October 5, 2024

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದ ಸರ್ವೆ ನಂಬರ್ 369ರಲ್ಲಿನ ಮತ್ತಾವರ ಬ್ಲಾಕ್ 2ರಲ್ಲಿನ 20 ಎಕರೆ 11 ಗುಂಟೆ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.

ಡಿ.ಆರ್. ರಮೇಶ್ ಎಂಬುವವರು 20 ಎಕರೆ 11 ಗುಂಟೆ ಅರಣ್ಯ ಜಾಗವನ್ನು ಒತ್ತುವರಿ ಮಾಡಿ ಕಾಫಿ ಹಾಗೂ ಇತರೆ ಬೆಳೆಗಳನ್ನು ಬೆಳೆದಿದ್ದರು. ಈ ಒತ್ತುವರಿ ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನು ಏರಿ ನ್ಯಾಯಾಲಯದಲ್ಲಿ ತೀರ್ಪು ಅರಣ್ಯ ಇಲಾಖೆ ಪರವಾಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ನಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಿದ್ದಾರೆ.

ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಮೋಹನ್ ನೇತೃತ್ವದಲ್ಲಿ ನೂರಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ಒತ್ತುವರಿ ತೆರವುಗೊಳಿಸಿದ್ದಾರೆ.

ಚಿಕ್ಕಮಗಳೂರು ವಿಭಾಗದಲ್ಲಿ 2,500 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಒಟ್ಟು 1,245 ಪ್ರಕರಣಗಳಲ್ಲಿ 3 ಎಕರೆಯೊಳಗೆ 845 ಹಾಗೂ 3 ಎಕರೆ ಮೇಲ್ಪಟ್ಟು 400 ಪ್ರಕರಣಗಳು ಇವೆ. ಸದ್ಯ 3 ಎಕರೆ ಮೇಲ್ಪಟ್ಟ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ.

ಅರಣ್ಯ ಒತ್ತುವರಿ ತೆರವಿಗೆ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಖಡಕ್ ಸೂಚನೆ ನೀಡಿದ್ದರು. ಜೊತೆಗೆ ನ್ಯಾಯಾಲಯದಲ್ಲಿಯೂ ಅರಣ್ಯ ಇಲಾಖೆ ಪರವಾಗಿಯೇ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಇದೀಗ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.

ಮೀಸಲು ಅರಣ್ಯ ಒತ್ತುವರಿ ತೆರವುಗೊಳಿಸಬೇಕು ಇಲ್ಲದೆ ಹೋದರೆ ಸಂಬಂಧಿಸಿದ ಅರಣ್ಯಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುಪ್ರಿಂ ಕೋರ್ಟ್ ಹಸಿರು ಪೀಠ ಹಲವು ಪ್ರಕರಣಗಳಲ್ಲಿ ಪುನಾರುಚ್ಚರಿಸುತ್ತಲೇ ಬಂದಿದೆ. ಆದರೆ, ಅಧಿಕಾರಿಗಳು ಸ್ಥಳೀಯ ಪರಿಸ್ಥಿತಿಯನ್ನು ಎದುರಿಸಲಾಗದೆ ಅಸಹಾಯಕರಾಗಿದ್ದರು.

ಕೇರಳದ ವಾಯನಾಡ್‌ನಲ್ಲಿ ಭೂ ಕುಸಿತ ಉಂಟಾಗಿ ನೂರಾರು ಮಂದಿ ಮೃತಪಟ್ಟ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಚ್ಚರಗೊಂಡಿದ್ದು, ಅರಣ್ಯ ಒತ್ತುವರಿ ತೆರವುಗೊಳಿಸಲು ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ.

ಇದರಿಂದಾಗಿ ಅರಣ್ಯ ಭೂಮಿ ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಿ ತೋಟ ಮಾಡಿರುವ ಬೆಳೆಗಾರರಲ್ಲಿ ಆತಂಕ ಮೂಡಿದೆ. ವರ್ಷಗಳ ಕಾಲ ಕಷ್ಟಪಟ್ಟು ಮಾಡಿದ್ದ ತೋಟವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಜೀವನೋಪಾಯಕ್ಕಾಗಿ ಅಲ್ಪಸ್ವಲ್ಪ ಒತ್ತುವರಿ ಮಾಡಿರುವವರನ್ನು ಬಿಡಿಸುವ ಮುನ್ನ ಹತ್ತಾರು ಎಕರೆ ಅರಣ್ಯ ಒತ್ತುವರಿ ಮಾಡಿರುವ ದೊಡ್ಡ ದೊಡ್ಡ ಕಂಪನಿಗಳ ಒತ್ತುವರಿ ಬಿಡಿಸುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ