October 5, 2024

ಮನುಷ್ಯನ ಬಾಳಿಗೆ ಧರ್ಮ ಶಾಶ್ವತ ನಂದಾದೀಪ. ಸಮಸ್ತ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಮಾನವ ಜೀವನವನ್ನು ಶುದ್ಧ ಸುಂದರಗೊಳಿಸುವುದೇ ಗುರುವಿನ ಧರ್ಮ. ಮಾನವನನ್ನು ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ. ಬಾಳಿನ ಭಾಗ್ಯೋದಯಕ್ಕೆ ಗುರು ಕಾರುಣ್ಯ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಬುಧವಾರ ಚಿಕ್ಕಮಗಳೂರು ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತ್ಯುತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಭೌತಿಕ ಬದುಕಿಗೆ ಆಧ್ಯಾತ್ಮದ ಅರಿವು ಮುಖ್ಯ. ಮೌಲ್ಯಾಧಾರಿತ ಬದುಕಿಗೆ ಧರ್ಮಾಚರಣೆಯ ಅಗತ್ಯವಿದೆ.  ಹಣ ಕೆಟ್ಟ ಚಟ ಕಲಿಸುತ್ತದೆ. ಹಸಿವು ಬದುಕಿನ ಪಾಠ ಕಲಿಸುತ್ತದೆ. ಹಣ ಮಾನವೀಯತೆ ಮರೆಸಿದರೆ ಹಸಿವು ಅರಿವನ್ನು ಮೂಡಿಸುವ ಕಾರ್ಯ ಮಾಡುತ್ತದೆ. ಮನೆ ಅಂಗಳದ ಕಸ ಯಾರಾದರೂ ಹಸನಗೊಳಿಸಬಹುದು. ಆದರೆ ಮನದಂಗಳದ ಕಸವನ್ನು ನಾವೇ ಹಸನ ಮಾಡಿಕೊಳ್ಳಬೇಕಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಮತ್ತು ಶ್ರೀ ಬಸವಣ್ಣನವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಜೀವ ಜಗತ್ತಿಗೆ ಸಂಜೀವಿನಿಯಾಗಿವೆ. ಫಲಭರಿತ ಬಾಳೆಯಂತೆ ಮನುಷ್ಯ ಬಾಗಬೇಕಲ್ಲದೇ ಬೀಗಬಾರದು. ದೇವರಿಗೆ ಕೊಡುವುದೂ ಗೊತ್ತು. ಕೊಟ್ಟಿದ್ದನ್ನು ಕಿತ್ತುಕೊಳ್ಳುವುದೂ ಗೊತ್ತು. ಆದ್ದರಿಂದ ಮನುಷ್ಯ ಗುರು ಹಿರಿಯರ ಮತ್ತು ಸಜ್ಜನ ಸತ್ಪುರುಷರ ಮಾರ್ಗದರ್ಶನದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕೆಂದರು.

ನೇತೃತ್ವ ವಹಿಸಿದ ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಜ್ಯೋತಿ ಬೆಳಗಿಸಿ ಧರ್ಮ ಸಮಾರಂಭ ಉದ್ಘಾಟಿಸಿ ವ್ಯಕ್ತಿಗೆ ಕೊಳೆ ಅಂಟಿದರೆ ಶುದ್ಧ ಮಾಡಬಹುದು. ಆದರೆ ವ್ಯಕ್ತಿತ್ವವೇ ಕೊಳಕಾಗಿದ್ದರೆ ತೊಳೆಯುವುದು ಕಷ್ಟ. ಆದ್ದರಿಂದ ಶ್ರೀ ಗುರುವಿನ ಬೋಧಾಮೃತದಲ್ಲಿ ಮುನ್ನಡೆದು ಜೀವನ ಪಾವನಗೊಳಿಸಿಕೊಳ್ಳಬೇಕು ಎಂದರು. ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮತ್ತು ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಭಕ್ತಿ ಭಂಡಾರಿ ಬಸವಣ್ಣನವರ ವಿಚಾರ ಧಾರೆಗಳನ್ನು ಭಕ್ತ ಸಂಕುಲಕ್ಕೆ ಮನವರಿಕೆ ಮಾಡಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಜನ ಸಮುದಾಯದಲ್ಲಿ ಧಾರ್ಮಿಕ ಸದ್ಭಾವನೆ ಬೆಳೆದು ಬರಲು ಇಂಥ ಸಮಾರಂಭಗಳ ಅವಶ್ಯಕತೆಯಿದೆ. ಶ್ರೀ ಜಗದ್ಗುರು ರೇಣುಕರ-ಬಸವಣ್ಣನವರ ಚಿಂತನಗಳು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುತ್ತವೆ. ಮತ್ತೊಮ್ಮೆ ಚಿಕ್ಕಮಗಳೂರು ನಗರದಲ್ಲಿ ಶ್ರೀ ರಂಭಾಪುರಿ ಪೀಠದ ದಸರಾ ದರ್ಬಾರ ನಡೆಸಬೇಕೆಂಬುದು ನಮ್ಮೆಲ್ಲರ ಆಶೆಯಾಗಿದೆ ಎಂದರು.

ನೂತನವಾಗಿ ಆಯ್ಕೆಗೊಂಡ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿ ಭಾರತೀಯ ಸಂಸ್ಕೃತಿ ಉತೃಷ್ಟವಾದುದು. ಇರುವುದೊಂದೇ ಧರ್ಮ. ಇನ್ನುಳಿದವುಗಳೆಲ್ಲವೂ ಮತಗಳಾಗಿವೆ. ಮತವನ್ನೇ ಧರ್ಮವೆಂದು ಕೆಲವರು ತಿಳಿದಿದ್ದಾರೆ. ಧರ್ಮದ ದೂರದೃಷ್ಠಿ ಮತ್ತು ಅನೇಕ ದಾರ್ಶನಿಕರ ವಿಚಾರ ಧಾರೆಗಳು ಜನತೆಯ ಉನ್ನತಿಗೆ ಅವಶ್ಯಕವಾಗಿವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನ ಉಪಾಧ್ಯಕ್ಷರಾದ ಎ.ಬಿ.ಸುದರ್ಶನ್ ಮಾತನಾಡಿ ಜೀವನದಲ್ಲಿ ನಡೆ ನುಡಿಗಳು ಶುದ್ಧವಾಗಿರಬೇಕು. ಗುರಿಯತ್ತ ನಮ್ಮೆಲ್ಲರ ಗಮನ ಇರಬೇಕೇ ಹೊರತು ಸಮಸ್ಯೆ ಅಡೆತಡೆಯ ಮೇಲಲ್ಲ. ಶ್ರೀ ಜಗದ್ಗುರು ರೇಣುಕರ ಮತ್ತು ಬಸವಣ್ಣನವರ ಬೋಧನೆ ಸಾಧನೆಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.

ಟ್ರಸ್ಟ್ ಗೌರವ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ಸದಸ್ಯರಾದ ಎಂ.ಡಿ.ಪುಟ್ಟಸ್ವಾಮಿ, ಎಸ್.ಎಂ.ದೇವಣ್ಣಗೌಡ, ಎ.ಎಸ್.ಸೋಮಶೇಖರಯ್ಯ, ಹೆಚ್.ಎಸ್.ನಂಜೇಗೌಡ, ಉಪಸ್ಥಿತರಿದ್ದರು. ಟ್ರಸ್ಟ್ ಖಜಾಂಚಿ ಯು.ಎಂ.ಬಸವರಾಜು ಸ್ವಾಗತಿಸಿದರು. ಟ್ರಸ್ಟ್ ಸದಸ್ಯ ಬಿ.ಬಿ.ರೇಣುಕಾರ್ಯರು ನಿರೂಪಿಸಿದರು. ಟ್ರಸ್ಟ್ ಸದಸ್ಯ ಬಿ.ಎ.ಶಿವಶಂಕರ ವಂದನಾರ್ಪಣೆ ಸಲ್ಲಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಗೋಷ, ಮಹಿಳಾ ಸದಸ್ಯರಿಂದ ಭಕ್ತಿಗೀತೆ ನಡೆದವು.

ಸಮಾರಂಭಕ್ಕೂ ಮುನ್ನ ಸಭಾಂಗಣದ ಮೇಲ್ಭಾಗದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜಾ ಜರುಗಿತು. ಇದೇ ಸಂದರ್ಭದಲ್ಲಿ ಹಲವಾರು ವೀರಮಾಹೇಶ್ವರ ಜಂಗಮ ವಟುಗಳಿಗೆ ವೀರಶೈವ ಧರ್ಮ ಪರಂಪರೆಯಂತೆ ಶಂಕರದೇವರ ಮಠದ ಚಂದ್ರಶೇಖರ ಶ್ರೀಗಳು ಶಿವದೀಕ್ಷಾ ನೆರವೇರಿಸಿ ಮಂತ್ರೋಪದೇಶಗೈದರು. ಸಮಾರಂಭದ ನಂತರ ಆಗಮಿಸಿದ ಎಲ್ಲಾ ಭಕ್ತರಿಗೆ ಅನ್ನ ದಾಸೋಹ ಜರುಗಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ