October 5, 2024

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಗಗನಕ್ಕೇರಿದ್ದ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ತುಟಿ ಬಿಚ್ಚದ ಬಿಜೆಪಿ ಮುಖಂಡರುಗಳು ಈಗ ಆಡಳಿತ ಸುಧಾರಣೆಗಾಗಿ ರಾಜ್ಯಸರ್ಕಾರ ಸ್ಪಲ್ಪ ಪ್ರಮಾಣದ ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ದೊಡ್ಡ ಅನಾಹುತವಾದಂತೆ ಬಿಂಬಿಸುತ್ತಿರುವುದು ವಿರೋಧ ಪಕ್ಷಗಳ ರಾಜಕೀಯ ನಾಟಕ ಎಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್ ದೇವರಾಜ್ ಆರೋಪಿಸಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಆ ಸಂದರ್ಭದಲ್ಲಿ ಬಿಜೆಪಿಯ ಯಾವ ಮುಖಂಡರೂ ತುಟಿ ಬಿಚ್ಚಿ ಮಾತನಾಡಿರಲಿಲ್ಲ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇಂಧನ ಬೆಲೆ ಹೆಚ್ಚಿಸುತ್ತಿದ್ದಂತೆ ಸೈಕಲ್ ಹೊಡೆಯುವ ಮೂಲಕ, ಕಾರು ಎಳೆಯುವ ಮೂಲಕ ಪ್ರತಿಭಟನೆ ನಡೆಸುತ್ತಾ ರಾಜಕೀಯ ನಾಟಕವಾಡುತ್ತಿದ್ದಾರೆಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಎಲ್ಲಾ ಸಚಿವರುಗಳು ಅತ್ಯಂತ ಉತ್ತಮ ಆಡಳಿತ ನೀಡುತ್ತಿದ್ದಾರೆ, ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದಂತಹ ಬಡವರ, ಮಧ್ಯಮ ವರ್ಗದವರ ಜನಸಾಮಾನ್ಯರ ಬದುಕಿಗೆ ಅನುಕೂಲವಾಗುವ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅನುಷ್ಠಾನ ಮಾಡಲು ಬಜೆಟ್ನಲ್ಲಿ 52 ಸಾವಿರ ಕೋಟಿ ರೂಗಳನ್ನು ಮೀಸಲಿಟ್ಟು, ಬಡವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಈ ಪ್ರಗತಿಪರ ಕಾರ್ಯವನ್ನು ಸಹಿಸದ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.ಹಿಂದೆ ಕೇಂದ್ರದಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಧಿಕಾರವಧಿಯಲ್ಲಿ 400 ರೂ ಇದ್ದ ಅಡುಗೆ ಅನಿಲ ಬೆಲೆ ನರೇಂದ್ರ ಮೋದಿ ಕಾಲಕ್ಕೆ 1000 ಕ್ಕೆ ಏರಿಕೆಯಾಗಿತ್ತು, 60 ರೂ ನಿಂದ 70 ರೂ ಇದ್ದ ಪೆಟ್ರೋಲ್, ಡೀಸೆಲ್ ಬೆಲೆ 100 ರ ಗಡಿ ದಾಟಿತ್ತು, ಆಗ ಯಾವ ಬಿಜೆಪಿ ಅವರು ಮಾತನಾಡಲಿಲ್ಲ, ಕಾಂಗ್ರೆಸ್ ಅಧಿಕಾರವಧಿಯಲ್ಲಿ ಜಾರಿಗೆ ತಂದ ಒಂದು ಜನಪರ ಯೋಜನೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತರಲಿಲ್ಲ ಎಂದು ಆರೋಪಿಸಿದರು.

ಬಡವರ ಕಲ್ಯಾಣಕ್ಕಾಗಿ ಮತ್ತು ಆಡಳಿತ ಸುಧಾರಣೆ ದೃಷ್ಟಿಯಿಂದ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ಸಮರ್ಥನೀಯವಾಗಿದೆ. ಆಡಳಿತ ಸುಧಾರಣೆ ಉದ್ದೇಶದಿಂದ ತೆರಿಗೆ ಸಂಗ್ರಹಕ್ಕಾಗಿ ಕೆಲವು ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ, ಈಗ ತೈಲಬೆಲೆ ಏರಿಸಿರುವುದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತದೆ ಎಂಬ ಅಂಶ ವಾಸ್ತವವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ ಆರ್ಥಿಕ ತಜ್ಞರಾಗಿರುವುದರಿಂದ ಜನಸಾಮಾನ್ಯರ ಮೇಲೆ ಬೀಳುವ ಹೊರೆಯನ್ನು ಸರಿದೂಗಿಸಲು ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ರಸಗೊಬ್ಬರದ ಬೆಲೆ ಮೂರ್ಲ್ನಾಕು ಪಟ್ಟು ಹೆಚ್ಚಾಗಿ ರೈತರ ಮೇಲೆ ದೊಡ್ಡ ಹೊರೆಯಾಗುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ವಿರೋಧ ಪಕ್ಷದವರು ರಸಗೊಬ್ಬರದ ಬೆಲೆ ಇಳಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಒತ್ತಾಯಿಸಿದರು.

ಯಾವುದೇ ಕೆಲಸವಿಲ್ಲದ ವಿರೋಧ ಪಕ್ಷದವರಿಗೆ ವ್ಯಾಯಾಮ ಅಗತ್ಯವಾಗಿದೆ. ಈ ಕಾರಣಕ್ಕಾಗಿ ಸೈಕಲ್ ಹೊಡೆಯುತ್ತಿದ್ದಾರೆ, ಕಾಲಿ ಡಬ್ಬದಂತ ಕಾರು ಎಳೆಯುತ್ತಿದ್ದಾರೆ, ಸರ್ಕಾರದ ವಿರುದ್ಧ ರಚನಾತ್ಮಕ ಸಲಹೆ ನೀಡಲಾಗದ ಅತ್ಯಂತ ದುರ್ಬಲ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರವರ ನೇತೃತ್ವದಲ್ಲಿ ವ್ಯಾಯಾಮ ಮಾಡಿಕೊಂಡೇ ಇರಲಿ ಎಂದು ಲೇವಡಿ ಮಾಡಿದರು.

ಇನ್ನೋರ್ವ ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಬೆಳಕಿಗೆ ಬಂದಿರುವ ನೀಟ್ ಪರೀಕ್ಷೆಯ ಅಕ್ರಮ ಇಡೀ ದೇಶದ ದೊಡ್ಡ ಹಗರಣವಾಗಿದೆ, ಯುವಕರ ಭವಿಷ್ಯದ ಮೇಲೆ ದುಷ್ಪರಿಣಾಮವಾಗಿರುವ ಈ ಹಗರಣದಿಂದ ದೇಶದ ಭವಿಷ್ಯಕ್ಕೆ ಧಕ್ಕೆಯಾಗಲಿದೆ ಎಂದು ಪ್ರತಿಯೊಬ್ಬರೂ ಚಿಂತನೆ ಮಾಡಬೇಕಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಹಗರಣಕ್ಕೆ ಕಾರಣವಾಗಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಹಿರೇಮಗಳೂರು ರಾಮಚಂದ್ರ, ಸಂತೋಷ್ ಲಕ್ಯಾ, ಶಾಂತಕುಮಾರ್ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ