ಮೂಡಿಗೆರೆ ಯುವ ಪ್ರತಿಭೆಗಳು ನಿರ್ಮಿಸಿದ “ಶಪಿಥ” ಕಿರು ಚಿತ್ರ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್ ಸಿನಿಮಾ’ ಮತ್ತು ಖ್ಯಾತ ಛಾಯಾಗ್ರಾಹಕ ಸತ್ಯ ಹೆಗಡೆ ಅವರ ‘ಸತ್ಯ ಸ್ಟುಡಿಯೊ’ ಜಂಟಿಯಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕಿರು ಚಿತ್ರ ಸ್ಪರ್ಧೆ “ಸಿನಿ ಮಿನಿ” ಯಲ್ಲಿ ಭಾಗವಹಿಸಿ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ. ಹಾಗೂ ಭಾಗವಹಿಸಿದ 205 ಕಿರು ಚಿತ್ರಗಳ ಪೈಕಿ “ಅತ್ಯುತ್ತಮ 10” ಚಿತ್ರವಾಗಿ ಆಯ್ಕೆಯಾಗಿದೆ.
“ಶಪಿಥ ” ಕಿರು ಚಿತ್ರ ಶಿಕಾರಿ ಯ ಕುರಿತು ತೆಗೆಯಲಾದ ಒಂದು ಕುತೂಹಲಕಾರಿ ಕಥನ.
ಶಿಕಾರಿ ನಿಷಿದ್ಧವಾದ ಒಂದು ಕಾಡಿನಲ್ಲಿ ದೈವ ನಿಯಾಮಕವಾದ ನಂಬಿಕೆಯ ಧಿಕ್ಕರಿಸಿ ಹೋದ ಒಂದು ಶಿಕಾರಿ ತಂಡದ ಕಥೆ.
ಈ ಚಿತ್ರವನ್ನು ವೀಕ್ಷಿಸಿದ ತೀರ್ಪುಗಾರರು ಚಿತ್ರದ ಬಗ್ಗೆ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದರು. ತೀರ್ಪುಗಾರರ ತಂಡದಲ್ಲಿ ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಮುಂತಾದವರು ಇದ್ದರು.
ವಿಷುವಲ್ ಎಫೆಕ್ಟ್ ಗಾಗಿ ಅತ್ಯುತ್ತಮ ಚಿತ್ರ ಹಾಗೂ ಶ್ರೇಷ್ಠ ಛಾಯಾಗ್ರಹಣ ಕ್ಕಾಗಿ ಆಯ್ದ ಅತ್ಯುತ್ತಮ 5 ಚಿತ್ರ ಪ್ರಶಸ್ತಿ ದೊರೆತಿದೆ. ಕಾರ್ಯಕ್ರಮದಲ್ಲಿ ಖ್ಯಾತ ನಟ ದುನಿಯಾ ವಿಜಯ್, ನಟಿ ಶ್ರುತಿ ಹರಿಹರನ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಛಾಯಾಗ್ರಾಹಕ ಸತ್ಯ ಹೆಗಡೆ ಉಪಸ್ಥಿತರಿದ್ದರು.
ಚಿತ್ರದ ಪಾತ್ರಧಾರಿಗಳು : ಶಾಂತ ಕುಮಾರ್ ದಂಡಾವತಿ, ಟಿ. ಹರೀಶ್, ನಾಜಿಮ್, ಅವಿತ್ ರಾಲ್ಫ್ ಮಸ್ಕರೇನಸ್, ಆದರ್ಶ, ರವಿ ಕೊಪ್ಪ, ನವೀನ್ ಮತ್ತು ಇತರರು ಇದ್ದಾರೆ. ಚಿತ್ರದ ಛಾಯಾಗ್ರಹಣ, ನಿರ್ಮಾಣ, ನಿರ್ದೇಶನ ಲಿಂಟನ್ ಟೆಲ್ಲಿಸ್..
ನಿರ್ದೇಶಕ ಲಿಂಟನ್ ಮೂಡಿಗೆರೆಯ ಯುವ ಪ್ರತಿಭೆ. ಇವರು ತಮ್ಮ ಸೃಜನಶೀಲ ಕಲಾ ಅಭಿವ್ಯಕ್ತಿಯಿಂದ ಗಮನ ಸೆಳೆದಿದ್ದಾರೆ. ಇವರು ಮೂಡಿಗೆರೆ ಸಚೇತನ ಸಂಘದ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಸ್ಥಳೀಯ ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ಕಿರುಚಿತ್ರ ಸಾಕಷ್ಟು ಕುತೂಹಲ ಕೆರಳಿಸಿದ್ದು, ಸದ್ಯದಲ್ಲಿಯೇ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಳ್ಳಲಿದೆ.