October 5, 2024

ಬಾರಿ ಕುತೂಹಲ ಮೂಡಿಸಿದ್ದ ಮೂಡಿಗೆರೆ ಪಟ್ಟಣ ಪಂಚಾಯಿತಿ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು, ಶಾಸಕಿ ನಯನಾ ಮೋಟಮ್ಮ ಅವರ ರಾಜಕೀಯ ತಂತ್ರಗಾರಿಕೆಯಿಂದಾಗಿ ಪ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಂಡಿದೆ. ಅಧ್ಯಕ್ಷರಾಗಿ ಶ್ರೀಮತಿ ಗೀತಾ ಅಜಿತ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಪಿ. ರಮೇಶ್ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾಗಿ ಗೀತಾ ಅಜಿತ್ ಕುಮಾರ್ ಮತ್ತು ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಯಾಗಿ ಆಶಾ ಮೋಹನ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೀತಾ ಅಜಿತ್ ಅವರಿಗೆ 7 ಮತಗಳು ದೊರೆತರೆ, ಪ್ರತಿಸ್ಪರ್ಧಿ ಆಶಾ ಮೋಹನ್ ಅವರು 5 ಮತಗಳನ್ನಷ್ಟೇ ಪಡೆದರು. ಈ ಮೂಲಕ 2 ಮತಗಳ ಅಂತರದಿಂದ ಕಾಂಗ್ರೇಸ್ ಬೆಂಬಲಿತ ಗೀತಾ ಅಜಿತ್ ಕುಮಾರ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ನ ಹೆಚ್.ಪಿ. ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಮೂಡಿಗೆರೆ ತಹಸೀಲ್ದಾರ್ ರಾಜಶೇಖರ ಮೂರ್ತಿ ಕರ್ತವ್ಯ ನಿರ್ವಹಿಸಿದರು.

ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧಿಕಾರ ಹಿಡಿಯಲು 11 ಸದಸ್ಯರ ಪೈಕಿ 6 ಬಿಜೆಪಿಯ ಸದಸ್ಯರಿದ್ದು, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸೇರಿ 7 ಮತವಿತ್ತು. ಕಾಂಗ್ರೆಸ್ 4 ಸದಸ್ಯರಿದ್ದು, ಶಾಸಕಿ ನಯನಾ ಮೋಟಮ್ಮ, ಇತ್ತೀಚೆಗೆ ಪಕ್ಷಕ್ಕೆ ಸೇರಿದ ಜೆಡಿಎಸ್ ಸದಸ್ಯೆ ಗೀತಾ ಅಜಿತ್ ಕುಮಾರ್ ಸೇರಿ 6 ಮತವಿತ್ತು. ಸಂಖ್ಯಾಬಲದಲ್ಲಿ ಬಿ.ಜೆ.ಪಿ.ಗೆ ಸ್ಪಷ್ಟ ಬಹುಮತವಿತ್ತು.

ಮೂಡಿಗೆರೆ ಪ.ಪಂ. 2ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಸೀ ಮೀಸಲಾತಿ ಘೋಷಣೆಯಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಯಿಂದ ಕಾಂಗ್ರೆಸ್‍ನ ಸದಸ್ಯ ಎಚ್.ಪಿ.ರಮೇಶ್ ಒಬ್ಬರೇ ಇದ್ದರು. ಹಾಗಾಗಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‍ಗೆ ಮೀಸಲಾಗಿತ್ತು. ಇನ್ನು ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್ ಕೇವಲ 4 ಸದಸ್ಯರನ್ನಿಟ್ಟುಕೊಂಡು ರಾಜಕೀಯ ತಂತ್ರಗಾರಿಕೆ ನಡೆಸುವ ಮೂಲಕ ಬಿಜೆಪಿಗೆ ದಕ್ಕುವ ಅಧಿಕಾರವನ್ನು ಕಿತ್ತುಕೊಂಡು ಪ.ಪಂ. ಅಧಿಕಾರವನ್ನು ಕಾಂಗ್ರೆಸ್ ಪಡೆದುಕೊಳ್ಳುವಲ್ಲಿ ಯಶಸ್ವಿ ಕಂಡಿದೆ.

ಬಿ.ಜೆ.ಪಿ. ಸದಸ್ಯ ಜಿ.ಬಿ. ಧರ್ಮಪಾಲ್ ಅವರು ನೇರವಾಗಿ ಕಾಂಗ್ರೇಸ್ ಅಭ್ಯರ್ಥಿಗೆ ತಮ್ಮ ಬೆಂಬಲ ವ್ಯಕ್ತಪಡಿಸುವ ಮೂಲಕ ಕಾಂಗ್ರೇಸ್ ಅನಾಯಾಸವಾಗಿ ಅಧ್ಯಕ್ಷ ಸ್ಥಾನ ಗೆದ್ದುಕೊಂಡಿದೆ. ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಪು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಭಾಗವಹಿಸಿದ್ದರಿಂದ ಮೂಡಿಗೆರೆ ಚುನಾವಣೆಗೆ ಗೈರಾಗಿದ್ದರು.

ಅಧ್ಯಕ್ಷ ಸ್ಥಾನದ ಚುನಾವಣೆ ನಂತರ ನಡೆದ ಅಭಿನಂದನೆ ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಘೋಷಣೆ ಬಳಿಕ ಪ.ಪಂ.ಯಲ್ಲಿ ಕಾಂಗ್ರೇಸ್ ಅಧಿಕಾರ ಹಿಡಿಯಲೇಬೇಕೆಂದು ಪ.ಪಂ. ಹಿರಿಯ ಸದಸ್ಯರೊಂದಿಗೆ ಗುಪ್ತ ಕಾರ್ಯತಂತ್ರ ರೂಪಿಸುವ ಅನಿವಾರ್ಯತೆ ಇತ್ತು. ಮೂಡಿಗೆರೆ ಪಟ್ಟಣವನ್ನು ಅಭಿವೃದ್ಧಿ ಮಾಡಬೇಕು ಎಂಬುದು ನನ್ನ ಕನಸಾಗಿದೆ. ಹಾಗಾಗಿ ಅಧಿಕಾರ ಹಿಡಿಯಲು ಗುಪ್ತ ಕಾರ್ಯಚರಣೆ ನಡೆಸಬೇಕಾಯಿತು. ಇನ್ನು ಮುಂದೆ ಪಟ್ಟಣದ ಎಲ್ಲಾ ಸಮಸ್ಯೆ ಬಗೆಹರಿಸಲು ಸಂಪೂರ್ಣ ಸಹಕಾರ ನೀಡುತ್ತೇನೆಂದು ಹೇಳಿದರು.

ನೂತನ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಮಾತನಾಡಿ, ಇಂತಹದೊಂದು ಸಂದರ್ಭ ಬರುತ್ತದೆ ಎಂದು ಊಹೆ ಕೂಡ ಮಾಡಿರಲಿಲ್ಲ. ತನ್ನ ಅವಧಿಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಪಟ್ಟಣವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಮಾಜಿ ಸಚಿವೆ ಶ್ರೀಮತಿ ಮೋಟಮ್ಮ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ, ಪ.ಪಂ. ಸದಸ್ಯರಾದ ಕೆ.ವೆಂಕಟೇಶ್, ಹಂಝಾ, ಖುರ್ಷಿದ್‍ಬಾನು, ಧರ್ಮಪಾಲ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ