October 5, 2024

ಜಪ, ತಪ, ಧ್ಯಾನ, ಪಠಣ, ಪಾರಾಯಣದಿಂದ ಮನುಷ್ಯ ದೇಹದ ಜೀವಕೋಶಗಳು ಸಬಲಗೊಂಡು ಆಯುಷ್ಯ-ಆರೋಗ್ಯ ವೃದ್ಧಿಸುತ್ತವೆ ಎಂದು ಶ್ರೀಮದ್ ಕಾಶಿಜ್ಞಾನಸಿಂಹಾಸನಾಧೀಶ್ವರ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಚಿಕ್ಕಮಗಳೂರು ಶ್ರೀ ದೇವಿ ಗುರುಕುಲದ 7ನೆಯ ವಾರ್ಷಿಕೋತ್ಸವ ಸಮಾರಂಭದ ದಿವ್ಯಸಾನಿಧ್ಯವಹಿಸಿ ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅವರು ಆಶೀರ್ವಚನ ನೀಡಿದರು.

ಧಾರ್ಮಿಕ ಆಚರಣೆಗಳು ವೈಜ್ಞಾನಿಕವಾಗಿಯೂ ಉಪಯುಕ್ತವಾಗಿವೆ. ವೇದ-ರುದ್ರ ಪಠಣದಿಂದ ಮಾನಸಿಕ ನೆಮ್ಮದಿಯ ಜೊತೆಗೆ ಪ್ರತ್ಯಕ್ಷ ಲಾಭವಾಗಿ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ. ಉದ್ಯಮಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸುಧಾಮೂರ್ತಿ ಧಾರ್ಮಿಕ-ಸಾಮಾಜಿಕ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದು ಅವರು ಮನುಷ್ಯನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ವಿದೇಶಿತಜ್ಞನ ಪುಸ್ತಕವೊಂದನ್ನು ಉಲ್ಲೇಖಿಸುವುದನ್ನು ಪ್ರಾಸ್ತಾಪಿಸಿ ಕಾಶಿಜಗದ್ಗುರುಗಳು, ದೇಹಾರೋಗ್ಯಕ್ಕೆ ಮನಸ್ಸಿನ ಸ್ಥಿತಿ ಮುಖ್ಯವಾಗುತ್ತದೆ ಎಂದರು.

ನಾವು ಆಹಾರ ಸೇವಿಸಿದಾಗ ದೇಹದಲ್ಲಿ ಲಕ್ಷಾಂತರ ರಕ್ತದಕಣ ಹಾಗೂ ಜೀವಕೋಶಗಳು ನಿರ್ಮಾಣಗೊಂಡು ನಮ್ಮನ್ನು ಬದುಕಿಸುತ್ತವೆ. ಒಂದುಕ್ಷಣದಲ್ಲಿ ಉತ್ಪನ್ನಗೊಂಡು ಒಂದುಕ್ಷಣದಲ್ಲೆ ಸಾಯುತ್ತವಾದರೂ ಆ ಕ್ಷಣದಲ್ಲಿ ಅವು ಆರೋಗ್ಯಪೂರ್ಣ ಸಶಕ್ತವಾಗಿದ್ದರೆ ನಾವೂ ನಿರೋಗಿಗಳಾಗುತ್ತೇವೆ. ಹುಟ್ಟುವ ಜೀವಕೋಶಗಳು ದುಬರ್ಲವಾದರೆ ರೋಗ ವ್ಯಾಪಿಸುತ್ತದೆ. ಜೀವಕೋಶ ಸಶಕ್ತವಾಗಿಸಲು ಮನಸ್ಸಿನಸ್ಥಿತಿ ಮುಖ್ಯ. ಜಪ, ತಪ, ಧ್ಯಾನ, ಪಾರಾಯಣ, ಪಠಣಗಳಿಂದ ಮಾನಸಿಕ ಸ್ಥಿತಿಯನ್ನು ಉತ್ತವಾಗಿಟ್ಟುಕೊಂಡು ಅನಾರೋಗ್ಯಬಾರದಂತೆ ಕಾಪಾಡಿಕೊಳ್ಳಬಹುದೆಂದರು.

ವೇದ ಮಂತ್ರಗಳನ್ನು ಕೆಲವೇ ಪುರುಷರು ಪಠಣ ಮಾಡುವ ಕಾಲವೊಂದಿತ್ತು. ಆದರೆ ವೀರಶೈವಧರ್ಮದ ಪಂಚಾಚಾರ್ಯರು ಸಾಮಾಜೀಕರಣಗೊಳಿಸಿ ಎಲ್ಲರಿಗೂ ಸಮಾನತೆಯ ಅಧಿಕಾರ ನೀಡಿದ್ದಾರೆ. ಎಲ್ಲ ವರ್ಣವರ್ಗದ ಜನರಿಗೂ ಭಿನ್ನ ಬೇಧವಿಲ್ಲದೆ ಗುರುದೀಕ್ಷಾ ಸಂಸ್ಕಾರ ನೀಡುವ ಮೂಲಕ ಸಮಸ್ತ ಮನುಕುಲದ ಪ್ರತಿಯೊಬ್ಬರೂ ವೇದ ಓದುವ ಮೂಲಕ ಭಗವಂತನನ್ನು ಕಾಣುವ ಸ್ತುತಿಸುವ ಅಧಿಕಾರ ಕಲ್ಪಿಸಿದ್ದಾರೆಂದರು.

ದೀಕ್ಷಾ ಸಂಸ್ಕಾರ ಪಡೆದ ಪ್ರತಿಯೊಬ್ಬ ವೀರಶೈವರು ನಿತ್ಯ ಆಚರಿಸಲೇಬೇಕಾದ ಪಂಚ ಯಜ್ಞಗಳಲ್ಲಿ ಜಪ ಯಜ್ಞಕ್ಕೆ ವಿಶೇಷ ಆದ್ಯತೆ ಇದೆ. ಓಂಕಾರ ಆವೃತಜಪ, ಪ್ರಣವ ಸ್ವರೂಪವಾದ ಪಂಚಾಕ್ಷರ ಮಂತ್ರ ಉಪಯುಕ್ತ ಎಂದರು. ಇಷ್ಟಲಿಂಗಧಾರಣೆ ಮಾಡಿದ ಎಲ್ಲರೂ ವೇದ ಓದುವ ಅಧಿಕಾರ ಪಡೆದಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಕೇರಳ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಜನರು ವೇದ, ಶ್ರೀರುದ್ರ, ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ಮಾಡುತ್ತಿರುವ ಈ ಸಂದರ್ಭವೇ ವೀರಶೈವ ಧರ್ಮದ ಭಾಗ್ಯೋದಯ ಕಾಲವಿದು ಎಂದು ಕಾಶಿಜಗದ್ಗುರುಗಳು ಅಭಿಪ್ರಾಯಿಸಿದರು.

ಕಾಶಿಯಲ್ಲಿ ವೇದ ವಿದ್ಯಾಭ್ಯಾಸ ಪ್ರಾಚೀನ ಕಾಲದಿಂದಲೂ ನಡೆದುಬಂದಿದೆ. ಮೇಧಾವಿ ಪ್ರತಿಭಾ ಸಂಪನ್ನರು ನಾಲ್ಕು ವೇದಗಳನ್ನು ಅಭ್ಯಸಿಸಿ ಕಂಠಪಾಠ ಮಾಡಿ ಶಿಷ್ಯರಿಗೆ ಬೋಧಿಸುತ್ತಿದ್ದರು. ಗುರು ಹೇಳಿ, ಶಿಷ್ಯ ಕೇಳಿ ಕಲಿಯುವ ಪದ್ಧತಿ ಇತ್ತು. ಕಾಲಕ್ರಮೇಣ ಮೇಧಾಶಕ್ತಿ ಕುಂದಿದಾಗ ನಾಲ್ಕುವೇಗಳ ಸಾರವನ್ನು ಶ್ರೀರುದ್ರದಲ್ಲಿ ಕೇಂದ್ರೀಕರಿಸಲಾಯಿತು. ಶ್ರೀಸಿದ್ಧಾಂತ ಶಿಖಾಮಣಿ ಧರ್ಮಗ್ರಂಥ ಬದುಕಿನ ಆಚರಣೆಗಳನ್ನು ತಿಳಿಯಪಡಿಸುತ್ತದೆ. ಕಾಶಿಪೀಠ ಜಗತ್ತ್ತಿನ 19ಭಾಷೆಗಳಲ್ಲಿ ತರ್ಜುಮೆಮಾಡಿ ಶ್ರೀಸಿದ್ಧಾಂತ ಶಿಖಾಮಣಿಯನ್ನು ಲೋಕಾಂತಗೊಳಿಸಿದೆ ಎಂದ ಡಾ.ಚಂದ್ರಶೇಖರ ಭಗವತ್ಪಾದರು, ಈ ಭಾಗದಲ್ಲಿ ದಯಾನಂದಮೂರ್ತಿಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀ ದೇವಿ ಗುರುಕುಲದ ಶಿಕ್ಷಣಾರ್ಥಿಗಳ ಪಾರಾಯಣ ಪರಿಗಣಿಸಿ ವೇದಮಾತಾ ಪುರಸ್ಕಾರ ನೀಡಿದ್ದನ್ನು ಸ್ಮರಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಧರ್ಮ ಮತ್ತು ಸಮಾಜವನ್ನು ತಿದ್ದುವ ಕಾರ್ಯ ಧಾರ್ಮಿಕ ಮಹಾಪುರುಷರಿಂದ ನಡೆದಿದೆ. ಜನರನ್ನು ಸಂಸ್ಕಾರವಂತರನ್ನಾಗಿಸಲು ಪಂಚಾಚಾರ್ಯರು ನಿರ್ವಹಿಸುತ್ತಿರುವ ಕಾರ್ಯ ಪ್ರಶಂಸನೀಯ. ಕಾಶಿಜಗದ್ಗುರುಗಳು ಇಲ್ಲಿಗೆ ದಯಮಾಡಿಸಿ ಧರ್ಮಬೋಧೆ ಮಾಡುವ ಮೂಲಕ ನಮ್ಮೆಲ್ಲರನ್ನು ಆಶೀರ್ವದಿಸಿದ್ದಾರೆ. ಜಂಜಾಟದ ಒತ್ತಡದ ಬದುಕಿನಲ್ಲಿ ಶಾಂತಿ-ನೆಮ್ಮದಿಗಾಗಿ ಎಲ್ಲರೂ ಆಧ್ಯಾತ್ಮದ ಮೊರೆ ಹೋಗುವ ಅನಿವಾರ್ಯತೆ ಅರಿತಿದ್ದಾರೆ. ಶ್ರೀದೇವಿ ಗುರುಕುಲ ಸಂಸ್ಕಾರ ಮನೆಗಳನ್ನು ಸೃಷ್ಟಿಸುವ ಮೂಲಕ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು.

ಬೆಂಗಳೂರಿನ ವಿಭೂತಿಪುರ ಮಠಾಧ್ಯಕ್ಷ ಷ.ಬ್ರ.ಶ್ರೀಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು, ಶ್ರೀಸಿದ್ಧಾಂತ ಶಿಖಾಮಣಿ ಪ್ರತಿಪಾದಿಸಿದ ಶಿವಪಂಚಾಕ್ಷರ ಮಹಾಮಂತ್ರದ ಮಹತ್ವ ಕುರಿತಂತೆ ಪ್ರಧಾನ ಉಪನ್ಯಾಸ ನೀಡಿದರು.

ಶ್ರೀ ದೇವಿ ಗುರುಕುಲದ ಸಂಸ್ಥಾಪಕ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತ್ರಿ ಪ್ರಾಸ್ತಾವಿಸಿ ಕಳೆದ 7ವರ್ಷಗಳ ಹಿಂದೆ ನಗರದ ಶ್ರೀಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಗುರುಕುಲ ಸ್ಥಾಪಿಸಿದ್ದು ಪ್ರಸ್ತುತ ಐದು ಶಾಖೆಗಳನ್ನು ಹೊಂದಿದೆ. 950ಕ್ಕೂ ಹೆಚ್ಚು ಮಂದಿ ಶಿಕ್ಷಾಣಾರ್ಥಿಗಳು ಇಲ್ಲಿ ಶ್ರೀರುದ್ರದ ಜೊತೆಗೆ ಭಜನೆ, ಭಕ್ತಿಗೀತೆ, ದುರ್ಗಾಸಪ್ತಶತೀ, ಸಿದ್ಧಾಂತಶಿಖಾಮಣಿ ಪಾರಾಯಣ ಕಲಿತಿದ್ದಾರೆ. ಪಂಚಪೀಠದ ನಾಲ್ವರು ಜಗದ್ಗುರುಗಳು ವಾರ್ಷಿಕೋತ್ಸವದಲ್ಲಿ ಆಶೀರ್ವದಿಸಿದ್ದಾರೆಂದರು.

ಗುರುಕುಲದ ಮಹಾಪೋಷಕ ಪ್ರಭುಲಿಂಗಶಾಸ್ತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ವೇದ ಮಂತ್ರಗಳನ್ನು ಮನೆ-ಮನಗಳಿಗೆ ತಲುಪಿಸುವ ಸದುದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ವಿದ್ವಾನ್ ದಯಾನಂದಮೂರ್ತಿ ಶಾಸ್ತ್ರಿಗಳವರಿಗೆ ಸಹಕಾರ ನೀಡುವುದು ನಮ್ಮೆಲ್ಲರ ಆದ್ಯಕರ್ತವ್ಯ ಎಂದರು.
ಶಂಕರದೇವರಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು, ಹುಲಿಕೆರೆದೊಡ್ಡಮಠದ ಶ್ರೀವಿರೂಪಾಕ್ಷಲಿಂಗ ಶಿವಾರ್ಯರು, ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು, ಬೇರುಗಂಡಿ ಬೃಹನ್ಮಠದ ಶ್ರೀರೇಣುಕಮಹಂತ ಶಿವಾಚಾರ್ಯರು, ಗದಗಿನ ಶ್ರೀಅಭಿನವ ಪಂಚಾಕ್ಷಾರಶಿವಾಚಾರ್ಯರು, ಯಸಳೂರಿನ ಶ್ರೀಚನ್ನಸಿದ್ದೇಶ್ವರ ಶಿವಾಚಾರ್ಯರು ಸಮ್ಮುಖದಲ್ಲಿ ಸಮಾರಂಭ ನಡೆಯಿತು.

ಆಶಾಕಿರಣದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಮೈಸೂರು ವೇದಮಾತಾ ಗುರುಕುಲದ ಸ್ಥಾಪಕ ವೇ.ಮೂ.ಮಂಜುನಾಥ ಆರಾಧ್ಯ, ಗುರುಕುಲದ ಮಹಾಪೋಷಕರಾದ ಗುರುಮೂರ್ತಿಶಾಸ್ತ್ರಿ, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಶಿವಶಂಕರ, ಶ್ರೀಜಗದ್ಗುರುರೇಣುಕಾಚಾರ್ಯ ಟ್ರಸ್ಟ್ ಖಜಾಂಚಿ ಯು.ಎಂ.ಬಸವರಾಜ್, ಶ್ರೀಬಿಂಡಿಗ ದೇವರಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷ ಕುಲಶೇಖರ, ಯಗಟಿಗುರುಮಠದ ಶಿವಲಿಂಗಸ್ವಾಮಿ, ಜಿಲ್ಲಾ ಒಕ್ಕಲಿಗರ ಮಹಿಳಾಸಂಘದ ಅಧ್ಯಕ್ಷೆ ಚೈತ್ರಾ ಮುಖ್ಯಅತಿಥಿಗಳಾಗಿದ್ದರು.

ಶಿಕ್ಷಣಾರ್ಥಿ ನಂದಿನಿಶಾಸ್ತ್ರಿ ಸ್ವಾಗತಿಸಿ, ಭಾಗ್ಯಕುಮಾರ್ ನಿರೂಪಿಸಿದರು. ಬೆಂಗಳೂರಿನ ಗಾನಸುಧೆ ಭಜನಾ ಮಂಡಳಿಯ ನಾದಭಾಸ್ಕರ ಶಿವಶಂಕರಶಾಸ್ತ್ರಿಜೀ ಪ್ರಾರ್ಥಿಸಿದ್ದು, ಶಿಕ್ಷಣಾರ್ಥಿ ಸುಧಾಮೌಳಿ ಮತ್ತು ಸುಮಿತ್ರಾಶಾಸ್ತ್ರಿ ತಂಡ ವೇದಘೋಷ ಮಾಡಿದರು. ತಾರಾ-ಚೈತ್ರಾ ತಂಡದ ಸ್ವಾಗತನೃತ್ಯ ಗಮನಸೆಳೆಯಿತು. ವೈದ್ಯನಮನ-ಯೋಧನಮನ, ಶ್ರೀಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ