ಇದೆ. ಕನ್ನಡದ ಬಾಗಿಲಿನಿಂದ ವಿಶ್ವ ಪ್ರಜ್ಞೆಯನ್ನು ಪಡೆಯಬಹುದು. ದೈನಂದಿನ ಬದುಕಿನಲ್ಲಿ ಕನ್ನಡಭಾಷೆ ಬೆಳೆಸುವುದು ಜಾರೂರಾಗಬೇಕು ಎಂದರು.

ಜಾಗತೀಕರಣ, ವಿಜ್ಞಾನ-ತಂತ್ರಜ್ಞಾನ, ಆರ್ಥಿಕಪಲ್ಲಟ, ಮನರಂಜನೆ ಸಂಸ್ಕøತಿಯ ಮಹತ್ವನ್ನು ಕುರಿತ ಕೃತಿಗಳಿಗೆ ಬೇಡಿಕೆ ಇದೆ. ಪರಂಪರೆಯನ್ನು ಪರಿಚಯಿಸುವುದರೊಂದಿಗೆ ವರ್ತಮಾನದ ಅನುಸಂಧಾನ ನಡೆಯಬೇಕಿದೆ. ಇತ್ತೀಚಿಗೆ ಉಂಟಾಗುತ್ತಿರುವ ಹೊಸ ಬಗೆಯ ತಳಮಳಗಳಿಗೆ ಸಾಂತ್ವನ ನೀಡುವ ಸಾಹಿತ್ಯ ಮಾರ್ಗದರ್ಶಿಯಾದದ್ದು ಎಂದವರು ನುಡಿದರು.

ಚಿಕ್ಕಮಗಳೂರು ತಾಲ್ಲೂಕು ವೈವಿಧ್ಯಮವಾಗಿದ್ದು ಅನೇಕ ಸವಾಲುಗಳಿಗೆ ಒಡ್ಡಿಕೊಂಡಿದೆ. ಕೃಷಿ ಸೊರಗಿದೆ. ವೆಚ್ಚದ ಪ್ರಮಾಣ ಹೆಚ್ಚಿದೆ. ಕಾರ್ಮಿಕರ ಕೊರತೆ, ವನ್ಯಮೃಗಗಳ ಹಾವಳಿ, ವಿವಿಧ ರೋಗರುಜಿನಗಳು, ಜಲಮೂಲಗಳು ಬತ್ತುತ್ತಿವೆ. ಕೆರೆಕಟ್ಟೆಗಳು ಹೂಳು ಮತ್ತು ಒತ್ತುವರಿಯಿಂದ ಆವೃತಗೊಳ್ಳುತ್ತಿದ್ದು ನೀರಿನ ಆತಂಕ ಹೆಚ್ಚಿಸಿದೆ. ಶ್ರೀಸಾಮಾನ್ಯನ ಬದುಕು ಮೂರಾಬಟ್ಟೆಯಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಂಘಟಿತವಾಗಿ ಸರ್ಕಾರ ಗಮನಸೆಳೆದು ಸಾಧ್ಯವಾದಷ್ಟು ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸಮ್ಮೇಳನಗಳು ಕೈಜೋಡಿಸಬೇಕಾಗಿದೆ ಎಂದ ಡಾ.ಬೆಳವಾಡಿಮಂಜುನಾಥ್, ಮೊದಲು ಅನ್ನ ಆನಂತರ ಕಲೆ, ಸಾಹಿತ್ಯ ಎಂಬುದನ್ನು ಮರೆಯಬಾರದೆಂದರು.

ಮಾಜಿಸಚಿವ ಸಿ.ಆರ್.ಸಗೀರಅಹಮ್ಮದ್, ಹಿರಿಯವಕೀಲ ಬಿ.ಎಂ.ಲಕ್ಷ್ಮಣಗೌಡ ‘ಕನ್ನಡಶ್ರೀ’ ಪ್ರಶಸ್ತಿಸ್ವೀಕರಿಸಿ ಕೃತಜ್ಞತೆಸಲ್ಲಿಸಿದರು. ದೂರದರ್ಶನ ಕಲಾವಿದೆ ಗಾನವಿ, ಸಾಂಸ್ಕøತಿಕ ಚಿಂತಕರಾದ ದೀಪಕದೊಡ್ಡಯ್ಯ, ಕಡೂರಿನ ಸಿಂಗಟಗೆರೆಸಿದ್ದಪ್ಪ, ಕನ್ನಡಸೇನೆ ಜಿಲ್ಲಾಧ್ಯಕ್ಷ ರಾಜೇಗೌಡ ಮತ್ತಿತರರನ್ನು ಗೌರವಿಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ