October 5, 2024

ದೇಶದ ಸ್ವಾತಂತ್ರ್ಯಕ್ಕಾಗಿ ಮಹನೀಯರು ಹೋರಾಟ ನಡೆಸಿ ಮತ್ತು ಅವರ ತ್ಯಾಗವನ್ನು ನೆನಪಿಸಿಕೊಳ್ಳುವ ಸಂದರ್ಭ ಇದಾಗಿದ್ದು, ಅವರೆಲ್ಲರನ್ನೂ ಗೌರವದಿಂದ ನಮಿಸಬೇಕಾಗಿರುವುದು ಎಲ್ಲಾ ದೇಶವಾಸಿಗಳ ಕರ್ತವ್ಯ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಿಸಿದರು.

ಅವರು ಆಗಸ್ಟ್ 15ರಂದು ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ ಅವರು ಸ್ವಾತಂತ್ರ್ಯೋತ್ಸವದ ಸಂದೇಶಗಳನ್ನು ಜಿಲ್ಲೆಯ ಜನತೆಗೆ ತಿಳಿಸಿ ಮಾತನಾಡಿದರು.

ಸ್ವಾತಂತ್ರ್ಯ ದಿನಾಚರಣೆ ಎಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದ ಆಚರಣೆ ಮಾತ್ರವಲ್ಲ, ಈ ನೆಲ, ಜಲ ಹಾಗೂ ಈ ದೇಶದ ಸಂಸ್ಕೃತಿ ಪರಕೀಯರಿಂದ ಮುಕ್ತವಾದ ಅಭಿಮಾನದ ಸ್ವಾತಂತ್ರ್ಯವನ್ನು ಅನುಭವಿಸಿದ ಕ್ಷಣವನ್ನು ಮೆಲುಕು ಹಾಕುವ ಸಂತಸದ ದಿನ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರು ವೈಯಕ್ತಿಕ ಸುಖ, ಸಂತೋಷ ಎಲ್ಲವನ್ನೂ ತ್ಯಾಗ ಮಾಡಿ ಬಲಿಯಾದವರು, ಹೋರಾಟದಲ್ಲಿ ಪೆಟ್ಟು ತಿಂದ, ಸೆರೆಮನೆ ವಾಸ ಅನುಭವಿಸಿದ ಸಹಸ್ರಾರು ದೇಶಭಕ್ತರನ್ನು ನೆನಪಿಸಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರನ ಕರ್ತವ್ಯ ಎಂದು ತಿಳಿಸಿದರು.

ನಮ್ಮ ಜಿಲ್ಲೆಯ ಹೊಸಕೊಪ್ಪ ಕೃಷ್ಣರಾಯರು ಆಗಸ್ಟ್ 19, 1927 ರಂದು ಗಾಂಧೀಜಿಯವರನ್ನು ಚಿಕ್ಕಮಗಳೂರು ಜಿಲ್ಲೆಗೆ ಕರೆತರಲು ಪ್ರಮುಖ ಪಾತ್ರ ವಹಿಸಿದ್ದರು. ಗಾಂಧೀಜಿಯವರು ಮಾಡಿದ ಭಾಷಣಗಳ ಪ್ರೇರಣೆಯಿಂದ ಪ್ರಭಾವಿತರಾಗಿ ಜಿಲ್ಲೆಯಿಂದಲೂ ಹಲವು ಜನ ಸ್ವಾತಂತ್ರ್ಯ ಸೇನಾನಿಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.

ಜಿಲ್ಲಾಡಳಿತವು ಈ ಘಟನೆಯ ಸವಿ ನೆನಪಿಗಾಗಿ ಅವರು ಭಾಷಣ ಮಾಡಿದ ಸ್ಥಳವನ್ನು ನೆನಪಿನಂಗಳ ಎಂದು ನಾಮಕರಣ ಮಾಡಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಮಹಾತ್ಮ ಗಾಂಧಿ ಪುತ್ಥಳಿಯನ್ನು ಅನಾವರಣಗೊಳಿಸಿದೆ ಎಂದರು.

ನಮ್ಮ ಜಿಲ್ಲೆಯಲ್ಲೂ ಸಹ ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟ, ವಿದೇಶಿ ವಸ್ತ್ರ ವಸ್ತುಗಳ ಬಹಿಷ್ಕಾರ, ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ, ಕಾನೂನು ಭಂಗ ಚಳವಳಿ ಇಂತಹ ಅನೇಕ ಹೋರಾಟಗಳು ಜಿಲ್ಲೆಯಿಂದ ದಾಖಲಾಗಿವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ದೀನ ದಲಿತರ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರ ಮತ್ತು ದುರ್ಬಲರ ಏಳಿಗೆಗಾಗಿಯೇ ಶ್ರಮಿಸುತ್ತದೆ. ಇದಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ಸ್ ಪಾರ್ಕ್‌ಗೆ 25 ಎಕರೆ ಸ್ಥಳವನ್ನು ಗುರುತಿಸಲಾಗಿದ್ದು, ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಶಿಫಾರಸ್ಸುಗಳನ್ನು ಜಾರಿಗೆ ತಂದಿದ್ದು, ಇದರಿಂದ ನಮ್ಮ ಜಿಲ್ಲೆಯ ಒಟ್ಟು 14 ಸಾವಿರ ಸರ್ಕಾರಿ ನೌಕರರಲ್ಲಿ ಸಂತಸ ಮೂಡಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಮೂಗ್ತಿಹಳ್ಳಿಯಿಂದ ಮೂಡಿಗೆರೆವರೆಗೆ 26 ಕಿ.ಮೀ. ಕಾಮಗಾರಿ ಪ್ರಾರಂಭಿಸಲು ಅಗತ್ಯ ಪ್ರಕ್ರಿಯೆಗಳು ಮುಗಿದಿದೆ. ಹಾಸನದಿಂದ-ಬೇಲೂರುವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸುವ ಯೋಜನೆಯ ಟೆಂಡರ್ ಕಾರ್ಯ ಪೂರ್ಣಗೊಂಡಿದೆ. ಚಿಕ್ಕಮಗಳೂರಿನಿಂದ ಬೇಲೂರುವರೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಪ್ರಸ್ತಾವನೆಗೆ ಡಿಪಿಆರ್) ತಯಾರಿಸಲು ಅನುಮೋದನೆ ನೀಡಲಾಗಿದೆ. 19 ಕಿ.ಮೀ. ವಿಸ್ತೀರ್ಣದ ಚಿಕ್ಕಮಗಳೂರು ಬೈಪಾಸ್ ರಸ್ತೆಯನ್ನು 400 ಕೋಟಿ ರೂ. ಮೊತ್ತದಲ್ಲಿ ಡಿಪಿಆರ್ ಸಿದ್ದಪಡಿಸಲು ಅನುಮೋದನೆ ದೊರಕಿದೆ. 81 ಕಿ.ಮೀ ವಿಸ್ತೀರ್ಣದ ಮೂಡಿಗೆರೆ – ಬಾಣಾವರ ರಾಷ್ಟ್ರೀಯ ಹೆದ್ದಾರಿ 73 ಅನ್ನು ರೂ.1213 ಕೋಟಿ ರೂಗಳಿಗೆ ಡಿಪಿಆರ್ ಸಿದ್ದಪಡಿಸಲು ಅನುಮೋದನೆ ದೊರಕಿದೆ ಎಂದರು.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಆದ ಮಾನವ ಪ್ರಾಣ ಹಾನಿ, ಜಾನುವಾರು ಪ್ರಾಣ ಹಾನಿ ಮತ್ತು ಮನೆ ಹಾನಿಗಳಿಗೆ ಜಿಲ್ಲಾಡಳಿತದ ವತಿಯಿಂದ ಪರಿಹಾರ ಪಾವತಿಸುವ ಬಗ್ಗೆ ಸೂಕ್ತ ಕ್ರಮ ವಹಿಸಲಾಗುತ್ತಿದೆ. ಪ್ರಸಕ್ತ ಜುಲೈ ತಿಂಗಳಿನಲ್ಲಿ ಆದ ಆತಿವೃಷ್ಠಿಯಿಂದ ಒಟ್ಟು 31.97 ಕೋಟಿ ಮೌಲ್ಯದ ಆಸ್ತಿ-ಪಾಸ್ತಿ, ಸಾರ್ವಜನಿಕ ಕಟ್ಟಡಗಳು, ರಸ್ತೆಗಳು, ವಿದ್ಯುತ್ ಕಂಬಗಳು ಹಾನಿಯಾಗಿವೆ ಮತ್ತು ಒಬ್ಬರು ನಾಗರೀಕರು ಅತಿವೃಷ್ಠಿಯ ಕಾರಣಕ್ಕಾಗಿ ಬಲಿಯಾಗಿದ್ದಾರೆ. ಅವರ ಕುಟುಂಬಸ್ಥರಿಗೆ ಈಗಾಗಲೇ 5 ಲಕ್ಷ ರೂಗಳ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಸಚಿವರು ವಿವಿಧ ತುಕಡಿಗಳಿಂದ ಧ್ವಜವಂದನೆ ಸ್ವೀಕರಿಸಿದರು. ಪೊಲೀಸ್ ಇಲಾಖೆ ವಿವಿಧ ಶಾಲಾ, ಕಾಲೇಜು ಹಾಗೂ ಸಂಘ, ಸಂಸ್ಥೆಗಳ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ವೇದಿಕೆಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ, ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್, ಎಸ್ಪಿ ಡಾ.ವಿಕ್ರಮ ಅಮಟೆ, ಜಿ.ಪಂ.ಸಿಇಓ ಎಚ್.ಎಸ್.ಕೀರ್ತನಾ ಇತರರು ವೇದಿಕೆಯಲ್ಲಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ