October 5, 2024

ಕಥೆ : ಬಿಳಿಮೂಟೆಯೊಳಗಿನ ಭೂತ !

• ಪ್ರಸನ್ನ ಗೌಡಹಳ್ಳಿ

ಪಡುವಣದಲ್ಲಿ ಸೂರ್ಯ ಮರೆಯಾಗಿ ಮಬ್ಬುಗತ್ತಲು ಆವರಿಸುತ್ತಿದ್ದ ಹೊತ್ತು. ಪಡುಗೆರೆಯ ಕಾಫಿ ಕ್ಯೂರಿಂಗ್‍ನಲ್ಲಿ ಕೆಲಸ ಮಾಡುತ್ತಿರುವ ಸುಬ್ರಮಣ್ಯ ಅವತ್ತಿನ ಡ್ಯೂಟಿ ಮುಗಿಸಿ, ಶುಕ್ರವಾರ ಸಂತೆಯಲ್ಲಿ ತರಹೇವಾರಿ ತರಕಾರಿ ತಿನಿಸುಗಳನ್ನು ಖರೀದಿಸಿ, ತನ್ನೂರು ಜಂಬರಡಿಯತ್ತ ಬೈಕಿನಲ್ಲಿ ಹೊರಟಿದ್ದ. ಮನದಲ್ಲಿ ಹಾಡೊಂದನ್ನು ಗುನುಗಿಕೊಂಡು, ಭಾವಲೋಕದಲ್ಲಿ ವಿಹರಿಸುತ್ತಾ ಬೈಕ್ ಓಡಿಸುತ್ತಿದ್ದವನಿಗೆ ಈಚಲಹಳ್ಳಿಯ ಹತ್ತಿರ ಬರುವಾಗ ನೇರವಾಗಿದ್ದ ರಸ್ತೆಯ ಮಧ್ಯದಲ್ಲಿ ಅಷ್ಟು ದೂರಕ್ಕೆ ಬೆಳ್ಳಗಿನ ಅಸ್ಪಷ್ಟ ಆಕೃತಿಯೊಂದು ಗೋಚರಿಸಿತು. ಬಿಳಿ ಬಣ್ಣದ ನಾಯಿ ಮಲಗಿರಬೇಕು ಅಥವಾ ರಸ್ತೆ ದಾಟುತ್ತಿದ್ದ ಬಿಳಿಬಣ್ಣದ ಮೊಲ ಬೈಕಿನ ಹೆಡ್‍ಲೈಟಿಗೆ ಕಣ್ಣುಕೊಟ್ಟು ಕುಳಿತಿರಬೇಕೆಂದು ಭಾವಿಸಿದ.

ಮಲೆನಾಡು ಭಾಗದಲ್ಲಿ ರಾತ್ರಿ ಸಮಯದಲ್ಲಿ ರಸ್ತೆ ಅಕ್ಕಪಕ್ಕದ ಕುರುಚಲು ಕಾಡಿನಲ್ಲಿ ಅತ್ತಿಂದಿತ್ತ ಜಿಗಿಯುವ ಕಾಡು ಪ್ರಾಣಿಗಳು ವಾಹನಗಳಿಗೆ ಅಡ್ಡಸಿಕ್ಕಿ ಜೀವ ಕಳೆದುಕೊಳ್ಳುವುದು, ಅರ್ಧಜೀವವಾಗುವುದು, ಯಾರಾದೋ ವಾಹನಕ್ಕೆ ಸಿಕ್ಕಿದ ಪ್ರಾಣಿಗೆ ಮತ್ಯಾರದೋ ಮನೆಯಲ್ಲಿ ಮಸಾಲೆ ಅರೆಯುವುದು ಇವೆಲ್ಲಾ ಸಾಮಾನ್ಯ ಸಂಗತಿಗಳಾಗಿದ್ದವು.

ಬೈಕು ಹತ್ತಿರ ಹತ್ತಿರ ಬಂದಂತೆಲ್ಲ ನಿಸ್ತೇಜವಾಗಿ ಬಿದ್ದಿದ್ದ ಆ ವಸ್ತು ಸ್ವಲ್ಪ ದೊಡ್ಡದಾಗಿ ಕಾಣತೊಡಗಿತು. ತೀರಾ ಹತ್ತಿರ ಬಂದಾಗ ಸುಬ್ರಮಣ್ಯನಿಗೆ ಏನನ್ನೋ ತುಂಬಿಸಿದ್ದ ಬಿಳಿ ಪ್ಲಾಸ್ಟಿಕ್ ಚೀಲವೊಂದು ಸ್ಪಷ್ಟವಾಗಿ ಗೋಚರಿಸಿತು. ಯಾರೋ ಸಂತೆಯಿಂದ ತೆರಳುವವರು ತರಕಾರಿ ಮೂಟೆ ಬೀಳಿಸಿಕೊಂಡು ಹೋಗಿರಬೇಕು ಎಂದು ಊಹಿಸಿ ಎತ್ತಿ ಬದಿಗೆ ಇಡೋಣ, ಲಾರಿಗೋ-ಬಸ್ಸಿಗೋ ಸಿಕ್ಕಿದರೆ ಅಪ್ಪಚ್ಚಿ ಯಾಗುತ್ತದೆ ಎಂದು ಚೀಲದ ಪಕ್ಕಕ್ಕೆ ಬೈಕ್ ನಿಲ್ಲಿಸಿದ. ಇನ್ನೇನು ಚೀಲಕ್ಕೆ ಕೈಹಾಕಬೇಕು ಎನ್ನುವಷ್ಟರಲ್ಲಿ ಆ ಬಿಳಿ ಚೀಲ ಚಿಮ್ಮಿದಂತಾಗಿ ಇದ್ದಕ್ಕಿದಂತೆ ರಸ್ತೆಯಲ್ಲಿ ಒಂದು ಸುತ್ತು ಉರುಳಿ ಮುಂದಕ್ಕೆ ಹೋಯಿತು. ಸುಬ್ರಮಣ್ಯನ ಮೈ ಬಿಸಿಯೇರಿ, ಸರ್ವಾಂಗಗಳಿಗೂ ಸಿಡಿಲು ಬಡಿದಂತ ಅನುಭವ. ಮೊದಲೇ ಹೆದರು ಪುಕ್ಕಲನಾದ ಸುಬ್ರಮಣ್ಯನಿಗೆ ಪ್ಯಾಂಟು ಒದ್ದೆಯಾಗುವುದೊಂದು ಬಾಕಿ, ಹೇಗೋ ಸಾವರಿಸಿಕೊಂಡು ಎದ್ದೆನೊ ಬಿದ್ದೆನೋ ಎಂದು ಬೈಕ್ ಸ್ಟಾರ್ಟ್ ಮಾಡಿ ಊರಕಡೆ ಹೊರಟ. ಯಾವುದೋ ದೆವ್ವ ತನ್ನ ಹಿಂದೆಯೇ ಬರುತ್ತಿದೆ ಎಂಬಂತೆ ಈಚಲಹಳ್ಳಿ ಸತೀಶನ ಅಂಗಡಿಯ ಮುಂದೆ ಏದುಸಿರು ಬಿಡುತ್ತಾ ಗಾಡಿ ನಿಲ್ಲಿಸಿದ. ನಡುಗುವ ಧ್ವನಿಯಲ್ಲಿ ತಾನು ಕಂಡ ವಿಚಿತ್ರ ದೃಶ್ಯದ ಬಗ್ಗೆ ಅಲ್ಲಿದ್ದವರಿಗೆ ವಿವರಿಸಿದ.
**********
ಈಚಲಹಳ್ಳಿಯಲ್ಲಿ ಅನೇಕ ವರ್ಷಗಳಿಂದ ಅಂಗಡಿ ನಡೆಸುತ್ತಿದ್ದ ಸತೀಶ ಊರಿನಲ್ಲಿ ತನ್ನದೊಂದು ಹವಾ ಇರಿಸಿಕೊಂಡಿದ್ದ. ರಸ್ತೆಯಲ್ಲಿ ಕಂಡ ದೃಶ್ಯದ ಬಗ್ಗೆ ಸುಬ್ರಮಣ್ಯನ ಮಾತುಕೇಳಿ ಸತೀಶನಿಗೂ ಒಂದು ಕ್ಷಣ ದಿಗಿಲಾಯಿತು. ಆದರೆ ಅದನ್ನು ತೋರಗೊಡದೆ ಅಂಗಡಿಯ ಬಾಗಿಲು ಹಾಕಿ ತನ್ನ ಬೈಕಿನಲ್ಲಿ ಅಲ್ಲಿದ್ದ ಇಬ್ಬರು ಕೂಲಿಯಾಳುಗಳನ್ನು ಕೂರಿಸಿಕೊಂಡು ಆ ಜಾಗಕ್ಕೆ ಹೋಗಲು ಅಣಿಯಾದ. ಸುಬ್ರಮಣ್ಯನನ್ನು “ನೀನು ಬಾ, ಏನು ಅಂತ ನೋಡೋಣ” ಎಂದರೆ, ಅವನು “ನಿನ್ನ ದಮ್ಮಯ್ಯ ಮಾರಾಯ, ನಾನು ಮಾತ್ರ ಬರಲ್ಲ. ನನ್ನ ಕೈಕಾಲು ನಡುಗುವುದು ಇನ್ನೂ ನಿಂತಿಲ್ಲ, ಸೀದಾ ಊರಿಗೆ ಹೋಗುತ್ತೇನೆ. ನೀನು ಏನು ಮಾಡುತ್ತೀಯ ನೋಡು” ಅಂತ ಹೇಳಿದವನೇ ಊರಕಡೆ ಹೊರಟ.

ಸತೀಶ ಮತ್ತು ಕೂಲಿಯಾಳುಗಳು ಭಯಮಿಶ್ರಿತ ಭಾವದಲ್ಲಿಯೆ ಆ ಸ್ಥಳದ ಹತ್ತಿರಕ್ಕೆ ಬರುವಾಗ ದೂರದಲ್ಲಿಯೇ ಅವರಿಗೂ ಆ ಬಿಳಿ ವಸ್ತು ಗೋಚರಿಸಿತು. ಸುಮಾರು ಐವತ್ತು ಮೀಟರ್ ದೂರದಲ್ಲಿ ಬೈಕು ನಿಲ್ಲಿಸಿಕೊಂಡು ಬೈಕಿನ ಹೆಡ್‍ಲೈಟ್ ಬೆಳಕನ್ನು ಚೀಲಕ್ಕೆ ಗುರಿಮಾಡಿ ಹಿಡಿದ. ಸುಬ್ರಮಣ್ಯ ಹೇಳಿದ್ದು ನಿಜವಾಗಿತ್ತು. ಬಿಳಿಬಣ್ಣದ ಮುದ್ದೆಯೊಂದು ಆಕಡೆ ಈಕಡೆ ಉರುಳಾಡುತ್ತಿತ್ತು. ಇದರಿಂದ ಮೂವರಿಗೂ ಮೈ ಬೆವರಿಬಂತು. ಮೂರು ಜನ ಇದ್ದುದ್ದರಿಂದ ಹುಸಿಧೈರ್ಯದಲ್ಲಿದ್ದರು. ಆದರೆ ಹತ್ತಿರ ಹೋಗಲು ಮಾತ್ರ ಯಾರೂ ತಯಾರಿಲ್ಲ. ಸತೀಶ ತನ್ನ ಮೊಬೈಲ್‍ನಲ್ಲಿ ಸುಮಾರು ಒಂದೂವರೆ ನಿಮಿಷ ಆ ಮೂಟೆ ಅತ್ತಿತ್ತ ಹೊರಳಾಡುವುದನ್ನು ವಿಡಿಯೋ ಮಾಡಿದ. ಅದನ್ನು “ಈಚಲಹಳ್ಳಿ ಫ್ರೆಂಡ್ಸ್” ಎನ್ನುವ ವಾಟ್ಸಾಪ್ ಗ್ರೂಪಿಗೆ ಅಪ್‍ಲೋಡ್ ಮಾಡಿ, ಹುಡುಗರನ್ನೆಲ್ಲ ಕೂಡಲೇ ಸ್ಥಳಕ್ಕೆ ಬನ್ನಿ ಎಂದು ಸಂದೇಶ ಹಾಕಿದ.

ಸುಮಾರು ಅರವತ್ತು ಮನೆಗಳಿರುವ ಈಚಲಹಳ್ಳಿ ಸುತ್ತಲ ಪ್ರದೇಶಗಳಿಗೆ ದೊಡ್ಡ ಹಳ್ಳಿಯಾಗಿತ್ತು. ಹತ್ತು ವರ್ಷಗಳ ಹಿಂದೆ ಬಿಎಸ್‍ಎನ್‍ಎಲ್ ಟವರ್ ಅಳವಡಿಸಲಾಗಿತ್ತು. ಈಗಂತು ಈಚಲಹಳ್ಳಿ ಮತ್ತು ಸುತ್ತಮುತ್ತಲ ಹಳ್ಳಿಗಳ ಯುವಕ-ಯುವತಿಯರ ಕೈಯಲ್ಲಿ ಸ್ಮಾರ್ಟ್‍ಪೋನ್‍ಗಳು ಝಗಮಗಿಸುತ್ತಿದ್ದವು. ಸುತ್ತುಹೊಡೆಯುತ್ತಿದ್ದ ಕ್ಷೀಣ ನೆಟ್‍ವರ್ಕ್‍ನಲ್ಲಿಯೇ ವಾಟ್ಸಾಪ್, ಫೆಸ್ಬುಕ್, ಯುಟೂಬ್ ನೋಡುವುದರಲಿ ತಲ್ಲೀನರಾಗಿದ್ದ ಈಚಲಹಳ್ಳಿಯ ಕೆಲ ಯುವಕರು ಅಂಗಡಿ ಸತೀಶ ಕಳಿಸಿದ್ದ ಆ ಬಿಳಿ ಮೂಟೆಯ ವಿಡಿಯೋ ಮತ್ತು ಸಂದೇಶವನ್ನು ಗಮನಿಸಿದರು. ಅದು ಒಬ್ಬರಿಂದ ಒಬ್ಬರಿಗೆ ಕ್ಷಣ ಮಾತ್ರದಲ್ಲಿ ಹಬ್ಬಿ ಈಚಲಹಳ್ಳಿಯವರಿಗೆಲ್ಲಾ ವಿಷಯ ಅಸ್ಪಷ್ಟವಾಗಿ ತಿಳಿಯಿತು. ವಾಟ್ಸಾಪ್‍ನಲ್ಲಿಯೇ ಪರಸ್ಪರ ಚರ್ಚೆ ಮಾಡಿಕೊಂಡು ಯುವಕರು, ವಯಸ್ಕರ ದಂಡು ಅರ್ಧ ಕಿಲೋಮೀಟರ್ ದೂರದ ಆ ಸ್ಥಳದತ್ತ ಒಟ್ಟಿಗೆ ಬೈಕು ಕಾರುಗಳಲ್ಲಿ ಹೊರಟರು.

ಇದ್ದಕ್ಕಿದ್ದಂತೆ ಊರಿನಲ್ಲಿ ಉದ್ಬವಿಸಿದ ಜೀವಕಳೆಯನ್ನು, ಜನರ ಓಡಾಟವನ್ನು ಕಂಡು ಊರತುಂಬ ಇದ್ದ ಕಂಟ್ರಿ ನಾಯಿಗಳು ಒಂದೇ ಸಮನೆ ಗೂಳಿಡಲು ಆರಂಭಿಸಿದವು. ನಾಯಿಗಳ ಕೂಗು ದಶದಿಕ್ಕುಗಳಿಗೂ ಮಾರ್ಧನಿಸುತ್ತಾ ಇಡೀ ಗ್ರಾಮದಲ್ಲಿ ಅವ್ಯಕ್ತ ಭೀತಿಯ ವಾತಾವರಣ ಸೃಷ್ಟಿಯಾಯಿತು.

ಈಚಲಹಳ್ಳಿಯಿಂದ ಬಂದ ದಂಡು ರಸ್ತೆ ಮಧ್ಯದ ದೃಶ್ಯವನ್ನು ನೋಡಿ ದಂಗಾದರು. ಪ್ಲಾಸ್ಟಿಕ್ ಚೀಲದಂತಿದ್ದ ಆ ವಸ್ತು ಒಮ್ಮೆ ಎಡಕ್ಕೆ, ಒಮ್ಮೆ ಬಲಕ್ಕೆ, ಸ್ವಲ್ಪ ಮೇಲಕ್ಕೆ ಚಿಮ್ಮುತ್ತ ಹೊರಳಾಡುತ್ತಿತ್ತು. ಅಷ್ಟೊತ್ತಿಗಾಗಲೇ ಆ ಕಡೆ ಈ ಕಡೆಯಿಂದ ಬಂದಿದ್ದ ಏಳೆಂಟು ಕಾರು, ಬೈಕುಗಳು ಸ್ಥಳದಲ್ಲಿ ಜಮಾಯಿಸಿದ್ದವು. ಬಂದವರಿಗೆಲ್ಲ ಸತೀಶ ಕೈ ಅಡ್ಡ ಹಾಕುತ್ತಾ ಆ ವಿಚಿತ್ರ ದೃಶ್ಯವನ್ನು ತೋರಿಸುತ್ತಿದ್ದ. ಅದನ್ನು ಕಂಡವರು ತಲೆಗೆ ಒಂದೊಂದು ಕತೆಗಳನ್ನು ಕಟ್ಟತೊಡಗಿದರು.
ಈ ಜಾಗ ಊರ ಸ್ಮಶಾನದ ಹತ್ರ ಇರೋದ್ರಿಂದ ಇಲ್ಲಿ ಮೊದಲಿನಿಂದಲೂ ಪ್ರೇತಗಳ ಕಾಟ ಇದೆ, ಇಲ್ಲಿ ರಾತ್ರಿ ಹೊತ್ತಿನಲ್ಲಿ ಅನೇಕ ಜನರಿಗೆ ಹೆದರಿಸಿದ ಸಾಕಷ್ಟು ಅನುಭವ ಆಗಿದೆ ಎಂದು ಜನರು ಅಂತೆ ಕಂತೆಗಳ ಗುಸುಗುಸು ಪ್ರಾರಂಭಿಸಿದರು. ಕೆಲವರು ಇದು ಯಾರೋ ಮನುಷ್ಯರ ಬಾಯಿಗೆ ಪ್ಲಾಸ್ಟರ್ ಹಾಕಿ ಚೀಲದಲ್ಲಿ ಕಟ್ಟಿ ಇಲ್ಲಿ ಎಸೆದು ಹೋಗಿದ್ದಾರೆ ಎಂದು, ಯಾರನ್ನೋ ಅರ್ಧಜೀವ ಮಾಡಿ ಇಲ್ಲಿ ಬಿಸಾಕಿ ಹೋಗಿದ್ದಾರೆ ಎಂದು, ಇಲ್ಲ ಯಾರನ್ನೋ ಕೊಲೆ ಮಾಡಿದ್ದೇವೆಂದು ಕಂದಕಕ್ಕೆ ಎಸೆದು ಹೋಗಿದ್ದಾರೆ, ಆದರೆ ಅರ್ಧಜೀವವಾಗಿ ಅವರು ತೆವಳಿಕೊಂಡು ರಸ್ತೆಗೆ ಬಂದಿದ್ದಾರೆ ಎಂದು, ಇಲ್ಲ ಯಾರೋ ನಾಯಿಯನ್ನು ಮೂಟೆಕಟ್ಟಿ ಇಲ್ಲಿ ಬಿಟ್ಟು ಹೋಗಿದ್ದಾರೆ ಎಂದು, ಇಲ್ಲ ಯಾರೋ ಕಾಳಿಂಗ ಸರ್ಪವನ್ನು ಹಿಡಿದು ಚೀಲದಲ್ಲಿ ತುಂಬಿಸಿ ಚೀಲದ ಬಾಯಿ ಬಿಚ್ಚಲು ಭಯವಾಗಿ ಹಾಗೆಯೇ ರಸ್ತೆ ಬದಿಯ ಕಾಡಿಗೆ ಎಸೆದು ಹೋಗಿದ್ದಾರೆ ಅದು ತೆವಳಿಕೊಂಡು ಮೇಲೆ ರಸ್ತೆಗೆ ಬಂದಿದೆ ಎಂದು ಹೀಗೆ ತಮ್ಮ ತಮ್ಮ ಕಲ್ಪನಾಲೋಕಕ್ಕೆ ಅನಿಸಿದಂತೆ ಅಭಿಪ್ರಾಯಗಳನ್ನು ಮಂಡಿಸತೊಡಗಿದರು.

ಅಲ್ಲಿ ಸೇರಿದ್ದ ಯುವಕರು ಆ ದೃಶ್ಯವನ್ನು ಚಿತ್ರಿಕರಣ ಮಾಡಿಕೊಂಡು ತಮ್ಮ ತಮ್ಮ ಸ್ನೇಹಿತರಿಗೆ ವಾಟ್ಸಾಪ್-ಫೇಸ್ಬುಕ್ ಮೂಲಕ ಕಳುಹಿಸತೊಡಗಿದರು. ಹತ್ತು ಇಪ್ಪತ್ತಾಗಿ, ಇಪ್ಪತ್ತು ಇನ್ನೂರಾಗಿ, ಇನ್ನೂರು ಸಾವಿರಗಳಾಗಿ ಈ ದೃಶ್ಯ ಕೆಲ ಹೊತ್ತಿನಲ್ಲಿಯೇ ಅದೆಷ್ಟೋ ಜನರ ಮೊಬೈಲ್‍ಗಳಿಗೆ ತಲುಪಿತು. ಇದನ್ನು ನೋಡಿದ ಸುತ್ತಮುತ್ತಲ ಹಳ್ಳಿಯ ಯುವಕರು ತಂಡೋಪತಂಡವಾಗಿ ಸ್ಥಳದಲ್ಲಿ ಸೇರಿದರು.

ಮೊಬೈಲ್‍ನಿಂದ ಮೊಬೈಲಿಗೆ ಹರಿದಾಡುತ್ತಿದ್ದ ವಿಡಿಯೋ ಕೊನೆಗೆ ಪಡುಗೆರೆಯ ಪತ್ರಕರ್ತ ಪರಮೇಶನಿಗೆ ತಲುಪಿತ್ತು. ಇದನ್ನು ಮಾಧ್ಯಮ ಸ್ನೇಹಿತರಿಗೆ ತಾನೇ ಮೊದಲು ತಿಳಿಸಬೇಕು ಎಂಬ ಹುಮ್ಮಸ್ಸಿನಲ್ಲಿ ಪರಮೇಶ ಅದಕ್ಕೆ ಒಂದಷ್ಟು ಬಣ್ಣಕಟ್ಟಿ ಅದನ್ನು ‘ಡಿಸ್ಟ್ರಿಕ್ಟ್ ಪ್ರೆಸ್ ರಿಪೋರ್ಟರ್ಸ್’ ಎಂಬ ವಾಟ್ಸಾಪ್ ಗ್ರೂಪಿಗೆ ಫಾರ್ವರ್ಡ್ ಮಾಡಿದ. ಇದನ್ನು ನೋಡಿದ್ದೇ ತಡ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಟಿ.ವಿ. ರಿಪೋರ್ಟರುಗಳು ನಮ್ಮ ಛಾನಲ್‍ನಲ್ಲಿಯೇ ಮೊದಲು ಸುದ್ದಿಯನ್ನು ಬ್ರೇಕ್ ಮಾಡಬೇಕೆಂದು ಹಿಂದೂ ಮುಂದೂ ವಿಚಾರಿಸುವ ಗೊಡವೆಗೆ ಹೋಗದೆ “ರಸ್ತೆಯಲ್ಲಿ ನಿಗೂಢ ಜೀವಿಯ ನರ್ತನ” “ಮೂಟೆಯೊಳಗೆ ಪ್ರೇತ ಕುಣಿತ” ಹೀಗೆ ಆಕರ್ಷಕ ಉದ್ಘೋಷಗಳೊಂದಿಗೆ ತಮ್ಮ ತಮ್ಮ ಛಾನಲ್‍ಗಳಿಗೆ ವಿಡಿಯೋ ಸಮೇತ ಸುದ್ದಿ ಕಳುಹಿಸಿದರು. ಬೆಳಗ್ಗೆಯಿಂದಲೂ ಬ್ರೇಕಿಂಗ್‍ನ್ಯೂಸ್ ಇಲ್ಲದೇ ನೀರಸ ಸುದ್ದಿಗಳನ್ನೇ ಪ್ರಸಾರ ಮಾಡುತ್ತಿದ್ದ ಟಿ.ವಿ. ಛಾನಲ್‍ಗಳಲ್ಲಿ ಈ ಸುದ್ದಿ ಮತ್ತು ದೃಶ್ಯ ವರ್ಣರಂಜಿತವಾಗಿ ಬಿತ್ತರವಾಗತೊಡಗಿತು.
**********
ತಮಗೇ ಗೊತ್ತಿಲ್ಲದ ತಮ್ಮೂರ ಸಮೀಪದ ಸುದ್ದಿಯನ್ನು ಟಿ.ವಿ.ಯಲ್ಲಿ ನೋಡಿದ ಈಚಲಹಳ್ಳಿ ಸುತ್ತಮುತ್ತಲ ಇನ್ನಷ್ಟು ಜನ ಕುತೂಹಲದಿಂದ ಸ್ಥಳದಲ್ಲಿ ಸೇರಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಹೊಸಬೀಡು ಠಾಣೆಗೆ ಕರೆಮಾಡಿ ಭಯಮಿಶ್ರಿತ ನಡುಗುವ ಧ್ವನಿಯಲ್ಲಿ ವಿಷಯ ಮುಟ್ಟಿಸಿದ. ಇನ್ನೇನು ಡ್ಯೂಟಿ ಮುಗಿಸಿ ಕ್ವಾಟ್ರಸ್ ಗೆ ಹೋಗಲು ಅಣಿಯಾಗುತ್ತಿದ್ದ ಸಬ್‍ಇನ್ಸ್‍ಪೆಕ್ಟರ್ ಗೋಪಿನಾಥ್ ‘ತತ್ತೆರಿಕೆ ಇದೊಳ್ಳೆ ಭೂತದ ಕಾಟವಾಯ್ತಲ್ಲ’ ಎಂದು ಕೊಂಡು ನಾಲ್ಕುಜನ ಪಿ.ಸಿ ಗಳೊಂದಿಗೆ ಜೀಪಿನಲ್ಲಿ ಈಚಲಹಳ್ಳಿಯತ್ತ ಹೊರಟರು.

ಇನ್ನು ಆ್ಯಂಕರ್‍ಗಳ ಪ್ರಶ್ನೆಗಳ ಮೇಲೆ ಪ್ರಶ್ನೆಯ ಸುರಿಮಳೆಯನ್ನು ಸಹಿಸಲಾರದೇ ಟಿ.ವಿ. ರಿಪೋರ್ಟರ್‍ಗಳು ಕ್ಯಾಮರಮೆನ್ ಸಹಿತ ಈಚಲಹಳ್ಳಿಗೆ ದೌಡಾಯಿಸಿದರು. ಸ್ಥಳದಿಂದಲೇ ನೇರ ಪ್ರಸಾರದ ಮಾಹಿತಿಗಳನ್ನು ಕೊಡತೊಡಗಿದರು. ಸದ್ಯ ಸ್ಥಳದಲ್ಲಿ ಯಾವ ರೀತಿಯ ವಾತಾವರಣವಿದೆ? ಸ್ಥಳೀಯ ಜನರು ಈ ಬಗ್ಗೆ ಏನು ಹೇಳುತ್ತಾರೆ ? ಉರುಳಾಡುತ್ತಿರುವ ವಸ್ತು ಯಾವ ಗಾತ್ರದಲ್ಲಿದೆ? ಅದೊಂದು ದೆವ್ವವಾಗಿರಬಹುದೇ, ಹೆಣ್ಣು ದೆವ್ವವೋ, ಗಂಡು ದೆವ್ವವೋ? ಹೀಗೆ ಟಿ.ವಿ. ಸ್ಟುಡಿಯೊದಿಂದ ಶರವೇಗದಲ್ಲಿ ತೂರಿ ಬರುತ್ತಿದ್ದ ಪ್ರಶ್ನೆಗಳಿಗೆ ರಿಪೋರ್ಟರ್‍ಗಳ ತಮ್ಮ ಮನಸ್ಸಿಗೆ ಬಂದಂತೆ ಒಂದಕ್ಕೊಂದು ಸೇರಿಸಿ ಉತ್ತರ ನೀಡುತ್ತಿದ್ದರು. ಇನ್ನು ಅಲ್ಲಿದ್ದ ಜನರ ಮುಂದೆ ಮೈಕ್ ಹಿಡಿದು ಅವರ ಅಭಿಪ್ರಾಯಗಳನ್ನು ಕೇಳತೊಡಗಿದ್ದೇ ತಡ ಜನ ತಮ್ಮ ಮುಖ ಟಿವಿಯಲ್ಲಿ ಬರುತ್ತದೆ ಎಂದು ಕ್ಯಾಮರಕ್ಕೆ ಮುಗಿಬೀಳತೊಡಗಿದರು.

ಇನ್ನೇನು ಮರುದಿನದ ಪತ್ರಿಕೆಯ ಮುದ್ರಣಕ್ಕೆ ಸಜ್ಜಾಗಿದ್ದ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಸಂಪಾದಕ ಮಂಡಳಿ ಟಿ.ವಿ ಗಳಲ್ಲಿ ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ನೋಡಿ ತಮ್ಮ ತಮ್ಮ ಪತ್ರಿಕೆಯ ಸ್ಥಳೀಯ ವರದಿಗಾರರಿಗೆ ತಕ್ಷಣ ಈ ಬಗ್ಗೆ ಮಾಹಿತಿ ಕಳುಹಿಸುವಂತೆ ಫರ್ಮಾನು ಹೊರಡಿಸಿದರು. ರಾತ್ರಿವೇಳೆ ಇದೆಂತ ಗ್ರಾಚಾರ ಅಂದುಕೊಳ್ಳುತ್ತಾ ವರದಿಗಾರರು ಈಚಲಹಳ್ಳಿಯಲ್ಲಿ ತಮಗಿದ್ದ ಸಂಪರ್ಕ ಬಳಸಿಕೊಂಡು ಕುಳಿತಲ್ಲಿಯೇ ವಾಟ್ಸಾಪ್ ಮೂಲಕ ಪೋಟೋ ತರಿಸಿಕೊಂಡು ಮಾಹಿತಿ ಕಲೆಹಾಕಿ ಅದಕ್ಕೆ ಒಂದಷ್ಟು ಉಪ್ಪುಕಾರ ಸೇರಿಸಿ ವರದಿಗಳನ್ನು ಕಳುಹಿಸಿದರು.
**********
ಹೊಸಬೀಡಿನಿಂದ ಹೊರಟ ಪೊಲೀಸ್ ಜೀಪು ಈಚಲಹಳ್ಳಿಯನ್ನು ಸುಮಾರು ಮುಕ್ಕಾಲು ಗಂಟೆಯಲ್ಲಿ ತಲುಪಿತು. ಮಧ್ಯದಲ್ಲಿ ಮೊಬೈಲ್ ನೆಟ್‍ವರ್ಕ್ ಸರಿಯಾಗಿ ಸಿಗುತ್ತಿರಲಿಲ್ಲವಾದ ಕಾರಣ ಸಬ್‍ಇನ್ಸ್‍ಪೆಕ್ಟರ್‍ಗೆ ಹೆಚ್ಚಿನ ಮಾಹಿತಿ ಸಿಕ್ಕಿರಲಿಲ್ಲ. ಇದೊಂದು ಸಿಲ್ಲಿ ವಿಷಯ, ಸಿಂಪಲ್ಲಾಗಿ ಹ್ಯಾಂಡಲ್ ಮಾಡಬಹುದು ಎಂದುಕೊಂಡು ಸ್ಥಳಕ್ಕೆ ಬಂದಿದ್ದ ಎಸ್.ಐ. ಗೋಪಿನಾಥ್‍ಗೆ ಅಲ್ಲಿನ ಜನಜಂಗುಳಿ, ಟ್ರಾಫಿಕ್ ಜಾಮ್ ಇದನ್ನೆಲ್ಲ ನೋಡಿ ಕಗ್ಗತ್ತಲಿನಲ್ಲಿ ಕಣ್ಕಟ್ಟಿದಂತಾಗಿ ತಬ್ಬಿಬ್ಬಾದರು. ವಾಹನ ದಟ್ಟಣೆ ಎರಡೂ ಬದಿಯಲ್ಲಿ ಕಿಲೋಮೀಟರ್ ವರೆಗೆ ಹಬ್ಬಿತ್ತು.

ಅಷ್ಟೊತ್ತಿಗಾಗಲೇ ಸುದ್ದಿ ನೋಡಿದ ಎಸ್.ಪಿ., ಡಿ.ವೈ.ಎಸ್.ಪಿ., ಗಳಿಂದ ಎಸ್.ಐ. ಗೋಪಿನಾಥ್‍ಗೆ ಪೋನಿನ ಮೇಲೆ ಪೋನು ಬರತೊಡಗಿದವು. “ಅದೇನ್ರೀ ವಿಷಯ, ತಕ್ಷಣ ಮಾಹಿತಿ ಕೊಡಿ, ಜನರನ್ನು ನಿಯಂತ್ರಿಸಿ” ಎಂಬ ಮೌಖಿಕ ಆದೇಶ ನೀಡಿದರು. ಪಡುಗೆರೆಯಿಂದ ಸರ್ಕಲ್ ಇನ್ಸ್‍ಪೆಕ್ಟರ್ ಸಂಜೀವನಾಯ್ಕ ತಮ್ಮ ಸಿಬ್ಬಂದಿಯೊಂದಿಗೆ ಈಚಲಹಳ್ಳಿಯತ್ತ ಹೊರಟರು.

ಎಸ್.ಐ. ಗೋಪಿನಾಥ್ ಇದ್ದ ಜೀಪು ಜನರನ್ನು, ವಾಹನಗಳನ್ನು ಸರಿಸಿಕೊಂಡು ಮುನ್ನೆಲೆಗೆ ಬರುವಷ್ಟರಲ್ಲಿ ಹೈರಾಣಾಗಿದ್ದರು. ಅಲ್ಲಿ ಚಿತ್ರವಿಚಿತ್ರ ಘಟನಾವಳಿಗಳು ನಡೆಯುತ್ತಿದ್ದವು. ಸುತ್ತ ಜನಜಾತ್ರೆ ನೆರೆದಿತ್ತು. ಐದಾರು ಟಿ.ವಿ. ಕ್ಯಾಮರಗಳು ರಸ್ತೆ ಮಧ್ಯದ ದೃಶ್ಯಾವಳಿಗಳಿಗೆ ಮುಖಮಾಡಿ ನಿಂತಿದ್ದವು. ಪೊಲೀಸ್ ವಸ್ತ್ರವನ್ನು ಕಂಡೊಂಡನೆಯೇ ರಿಪೋರ್ಟರ್‍ಗಳು ಪ್ರಶ್ನೆಗಳ ಸುರಿಮಳೆಗೈದರು. ಯಾವ ಮಾಹಿತಿಯೂ ಸ್ಪಷ್ಟವಾಗಿ ಗೊತ್ತಿಲ್ಲದ ಎಸ್.ಐ. ತಡವರಿಸುತ್ತಲೇ ತಮಗೆ ಸಿಕ್ಕ ಅರೆಬೆಂದ ಮಾಹಿತಿಗಳನ್ನು ನೀಡಿದರು. “ನೋಡಿ ಸ್ಥಳಕ್ಕೆ ಪೊಲೀಸರು ತಡವಾಗಿ ಬಂದಿದ್ದಾರೆ, ಅವರಿಗೇ ಸರಿಯಾದ ಮಾಹಿತಿ ಇಲ್ಲ” ಹಾಗೆ.. ಹೀಗೆ… ಎಂದು ಆಟ್ಯಾಕಿಂಗ್ ಸುದ್ದಿಗಳು ಬಿತ್ತರವಾಗತೊಡಗಿದವು.

ಕೆಲ ಛಾನಲ್‍ನವರು ನೇರವಾಗಿ ಗೃಹಮಂತ್ರಿ ಶರಣಪ್ಪ ಮೆಣಸಿನಕಾಯಿಯವರಿಗೆ ಫೋನ್ ಮಾಡಲು ಪ್ರಯತ್ನಿಸಿದರು. ಆದರೆ ತಮ್ಮ ಸ್ವಕ್ಷೇತ್ರ ಹರಿಶ್ಚಂದ್ರಪುರದ ಹಳ್ಳಿಯೊಂದರ ಸಮುದಾಯ ಭವನ ಉದ್ಘಾಟನೆಗೆಂದು ತೆರಳಿದ್ದ ಗೃಹಮಂತ್ರಿಗಳು ಆ ದಿನ ರಾತ್ರಿ ತಮ್ಮ ಸ್ನೇಹಿತರ ರೆಸಾರ್ಟ್‍ವೊಂದರಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಮೊಬೈಲ್ ನೆಟ್‍ವರ್ಕ್ ಇಲ್ಲದ ಕಾರಣ ಅವರಿಗೂ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಟಿ.ವಿ.ಯವರು “ನೋಡಿ ಗೃಹ ಮಂತ್ರಿಗಳ ಮೊಬೈಲ್ ನಾಟ್‍ರೀಚಬಲ್, ಇಂತಹ ಬೇಜಾಬ್ದಾರಿ ಗೃಹಮಂತ್ರಿಗಳು ನಮ್ಮ ರಾಜ್ಯಕ್ಕೆ ಬೇಕಾ ?” ಎಂದು ಘಟನೆಯನ್ನು ರಾಜಕೀಯ ಬಣ್ಣಕ್ಕೆ ತಿರುಗಿಸಿದರು. ಇದನ್ನೇ ಕಾಯುತ್ತಿದ್ದ ವಿರೋಧ ಪಕ್ಷದವರು ಸರ್ಕಾರದ ಕಾಲೆಳೆಯಲು ಸಂದರ್ಭವನ್ನು ಚೆನ್ನಾಗಿಯೇ ಬಳಸಿಕೊಳ್ಳತೊಡಗಿದರು.
**********
ಇತ್ತ ಟಿ.ವಿ. ಮಾಧ್ಯಮದವರ ಪ್ರಶ್ನೆಗಳಿಗೆ ಮನಸ್ಸಿಗೆ ತೋಚಿದ ಉತ್ತರ ಹೇಳಿದ ಎಸ್.ಐ. ಗೋಪಿನಾಥ್ ಹೊರಳಾಡುತ್ತಿರುವ ಆ ಮೂಟೆಯಲ್ಲಿ ಏನಿದೆ ? ಎಂದು ಹತ್ತಿರ ಹೋಗಿ ನೋಡಿರಿ ಎಂದು ತನ್ನ ಕೈಕೆಳಗಿನ ಪೇದೆಗಳಿಗೆ ಹೇಳಿದರು. ದೃಶ್ಯವನ್ನು ಕಂಡು ಮೊದಲೇ ದಿಗಿಲುಗೊಂಡಿದ್ದ ಪೇದೆಗಳು ನೀನು ಹೋಗು, ನೀನು ಹೋಗು ಎಂದು ತಮ್ಮತಮ್ಮಲ್ಲಿಯೇ ಒಬ್ಬರನ್ನೊಬ್ಬರು ಮುಂದೆ ನೂಕ ತೊಡಗಿದರು. ಆಗ ತಟ್ಟನೇ ಒಬ್ಬ ಪೇದೆ ಜ್ಞಾನೋದಯವಾದಂತೆ “ಸಾರ್, ಹಾಗೆಲ್ಲ ಮುಟ್ಟೋದು ಬೇಡ ಸಾರ್, ನಾಳೆ ಏನಾದರೂ ಫಿಂಗರ್‍ಪ್ರಿಂಟ್ ಅದೂ.. ಇದೂ.. ಎಂದು ಕಾನೂನು ನಮ್ಮ ಕುತ್ತಿಗೆಗೆ ಸುತ್ತಿಕೊಂಡರೆ ಕಷ್ಟ. ಯಾವುದಕ್ಕೂ ಸರ್ಕಲ್ ಸಾಹೇಬ್ರು ಬಂದ ಮೇಲೆ ನೋಡಿದರಾಯಿತು” ಎಂದು ಸಲಹೆ ನೀಡುತ್ತಿದ್ದಂತೆ ಒಳಗಿಂದೊಳಗೆ ತಾನೂ ಸಹ ಹೆದರಿದ್ದ ಗೋಪಿನಾಥ್ ಪೇದೆಯ ಮಾತಿಗೆ ತಲೆದೂಗಿ “ಅದೂ ಸರಿನೇ ನೋಡೋಣ ಸಾಹೇಬ್ರು ಬರಲಿ” ಎಂದು ಹೇಳುತ್ತಾ ಜನರನ್ನು ನಿಯಂತ್ರಣ ಮಾಡುವುದರಲಿ ತಲ್ಲೀನರಾದರು.

ಎಲ್ಲರು ಹೀಗೆ ನೋಡುತ್ತಿರುವಾಗಲೇ ನಸೆಯ ಮತ್ತಿನಲ್ಲಿದ್ದ ಹೊಸಗದ್ದೆಯ ಸುಬ್ಬಣ್ಣ ನಾನು ಒಂದು ಕೈ ನೋಡೇ ಬಿಡುತ್ತೇನೆ ಎಂಬ ಹುಮ್ಮಸ್ಸಿನಲ್ಲಿ ಹೊರಳಾಡುತ್ತಿದ್ದ ಆ ವಸ್ತುವಿನ ಕಡೆಗೆ ಏಕಾಏಕಿ ನುಗ್ಗಿಬಂದ. ಸುಬ್ಬಣ್ಣ ಮೂಟೆ ಹಿಡಿದುಕೊಂಡದ್ದಷ್ಟೆ, ಮೂಟೆಯೊಳಗಿನಿಂದ ಬಲವಾಗಿ ಜಾಡಿಸಿ ಒದ್ದಂತಾಗಿ ಮಾರುದೂರಕ್ಕೆ ಹಾರಿ ಬಿದ್ದ ! ಈ ದೃಶ್ಯವು ಕ್ಯಾಮರ ಮೂಲಕ ನೇರ ಪ್ರಸಾರವಾಗುತ್ತಿತ್ತು. ಅದರ ಒದೆತವನ್ನು ಕಂಡು ಅಲ್ಲಿದ್ದ ಜನರಿಗೆ ಮತ್ತು ಪೊಲೀಸರಿಗೆ ಇನ್ನಷ್ಟು ಭಯವಾಯಿತು. ಟಿ.ವಿ.ಯಲ್ಲಿ ಅದೇ ದೃಶ್ಯವನ್ನು ತಿರುತಿರುಗಿಸಿ ತೋರಿಸತೊಡಗಿದರು.
**********
ಈ ನಡುವೆ ಇದು ಮರಳು ಮಾಫಿಯಾದವರ ಕೃತ್ಯ. ಪಕ್ಕದಲ್ಲಿಯೇ ಹರಿಯುತ್ತಿರುವ ಹೇಮಾವತಿ ಉಪನದಿಯಲ್ಲಿ ಹೇರಳವಾಗಿ ಮರಳು ದೊರಕುತ್ತದೆ. ರಾತ್ರಿ ಹೊತ್ತು ಮರಳು ಕದ್ದು ಸಾಗಿಸುವವರು ಸೃಷ್ಟಿಸಿರುವ ನಾಟಕ ಇದು. ರಾತ್ರಿಹೊತ್ತು ಮರಳು ತುಂಬಿಸುವಾಗ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಟಿಪ್ಪರ್, ಟ್ರಾಕ್ಟರ್ ಗಳನ್ನು, ಜೆಸಿಬಿ-ಇಟಾಚಿಗಳನ್ನು ಸೀಜ್ ಮಾಡಿಸುವುದು ಇಲ್ಲಿ ಸಾಮಾನ್ಯವಾಗಿತ್ತು. ರಾತ್ರಿಹೊತ್ತು ಯಾರೂ ಇತ್ತ ಸುಳಿಯಬಾರದು ಎಂದು ದೆವ್ವ ಭೂತದ ಹೆದರಿಕೆ ಹುಟ್ಟಿಸಲು ಯಾರೋ ಪ್ಲಾನ್ ಮಾಡಿದ್ದಾರೆ. ಮೂಟೆಯಲ್ಲಿ ನಾಯಿಯನ್ನು ತುಂಬಿಸಿ ಇಲ್ಲಿ ಹಾಕಿದ್ದಾರೆ ಅಥವಾ ರಿಮೋಟ್ ಕಂಟ್ರೋಲ್ ಆಟಿಕೆಯನ್ನು ತುಂಬಿಸಿ ಯಾರೋ ಹತ್ತಿರದಲ್ಲೆಲ್ಲೋ ಕುಳಿತು ನಿಯಂತ್ರಿಸುತ್ತ ಹೀಗೆ ಭಯ ಸೃಷ್ಟಿಸಿದ್ದಾರೆ ಎಂದು ಕೆಲವರ ತಮ್ಮತಮ್ಮಲ್ಲೆ ಮಾತಾಡಿಕೊಂಡರಾದರೂ, ನಮಗ್ಯಾಕೆ ಊರಿನ ಉಸಾಬರಿ ಎಂದು ಯಾರೊಬ್ಬರು ಈ ವಿಷಯವನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಹಿಂಜರಿಯುತ್ತಿದ್ದರು.
**********
ಮಲೆನಾಡಿನಲ್ಲಿ ಈಗ್ಗೆ ಐದಾರು ವರ್ಷಗಳಿಂದ ನಕ್ಸಲ್ ಚಟುವಟಿಕೆ ಗರಿಗೆದರಿತ್ತು. ರಾತ್ರಿ ಹೊತ್ತಿನಲ್ಲಿ ಕಾಡಂಚಿನ ಒಂಟಿ ಮನೆಗಳಿಗೆ ನಕ್ಸಲರು ಭೇಟಿ ನೀಡಿ ಸಭೆಗಳನ್ನು ನಡೆಸಿ ಜನರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದ್ದರು. ಪೊಲೀಸರು ಮತ್ತು ನಕ್ಸಲರ ನಡುವೆ ಹಲವು ಮುಖಾಮುಖಿಗಳು ನಡೆದು, ನಿಶ್ಯಬ್ದವಾಗಿದ್ದ ಮಲೆನಾಡಿನ ಹಚ್ಚಹಸಿರಿನ ಚಾದರದ ಮೇಲೆ ಕೆಂಪುರಕ್ತದ ಕಲೆಗಳು ಮೂಡಿದ್ದವು. ನಕ್ಸಲ್ ನಿಗ್ರಹ ದಳವನ್ನು ರಚಿಸಿ ನಕ್ಸಲ್ ಚಟುವಟಿಕೆ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ನಡೆಸುತ್ತಿತ್ತು. ಎಲ್ಲೆಲ್ಲೂ ಪೊಲೀಸ್ ಕಟ್ಟೆಚ್ಚರಿಕೆಯ ಕಿರಿಕಿರಿ ನಾಗರೀಕರನ್ನು ಹೈರಾಣಾಗಿಸಿತ್ತು.

ಚಾರ್ಮಾಡಿ ಘಾಟ್‍ನಲ್ಲಿ ಕೊಲೆ ಮಾಡಿದವರ ಹೆಣವನ್ನು ಎಸೆದು ಹೋಗುವ ಘಟನಾವಳಿ ಇತ್ತೀಚೆಗೆ ಹೆಚ್ಚಾಗಿತ್ತು. ಈಗ್ಗೆ ಹದಿನೈದು ದಿನದ ಹಿಂದೆ ಕಾಸರಗೋಡು ಮೂಲದ ವ್ಯಕ್ತಿಯನ್ನು ಕೊಲೆ ಮಾಡಿ ಹೆಣವನ್ನು ಮೂಟೆಯಲ್ಲಿ ತುಂಬಿ ಘಾಟಿಯ ಪ್ರಪಾತಕ್ಕೆ ಎಸೆದು ಹೋಗಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದರು. ಹತ್ತುದಿನದ ಹಿಂದೆ ಹಾಸನ-ಮಂಗಳೂರು ಹೆದ್ದಾರಿಯಲ್ಲಿ ದರೋಡೆಕೋರರ ತಂಡ ಕಾರೊಂದನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರ ಕಣ್ಣಿಗೆ ಕಾರಪುಡಿ ಎರಚಿ ಆಭರಣ-ಹಣ ದೋಚಿದ್ದರು. ವಾರದ ಹಿಂದಷ್ಟೆ ಬೆಂಗಳೂರು ಕ್ರಿಕೆಟ್ ಸ್ಟೇಡಿಯಂ ಸಮೀಪ ಭಯೋತ್ಪಾದಕರ ಬಾಂಬ್ ದಾಳಿಯಲ್ಲಿ ಹಲವರು ಗಾಯಗೊಂಡಿದ್ದರು.

ಹೀಗೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಟ್ಟು ಸರ್ಕಾರ ಮತ್ತು ಪೊಲೀಸರ ನಿದ್ದೆಗೆಡಿಸುವ ಪ್ರಕರಣಗಳು ನಡೆಯುತ್ತಿದ್ದವು. ಹಾಗಾಗಿ ಈಚಲಹಳ್ಳಿಯ ಈ ಪ್ರಕರಣಕ್ಕೆ ಹೆಚ್ಚಿನ ಗಂಭೀರತೆ, ಮಹತ್ವ ಬಂದಿತ್ತು. ಪ್ರಕರಣವನ್ನು ಮುಂದಿಟ್ಟುಕೊಂಡು ಕೆಲ ಟಿ.ವಿ. ಚಾನಲ್‍ಗಳು ಪ್ಯಾನಲ್ ಚರ್ಚೆ ಶುರುಮಾಡಿದ್ದರು. ಜ್ಯೋತಿಷಿಗಳು, ರಾಜಕೀಯ ಮುಖಂಡರು, ವಿಚಾರವಾದಿಗಳನ್ನು ಆ್ಯಂಕರ್ ಗಳ ಸುತ್ತ ಕೂರಿಸಿಕೊಂಡು ದೆವ್ವ-ಭೂತ-ಪ್ರೇತ, ಕೊಲೆ-ಸುಲಿಗೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು…ಹಾಗೆ.. ಹೀಗೆ.. ಎಂದು ಚರ್ಚೆಗಳನ್ನು ಪ್ರಾರಂಭಿಸಿದ್ದರು.
**********
ರಸ್ತೆ ಮಧ್ಯದಲ್ಲಿ ಆ ವಿಚಿತ್ರ ದೃಶ್ಯವನ್ನು ನೋಡಿದ್ದ ಸುಬ್ರಮಣ್ಯನಿಗೆ ಮನೆಗೆ ಹೋಗುವ ಹೊತ್ತಿಗಾಗಲೇ ಮೈಯಲ್ಲಿ ಜ್ವರವೇರಿತ್ತು. ಮನೆಗೆ ಹೋದವನೇ ತಾನು ಕಂಡ ದೃಶ್ಯದ ಬಗ್ಗೆ ಮನೆಯವರಿಗೆ ಚುಟುಕಾಗಿ ಹೇಳಿ, ಸರಿಯಾಗಿ ಊಟವನ್ನು ಮಾಡದೇ ಚಳಿ ಚಳಿ ಎಂದು ನಡುಗುತ್ತಾ ಮಲಗಿಬಿಟ್ಟ. ಸುಬ್ರಮಣ್ಯನ ತಾಯಿ ಕಾವೇರಮ್ಮ ಮಗ ಹೆದರಿಕೊಂಡಿದ್ದು ಮೈಗೆ ಸೋಕಿದಂಗೆ ಆಗಿದೆ ಎಂದು ಅರಿಸಿನ ನೀರಿನಲ್ಲಿ ಗಾಳಿಔಷದಿ ಮಾಡಿ, ನೀವಳಿಸಿ ಮೈಕೈಗೆಲ್ಲ ಹಚ್ಚಿದರು.
ಅವತ್ತು ಜಂಬರಡಿಯಲ್ಲಿ ಸಂಜೆಯಿಂದಲೇ ಕರೆಂಟ್ ಇರಲಿಲ್ಲ. ಬೆಟ್ಟದಂಜಿನ ಆ ಹಳ್ಳಿಗೆ ಯಾವುದೇ ಮೊಬೈಲ್ ನೆಟ್‍ವರ್ಕ್ ಸಹ ಸಿಗುತ್ತಿರಲಿಲ್ಲ. ಹಾಗಾಗಿ ಈಚಲಹಳ್ಳಿಯಲ್ಲಿ ನಡೆಯುತ್ತಿದ್ದ ನಾಟಕೀಯ ಬೆಳವಣಿಗೆಗಳಾಗಲಿ, ಅದು ಟಿವಿಗಳಲ್ಲಿ ದೊಡ್ಡ ಸುದ್ದಿಯಾಗಿರುವುದಾಗಲಿ ಯಾವುದೊಂದು ಜಂಬರಡಿ ಜನರಿಗೆ ಇರಲಿ ದೃಶ್ಯವನ್ನು ಮೊದಲು ನೋಡಿದ್ದ ಸ್ವತಃ ಸುಬ್ರಮಣ್ಯನಿಗೆ ಏನೊಂದು ತಿಳಿದಿರಲಿಲ್ಲ.
**********
ಇತ್ತ ಮಾಧ್ಯಮದಲ್ಲಿ ಈ ವಿಷಯ ಹೊಸ ಹೊಸ ಸ್ವರೂಪ ಪಡೆದುಕೊಂಡು ಚರ್ಚೆಯಾಗುತ್ತಾ ಸಾಗಿದಂತೆ ವಿಷಯ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿತು. ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೇಳಿದರು. ಅಷ್ಟೊತ್ತಿಗಾಗಲೇ ಎಸ್ಪಿಯವರ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಪಡುಗೆರೆಯಿಂದ ಅಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಬಂದು ಜಮಾಯಿಸಿದವು. ಸ್ವತಃ ಎಸ್.ಪಿ.ಯವರೇ ಘಟನಾ ಸ್ಥಳದತ್ತ ಹೊರಟು ನಿಂತರು. ಜಿಲ್ಲಾ ಕೇಂದ್ರದಿಂದ ಶ್ವಾನದಳ, ಬಾಂಬ್ ನಿಷ್ಕ್ರಿಯದಳ ಸೇರಿದಂತೆ ರ್ಯಾಪಿಡ್ ಆಕ್ಷ್ಯನ್ ಪೋರ್ಸ್ ಪಡೆಯೊಂದನ್ನು ಈಚಲಹಳ್ಳಿಯತ್ತ ಕಳುಹಿಸಲಾಯಿತು. ಈ ಭಾಗದ ಸುತ್ತಲ ಮೂರ್ನಾಲ್ಕು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಇತ್ತೀಚೆಗೆ ಯಾವುದಾದರೂ ಮಿಸ್ಸಿಂಗ್ ಕೇಸು ದಾಖಲಾಗಿದ್ದಾವೆಯೇ ತಕ್ಷಣ ಮಾಹಿತಿ ನೀಡುವಂತೆ ಉನ್ನತ ಪೊಲೀಸ್ ಕಛೇರಿಯಿಂದ ಫರ್ಮಾನು ಹೊರಡಿಸಲಾಯಿತು. ಎಲ್ಲಾ ಕಡೆ ಪೊಲೀಸ್ ವಾಕಿಟಾಕಿಗಳಲಿ ಇದೇ ವಿಷಯವಾಗಿ ಸಂಭಾಷಣೆಗಳು ಶುರುವಾಗಿದ್ದವು.

ಇತ್ತ ಗಂಟೆ ರಾತ್ರಿ ಹನ್ನೆರಡಾಗುತ್ತಾ ಬಂದರು ಘಟನಾ ಸ್ಥಳದ ಇಕ್ಕೆಲಗಳಲ್ಲಿ ಸೇರಿದ ಸಾವಿರಾರು ಜನರು, ಪೊಲೀಸ್ ಪಡೆ, ಮಾಧ್ಯಮದವರು ಯಾರಿಗೆ ಏನು ನಡೆಯುತ್ತಿದೆ ? ಯಾರು ಏನು ಮಾಡಬೇಕು? ಯಾವುದೊಂದು ಇತ್ಯರ್ಥವಾಗದೇ ಪ್ರಶ್ನಾರ್ಥಕ ಚಿಹ್ನೆಗಳೇ ಹೆಚ್ಚಾಗತೊಡಗಿದವು. ಟಿ.ವಿ.ಯಲ್ಲಿ ಮಾತ್ರ ಓತಪ್ರೋತವಾಗಿ ಚರ್ಚೆಗಳು ನಡೆಯುತ್ತಲೇ ಇದ್ದವು. “ಈಚಲಹಳ್ಳಿಯಲ್ಲಿ ಆ ಕರಾಳ ರಾತ್ರಿಯಲ್ಲಿ ಕಂಡ ದೃಶ್ಯವಾದರೂ ಏನು ? ರಸ್ತೆಯ ಮಧ್ಯೆ ಮೂಟೆಯೊಳಗೆ ಹೊರಳಾಡುತ್ತಿರುವುದು ಹೆಣವೋ, ಭೂತವೋ, ಪ್ರೇತವೋ ? ಇದು ನಕ್ಸಲರ ಕೃತ್ಯವೇ ? ಮರಳು ಮಾಫೀಯದ ಕರಾಮತ್ತೆ ? ಮರಗಳ್ಳರ ಮಾಯಾಜಾಲವೇ ? ಏನಿದರ ನಿಜಮರ್ಮ ? ನಿರೀಕ್ಷಿಸಿ ಒಂದು ಸಣ್ಣ ವಿರಾಮದ ನಂತರ” ಎಂದು ತಮ್ಮ ಛಾನಲ್‍ನ ಟಿ.ಆರ್.ಪಿ.ಗಾಗಿ ಘಟನೆಯನ್ನು ಭರ್ಜರಿಯಾಗಿಯೇ ಬಳಸಿಕೊಳ್ಳುತ್ತಿದ್ದರು.
**********
ಜಿಲ್ಲಾ ಕೇಂದ್ರದಿಂದ ಹೊರಟ ರ್ಯಾಪಿಡ್ ಆಕ್ಷ್ಯನ್ ಪೋರ್ಸ್, ಅದರ ಹಿಂದೆ ಜಿಲ್ಲಾ ಶಶಸ್ತ್ರ ಮೀಸಲು ಪಡೆ, ಶ್ವಾನದಳ, ಬಾಂಬ್ ನಿಷ್ಕ್ರಿಯದಳ ವಾಹನಗಳು ಒಂದರ ಹಿಂದೆ ಒಂದು ಸೈರನ್ ಮೊಳಗಿಸುತ್ತಾ ಘಟನಾಸ್ಥಳದ ಕೇಂದ್ರಕ್ಕೆ ತಲುಪಿದವು. ಅವುಗಳ ಹಿಂದೆಯೇ ಎಸ್.ಪಿ.ಯವರ ಕಾರು ಬಂದಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.

ಎಸ್.ಪಿ.ಯವರು ಘಟನಾ ಸ್ಥಳದ ಸುತ್ತ ಬ್ಯಾರಿಕೇಡ್ ಹಾಕಿಸಿ ಯಾರೊಬ್ಬರು ಹತ್ತಿರ ಬರದಂತೆ ಬಂದೋಬಸ್ತ್ ಮಾಡಿಸಿದರು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದೇ ಸ್ವಲ್ಪ ಸಮಯಾವಕಾಶ ನೀಡುವಂತೆ ಮನವಿ ಮಾಡಿದರು. ಕಾರ್ಯಾಚರಣೆಗೆ ಅನುಕೂಲವಾಗಲಿ ಎಂದು ನೆರೆದಿದ್ದ ಜನರನ್ನು ಮತ್ತು ಮಾಧ್ಯಮದವರ್ನು ರಸ್ತೆಯ ಒಂದೇ ಮಗ್ಗಲಿಗೆ ಒತ್ತಾಯಪೂರ್ವಕವಾಗಿ ಕಳುಹಿಸಿದರು.

ಜನ ಪೊಲೀಸ್ ಪಡೆ ಏನು ಮಾಡುತ್ತದೆ ಎಂಬುದನ್ನು ತುದಿಗಾಲಲ್ಲಿ ನಿಂತು, ಸುತ್ತಲ ಮರಗಳನ್ನು ಹತ್ತಿ, ರಸ್ತೆಬದಿಯ ಎತ್ತರದ ಪ್ರದೇಶಗಳಲ್ಲಿ ನಿಂತು ಇಣುಕಿ ಇಣುಕಿ ಕುತೂಹಲದಿಂದ ಗಮನಿಸತೊಡಗಿದರು. ಟಿ.ವಿ ಕ್ಯಾಮರಗಳು ದೂರದಿಂದಲೇ ಕಾರ್ಯಾಚರಣೆಯ ಚಿತ್ರಿಕರಣದಲ್ಲಿ ತೊಡಗಿದ್ದವು. ಊರಿನ ಹತ್ತಾರು ಕಂಟ್ರಿ ನಾಯಿಗಳು ಸ್ಥಳದಲ್ಲಿ ಜಮಾಯಿಸಿ ಆಗಾಗ ಅಲ್ಲಾಡುತ್ತಿದ್ದ ಮೂಟೆಯ ಸಮೀಪ ಹೋಗಲು ಹವಣಿಸುತ್ತಿದ್ದವು, ನಾಯಿಗಳು ಹತ್ತಿರಕ್ಕೆ ಸುಳಿಯದಂತೆ ಕಂಟ್ರೋಲ್ ಮಾಡುವುದೇ ಜನರಿಗೆ, ಪೊಲೀಸರಿಗೆ ಹರಸಾಹಸವಾಗಿತ್ತು.
**********
ಗಾಡವಾದ ನಿದ್ದೆಯಲ್ಲಿದ್ದ ಫೆರ್ನಾಂಡೀಸ್‍ಗೆ ಮಧ್ಯರಾತ್ರಿ ಎಂದಿನ ಅಭ್ಯಾಸದಂತೆ ವಂದಾ ಮಾಡುವ ಸಮಯದಲ್ಲಿ ಅರೆ ಎಚ್ಚರವಾಯಿತು. ತನ್ನ ಮನೆ ಸಮೀಪವೇ ನೆಲಮುಗಿಲು ಒಂದಾಗುವಂತೆ ಅರಚಿಕೊಳ್ಳುತ್ತಿದ್ದ ಸೈರನ್ ಶಬ್ದದಿಂದ ಗಲಿಬಿಲಿಗೊಂಡ ಫೆರ್ನಾಂಡೀಸ್ ನಿದ್ದೆಗಣ್ಣಿನಲ್ಲಿಯೇ ಮನೆಯ ಹೊರಗೆ ಬಂದ. ಹೊರಗಡೆ ಏನು ನೋಡುವುದು ! ತನ್ನ ಮನೆಯ ಎದುರಿಗಿನ ರಸ್ತೆಯಲ್ಲಿ ದೊಡ್ಡ ಜಾತ್ರೆಯೇ ಸೇರಿದೆ. ಕಣ್ಣುಕುಕ್ಕಿಸುವ ಲೈಟುಗಳು! ಸೈರನ್ ಮೊಳಗಿಸುತ್ತಿರುವ ವಾಹನಗಳು!! ಪೊಲೀಸ್ ಪಡೆ! ಜನಸಾಗರ!! ಒಂದು ಕ್ಷಣ ತಬ್ಬಿಬ್ಬಾದ ಫೆರ್ನಾಂಡೀಸ್ ತಾನೇನಾದರೂ ಕನಸಿನಲ್ಲಿದ್ದೇನಾ ಎಂದು ಕಣ್ಣುಜ್ಜಿಕೊಳ್ಳುತ್ತಲೇ ರಸ್ತೆಗಿಳಿದು ಜನರ ನಡುವೆ ತೂರಿಕೊಂಡು ಮುಂದಕ್ಕೆ ಬಂದ.

ಅಷ್ಟೊತ್ತಿಗಾಗಲೇ ರ್ಯಾಪಿಡ್ ಆಕ್ಷನ್ ಪೋರ್ಸ್‍   ನವರು ತಮ್ಮ ತಲೆಗೆ ಹೆಲ್ಮೆಟ್, ಮೈಗೆಲ್ಲಾ ಬುಲೆಟ್‍ಪ್ರೂಫ್ ಜಾಕೆಟ್ ತೊಟ್ಟುಕೊಂಡು ಥೇಟ್ ಅಂತರಿಕ್ಷ ಯಾನಿಗಳ ತರಹ ಮೂಟೆಯೊಳಗಿನ ರಹಸ್ಯ ಬೇಧಿಸಲು ಸಜ್ಜಾಗಿದ್ದರು. ಮೊದಲಿಗೆ ಶ್ವಾನದಳ ಮತ್ತು ಬಾಂಬ್‍ನಿಷ್ಕ್ರಿಯ ದಳದವರು ಪೊಲೀಸ್ ನಾಯಿ ಮತ್ತು ಮೆಟಲ್ ಡಿಟೆಕ್ಟರ್ ಸಾಧನವನ್ನು ಮುಂದೆಬಿಟ್ಟುಕೊಂಡು ಆ ಬಿಳಿ ಮೂಟೆಯತ್ತ ಮೆಲ್ಲನೆ ಹೆಜ್ಜೆ ಹಾಕತೊಡಗಿದರು.

ನಿದ್ರೆಯ ಮಂಪರಿನಲ್ಲಿಯೇ ಜನರ ಮಧ್ಯೆ ತೂರಿಕೊಂಡು ಬ್ಯಾರಿಕೇಡ್ ಸಮೀಪ ಬಂದು ನಿಂತಿದ್ದ ಫೆರ್ನಾಂಡೀಸ್‍ಗೆ ಒಂದೆರಡು ಕ್ಷಣ ಅಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗಲಿಲ್ಲ. ನಿಧಾನಕ್ಕೆ ರಸ್ತೆಮಧ್ಯದಲ್ಲಿ ಬಿದ್ದಿದ್ದ ವಸ್ತು ಅವನಿಗೆ ಸ್ಪಷ್ಟವಾಗಿ ಗೋಚರಿಸಿತು. ಅದೇನಾಯಿತೋ ಫೆರ್ನಾಂಡೀಸ್ ಮೈಮೇಲೆ ದೆವ್ವ ಬಂದವನಂತೆ ಬ್ಯಾರಿಕೇಡ್ ನೂಕಿ ಹಾಕಿದವನೇ ತನ್ನ ಕೊಂಕಣಿ ಭಾಷೆಯಲ್ಲಿ ಏನನ್ನೋ ಜೋರಾಗಿ ಅರಚಿಕೊಳ್ಳುತ್ತಾ ಆ ವಸ್ತುವಿನ ಕಡೆಗೆ ದೌಡಾಯಿಸಿದ.

ಅದಾಗಲೇ ಪೊಲೀಸ್ ನಾಯಿಗಳೆರಡು ಆ ಪ್ಲಾಸ್ಟಿಕ್ ಚೀಲದ ವಾಸನೆ ಗ್ರಹಿಸಿ ಚೀಲಕ್ಕೆ ಕಚಕ್ ಅಂತ ಬಾಯಿ ಹಾಕಿದ್ದವು. ಅದೇ ಕ್ಷಣದಲ್ಲಿ ಫೆರ್ನಾಂಡೀಸ್ ನಾಯಿಗಳಿಗೆ ಹಿಡಿಶಾಪ ಹಾಕುತ್ತಾ ಚೀಲದ ಮತ್ತೊಂದು ತುದಿಯನ್ನು ಹಿಡಿದು ಎಳೆಯತೊಡಗಿದ. ಒಂದು ಕಡೆ ಪೊಲೀಸ್ ನಾಯಿಗಳು ಮತ್ತೊಂದು ಕಡೆ ಫೆರ್ನಾಂಡೀಸ್ ಮೂಟೆಯನ್ನು ಜಗ್ಗಾಡತೊಡಗಿದರು. ಸೈರನ್ ಮೊರೆತ, ಜನರ ಮಾತಿನ ಗದ್ದಲದ ನಡುವೆ ಫೆರ್ನಾಂಡೀಸ್ ಏನು ಹೇಳುತ್ತಿದ್ದಾನೆ ಎಂದು ಯಾರಿಗೂ ಕೇಳಿಸುತ್ತಿರಲಿಲ್ಲ. ಇನ್ನೇನು ರ್ಯಾಪಿಡ್ ಆಕ್ಷನ್ ಪೋರ್ಸ್‍ನವರು ಹೋಗಿ ಫೆರ್ನಾಂಡೀಸ್‍ನನ್ನು ಹಿಡಿದುಕೊಳ್ಳಬೇಕು ಅನ್ನುವಷ್ಟರಲಿ ಎಳೆಡಾಟದ ಭರಾಟೆಗೆ ಚೀಲದ ಬಾಯಿ ಪಟಾರಂತ ಕಿತ್ತುಬಂತು. ಚೀಲದೊಳಗಿನಿಂದ ಬಿಳೀ ಹಂದಿಮರಿಯೊಂದು ಜನರು ನಿಂತಿದ್ದ ದಿಕ್ಕಿನತ್ತಲೇ ನುಗ್ಗಿ ಬಂದಿತ್ತು. ಬಿಳಿಹಂದಿ ರೂಪದಲ್ಲಿ ದೆವ್ವವೇ ನಮ್ಮತ್ತ ಬರುತ್ತಿದೆ ಎಂದು ಭ್ರಮಿಸಿದ ಜನ ದಿಕ್ಕಾಪಾಲಾಗಿ ಓಡತೊಡಗಿದರು.

ಅದುವರೆಗೆ ಒತ್ತಾಯಪೂರ್ವಕ ನಿಯಂತ್ರಣದಲ್ಲಿದ್ದ ಕಂಟ್ರಿ ನಾಯಿಗಳು ಹಂದಿಮರಿಯನ್ನು ಕಂಡದ್ದೇ ತಡ ಒಂದೇ ಉಸಿರಿಗೆ ಅದನ್ನು ಬೆರಸಿಕೊಂಡು ಹೋದವು. ಮುಂದೆ ಹಂದಿಮರಿ ಅದರ ಹಿಂದೆ ಹತ್ತಾರು ಕಂಟ್ರಿ ನಾಯಿಗಳು ಜನರ ಕಾಲ್ಕೆಳಗೆ ನುಗ್ಗಿಹೋದವು. ಪೊಲೀಸರು ಹಂದಿಮರಿ ಓಡಿದ ದಿಕ್ಕಿನತ್ತ ದಾವಿಸಿದರು. ನೆರೆದಿದ್ದ ಜನ ಭಯಭೀತರಾದರು. ಪರಿಣಾಮ ನೂಕು ನುಗ್ಗಲಿನಲ್ಲಿ ಅನೇಕರು ಕೆಳಗೆ ಬಿದ್ದರು. ಟಿ.ವಿ.ಕ್ಯಾಮರಗಳು ನೆಲಕ್ಕುರುಳಿದವು. ವಾತಾವರಣದಲ್ಲಿ ಇದ್ದಕ್ಕಿದಂತೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಹಿಂದೆ ಇದ್ದ ಜನರಿಗೆ ಅಲ್ಲಿ ಏನು ನಡೆಯಿತು ಎಂದು ತಿಳಿಯದೇ ಮನಬಂದ ಕಡೆಗೆ ಓಡತೊಡಗಿದರು. ದೃಶ್ಯವನ್ನು ಕುತೂಹಲದಿಂದ ವಿಡಿಯೋ ಮಾಡುತ್ತಿದ್ದವರ ಅನೇಕ ಮೊಬೈಲ್‍ಗಳು ಕೈಜಾರಿ ಬಿದ್ದವು. ಚಪ್ಪಲಿಗಳು ಹರಿದವು. ಮರದ ಮೇಲೆ ಕುಳಿತು ಘಟನೆಯನ್ನು ವೀಕ್ಷಿಸುತ್ತಿದ್ದವರು ಅಲ್ಲಿಂದಲೇ ಹಾರಿ ಕೈಕಾಲಿಗೆ ಗಾಯ ಮಾಡಿಕೊಂಡರು. ಕ್ಷಣಾರ್ಧದಲ್ಲಿ ಅಲ್ಲಿ ನೆರೆದಿದ್ದ ಜನಜಂಗುಳಿ ಚದುರಿ ಹೋಗಿತ್ತು. ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿತು.

ಅತ್ತ ಟಿ.ವಿ.ಕ್ಯಾಮರಗಳು ಕೆಳಗೆ ಬಿದ್ದು ಪುಡಿಯಾಗಿದ್ದರಿಂದ ಟಿ.ವಿ.ಗಳಲ್ಲಿ ಬರುತ್ತಿದ್ದ ನೇರ ಪ್ರಸಾರ ನಿಂತು ಹೋಯಿತು. ಅತ್ತಲಿಂದ ಆ್ಯಂಕರ್ ಗಳು ಹಲೋ, ಹಲೋ…..ನನ್ನ ಧ್ವನಿ ಕೇಳಿಸುತ್ತಿದೆಯಾ ? ಅಲ್ಲಿ ಏನು ನಡೆಯುತ್ತಿದೆ ? ಮೂಟೆಯೊಳಗಿನ ರಹಸ್ಯ ತಿಳಿಯಿತೇ ? ಹಲೋ, ಹಲೋ…ಎಂದು ಕೇಳುತ್ತಲೇ ಇದ್ದರು. ಆದರೆ ತಮ್ಮ ವರದಿಗಾರರಿಂದ ಯಾವ ಪ್ರತಿಕ್ರಿಯೆಯೂ ಬಾರದಿದ್ದರಿಂದ “ತಾಂತ್ರಿಕ ಕಾರಣದಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ” ಎಂದು ತೇಪೆ ಹಾಕುತ್ತಾ ಚರ್ಚೆಯನ್ನು ಮುಂದುವರಿಸಿದ್ದರು.
**********
ಆಗಿದ್ದು ಇಷ್ಟೇ.

ಈಚಲಹಳ್ಳಿಯಲ್ಲಿರುವ ಏಕೈಕ ಕ್ರಿಶ್ಚಿಯನ್ ಕುಟುಂಬದ ಫೆರ್ನಾಂಡೀಸ್ ತನ್ನ ಮನೆಗೆ ಹೊಂದಿಕೊಂಡಂತೆ ಹಂದಿ ಫಾರಂ ಮಾಡಿಕೊಂಡಿದ್ದ. ಫೆರ್ನಾಂಡೀಸ್ ಮನೆ ಮುಖ್ಯ ರಸ್ತೆಯ ಅಂಚಿನಲ್ಲಿಯೇ ಇತ್ತು. ಆವತ್ತು ಶುಕ್ರವಾರ ಪಡುಗೆರೆ ಸಂತೆಯಿಂದ ತನ್ನ ಫಾರಂನಲ್ಲಿ ಸಾಕಲೆಂದು ಬಿಳಿಬಣ್ಣದ ಹಂದಿಮರಿಯೊಂದನ್ನು ಕೊಂಡಿದ್ದ. ಹಂದಿಮರಿಯ ಬಾಯಿ ಕಾಲುಗಳನ್ನು ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ತನ್ನ ಹಳೇ ಬಜಾಜ್ ಸ್ಕೂಟಿಯಲ್ಲಿಟ್ಟುಕೊಂಡು ಮನೆಗೆ ತಂದಿದ್ದ. ಫೆರ್ನಾಂಡೀಸ್ ಹೆಂಡತಿ ಐವಿನ್ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಳು. ಶುಕ್ರವಾರ ಸಂತೆಯ ದಿನವಾಗಿದ್ದರಿಂದ ಸ್ವಲ್ಪ ಹೆಚ್ಚಾಗಿಯೇ ಸುರಪಾನ ಮಾಡಿದ್ದ ಫೆರ್ನಾಂಡೀಸ್‍ಗೆ ಹಂದಿಮರಿಯನ್ನು ಬಿಚ್ಚಿ ಗೂಡಿಗೆ ಕೂಡಿಹಾಕುವಷ್ಟು ಸೈರಣೆ ಇರಲಿಲ್ಲ. ಬೆಳಿಗ್ಗೆ ಗೂಡಿಗೆ ಹಾಕಿದರಾಯಿತು, ಇಲ್ಲಿ ಬಿದ್ದಿರಲಿ ಎಂದು ಮನೆಪಕ್ಕದ ಸೌದೆ ಕೊಟ್ಟಿಗೆಯಲ್ಲಿ ಚೀಲವನ್ನು ಇಳಿಸಿ, ಸೀದಾ ಹೋಗಿ ಮನೆಯೊಳಗೆ ಮಲಗಿದ್ದ.

ನಶೆಯ ಮತ್ತಿನಲ್ಲಿದ್ದ ಫೆರ್ನಾಂಡೀಸ್ ಲೋಕದ ಪರಿವೆಯೇ ಇಲ್ಲದಂತೆ ಗಾಡ ನಿದ್ದೆಗೆ ಜಾರಿದ್ದ. ಇತ್ತ ಬೆಳಿಗ್ಗೆಯಿಂದ ಹೊಟ್ಟೆಗೆ ಹಿಟ್ಟಿಲ್ಲದೇ ಸಂಕಟ ಪಡುತ್ತಿದ್ದ ಹಂದಿಮರಿ ಮೂಟೆಯೊಳಗಿಂದಲೇ ಒದ್ದಾಡುತ್ತಾ ಒದ್ದಾಡುತ್ತಾ ರಸ್ತೆಯಂಚಿನಲ್ಲಿದ್ದ ಕೊಟ್ಟಿಗೆಯಿಂದ ಮಗುಚಿ ಕೆಳಗೆ ಬಿದ್ದಿತ್ತು. ಒದ್ದಾಟದಲ್ಲಿ ಕಾಲಿಗೆ ಕಟ್ಟಿದ್ದ ಹಗ್ಗ ಸಡಿಲಗೊಂಡು ಬಿಚ್ಚಿಹೋಗಿತ್ತು. ಆದರೆ ಬಾಯಿಗೆ ಕಟ್ಟಿದ ಹಗ್ಗ ಬಿಗಿಯಾಗಿಯೇ ಇತ್ತು. ತೆವಳುತ್ತಾ ತೆವಳುತ್ತಾ ಹಂದಿಮರಿ ಚೀಲ ಸಮೇತ ರಸ್ತೆಮಧ್ಯಕ್ಕೆ ಬಂದಿತ್ತು. ಪಡುಗೆರೆಯಿಂದ ಕಾಫಿ ಕ್ಯೂರಿಂಗ್ ಡ್ಯೂಟಿ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ಸುಬ್ರಮಣ್ಯನಿಗೆ ಆ ಮೂಟೆ ಅಡ್ಡಸಿಕ್ಕಿ ಇಷ್ಟೆಲ್ಲಾ ರಾದ್ಧಾಂತ ಸೃಷ್ಟಿಸಿತ್ತು !
************

ಮರುದಿನದ ದಿನಪತ್ರಿಕೆಗಳ ಮುಖಪುಟದಲ್ಲಿ ಮೂಟೆಯೊಳಗಿನ ಪ್ರೇತದ ಸುದ್ದಿ ಪ್ರಕಟವಾಗಿಯೇಬಿಟ್ಟಿತ್ತು. ಪ್ರಶ್ನಾರ್ಥಕ??? ಆಶ್ಚರ್ಯಕರ!!! ಚಿಹ್ನೆಗಳ ಸಮೇತ !

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ