October 5, 2024

ಮನುಕುಲದ ಉಳಿವಿಗಾಗಿ ನಾರಾಯಣಗುರುಜೀ ನೀಡಿದ ಮೂರುಅಸ್ತ್ರಗಳೆ ಶಿಕ್ಷಣ-ಸಂಘಟನೆ-ಸಂಸ್ಕಾರ ಎಂದು ನಿಟ್ಟೂರು ಶ್ರೀನಾರಾಯಣಗುರು ಮಹಾಸಂಸ್ಥಾನದ ಅಧ್ಯಕ್ಷ ಶ್ರೀ ಆರ್ಯರೇಣುಕಾನಂದ ಸ್ವಾಮೀಜಿ ನುಡಿದರು.

ಚಿಕ್ಕಮಗಳೂರು  ಜಿಲ್ಲಾ ಶ್ರೀನಾರಾಯಣಗುರು ಸಮಿತಿ ನಗರದ ಉಪ್ಪಳ್ಳಿಯ ಹೆರಿಟೇಜ್ ಕನ್ವೆನ್ಷನ್ ಹಾಲ್‍ನಲ್ಲಿ ಆಯೋಜಿಸಿದ್ದ ‘ಬ್ರಹ್ಮಶ್ರೀ ನಾರಾಯಣಗುರುಗಳ 170ನೆಯ ಜಯಂತ್ಯೋತ್ಸವ’ದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಿವರು. ಇವರ ತತ್ತ್ವಾದರ್ಶಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಭಕ್ತಿ ಮತ್ತು ಶ್ರದ್ಧೆಯನ್ನು ಕಲಿಸಿ ಜನರನ್ನು ಧರ್ಮ ಮಾರ್ಗದಲ್ಲಿ ನಡೆಸಲು ಇವು ಸಹಕಾರಿ. ಸಮಾಜದ ಕೆಲಸವನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಾಗ ಯಶಸ್ಸು ಸಿಗುತ್ತದೆ. ಧ್ವನಿಯನ್ನು ಸಮಾಜಕ್ಕೆ ಕೊಡುವವರರನ್ನೆ ನಾಯಕನಾಗಿ ಸಮಾಜವೂ ಆಯ್ಕೆ ಮಾಡಿಕೊಳ್ಳುತ್ತದೆ ಎಂದರು. ಇಂದು ವೇಷಭೂಷಣ-ಆಚರಣೆ-ಆಸಕ್ತಿ-ಸಂಭ್ರಮ-ಸಂತೋಷ ತಂದಿದೆ. ಕೇರಳ ರಾಜ್ಯಕ್ಕೆ ಹೋಗಿ-ಬಂದ ಅನುಭವವನ್ನು ತಂದುಕೊಟ್ಟಿದೆ. ಸಂಸ್ಕøತಿ-ಆಚಾರ್ಯ-ವಿಚಾರ ಮುಂದಿನ ಪೀಳಿಗೆಗೆ ತಿಳಿಸಲು ಜಯಂತ್ಯೋತ್ಸವ ಸಹಕಾರಿ ಎಂದ ಆರ್ಯ ರೇಣುಕಾನಂದಸ್ವಾಮೀಜಿ ನುಡಿದರು.

ಬಸವತತ್ತ್ವ ಪೀಠದ ಅಧ್ಯಕ್ಷ ಡಾ.ಮರುಳುಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ ನಿರ್ಲಕ್ಷ್ಯಿಸಲ್ಪಟ್ಟ ತಳಸಮುದಾಯದಲ್ಲಿ ಸ್ವಾಭಿಮಾನವನ್ನು ಮೂಡಿಸಿದ ನಾರಾಯಣಗುರುಗಳದ್ದು ಚುಂಬಕಶಕ್ತಿ. ಅಕ್ಷರಜ್ಞಾನವನ್ನು ತುಂಬಿ ಪ್ರಬಲ ಸಮುದಾಯವಾಗಿ ಬೆಳೆಸುವ ಕೆಲಸ ಮಾಡಿದವರು. ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದವರನ್ನೆ ಬದಿಗಿರಿಸಿ ತಾವೇ ಸ್ವತಂತ್ರ ದೇವಸ್ಥಾನವನ್ನು ನಿರ್ಮಿಸಿಕೊಂಡು ಧಾರ್ಮಿಕವಾಗಿ ಸ್ವಾಭಿಮಾನ ಮೂಡಿಸಿದವರೆಂದು ನುಡಿದರು.
ಪ್ರತಿ ಸಮುದಾಯದಲ್ಲೂ ಒಳಪಂಗಡಗಳು ಸಹಜ. ಅವೆಲ್ಲವೂ ಒಗ್ಗಟ್ಟಾದರೆ ಮಾತ್ರ ಎಲ್ಲ ರಂಗದಲ್ಲೂ ಸೂಕ್ತ ಪ್ರಾತಿನಿಧ್ಯ ಪಡೆಯಲು ಸಾಧ್ಯ. ಈಡಿಗ, ಬಿಲ್ಲವ, ಈಳವ, ಪೂಜಾರಿ, ನಾಯ್ಕ ಇತ್ಯಾದಿ ಪ್ರಾದೇಶಿಕ ಕಾರಣಗಳಿಂದ ಕೆಲವು ಆಚರಣೆಗಳಿಂದ ಬೇರೆ ಬೇರೆ ಹೆಸರುಗಳಿದ್ದರೂ ಎಲ್ಲರಿಗೂ ಒಬ್ಬರೇ ಗುರು. ದೊಡ್ಡ ಆಲದ ಮರದಂತಿರುವ ನಾರಾಯಣಗುರುಗಳ ತತ್ತ್ವದೊಂದಿಗೆ ಸಂಘಟಿತರಾದರೆ ಒಳಿತಿದೆ ಎಂದು ಡಾ.ಮರುಳಸಿದ್ದ ಸ್ವಾಮೀಜಿ ನುಡಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ 1854ರಲ್ಲಿ ಕೇರಳ ರಾಜ್ಯದ ಪುಟ್ಟಹಳ್ಳಿಯ ಈಳವ ಕುಟುಂಬದಲ್ಲಿ ಜನಿಸಿ ಶೋಷಿತರ ಧ್ವನಿಯಾಗಿ ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದವರು ನಾರಾಯಣ ಗುರುಗಳು, ಅವರ ಆಚಾರ-ವಿಚಾರ ದಾರಿಗಳು ಆದರ್ಶಪ್ರಾಯ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿದವರು ಎಂದರು.

12ನೆಯ ಶತಮಾನದಲ್ಲಿ ಬಸವಾದಿ ಶರಣರು ಶೋಷಿತರನ್ನು ಒಟ್ಟುಗೂಡಿಸಿ ಬೆಳಕು ನೀಡಿದಂತೆ, ನಾರಾಯಣಗುರುಗಳೂ ಸಮಾಜದ ಕೆಡುಕನ್ನು ತೊಡೆದು ಬೆಳಕು ತೋರುವಲ್ಲಿ ಶ್ರಮಿಸಿದವರು. ಈಡಿಗ, ಈಳವ ಸಣ್ಣ ಸಮಾಜವಾದರೂ ಸಮರ್ಥ ನಾಯಕತ್ವನ್ನು ರಾಜ್ಯಕ್ಕೆ ನೀಡಿದ ಉದಾಹರಣೆ ಇದೆ. ಹಿಂದೆ ಸರ್ಕಾರವನ್ನು ಉಳಿಸುವ-ಉರುಳಿಸುವ ಸಾಮಥ್ರ್ಯವನ್ನೂ ಒಂದುಕಾಲದಲ್ಲಿ ಹೊಂದಿತ್ತೆಂದರು.

ಪುಟ್ಟ ಸಮಾಜಕ್ಕೆ ಶಕ್ತಿತುಂಬುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಈ ಸಮುದಾಯದ ತಲಾಓರ್ವರಿಗೆ ಸಿಡಿಎ, ಆಶ್ರಯಸಮಿತಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. 5ಗ್ಯಾರಂಟಿಗಳ ಕಲ್ಯಾಣ ಕಾರ್ಯಕ್ರಮದಿಂದ ಸಂಘದ ಕಟ್ಟಡಕ್ಕೆ ವಿಶೇಷ ಅನುದಾನ ತರುವುದು ಸದ್ಯಕ್ಕೆ ಕಷ್ಟ. ಮುಂದೆ ಪ್ರಯತ್ನಿಸಬಹುದು ಎಂದ ಶಾಸಕ ಎಚ್.ಡಿ.ತಮ್ಮಯ್ಯ, ಸಂಘದ ಸ್ವಂತಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ ಮೊದಲ ಕಂತಾಗಿ 10ಲಕ್ಷರೂ.ಗಳನ್ನು ಬಿಡುಗಡೆ ಮಾಡಿಸುವುದಾಗಿ ಭರವಸೆ ಇತ್ತರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ನಾರಾಯಣಗುರುಗಳು ಹಿಂದೂಸಮಾಜದ ಲೋಪದೋಷಗಳನ್ನು ತೊಡೆದು ಶುದ್ಧೀಕರಣಗೊಳಿಸುವ ಮಹತ್ವದ ಕೆಲಸ ಮಾಡಿದ್ದಾರೆಂದರು.

ಜಿಲ್ಲಾ ಶ್ರೀ ನಾರಾಯಣಗುರು ಸಮಿತಿ ಅಧ್ಯಕ್ಷ ದಾಸರಹಳ್ಳಿ ಎಂ.ಕೃಷ್ಣಪ್ಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಸಣ್ಣ ಸಮುದಾಯದ ಅಭಿವೃದ್ಧಿಗೆ ಪ್ರಬಲರು ಸಹಕಾರ ನೀಡಬೇಕು. ಸ್ವಂತ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ನೆರವನ್ನು ಕೊಡಿಸುವಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಮನವಿ ಮಾಡಿದರು.

ವಿಧಾನಪರಿಷತ್ ಮಾಜಿಸದಸ್ಯೆ ಗಾಯತ್ರಿಶಾಂತೇಗೌಡ ಮಾತನಾಡಿ ತಮ್ಮ ಅಧಿಕಾರಾವಧಿಯಲ್ಲಿ ಸ್ವಂತ ಕಟ್ಟಡಕ್ಕೆ ನಿವೇಶನ ಕೊಡಿಸಲು ಶ್ರಮಿಸಿದ್ದು ಸರ್ಕಾರದಿಂದ 25ಲಕ್ಷರೂ.ಗಳನ್ನು ಬಿಡುಗಡೆ ಮಾಡಿಸಿದ್ದನ್ನು ಸ್ಮರಿಸಿದರು.

ಜಿ.ಪಂ.ಮಾಜಿಅಧ್ಯಕ್ಷ ಜಯಪುರಸತೀಶ್, ಮಾಜಿಸದಸ್ಯ ನ.ರಾ.ಪುರದ ಪಿ.ಆರ್.ಸದಾಶಿವ ಮಾತನಾಡಿದರು. ಸಂಘದ ಕಾರ್ಯದರ್ಶಿ ಶ್ರೀನಿವಾಸ ಮಾಯಪ್ಪನ್ ನಿರೂಪಿಸಿದರು. ಖಜಾಂಚಿ ಸುರೇಶ್, ಪದಾಧಿಕಾರಿಗಳಾದ ಶಾಂತಕುಮಾರ್, ಕುಂಜಪ್ಪ, ಗುಣಶೇಖರ್, ಜಯಪ್ರಕಾಶ್, ಭಾಸ್ಕರ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಾವಂತರನ್ನು ಮತ್ತು ದಾನಿಗಳನ್ನು ಸ್ವಾಮೀಜಿಗಳು ಸನ್ಮಾನಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ