October 5, 2024

ಹೆಸರಿಗಷ್ಟೇ ಕಳಸ ತಾಲೂಕು ಘೋಷಣೆಯಾಗಿದ್ದು ಕಚೇರಿಗಳು, ಅಧಿಕಾರಿ ಸಿಬ್ಬಂದಿ ಮತ್ತಿತರೆ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಕೂಡಲೇ ಕಳಸ ತಾಲೂಕಿಗೆ ಅಗತ್ಯ ಕಚೇರಿ ಕಟ್ಟಡಗಳು, ಅಧಿಕಾರಿ ಸಿಬ್ಬಂದಿ ನಿಯೋಜಿಸದಿದ್ದರೆ ಬಿಜೆಪಿಯಿಂದ ತೀವ್ರತರದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ದೀಪಕ್‌ದೊಡ್ಡಯ್ಯ ಎಚ್ಚರಿಸಿದರು.

ಅವರು ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳಸ ತಾಲೂಕು ಘೋಷಣೆಗೆ ಹಲವು ಪಕ್ಷ, ಸಂಘಟನೆಗಳ ಹೋರಾಟದ ಪರಿಶ್ರಮವಿದೆ, ಬಿಜೆಪಿಯಿಂದ ಕಾಲ್ನಡಿಗೆ ಜಾಥಾ ನಡೆಸಿದ್ದೇವೆ. ಅಂತೂ ಕಳಸ ತಾಲೂಕು ಘೋಷಣೆಯಾಗಿದೆ. ಆದರೆ, ಇಂದಿಗೂ ಅಲ್ಲಿನ ನಾಡಕಚೇರಿಯಲ್ಲೇ ತಾಲೂಕು ಕಚೇರಿ ನಡೆಯುತ್ತಿದೆ. ಇಂದು ಇದ್ದ ತಹಸಿಲ್ದಾರ್ ತಿಂಗಳಾಗುವಷ್ಟರಲ್ಲಿ ವರ್ಗಾವಣೆಯಾಗಿರುತ್ತಾರೆ. ಹೀಗಾಗಿ ತಾಲೂಕು ಘೋಷಣೆಯಾದ ಉದ್ದೇಶವೇ ಈಡೇರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ತಾಲೂಕು ಕಚೇರಿಗೆ ಹೋದರೆ ಪೇಪರ್ ಫೈಲ್ ಬಂದಿಲ್ಲ ಮೂಡಿಗೆರೆಗೆ ಹೋಗಿ ಎನ್ನುತ್ತಾರೆ. ೮೫ ಕಿಲೋ ಮೀಟರ್ ದೂರ ಸಣ್ಣ ಪುಟ್ಟ ಕೆಲಸಗಳಿಗೂ ಅಲೆಯಬೇಕಿದೆ. ತಾಲೂಕು ಕೇಂದ್ರ ಎಂದರೆ ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ನ್ಯಾಯಾಲಯ, ಉಪನೋಂದಣಾಧಿಕಾರಿ ಕಚೇರಿ ಇರಬೇಕು. ಆದರೆ, ಈವರೆಗೆ ಇಲ್ಲಿ ಯಾವುದೇ ಕಚೇರಿಗಳನ್ನು ತೆರೆದಿಲ್ಲ ಎಂದು ಅರೋಪಿಸಿದರು.

ಇತ್ತೀಚಗೆ ಶಾಸಕಿ ನಯನಾ ಮೋಟಮ್ಮ ಅವರು ತಾಲೂಕು ಪಂಚಾಯಿತಿ ಕಚೇರಿ ಉದ್ಗಾಟಿಸಿದ್ದಾರೆ. ಆದರೆ, ಅಲ್ಲಿಗೆ ಇಒ ಮೂಡಿಗೆರೆಯವರನ್ನೇ ನಿಯೋಜನೆ ಮಾಡಲಾಗಿದೆ. ಇದರಿಂದ ಜನಸಾಮಾನ್ಯರ ಕೆಲಸ ಕಾರ್ಯಗಳು ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕೂಡಲೇ ಕಳಸ ತಾಲೂಕಿಗೆ ಸಂಬಂಸಿದ ಎಲ್ಲ ಇಲಾಖೆ ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡಬೇಕು. ಎಲ್ಲ ಕಚೇರಿ ಕಟ್ಟಡ ನಿರ್ಮಿಸಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಇಲ್ಲದಿದ್ದರೆ ರಾಜ್ಯ ಸರಕಾರದ ವಿರುದ್ಧ ಇನ್ನೊಂದು ಹೋರಾಟ ರೂಪಿಸಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಬರಿ ಜಿಲ್ಲಾ ಕೇಂದ್ರಕ್ಕೆ ಭೇಟಿಕೊಟ್ಟು ಹೋಗುವುದಲ್ಲ. ಕಳಸ ತಾಲೂಕಿಗೂ ಬಂದು ಅಲ್ಲಿನ ಸಮಸ್ಯೆ ಅರಿಯಬೇಕು ಎಂದರು.

ಒತ್ತುವರಿ ಖುಲ್ಲಾ ಮಾಡುತ್ತೇವೆ, ಅರಣ್ಯ ಕಾಯಿದೆ ಜಾರಿಗೆ ತರುತ್ತೇವೆ ಎಂಬ ದೊಡ್ಡ ಗುಮ್ಮ ಜನರನ್ನು ಕಾಡುತ್ತಿದೆ. ಯಾರ್‍ಯಾರು ಬದುಕಿಗಾಗಿ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೋ ಅವರ ಒತ್ತುವರಿ ಖುಲ್ಲಾ ಮಾಡಬಾರದು. ಇದೇ ೧೧ ರಂದು ಕಳಸದಲ್ಲಿ ಈ ವಿಚಾರವಾಗಿ ಬಂದ್ ಕರೆ ನೀಡಲಾಗುತ್ತದೆ ಎಂದರು.

ಜೀವನೋಪಾಯಕ್ಕಾಗಿ ಅರಣ್ಯ, ಕಂದಾಯ ಭೂಮಿ ಸಾಗುವಳಿ ಮಾಡಿರುವ ಒತ್ತುವರಿದಾರರನ್ನು ತೆರವು ಮಾಡಬಾರದು, ಅವರ ಬದುಕಿಗೆ ಆಸರೆ ಕೊಡುವ ಕಾನೂನು ರೂಪಿಸಿ ಸಮಸ್ಯೆಯನ್ನು ಸೂಕ್ತವಾಗಿ ಪರಿಹರಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ರಾಜಕಾರಣ ದಿನೇ ದಿನೇ ಕೆಟ್ಟ ದಿಕ್ಕಿನೆಡೆಗೆ ಹೋಗುತ್ತಿದೆ. ಇದನ್ನು ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವೇ ದಿನಗಳಲ್ಲಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ದಿನೇಶ್, ಸೋಮಶೇಖರಪ್ಪ, ಮಂಜುನಾಥ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ