October 5, 2024

ಕಸ್ತೂರಿ ರಂಗನ್ ವರದಿಯಲ್ಲಿರುವ ಜನವಸತಿ ಪ್ರದೇಶಗಳನ್ನು ಕೈ ಬಿಟ್ಟು ಪರಿಷ್ಕರಿಸದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಗುವುದು ಎಂದು ಮೂಡಿಗೆರೆ ತಾಲ್ಲೂಕಿನ  ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಒಕ್ಕೊರಲಿನ ನಿರ್ಧಾರ ಪ್ರಕಟಿಸಿದರು.

ಕುಂದೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ನಡೆದ ವಿಶೇಷ ಗ್ರಾಮಸಭೆಯಲ್ಲಿ ನಿರ್ಧಾರ ಪ್ರಕಟಿಸಲಾಯಿತು.

‘ಸಭೆಯಲ್ಲಿ ತಾಲ್ಲೂಕು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಆರ್. ಬಾಲಕೃಷ್ಣ  ಮಾತನಾಡಿ, ‘ಕಸ್ತೂರಿ ರಂಗನ್ ವರದಿಯು ಸಂಪೂರ್ಣವಾಗಿ ಅವೈಜ್ಞಾನಿವಾಗಿದೆ. ವೈಮಾನಿಕ ಹಾಗೂ ಸ್ಯಾಟ್ ಲೈಟ್ ಸರ್ವೆ ಮೂಲಕ ಭೂಮಿಯನ್ನು ಅಳೆದು ಯೋಜನೆ ತಯಾರಿಸಲಾಗಿದೆ. ತಾಲ್ಲೂಕಿನ ಕುಂದೂರು ಹಾಗೂ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ. ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡದಿದ್ದರೂ ಅದರ ಬಫರ್ ಜೋನ್ ವ್ಯಾಪ್ತಿಯಲ್ಲಿ ಅಕ್ಕಪಕ್ಕದ ಗ್ರಾಮಗಳು ಸೇರ್ಪಡೆಯಾಗುವುದರಿಂದ ಅಪಾರ ಪ್ರಮಾಣದ ಸಂಕಷ್ಟ ಎದುರಾಗುತ್ತದೆ’ ಎಂದರು.

ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ‘ಕಸ್ತೂರಿ ರಂಗನ್ ಯೋಜನೆಯಿಂದ ಕೃಷಿ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಅವೈಜ್ಞಾನಿಕ ವರದಿಯಾಗಿದೆ ಎಂಬುದನ್ನು ಸ್ಥಳೀಯರು ಹೋರಾಟದ ಮೂಲಕ ತಿಳಿಸಿಕೊಡಬೇಕಿದೆ. ಕಾಫಿ ಕೃಷಿಯಿಂದ ಪರಿಸರಕ್ಕೆ ಯಾವುದೇ ಹಾನಿಯಾಗದಿದ್ದರೂ, ಯೋಜನೆಯನ್ನು ಜಾರಿಗೊಳಿಸಿ, ಜನರೇ ಗ್ರಾಮವನ್ನು ತೊರೆಯುವಂತೆ ಮಾಡಲಾಗುತ್ತದೆ. ಇದನ್ನು ಎಲ್ಲಾ ಪಕ್ಷಗಳ ಮುಖಂಡರು ರಾಜಕೀಯ ಹೊರತಾಗಿ ಹೋರಾಟ ನಡೆಸಿ ತಡೆಯಬೇಕಿದೆ’ ಎಂದರು.

‘2014 ರಲ್ಲಿ ಕಸ್ತೂರಿ ರಂಗನ್ ವರದಿಯನ್ನು ಬಹಿಷ್ಕರಿಸಿ ಗ್ರಾಮ ಪಂಚಾಯಿತಿ ಚುನಾವಣೆಗೆ ಯಾವುದೇ ನಾಮಪತ್ರಗಳನ್ನು ಸಲ್ಲಿಸದೇ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಗಿತ್ತು. ಸರ್ಕಾರಗಳು ಜನರ ಪರವಾದ ಕಾರ್ಯಗಳನ್ನು ಮಾಡಿದಿದ್ದರೆ ಅಂತಹ ಸರ್ಕಾರಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಕಸ್ತೂರಿ ರಂಗನ್ ವರದಿ ಪರಿಷ್ಕರಣೆಯಾಗುವವರೆಗೂ ಯಾವುದೇ ಚುನಾವಣೆಯಲ್ಲಿ ಜನರು ಭಾಗವಹಿಸುವುದು ಬೇಡ’ ಎಂದು ಗ್ರಾಮಸ್ಥರು ಒಕ್ಕೊರಳಿನ ನಿರ್ಧಾರ ಕೈಗೊಂಡರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತಿನವೀನ್, ಸದಸ್ಯರಾದ ಡಿ.ಬಿ. ವಿಜೇಂದ್ರ, ಸಂತೋಷ್, ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಮನುಕತ್ಲೆಖಾನ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಜಿ. ಸುರೇಂದ್ರ, ಕಾಂಗ್ರೆಸ್ ಮುಖಂಡ ಸುಂದ್ರೇಶ್ ಮಾತನಾಡಿದರು. ಸದಸ್ಯೆ ಜಯಂತಿ, ಗ್ರಾಮಸ್ಥರಾದ ರಾಮೇಗೌಡ, ಲಕ್ಷ್ಮಣಗೌಡ, ಸುಕುಮಾರ್, ಮಹೇಶ್, ನವೀನ್, ಪಿಡಿಒ ವಾಸುದೇವ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ