October 5, 2024

ಕಲಾವಿದನೊಳಗೆ ರಂಗಪ್ರಜ್ಞೆಯ ಬದ್ಧತೆ ಮತ್ತು ಸಿದ್ಧತೆಗಳಿದ್ದಾಗ ನೂತನ ತಾರೋದಯವಾಗುತ್ತದೆ ಎಂದು ಕಾಸರಗೋಡಿನ ‘ಕಣಿಪುರ’ ಯಕ್ಷಗಾನ ಕನ್ನಡ ಮಾಸಪತ್ರಿಕೆಯ ಸಂಪಾದಕರಾದ ಯಕ್ಷತಜ್ಞ ಎಂ.ನಾ.ಚಂಬಲ್ತಿಮಾರ್ ಅಭಿಪ್ರಾಯಿಸಿದರು.

ನಗರದ ಹವ್ಯಾಸಿ ಕಲಾವಿದರ ‘ಯಕ್ಷಸಿರಿ’ ನಾಟ್ಯವೃಂದ ಭಾನುವಾರ ಸಂಜೆ ಕುವೆಂಪು ಕಲಾಮಂದಿರಲ್ಲಿ ‘ಶ್ರೀದೇವಿ ಮಹಾತ್ಮೆಯ ಮಹಿಷಾಸುರ ಮರ್ಧಿನಿ’ ಆಖ್ಯಾನಕದ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ‘ಯಕ್ಷ ಪ್ರಚಾರೋತ್ತಮ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ತೆಂಕುತಿಟ್ಟು ತವರು ಕೇರಳದ ಕುಂಬ್ಳೆಯಲ್ಲಿ ಚಂಡೇಸದ್ದು, ಭೂತ, ತೈಯ್ಯಂ ಊರಿನವರಾದ ತಾವು ಯಕ್ಷಗಾನ ಮಾಡುವುದು ದೊಡ್ಡದಲ್ಲ. ಕರಾವಳಿಯಿಂದ ಘಟ್ಟ ಏರಿ ಕಾಫಿನಾಡಿನಲ್ಲಿ ಸ್ವಯಂ ಪ್ರಚೋದಿತರಾಗಿ ತೆಂಕಿನಾಟದ ಪ್ರದರ್ಶನ ನೀಡಿರುವುದು ವಿಶೇಷ. ಕಲೆಯೊಂದು ತನ್ನ ವ್ಯಾಪ್ತಿ ಪ್ರದೇಶದ ಹೊರಗೆ ಜನರಿಂದ ಪ್ರೀತಿಸಲ್ಪಟ್ಟು ಸ್ವಯಂ ಉತ್ತೇಜಿತರಾಗಿ ಪ್ರದರ್ಶನ ನೀಡಲು ಮುಂದಾಗಿರುವುದು ಯಕ್ಷಕಲೆಯ ವಿಸ್ತರಣೆಯ ಸಂಕೇತ ಎಂದವರು ವಿವರಿಸಿದರು.
ಕೇರಳದಿಂದ ಏಕೈಕ ಕನ್ನಡ ಮಾಸಿಕ ಯಕ್ಷಗಾನಕ್ಕೆ ಸಂಬಂಧಪಟ್ಟ ಪತ್ರಿಕೆಯನ್ನು 11ವರ್ಷಗಳಿಂದ ಹೊರತರುತ್ತಿದ್ದು ತೆಂಕು ಮತ್ತು ಬಡಗು ತಿಟ್ಟು ಮೀರಿ ಸಮಗ್ರ ಯಕ್ಷಗಾನ ಪ್ರತಿನಿಧಿಸುತ್ತಿದೆ. ಮುಂದೆ ಎಲ್ಲ ಕಲೆಗೂ ತೆರೆದುಕೊಳ್ಳಲಿದ್ದು ಆನ್‍ಲೈನ್ ಮೂಲಕವೂ ಆಸಕ್ತ ಕನ್ನಡಿಗರಿಗೆ ಲಭ್ಯವಾಗಿಸಲಾಗುತ್ತಿದೆ ಎಂದ ಚಂಬಲ್ತಿಮಾರ್, ಕಲೆಗಾಗಿ ಬದುಕುವ ಅಕ್ಷರಜೀವಿಯ ಬದುಕಿನ ಪುನರುಜ್ಜೀವನಕ್ಕೆ ಈ ಪುರಸ್ಕಾರ ಊರುಗೋಲೆಂದು ಹರ್ಷಿಸಿದರು.

ಬದುಕುತ್ತಿದ್ದೇವೆ ನಾವೆಲ್ಲ ಬತ್ತಿಹೋದ ನದಿಗಳಂತೆ ಎಂಬ ಕವಿವಾಣಿಯಂತೆ ಪ್ರೀತಿ ಸಮಾಜದಲ್ಲಿ ಬತ್ತಿರುವ ಸಂದರ್ಭದಲ್ಲಿ, ಕ್ಷಣಿಕ-ವ್ಯವಹಾರಿಕ ಜೀವನವೇ ಮುಖ್ಯವೆನಿಸುವ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನ ಕನ್ನಡದ ಚೈತನ್ಯಕ್ಕೆ ಆತ್ಮವಿಶ್ವಾಸ ಮೂಡಿಸಿದಂತಿದೆ. ವೃತ್ತಿಪರ ಕಲಾವಿದರಿಗೆ ಕಡಿಮೆ ಇಲ್ಲದಂತೆ ಇಲ್ಲಿಯ ಕಲಾಪ್ರೇಮಿಗಳು ಪ್ರದರ್ಶನ ನೀಡುತ್ತಿದ್ದಾರೆಂದು ಚಂಬಲ್ತಿಮಾರ್ ಅಭಿಪ್ರಾಯಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿ ನಮ್ಮೂರಿನ ಒಂಭತ್ತು ಮಹಿಳೆಯರು ಪಾತ್ರಧಾರಿಗಳಾಗಿರುವ ಯಕ್ಷಗಾನ ನಮ್ಮ ಸಂಸ್ಕøತಿಯ ಪ್ರತೀಕ. ಕಡಲತೀರ ಭಾರ್ಗವ ಶಿವರಾಮಕಾರಂತ ಯಕ್ಷಗಾನ ಇತಿಹಾಸ ಪರಂಪರೆ ದಾಖಲಿಸಿ ವಿಶ್ವಕ್ಕೆ ಪರಿಚಯಿಸಿದ್ದಾರೆ. ಇತ್ತೀಚಿಗೆ ಕಾಂತಾರ ಚಲನಚಿತ್ರದ ಮೂಲಕ ರಿಷಬ್‍ಶೆಟ್ಟಿ ಕರಾವಳಿಯ ದೈವಗಳು ಹಾಗೂ ಯಕ್ಷಗಾನದ ಬಗ್ಗೆ ಯುವಜನತೆಯಲ್ಲಿ ಭಕ್ತಿ ಮತ್ತು ಗೌರವದ ಭಾವ ಹೆಚ್ಚಿಸಲು ಕಾರಣೀಭೂತರಾಗಿದ್ದಾರೆಂದರು.

16ನೆಯ ಶತಮಾನದಿಂದ ಬೆಳೆದುಬಂದಿರುವ ಯಕ್ಷಗಾನ ನಮ್ಮ ಸಂಸ್ಕøತಿಯ ಬಿಂಬವಾಗಿದೆ. ಇಂದಿನ ಮಕ್ಕಳು ಮೊಬೈಲ್, ಟಿ.ವಿ., ಯೂಟ್ಯೂಬ್ ಅಂತರ್ಜಾಲದಲ್ಲಿ ಮುಳುಗಿರುವ ಸಂದರ್ಭದಲ್ಲಿ ಅವರನ್ನು ಪ್ರಾಚೀನ ಕಲೆ ಸಂಸ್ಕøತಿಯತ್ತ ಕರೆತರುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ವಿವಿಧ ಕಾರಣಗಳಿಂದ ವೃತ್ತಿಪರ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದ ಶಾಸಕ ತಮ್ಮಯ್ಯ, ಅವರನ್ನು ಪೋಷಿಸುವ ಹೊಣೆ ಸರ್ಕಾರದ ಮೇಲಿದೆ. ಅವರಿಗೆ ಮಾಸಾಶನ ಹೆಚ್ಚಿಸುವುದೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ತಮ್ಮದೆಂದರು.

ಕಲ್ಕಟ್ಟೆಪುಸ್ತಕದಮನೆಯ ಮಹಾಪೋಷಕ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ ಕರ್ನಾಟಕ ಸಾಂಪ್ರದಾಯಕ ಕಲಾಪ್ರಕಾರಗಳಲ್ಲಿ ಯಕ್ಷಗಾನಕ್ಕೆ ಮಹತ್ವದ ಸ್ಥಾನವಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಹೆಚ್ಚು ಜನಪ್ರಿಯವಾಗಿರುವ ಯಕ್ಷಗಾನ ನಮ್ಮೂರಿನಲ್ಲೂ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದರು.

ಯಕ್ಷಗಾನ ಬಳಗದ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಸ್ವಾಗತಿಸಿ, ಪ್ರಾಸ್ತಾವಿಸಿದರು. ಯಕ್ಷಸಿರಿಯ ನಿರ್ದೇಶಕ ಪರಮೇಶ್ವರ ವಂದಿಸಿದರು. ಮಲ್ಲಿಗೆಸುಧೀರ್ ಪ್ರಾರ್ಥಿಸಿದರು.

ಯಕ್ಷಸಿರಿ ನಿರ್ದೇಶಕಿ ರೇಖಾನಾಗರಾಜರಾವ್ ಬಳಗದ ಒಂಭತ್ತು ಮಹಿಳೆಯರು ಸೇರಿದಂತೆ ಹವ್ಯಾಸಿ ಕಲಾವಿದರು ಉತ್ತಮ ಪ್ರದರ್ಶನದ ಮೂಲಕ ದೇವಿಮಹಾತ್ಮೆಯನ್ನು ಸಾರಿದರು.

ಬಿಂಡಿಗ ದೇವಿರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕುಲಶೇಖರ, ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ಉಜ್ವಲಪಡುಬಿದ್ರಿ, ಆನಂದಕುಮಾರಶೆಟ್ಟಿ, ರಮೇಶ್, ರಾಕೇಶ್, ಸುಧೀರ್ ಮತ್ತಿತರರು ವೇದಿಕೆಯಲ್ಲಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ