October 5, 2024

ಸ್ವಾರ್ಥಕ್ಕಿಂತ ಸೇವೆ ಮಿಗಿಲು ಎಂಬುದು ರೋಟರಿ ಆಶಯ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಉಡುಪಿಯ ಸಿ.ಎ.ದೇವ್‍ಆನಂದ ನುಡಿದರು.

ಚಿಕ್ಕಮಗಳೂರು ರೋಟರಿಕ್ಲಬ್‍ಗೆ ಗುರುವಾರ ಅಧಿಕೃತ ಭೇಟಿ ನೀಡಿರುವ ಅವರು ನಿನ್ನೆ ಸಂಜೆ ಎಂ.ಎಲ್.ವಿ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‍ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.

ರೋಟರಿ ಅಂತರರಾಷ್ಟ್ರೀಯ ಸಂಸ್ಥೆ ಜಗತ್ತಿನಾದ್ಯಂತ 12ಲಕ್ಷ ಸದಸ್ಯರನ್ನು ಹೊಂದಿದ್ದು ಸೇವಾ ಕಾರ್ಯದಲ್ಲಿ ಅವರೆಲ್ಲ ತೊಡಗಿದ್ದಾರೆ. ಸಮಾಜ ಋಣ ತೀರಿಸಲು ರೋಟರಿ ಉತ್ತಮ ವೇದಿಕೆ. ಭೂಮಿಯಲ್ಲಿ ಆಶ್ರಯಪಡೆದ ನಾವು ಅದಕ್ಕೆ ಹಿಂತಿರುಗಿಸಬೇಕಾದ ಬಾಡಿಗೆಯೆ ಸೇವೆ ಎಂದ ಅವರು, ಪ್ರತಿಫಲಾಪೇಕ್ಷೆ ಇಲ್ಲದ ಸೇವೆಗೆ ಸಾರ್ಥಕತೆ ಇದೆ ಎಂದರು.

ನಿಷ್ಕಲ್ಮಶವಾದ ಮನಸ್ಸಿನ ಸೇವೆಯೆ ನಿಜವಾದ ಸೇವೆ. ಇದರಿಂದ ಅಪ್ರತ್ಯಕ್ಷ ಅನುಕೂಲಗಳೂ ಇವೆ. ರೋಟರಿಯ ಪ್ರತಿಮೆ ಹೆಚ್ಚುತ್ತದೆ. ಇಲ್ಲಿಯ ಸೇವಾತತ್ಪರತೆ ಹೊಸ ಸದಸ್ಯರನ್ನು ಆಕರ್ಷಿಸುತ್ತದೆ. ನಮಗೂ ಆತ್ಮತೃಪ್ತಿ ತಂದುಕೊಡುತ್ತದೆ. ಅಂತರರಾಷ್ಟ್ರೀಯ ರೋಟರಿ ಅಧ್ಯಕ್ಷರುಗಳು ಪ್ರತಿವರ್ಷ ತಮ್ಮದೇ ಆಸಕ್ತಿ-ಆಲೋಚನೆಯ ಘೋಷವಾಕ್ಯವನ್ನು ನೀಡಿ ಬೆಳಕು ಚೆಲ್ಲುತ್ತಿದ್ದರು. ಮುಂದಿನವರ್ಷದಿಂದ ಸ್ವಾರ್ಥಕ್ಕಿಂತ ಸೇವೆ ಮಿಗಿಲು ಎಂಬುದೇ ಶಾಶ್ವತವಾದ ರೋಟರಿ ಘೋಷವಾಕ್ಯವಾಗಲಿದೆ ಎಂದವರು ವಿವರಿಸಿದರು.

ಸಮಾಜದಲ್ಲಿ ರೋಟರಿಯ ಪ್ರತಿಮೆ ಹೆಚ್ಚಿ ಗೌರವಭಾವ ಮೂಡುವಂತೆ ಮಾಡುವಲ್ಲಿ ಸೇವಾಯೋಜನೆಗಳು ಸಹಕಾರಿ. ಚಿಕ್ಕಮಗಳೂರು ರೋಟರಿಕ್ಲಬ್ ಜೀವನಸಂಧ್ಯಾ ವೃದ್ಧಾಶ್ರಮವನ್ನು ಅನೇಕ ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದು ಬಾಳಸಂಜೆಯ ಹಿರಿಯಜೀವಗಳ ಕೊನೆಗಾಲವನ್ನು ಸಹನೀಯವಾಗಿಸಿರುವುದು ಸಾರ್ಥಕ ಕಾರ್ಯ. ಇಂತಹ ಯೋಜನೆಯಿಂದ ಜಗತ್ತಿಗೆ ವಿಸ್ಮಯ ತೋರಿಸಿಕೊಡಬೇಕು ಎಂದರು.

ಹೊಸ ರೋಟರಿಜಿಲ್ಲೆ ಅಸ್ಥಿತ್ವಕ್ಕೆ ಬಂದು 9ವರ್ಷಗಳು ಸಂದಾಯವಾಗಿವೆ. ರೋಟರಿ ಜಿಲ್ಲೆಯಲ್ಲಿ ಪ್ರಸ್ತುತ 3,800ಸದಸ್ಯರಿದ್ದು ಶೇ.10ರಷ್ಟು ಸದಸ್ಯತ್ವ ಹೆಚ್ಚಳದ ಪ್ರಯತ್ನ ನಡೆದಿದೆ. ಅಂತರರಾಷ್ಟ್ರೀಯ ರೋಟರಿ ನಿಧಿಗೆ 3ಲಕ್ಷರೂ. ಇಲ್ಲಿಂದ ಸಂಗ್ರಹಿಸಿ ಕೊಡುವ ಗುರಿ ಹೊಂದಲಾಗಿದೆ ಎಂದ ಜಿಲ್ಲಾರಾಜ್ಯಪಾಲ ದೇವ್, ಮುಂದಿನ ಜನವರಿ 24ರಿಂದ 26ರವರೆಗೆ ಉಡುಪಿಯ ಅಮೃತಗಾರ್ಡನ್‍ನಲ್ಲಿ ಜಿಲ್ಲಾರೋಟರಿ ಸಮ್ಮೇಳನವನ್ನು ಆಯೋಜಿಸಿದ್ದು, 1600ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಹೊಸಚಿಗುರು ಹಳೆಬೇರು ಸಮಿಶ್ರಣದಂತಿರುವ ಚಿಕ್ಕಮಗಳೂರು ರೋಟರಿಕ್ಲಬ್ ಜಿಲ್ಲೆಯಲ್ಲೆ ಹಿರಿಯ ಮತ್ತು ಪ್ರತಿಷ್ಠಿತ ಕ್ಲಬ್ ಎನಿಸಿದೆ. ತಾವು ಹುಟುವುದಕ್ಕಿಂತ ಮೊದಲೇ ಇಲ್ಲಿ ರೋಟರಿ ಆರಂಭಗೊಂಡಿದೆ. ಅನುಭವ ಮತ್ತು ಉತ್ಸಾಹದ ಸಮ್ಮಿಳಿತದಿಂದ ಉತ್ತಮ ಕೆಲಸಗಳು ನಡೆಯುತ್ತಿವೆ ಎಂದು ಶ್ಲಾಘಿಸಿದ ದೇವ್‍ಆನಂದ, ಇನಟ್ರ್ಯಾಕ್ಟ್ ಪ್ರಾರಂಭಿಸುವುದರ ಮೂಲಕ ಯುವಜನರನ್ನು ರೋಟರಿ ಚಳುವಳಿಯತ್ತ ಆಕಷಿಸುತ್ತಿರುವುದು ಉತ್ತಮಕಾರ್ಯ ಎಂದರು.

ರೋಟರಿ ವಲಯ-7ರ ನಾಯಕ ಜಿ.ಎಲ್.ವೆಂಕಟೇಶಮೂರ್ತಿ ಮಾತನಾಡಿ ಚಿಕ್ಕಮಗಳೂರು ರೋಟರಿಕ್ಲಬ್ ಮುಂಬರುವ ದಿನಗಳಲ್ಲಿ ಇನ್ನಷ್ಟು ಚಟುವಟಿಕೆ ನಡೆಸಲು ಯೋಜಿಸಿದೆ. ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಕುರಿತಂತೆ ವಿಚಾರಸಂಕಿರಣ, ಯುವಚೇತನ ಸಪ್ತಾಹ, ವಿಶ್ವಶಾಂತಿ ನಡಿಗೆ, ರಸ್ತೆ ಸುರಕ್ಷತಾ ಜಾಗೃತಿ, ಮುಳ್ಳಯ್ಯನಗಿರಿ ಸ್ವಚ್ಛತಾ ಕಾರ್ಯ ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಗಳನ್ನು ನಡೆಸಲಿದೆ ಎಂದರು.

ಸರ್ಕಾರಿ ಶಾಲಾಮಕ್ಕಳಿಗೆ ಕಳೆದ ಮೂರುವರ್ಷಗಳಿಂದ 2,100ಕ್ಕೂ ಹೆಚ್ಚು ಸೆÀ್ವಟರ್‍ಗಳನ್ನು ಸೇವಾ ಯೋಜನೆಯಡಿ ವಿತರಿಸಿರುವ ಹಿರಿಯಸದಸ್ಯ ಕೆ.ಎಸ್.ರಮೇಶರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿಕಟಪೂರ್ವ ಕಾರ್ಯದರ್ಶಿ ಪವನ್ ಅಭಿನಂದಿಸಿ ಮಾತನಾಡಿದರು.

ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎಂ.ಎಲ್.ಸುಜಿತ್ ಸಮಾರಂಭದ ಅಧ್ಯಕ್ಷತೆವಹಿಸಿ ಸ್ವಾಗತ ಕೋರಿದರು. ವಾರ್ಷಿಕ ವರದಿ ಮಂಡಿಸಿದ ಕಾರ್ಯದರ್ಶಿ ಎನ್.ಪಿ.ಲಿಖಿತ್ ವಂದಿಸಿದರು. ನಯನಾಸಂತೋಷ ಪ್ರಾರ್ಥಿಸಿದ್ದು, ಕ್ಲಬ್ ಸೇವಾ ನಿರ್ದೇಶಕ ಎಚ್.ಎನ್.ಮಹೇಶಗೌಡ ಅತಿಥಿಗಳನ್ನು ಪರಿಚಯಿಸಿದರು. ಎ.ಜಿ.ನಾಸಿರ್‍ಹುಸೇನ್ ಮಾತನಾಡಿದರು. ಬಸವನಹಳ್ಳಿ ಸರ್ಕಾರಿ ಶಾಲಾಮಕ್ಕಳಿಗೆ ಸಾಂಕೇತಿಕವಾಗಿ ನೋಟ್‍ಪುಸ್ತಕ ವಿತರಿಸಲಾಯಿತು. ಟಿಆರ್‍ಎಫ್ ಛೇರ್ಮನ್ ಎಂ.ಎನ್.ರಾಕೇಶ್ ರೋಟರಿನಿಧಿಗೆ ಸದಸ್ಯರ ಕೊಡುಗೆ ನೀಡಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ