October 5, 2024

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟ ಹಾಸನ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದೆ.

ಹಾಸನ ಚಲೋ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ರಾಜ್ಯದ ಹಲವೆಡೆಗಳಿಂದ 113 ಸಂಘಟನೆಗಳ ಸುಮಾರು 10 ಸಾವಿರ ಪ್ರತಿನಿಧಿಗಳು ಭಾಗವಹಿದ್ದರು. ಹಾಸನದ ಹೇಮಾವತಿ ಪ್ರತಿಮೆಯ ಬಳಿಯಿಂದ ಮೆರವಣಿಗೆ ಆರಂಭವಾಗಿ, ಜಿಲ್ಲಾಧಿಕಾರಿ ಕಚೇರಿ ಬಳಿಯ ಹೊಸ ಬಸ್‌ನಿಲ್ದಾಣ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಿದರು. ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಲೇಖಕಿಯರಾದ ಬಾನು ಮುಷ್ತಾಕ್‌, ರೂಪ ಹಾಸನ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಮಹಿಳೆಯರು, ರೈತರು, ವಿದ್ಯಾರ್ಥಿಗಳು, ಲಿಂಗ ಅಲ್ಪಸಂಖ್ಯಾತರು, ಸಾಹಿತಿಗಳು, ಬುದ್ಧಿಜೀವಿಗಳು, ಕಲಾವಿದರು ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಹಲವಾರು ಸಂಘಟನೆಗಳು ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟನೆಗೆ ಆಗಮಿಸಿದ್ದರು.

ಪ್ರಜ್ವಲ್‌ ಬಂಧನ ಹಾಗೂ ಪೆನ್‌ಡ್ರೈವ್‌ ಹಂಚಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಹಾಸನ ಚಲೋ ನಡೆಸಲು ನಿರ್ಧರಿಸಲಾಗಿದೆ’ ಎಂದು ಸಂಘಟನೆಗಳ ಪ್ರಮುಖರು ತಿಳಿಸಿದರು.

ಸಂಘಟನೆಗಳಿಗೆ ತಮ್ಮದೇ ಬ್ಯಾನರ್‌, ಬಾವುಟ ತರದಂತೆ ಸೂಚಿಸಲಾಗಿದೆ. ಒಕ್ಕೂಟವೇ ಬಾವುಟ, ಕರಪತ್ರ ಪತ್ರ ಸಿದ್ಧ ಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ಪೋಸ್ಟರ್‌ ಅಭಿಯಾನವೂ ನಡೆದಿದೆ.

ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ ಹೋರಾಟಗಾರ ಎಸ್.ಆರ್ ಹಿರೇಮಠ ಮಾತನಾಡಿ. “ಹಾಸನದ ಈ ಹೋರಾಟ ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಮಹಿಳೆಯರ ಘನತೆ ಕಡೆಗೆ ಗೌರವದ ಕಡೆಗಿನ ನಡಿಗೆಯಾಗಿದೆ” ಎಂದರು. “ದೇವೇಗೌಡರ ಕುಟುಂಬದ ಪಾಳೆಗಾರಿಕೆ ಮನಸ್ಥಿತಿಯ ವಿರುದ್ಧದ ಹೋರಾಟ ಇದು. ಅವರ ದರ್ಪದಿಂದ ಆಗುವ ಇಂತಹ ಕೃತ್ಯ ಕೊನೆಗಾಣಿಸೊ ಹೋರಾಟ ಇದಾಗಲಿ. ಇದಕ್ಕೆ ನ್ಯಾಯ ಪಡೆಯಲು ನಿರಂತರ ಹೋರಾಟ ಬೇಕಿದೆ. ಈ ಹೋರಾಟದಲ್ಲಿ ನಾವು ನಿಮ್ಮೊಟ್ಟಿಗೆ ಇದ್ದೇವೆ. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪಾಳೆಗಾರಿಕೆ ವಿರುದ್ಧ ಹೋರಾಟ ನಡೆಯಿತು. ಈಗ ಹಾಸನದಲ್ಲಿ ಈ ದಬ್ಬಾಳಿಕೆ ಕೊನೆಗಾಣಿಸಲು ಹೋರಾಟ ಆರಂಭ ಆಗಿದೆ. ನೊಂದವರು ಧೈರ್ಯದಿಂದ ಹೊರ ಬಂದು ಮಾತನಾಡುವಂತೆ ಆಗಲಿ. ಸಿಎಂ, ಡಿಸಿಎಂ, ಗೃಹ ಸಚಿವರೇ ಈಗಲಾದರೂ ಹಾಸನಕ್ಕೆ ಬನ್ನಿ” ಎಂದು ಆಗ್ರಹಿಸಿದರು.

“ನಾವೆಲ್ಲಾ ಇಂದು‌ ಇಲ್ಲಿ ಸೇರಿರುವದು ಲೈಂಗಿಕ ದಬ್ಬಾಳಿಕೆಯನ್ನು ಖಂಡಿಸಿ, ನೊಂದ ಮಹಿಳೆಯರಿಗೆ ಧೈರ್ಯ ಕೊಡುವುದಕ್ಕೆ ಅಂತ ಬಂದಿದ್ದೇವೆ. ಹಣಬಲ, ಅಧಿಕಾರ ಮದದಿಂದ ನಡೆಸಿರುವ ದೌರ್ಜನ್ಯ ಇನ್ಮುಂದೆ ನಡೆಯೋದಿಲ್ಲ. ನಾನು ದೂರದ ಉತ್ತರಪ್ರದೇಶದಿಂದ ಬಂದಿದ್ದೇನೆ. ಈ ದೌರ್ಜನ್ಯದ ವಿರುದ್ಧ ದೇಶದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂತಹ ಪ್ರಕರಣಗಳ ಆರೋಪಿಗಳಿಗೆ ರಕ್ಷಣೆ ನೀಡುತ್ತಿರೋ ಕೇಂದ್ರದ ಸರ್ಕಾರವನ್ನು ಕಿತ್ತೊಗೆಯುತ್ತೇವೆ” ಎಂದು ಹೋರಾಟಗಾರ್ತಿ ಸುಭಾಷಿಣಿ ಅಲಿ ಕಿಡಿ ಕಾರಿದರು.

“ಸ್ವಾತಂತ್ರ್ಯ ಸಿಕ್ಕಿ ಹಲವು ವರ್ಷಗಳಾದರೂ ಮಹಿಳೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಲೇ ಬಂದಿದೆ. ಪ್ರಜ್ವಲ್ ರೇವಣ್ಣ, ರೇವಣ್ಣ ಸೇರಿ ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರನ್ನೂ ಬಂಧಿಸಬೇಕು. ಅವರಿಗೆ ಯಾವುದೇ ಕಾರಣಕ್ಕೂ ಬೇಲ್ ಕೊಡಬಾರದು. ಉಳ್ಳವರು ಅಂತ ಅವರನ್ನು ಸರ್ಕಾರ ಯಾವುದೇ ಕಾರಣಕ್ಕೂ ರಕ್ಷಣೆ ಮಾಡೋದಕ್ಕೆ ಮುಂದಾಗಬಾರದು. ಅಸಹಾಯಕ ಮಹಿಳೆಯರ ಪರ‌ವಾಗಿ ನಿಲ್ಲಲು ನಾವು ಇಲ್ಲಿಗೆ ಬಂದಿದ್ದೇವೆ. ಚುನಾವಣೆಯಲ್ಲಿ ಮತ ಕೊಟ್ಟು ಜನಸೇವೆಯನ್ನು ಮಾಡೋದಕ್ಕೆ ಕಳುಹಿಸಿದ್ದೇವೆ. ಆದ್ರೆ ನೀವು ಮಾಡಿದ್ದು ಏನು? ಅಧಿಕಾರಿಗಳನ್ನೂ ಬಿಡಲಿಲ್ಲ, ಕಾರ್ಯಕರ್ತರನ್ನೂ ಬಿಡಲಿಲ್ಲ, ಸಹಾಯ ಕೇಳಿ ಬಂದವರನ್ನೂ ಬಿಡಲಿಲ್ಲ. ಕೊನೆಗೆ ನಿಮ್ಮ ತಾಯಿಯಷ್ಟು ವಯಸ್ಸಾದವರನ್ನೂ ಬಿಡಲಿಲ್ಲ” ಎಂದು   ಸುಭಾಷಿಣಿ ಗುಡುಗಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ