October 5, 2024

ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಉತ್ತಮ ಭವಿಷ್ಯವಿದೆ. ಬದಲಾದ ಜಾಗತಿಕ ವಿದ್ಯಮಾನಗಳಿಂದಾಗಿ ನೆರಳಿನಾಶ್ರಯದಲ್ಲಿ ಬೆಳೆಯುವ ಕಾಫಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದೆ ಎಂದು ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ದೇವರುಂದ ತಿಳಿಸಿದ್ದಾರೆ.

ಅವರು ಶುಕ್ರವಾರ ಮೂಡಿಗೆರೆ ಪ್ರೀತಂ ಕಲ್ಯಾಣ ಮಂಟಪದಲ್ಲಿ ಇ ಕಾಂ ಸಂಸ್ಥೆ ಏರ್ಪಡಿಸಿದ್ದ ಬೆಳೆಗಾರರೊಂದಿಗಿನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬೆಳೆಗಾರರು ಕಾಫಿ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು. ತಮ್ಮ ತೋಟಗಳಿಗೆ ಯಾವ ಪೋಷಕಾಂಶಗಳು ಬೇಕು ಎನ್ನುವುದರ ಕಡೆಗೆ ಗಮನ ಹರಿಸಬೇಕು. ಲಘುಪೋಷಕಾಂಶಗಳ ಅಗತ್ಯತೆಯನ್ನು ಅರಿತು ಅವುಗಳನ್ನು ಗಿಡಗಳಿಗೆ ನೀಡಬೇಕು. ಊಹಾಪೋಹಗಳಿಗೆ ಕಿವಿಗೊಡದೇ ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡುವುದರ ಮೂಲಕ ಹೆಚ್ಚಿನ ಇಳುವರಿ ಪಡೆಯಲು ಪ್ರಯತ್ನಿಸಬೇಕು. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆಯಿದೆ. ಇದರ ಸದುಪಯೋಗವನ್ನು ಬೆಳೆಗಾರರು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಕಾಫಿ ಮಂಡಳಿಯು ಕಾಫಿ ಉದ್ದಿಮೆಯ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ತೋಟದ ನಿರ್ವಹಣೆಯಿಂದ ಮೊದಲ್ಗೊಂಡು ಕಾಫಿ ತಯಾರಿಕೆಯ ವರೆಗೆ ಪ್ರತಿ ಹಂತದ ಬಗ್ಗೆ ವಿಶೇಷ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಲಾಗಿದೆ. ನಾವು ಬೆಳೆದ ಕಾಫಿಗೆ ಉತ್ತಮ ಧಾರಣೆ ದೊರೆಯಬೇಕು ಎಂದರೆ ಕಾಫಿ ಗುಣಮಟ್ಟದ ಕಡೆಗೆ ಗಮನ ಹರಿಸಬೇಕು ಎಂದು ದಿನೇಶ್ ಕಿವಿಮಾತು ಹೇಳಿದರು.

ಐಡಿಹೆಚ್ ಸಂಸ್ಥೆಯ ಅಸಿಸ್ಟೆಂಟ್ ಪ್ರೋಗ್ರಾಂ ಮ್ಯಾನೇಜರ್ ಕೀರ್ತಿರಾಜ್ ಸಿದ್ದಾಪುರ ಮಾತನಾಡಿ ಐಡಿಹೆಚ್ ಸಂಸ್ಥೆಯು ಭಾರತದಲ್ಲಿ ಅನೇಕ ಕೃಷಿ ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಸಹಯೋಗ ವಹಿಸಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಭಾರತದ ಕಾಫಿ ಬೆಳೆಗಾರರಿಗೆ ವಿವಿಧ ರೀತಿಯ ಮಾಹಿತಿ ಮತ್ತು ತರಬೇತಿಯನ್ನು ನೀಡುತ್ತಿದೆ. ರೈತ ಉತ್ಪಾದಕ ಸಂಘಗಳ ಜೊತೆ ಸೇರಿ ಗ್ರಾಮೀಣ ಪ್ರದೇಶದ ರೈತರಿಗೆ ತರಬೇತಿಗಳನ್ನು ಆಯೋಜಿಸುತ್ತಿದ್ದು, ಇಕಾಂ ಸಂಸ್ಥೆಯ ಸಹಯೋಗದಲ್ಲಿಯೂ ವಿವಿಧ ಕಾರ್ಯಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಕಾಫಿ ತರಂಗದ ಮೂಲಕ ರೈತರಿಗೆ ಮೊಬೈಲ್ ಸಂದೇಶಗಳನ್ನು ನೀಡುತ್ತಾ ಸಕಾಲದಲ್ಲಿ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುತ್ತಿದೆ ಎಂದರು.

ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ ಕಾಫಿ ರಫ್ತು ಮಾಡುವ ಸಂಸ್ಥೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಸ್ಥಳೀಯ ರೈತರಿಗೆ ತಲುಪುವುದಕ್ಕೆ ಕ್ರಮ ವಹಿಸಬೇಕು. ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು, ಸರ್ಫೇಸಿ ಕಾಯ್ದೆಯಿಂದ ಅನೇಕ ತೋಟಗಳು ಹರಾಜು ಆಗುತ್ತಿದ್ದು, ಕಾಫಿ ಬೆಳೆಯನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡುವ ಬಗ್ಗೆ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಕೆ.ಜಿ.ಎಫ್. ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ಮಾತನಾಡಿ ಪರಿಸರ ಸ್ನೇಹಿಯಾಗಿ ಬೆಳೆಯುವ ಕಾಫಿಗೆ ಮುಂದಿನ ದಿನಗಳಲ್ಲಿ ಉತ್ತಮ ಬೇಡಿಕೆ ಇರಲಿದ್ದು, ಬೆಳೆಗಾರರು ಪರಿಸರಕ್ಕೆ ದಕ್ಕೆಯಾಗದ ರೀತಿಯಲ್ಲಿ ತೋಟನಿರ್ವಹಣೆ ಮಾಡಬೇಕು ಎಂದರು.

ಇಕಾಂ ಸಂಸ್ಥೆಯ ಮುಖ್ಯಸ್ಥರಾದ ಚಂಗಲ್ ರಾಯಪ್ಪ ಅವರು ಬದಲಾಗುತ್ತಿರುವ ಜಾಗತಿಕ ಮಾರುಕಟ್ಟೆ ಮತ್ತು ಕೃಷಿ ವಿಧಾನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ರೋಬಸ್ಟಾ ತೋಟದಲ್ಲಿ ತುಂಬಾ ವಯಸ್ಸಾಗಿರುವ ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ಮರುನಾಟಿ ಮಾಡಲು ಇಕಾಂ ಸಂಸ್ಥೆಯಿಂದ ಉಚಿತವಾಗಿ ಕಸಿಕಟ್ಟಿದ ಉತ್ತಮ ಗುಣಮಟ್ಟದ ಕಾಫಿ ಗಿಡಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.

ಹಿರಿಯ ಕಾಫಿ ಬೆಳೆಗಾರರ ಯು.ಆರ್. ಚಂದ್ರೇಗೌಡ, ಹಳೇಕೋಟೆ ರಮೇಶ್, ಇ ಕಾಂ ಚಿಕ್ಕಮಗಳೂರು ಜಿಲ್ಲೆಯ ಕ್ಲಸ್ಟರ್ ಎಕ್ಸಿಕ್ಯೂಟೀವ್ ಧರ್ಮೇಶ್ ಪಿ.ಎಸ್.(ಸಚಿನ್) ಸೇರಿದಂತೆ ಇ ಕಾಂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗಗಳ ಕಾಫಿ ಬೆಳೆಗಾರರು ಕಾರ್ಯಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ