October 5, 2024

ಮೂಡಿಗೆರೆ ಪಟ್ಟಣದ ಬಿಳಗುಳ ಎಂಎಚ್‍ಪಿಎಸ್ ಶಾಲೆಯಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾಲೂಕು ಮಟ್ಟದ ಜನಸ್ಪಂದನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ 27 ಮಂದಿ ಅರ್ಜಿದಾರರ ವಿವಿಧ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಆರಂಭದಲ್ಲಿಯೇ ಸಭೆಯಲ್ಲಿ ಜನರ ಸಂಖ್ಯೆ ಕಡಿಮೆ ಇರುವುದನ್ನು ಗಮನಿಸಿದ ಶಾಸಕಿ ನಯನಾ ಮೋಟಮ್ಮ ಅವರು, ತನ್ನ ಕ್ಷೇತ್ರದಲ್ಲಿ 1 ಪ.ಪಂ, 49 ಗ್ರಾ.ಪಂ.ಗಳಿವೆ. ಈಗಾಗಲೇ 33 ಕಡೆ ಜನಸ್ಪಂದನೆ ಸಭೆ ನಡೆಸಿದ್ದೇನೆ. ಅನೇಕ ಸಮಸ್ಯೆ ಬಗೆಹರಿಸಿದ್ದೇನೆ. ಇಂದು ನಡೆಯುವ ಸಭೆ ತನ್ನ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳು ಪ್ರಚಾರ ಮಾಡಿಲ್ಲ. ಅಧಿಕಾರಿಗಳೇ ಸಭೆ ನಡೆಸುತ್ತಾರೆಂಬ ಕಾರಣಕ್ಕೆ ಹಾಗೂ ಮಾಹಿತಿ ಕೊರತೆಯಿಂದ ಜನರ ಸಂಖ್ಯೆ ಕಡಿಮೆಯಾಗಿದೆ. ಸಾರ್ವಜನಿಕರು ಕಚೇರಿಗೆ ಹೋದಾಗ ಅಧಿಕಾರಿಗಳು ಸ್ಪಂದನೆ ನೀಡದೇ ಹಾಗೂ ಕೆಲಸ ಮಾಡಿಕೊಡದ ಕಾರಣಕ್ಕೆ ತನ್ನ ಬಳಿಗೆ ಬರುತ್ತಿದ್ದಾರೆ. ಇದು ನಿಲ್ಲಬೇಕೆಂದರೆ ತನ್ನೊಂದಿಗೆ ಎಲ್ಲಾ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯ ಎಂದು ಹೇಳಿದರು.

ತಾಲೂಕಿನಲ್ಲಿ 50 ಎಕರೆ ಜಾಗ ಹುಡುಕಿ ನಿವೇಶನಕ್ಕೆ ಕಾಯ್ದಿರಿಸಿ ಅದನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಪಹಣಿ ಆಧಾರದಲ್ಲಿ ಜಾಗ ಗುರುತು ಮಾಡಲು ಹೋದರೆ ಅಲ್ಲಿ ಜಾಗವೇ ಇರುವುದಿಲ್ಲ. ಹಾಗಾಗಿ ಸರಕಾರಿ ಜಾಗ ಒತ್ತುವರಿ ಬಗ್ಗೆ ಗ್ರಾ.ಪಂ.ಗಳಲ್ಲಿ ರೆಜುಲೇಷನ್ ಮಾಡಿ, ಅದರ ವರದಿ ತನಗೆ ನೀಡಿದರೆ ಅದನ್ನು ಪರಿಶೀಲಿಸಿ ನಿವೇಶನಕ್ಕೆ ಜಾಗ ಕಾಯ್ದಿರಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಬಳಿಕ ಕರೆ ಒತ್ತುವರಿ, ಜಲ್ ಜೀವನ್ ಮಿಷನ್ ಕೆಲಸ ಮಾಡದಿರುವುದು, ಫಾ.ನಂ.53ಯಲ್ಲಿ ಅಕ್ರಮ ಖಾತೆ ಮಂಜೂರು, ಬಾಕ್ಸ್ ಚರಂಡಿ, ತಡೆಗೋಡೆ, ಗಾಂಜಾ ಹಾವಳಿ, ಕಳಪೆ ಕಾಮಗಾರಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದರು. ಅಲ್ಲದೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ ನಿವೇಶನಕ್ಕೆ ಕಾಯ್ದಿರಿಸುವಂತೆ ಆಗ್ರಹಿಸಿದರು.

ಅಹವಾಲು ಆಲಿಸಿದ ಬಳಿಕ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಅರ್ಜಿದಾರರ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಬಗೆಹರಿಸಲಾಗುವುದು. ಮುಖ್ಯವಾಗಿ ಸ್ಮಶಾನ ಮತ್ತು ನಿವೇಶನದ ಸಮಸ್ಯೆ ಅಧಿಕವಿದೆ. ಇದನ್ನು ಬಗೆಹರಿಸುವುದು ತಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಜಿ.ಪಂ. ಸಿಇಒ ಗೋಪಾಲಕೃಷ್ಣ ಮಾತನಾಡಿ, ಕಾಮಗಾರಿ ಕಳಪೆ ಮಾಡಿರುವುದನ್ನು ತನಿಖೆ ನಡೆಸಿ ಅಧಿಕಾರಿಗಳ ತಪ್ಪು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರ ಸಮಸ್ಯೆ ಇದ್ದರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಿದರು.

ಹೆಸಗಲ್ ಗ್ರಾ.ಪಂ. ಅಧ್ಯಕ್ಷೆ ನಜ್ಮಾಬೇಗಂ, ಎಸ್‍ಪಿ ವಿಕ್ರಮ್ ಅಮಟೆ, ಡಿಸಿಎಫ್ ರಮೇಶ್‍ಬಾಬು, ತಹಸೀಲ್ದಾರ್ ಶೈಲೇಶ್ ಎಸ್.ಪರಮಾನಂದ, ತಾ.ಪಂ. ಇಒ ದಯಾವತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ