October 5, 2024

ಮೂಡಿಗೆರೆ ಪಟ್ಟಣ ಪಂಚಾಯಿತಿ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 28ರಂದು ಚುನಾವಣೆ ಘೋಷಣೆಯಾಗಿದೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಸಾಧ್ಯವಾದ ಎಲ್ಲಾ ಕಸರತ್ತು ನಡೆಸುತ್ತಿವೆ.  ಸರಳ ಬಹುಮತಕ್ಕೆ ಬೇಕಾದ ಸಂಖ್ಯೆಗಳನ್ನು ಹೊಂದಿಸಲು ಎರಡು ಪಕ್ಷಗಳು ಕಸರತ್ತು ನಡೆಸುತ್ತಿವೆ. ಇದೀಗ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅಖಾಡಕ್ಕಿಳಿದಿದ್ದು, ಶತಾಯು ಗತಾಯು ಪಟ್ಟಣ ಪಂಚಾಯಿತಿ ಅಧಿಕಾರವನ್ನು ಕಾಂಗ್ರೇಸ್ ಪಕ್ಷ ಹಿಡಿಯಲೇ ಬೇಕೆಂಬ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಸದ್ಯ ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 6 ಸದಸ್ಯರಿದ್ದು, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸೇರಿ 7 ಮತವಿದೆ, ಕಾಂಗ್ರೆಸ್ 4 ಸದಸ್ಯರನ್ನು ಹೊಂದಿತ್ತು. ಜೆಡಿಎಸ್ ಸದಸ್ಯೆ ಗೀತಾ ಅಜಿತ್ ಕುಮಾರ್ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾದ ಬಳಿಕ ಸದಸ್ಯರ ಸಂಖ್ಯೆ 5ಕ್ಕೇರಿದ್ದು ಶಾಸಕಿ ನಯನಾ ಮೋಟಮ್ಮ ಅವರ ಮತವು ಸೇರಿ 6 ಕ್ಕೇರಿದೆ.

ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ ಅವರು ಚಿಕ್ಕಮಗಳೂರು ನಗರಸಭೆಗೆ ಮತ ಚಲಾಯಿಸುವ ಕಾರಣ ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಅವರ ಮತವಿಲ್ಲ.

ಬಿಜೆಪಿಗೆ ಬಹುಮತವಿದ್ದರೂ ಸಹ ಅಧಿಕಾರ ಹಿಡಿಯುವುದು ಇನ್ನೂ ಸ್ಪಷ್ಟವಾಗಿಲ್ಲ. ಕಾರಣ ಬಿ.ಜೆ.ಪಿ. ಹಿರಿಯ ಸದಸ್ಯ ಮಾಜಿ ಅಧ್ಯಕ್ಷ ಜಿ.ಬಿ. ಧರ್ಮಪಾಲ್ ಅವರ ನಿಲುವು ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಿ.ಜೆ.ಪಿ. ತನ್ನ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಹಿರಿಯ ಮುಖಂಡರ 2 ಸಭೆಗಳನ್ನು ನಡೆಸಿದಾಗಲೂ   ಧರ್ಮಪಾಲ್ ಅವರು ಗೈರಾಗಿದ್ದರು ಎನ್ನಲಾಗಿದೆ. ಕಳೆದ ವರ್ಷ ನಡೆದ ಕೆಲ ರಾಜಕೀಯ ಬೆಳವಣಿಗೆಗಳಿಂದ, ಮೂಡಿಗೆರೆ ಆಟೋ ನಿಲ್ದಾಣವೊಂದರ ನಿರ್ಮಾಣದ ವಿಚಾರದಲ್ಲಿ ಸಂಭವಿಸಿದ ಗೊಂದಲ ಘಟನಾವಳಿಗಳಿಂದ ಧರ್ಮಪಾಲ್ ಅವರು ಬಿ.ಜೆ.ಪಿ. ಯಿಂದ ಅಂತರ ಕಾಯ್ದುಕೊಂಡೇ ಬಂದಿದ್ದಾರೆ. ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಧರ್ಮಪಾಲ್ ಅವರು ಕುಮಾರಸ್ವಾಮಿಯವರು ಬಿ.ಜೆ.ಪಿ. ತೊರೆದ ನಂತರ ರಾಜಕೀಯವಾಗಿ ತಟಸ್ಥ ನಿಲುವು ತೆಳೆದುಕೊಂಡೇ ಬಂದಿದ್ದಾರೆ. ಈ ಕಾರಣದಿಂದ ಧರ್ಮಪಾಲ್ ಅವರು ಬಿ.ಜೆ.ಪಿ.ಯೊಂದಿಗೆಯೇ ಗುರುತಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಜಿ.ಬಿ. ಧರ್ಮಪಾಲ್

ಈ ಬಗ್ಗೆ ಧರ್ಮಪಾಲ್ ಅವರ ಪ್ರತಿಕ್ರಿಯೆ ಕೇಳಿದಾಗ ಅವರು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಸದ್ಯಕ್ಕೆ ನಾನು ಬಿ.ಜೆ.ಪಿ.ಯಲ್ಲಿಯೇ ಇದ್ದೇನೆ ಎಂದಿದ್ದಾರೆ.

ಕಾಂಗ್ರೆಸ್ 7 ಸದಸ್ಯರ ಬಲದೊಂದಿಗೆ ಪಪಂನಲ್ಲಿ ಅಧಿಕಾರ ಹಿಡಿಯಬೇಕು ಎಂದು ತಂತ್ರಗಾರಿಕೆಯಲ್ಲಿ ತೊಡಗಿದೆ. ಎಲ್ಲಾ ಸದಸ್ಯರನ್ನು ಕಾಂಗ್ರೆಸ್ ಪ್ರವಾಸಕ್ಕೆ ಕರೆದೊಯ್ದು ಅಧಿಕಾರ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ. ಪಕ್ಷದ ಯುವ ಮುಖಂಡರೋರ್ವರ ಸುಪರ್ದಿಯಲ್ಲಿ ಪಕ್ಷದ ಸದಸ್ಯರನ್ನು ಒಂದೆಡೆ ಕಲೆಹಾಕುವಲ್ಲಿ ಶಾಸಕಿ ನಯನಾ ಮೋಟಮ್ಮ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಸದಸ್ಯೆ ಗೀತಾ ರಂಜನ್ ಅಜಿತ್ ಕುಮಾರ್ ಅವರ ಕಾಂಗ್ರೆಸ್ ಸೇರ್ಪಡೆಯಾದ ನಂತರ ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ರಾಜಕೀಯ ಲೆಕ್ಕಾಚಾರ ಗರಿಗೆದರಿದೆ.  ಬಿ.ಜೆ.ಪಿ. ಬಹುಮತವಿದ್ದರೂ ಸಹ ಆಂತರಿಕ ಭಿನ್ನಾಭಿಪ್ರಾಯದ ಕಾರಣದಿಂದ ಅಧಿಕಾರದಿಂದ ವಂಚಿತವಾಗುವ ಸ್ಥಿತಿ ನಿರ್ಮಾಣವಾಗಿದೆ. ಕೊನೆಯ ಪ್ರಯತ್ನ ಎಂಬಂತೆ ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಹಿರಿಯ ನಾಯಕರು ಸಭೆ ನಡೆಸಿ ಪಪಂ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುವುದನ್ನು ತಪ್ಪಿಸಲು ತಂತ್ರಗಾರಿಕೆಯಲ್ಲಿ ತೊಡಗಿದ್ದು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಸದಸ್ಯ ಜೆ.ಬಿ.ಧರ್ಮಪಾಲ್ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದ್ದು, ಅವರಿಗೆ ಮೊದಲ ಅವಧಿಯ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.  ಅದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಕಾದು ನೋಡಬೇಕು.

ಇನ್ನು 15 ತಿಂಗಳು ಮಾತ್ರ ಅಧಿಕಾರಾವಧಿ ಉಳಿದಿರುವ ಪಪಂನಲ್ಲಿ ಕಾಂಗ್ರೆಸ್ ಗದ್ದುಗೆಗೇರುವ ಆತುರದಲ್ಲಿದೆ. ಆದರೆ ಅಧ್ಯಕ್ಷ ಸ್ಥಾನ ಅಲಂಕರಿಸಲು ಕಾಂಗ್ರೆಸ್ ಸದಸ್ಯರ ನಡುವೆ ಪೈಪೋಟಿ ನಡೆದಿದೆ. ಕಾಂಗ್ರೆಸ್ ನಿಂದ ಗೆದ್ದ ಸದಸ್ಯರನ್ನು ಬಿಟ್ಟು ಬೇರೆ ಪಕ್ಷದಿಂದ ಬಂದವರಿಗೆ ಆದ್ಯತೆ ನೀಡುವ ಬಗ್ಗೆ ಪಕ್ಷದಲ್ಲಿ ಆಂತರಿಕ ಒಪ್ಪಂದವಾಗಿರುವುದರಿಂದ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಅಲ್ಪಸಂಖ್ಯಾತ ಸದಸ್ಯ ಹಂಝಾ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪಕ್ಷದ ಅಲ್ಪಸಂಖ್ಯಾತ ಮುಖಂಡರು ಒತ್ತಡ ಹಾಕಿದ್ದಾರೆ.

ಸದ್ಯದ ಮಾಹಿತಿಯ ಪ್ರಕಾರ  ಜೆಡಿಎಸ್ ನಿಂದ ಬಂದಿರುವ ಗೀತಾ ಅವರಿಗೆ ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ನೀಡುವುದು ಆ ನಂತರ ಕಾಂಗ್ರೇಸ್ ಮಾಜಿ ಅಧ್ಯಕ್ಷ ಹಿರಿಯ ಸದಸ್ಯ ಕೆ.ವೆಂಕಟೇಶ್ ಅವರಿಗೆ 5 ತಿಂಗಳು,  ಕಾಂಗ್ರೇಸ್ ಗೆ ಸಂಭವನೀಯ ಬೆಂಬಲ ನೀಡಬಹುದು ಎನ್ನಲಾಗಿರುವ ಬಿ.ಜೆ.ಪಿ.  ಸದಸ್ಯರಿಗೆ 5 ತಿಂಗಳು ಅಧ್ಯಕ್ಷ ಸ್ಥಾನ ನೀಡುವುದೆಂದು ಕಾಂಗ್ರೆಸ್ಸಿನಲ್ಲಿ ಆಂತರಿಕ ಒಪ್ಪಂದವಾಗಿದೆ ಎನ್ನಲಾಗಿದೆ.

ರಮೇಶ್ ಹೊಸಕೆರೆ

ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ ಸಾಮಾನ್ಯ ಮೀಸಲು ಘೋಷಣೆಯಾಗಿರುವ ಕಾರಣ ಬಿಜೆಪಿಯಲ್ಲಿ ಅಭ್ಯರ್ಥಿಗಳಿಲ್ಲ. ಕಾಂಗ್ರೆಸ್ ಸದಸ್ಯ ಎಚ್.ಪಿ.ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಒಟ್ಟಾರೆ ಮೂಡಿಗೆರೆ ಪಟ್ಟಣ ಪಂಚಾಯತಿಯಲ್ಲಿ ರಾಜಕೀಯ ರಂಗೇರಿದ್ದು, ಯಾವ ಪಕ್ಷ ಅಧಿಕಾರ ಹಿಡಿಯುತ್ತದೆ ಎಂಬ ಕುತೂಹಲದ ನಡುವೆಯೇ ಕಾಂಗ್ರೇಸ್ ಅಧಿಕಾರ ಹಿಡಿಯಲೇ ಬೇಕೆಂದು ಪ್ರಯತ್ನದಲ್ಲಿ ತೊಡಗಿದ್ದು, ಶಾಸಕಿ ನಯನಾ ಮೋಟಮ್ಮ ಮತ್ತು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ಅವರ ಮಾರ್ಗದರ್ಶನದಲ್ಲಿ ಅಧ್ಯಕ್ಷ  ಸ್ಥಾನಕ್ಕೆ ಚುನಾವಣೆ ನಡೆಯುವವರೆಗೆ ತನ್ನ ಸದಸ್ಯರನ್ನು ಪಕ್ಷದ ಯುವ ಮುಖಂಡರೊಬ್ಬರ ಸುಪರ್ದಿಯಲ್ಲಿ ಒಗ್ಗಟ್ಟಾಗಿ ಇಟ್ಟಿದ್ದಾರೆ ಎನ್ನಲಾಗಿದೆ.

ಅಂತಿಮವಾಗಿ ಬಿ.ಜೆ.ಪಿ. ಸದಸ್ಯ ಜಿ.ಬಿ. ಧರ್ಮಪಾಲ್ ಅವರ ನಿಲುವಿನ ಮೇಲೆ ಎಲ್ಲವೂ ನಿರ್ಧಾರವಾಗಲಿದ್ದು, ಚುನಾವಣೆಗೆ ಇನ್ನು ಐದು ದಿನ ಬಾಕಿಯಿದ್ದು ಮುಂದೆ ಏನೆಲ್ಲಾ ರಾಜಕೀಯ ಬೆಳವಣಿಗೆ ಆಗಬಹುದು ಎಂಬುದು ಕಾದು ನೋಡಬೇಕು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ