October 5, 2024

ಅತಿವೃಷ್ಟಿಯಿಂದ  ಸಂತ್ರಸ್ಥರಾದವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು, ಅತಿವೃಷ್ಟಿ ಪ್ರದೇಶದ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು, ಕಸ್ತೂರಿ ರಂಗನ್ ವರದಿ ಜಾರಿ ಮಾಡುವ ಮುನ್ನ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಾಡಾನೆ ಹಾವಳಿ ತಡೆಗಟ್ಟಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮೂಡಿಗೆರೆ ತಾಲ್ಲೂಕಿನ ಅತಿವೃಷ್ಟಿ ಪ್ರದೇಶಗಳ ರೈತರು ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ನೀಡಿದರು.

ಮೂಡಿಗೆರೆ ತಾಲ್ಲೂಕಿನ ಊರುಬಗೆ, ತ್ರಿಪುರ, ದೇವರುಂದ ಮುಂತಾದ ಭಾಗಗಳ ರೈತರು ಶುಕ್ರವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸಿಲ್ದಾರ್ ರಾಜಶೇಖರ್ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಸಿಪಿಐ ಜಿಲ್ಲಾ ಹಿರಿಯ ಮುಖಂಡ ಬಿ.ಕೆ.ಲಕ್ಷ್ಮಣ್ ಕುಮಾರ್ ಮಾತನಾಡಿ, ಅತಿವೃಷ್ಟಿಯಿಂದ ರೈತರ ಬೆಳೆ ಹಾನಿಯಾಗಿದೆ. ಭೂಕುಸಿತದಿಂದ ಕಾಫಿ ತೋಟ, ಭತ್ತದ ಗದ್ದೆ ಕೊಚ್ಚಿಹೋಗಿದೆ. ರೈತರಿಗೆ ಕೂಡಲೆ ಪರಿಹಾರ ಒದಗಿಸಬೇಕು. ಕಸ್ತೂರಿ ರಂಗನ್ ವರದಿಯಲ್ಲಿ ಊರುಬಗೆ, ತ್ರಿಪುರ, ತರುವೆ, ಬಾಳೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಸೇರುವುದರಿಂದ ಜನಜೀವನಕ್ಕೆ ತೊಂದರೆಯಾಗುತ್ತದೆ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.

ರೈತ ಮುಖಂಡ ಬಿ.ಸಿ. ದಯಾಕರ್ ಮಾತನಾಡಿ ಅರಣ್ಯ ಒತ್ತುವರಿ ತೆರವು ಮಾಡಲು ಸರ್ಕಾರ ಆದೇಶ ನೀಡಿದೆ. ಇದರಿಂದ ಡಿಮ್ಡ್ ಅರಣ್ಯದಲ್ಲಿ ವಸತಿ, ನಿವೇಶನ ರಹಿತರು ಮನೆ ನಿರ್ಮಿಸಿ ವಾಸ ಮಾಡುತ್ತಿದ್ದಾರೆ. 94 ಸಿ ನಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ಹಾಗೂ ಅಲ್ಪಸ್ವಲ್ಪ ಜಮೀನು ಒತ್ತುವರಿ ಮಾಡಿ ಕೃಷಿ ಮಾಡಿಕೊಂಡಿರುವ ರೈತರ ಜಮೀನು, ಭೂ ಕಂದಾಯ ಹಾಗೂ ಗೋಮಾಳಕ್ಕೆ ಸೇರಿದ ಭೂಮಿಯಾಗಿದೆ. ಈ ಜಾಗವನ್ನು ಡೀಮ್ಡ್ ಅರಣ್ಯದ ಹೆಸರಿನಲ್ಲಿ ಒತ್ತುವರಿ ತೆರವು ಮಾಡುತ್ತಿದ್ದಾರೆ ಇದು ಸರಿಯಲ್ಲ. ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ಯುವ ಮುಖಂಡ ಎಸ್.ಎ. ವಾಸುದೇವ್ ಮಾತನಾಡಿ, ಕಾಡಾನೆ ದಾಳಿಯಿಂದ ತಾಲೂಕಿನಲ್ಲಿ ಅನೇಕರು ಬಲಿಯಾಗಿದ್ದಾರೆ. ಹಲವಾರು ಗಾಯಗೊಂಡಿದ್ದಾರೆ. ವಾಹನಗಳನ್ನು ಕಾಡಾನೆ ಜಖಂಗೊಳಿಸಿದೆ. ರೈತರ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆಯಿಂದ ಇದುವರೆಗೂ ಸೂಕ್ತ ಪರಿಹಾರ ನೀಡಿಲ್ಲ. ಕಾಡಾನೆ ಹಾವಳಿಯಿಂದ ಬತ್ತದ ಗದ್ದೆಯಲ್ಲಿ ಕೃಷಿ ಚಟುವಟಿಕೆ ನಿಲ್ಲಿಸಲಾಗಿದೆ. ಊರುಬಗೆ, ತತ್ಕೊಳ, ಕುಂದೂರು ಭಾಗದಲ್ಲಿ ಕಾಡಾನೆ ಹಲವರನ್ನು ಬಲಿ ಪಡೆದಾಗಲೂ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಆಗ ಪ್ರತಿಭಟನೆಯಲ್ಲಿ ಪಾಲ್ಗೊಂಡ 10 ಮಂದಿಯ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೆ ಒತ್ತುವರಿ ತೆರವು ಕಾರ್ಯದಲ್ಲಿ ಅರಣ್ಯ ಇಲಾಖೆಯವರು ಸ್ಥಳೀಯ ಅಮಾಯಕ ರೈತರ ಮೇಲೆ ಮೊಕದ್ದಮೆ ಹೂಡಿದ್ದಾರೆ. ಈ ಮೊಕದ್ದಮೆಗಳನ್ನು ವಾಪಸು ಪಡೆಯಬೇಕು. ಚಾರ್ಮಾಡಿ ಮತ್ತು ಶಿರಾಡಿ ಘಾಟ್ ರಸ್ತೆಯಲ್ಲಿ ಆಗಾಗ ಭೂಕುಸಿತ ಉಂಟಾಗುತ್ತಿದೆ. ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಬೈರಾಪುರ. ಶಿಶಿಲ ಮೂಲಕ ಮಂಗಳೂರಿಗೆ ಹೆದ್ದಾರಿ ನಿರ್ಮಾಣ ಮಾಡಬೇಕು.

ಇದೇ ಸಂದರ್ಭದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಕಟ್ಟುವಾಗ ಪಹಣಿಯ ಬೆಳೆ ಕಾಲಂನಲ್ಲಿ ಬೆಳೆ ಬಗ್ಗೆ ನಮೂದಾಗದೆ ರೈತರು ವಿಮೆ ಕಟ್ಟಲು ಅಡ್ಡಿಯಾಗಿದೆ. ಸರ್ಕಾರ ಸೂಕ್ತವಾಗಿ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಊರುಬಗೆ ಗ್ರಾಪಂ ಅಧ್ಯಕ್ಷೆ ಪುಷ್ಪ ರಾಜು, ಉಪಾಧ್ಯಕ್ಷೆ ರತ್ನಮ್ಮ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್,  ಕಾಂಗ್ರೆಸ್ ಮುಖಂಡ ಮರಗುಂದ ಪ್ರಸನ್ನ, ಕೆಂಪೇಗೌಡ ಒಕ್ಕಲಿಗ ಸಂಘದ ಗೋಣಿಬೀಡು ಹೋಬಳಿ ಅಧ್ಯಕ್ಷ ಸಂತೋಷ್ ಮೇಕನಗದ್ದೆ, ತಾಲೂಕು ರೈತ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ,  ರೈತ ಮುಖಂಡ ಮಂಜುನಾಥಗೌಡ, ಸತೀಶ್ಊರುಬಗೆ, ಎಂ.ಕೆ.ಸದಾಶಿವ, ಯಜಮಾನ ಗೌಡ, ಗೋಪಾಲಗೌಡ, ಬಸವರಾಜು,  ಪ್ರಕಾಶ್ ಇತರರಿದ್ದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ತಹಸೀಲ್ದಾರ್ ಬೇಡಿಕೆಗಳನ್ನು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ