October 5, 2024

ಜಗತ್ತಿಗೆ ಶಾಂತಿ, ಅಹಿಂಸೆ, ಜ್ಞಾನದ ಸಂದೇಶ ಸಾರಿರುವ ಗೌತಮ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ದಿನದಂದು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎಂದು ಜಿಲ್ಲಾ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಜಗತ್ತಿಗೆ ಶಾಂತಿ ಹಾಗೂ ಜ್ಞಾನದ ಸಂದೇಶ ಸಾರಿರುವ ಬುದ್ಧನ ತಾಯ್ನೆಲ ಭಾರತವಾಗಿದ್ದರೂ ಅವರ ಸಂದೇಶಗಳು ಇಡೀ ಜಗತ್ತಿನಾದ್ಯಂತ ಪಸರಿಸಿವೆ. ಜಗತ್ತಿನ ಹಲವಾರು ದೇಶಗಳ ರಾಷ್ಟ್ರೀಯ ಧರ್ಮವೂ ಬೌದ್ಧ ಧರ್ಮವಾಗಿದೆ. ಮೌಢ್ಯ, ಜಾತಿ, ತಾರತಮ್ಯ, ಅಸಮಾನತೆಯಂತಹ ಪಿಡುಗುಗಳಿಲ್ಲದ ಈ ಧರ್ಮದ ಅನುಯಾಯಿಗಳು ಜಗತ್ತಿನ ಎಲ್ಲ ದೇಶಗಳಲ್ಲೂ ಇದ್ದು, ಅತ್ಯಂತ ವೇಗವಾಗಿ ಪ್ರಸಕ್ತ ಜಗತ್ತಿನಾದ್ಯಂತ ಬೌದ್ಧ ಧರ್ಮ ವ್ಯಾಪಸುತ್ತಿದೆ.

ನಮ್ಮ ದೇಶದಲ್ಲಿ ಪ್ರತೀ ವರ್ಷ ಲಕ್ಷಾಂತರ ಮಂದಿ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದು, ದೇಶದಲ್ಲಿ ಕೋಟ್ಯಂತರ ಮಂದಿ ಬೌದ್ಧ ಧರ್ಮದ ಅನುಯಾಯಿಗಳಿದ್ದಾರೆ. ಬುದ್ಧನ ಅನುಯಾಯಿಗಳು ಬುದ್ಧನ ಸಂದೇಶಗಳನ್ನು ಪಾಲಿಸುತ್ತ ಈ ಧರ್ಮದ ಸಂದೇಶ, ಮಹತ್ವವನ್ನು ಇಂದಿಗೂ ಎಲ್ಲೆಡೆ ಸಾರುತ್ತಿದ್ದಾರೆ. ಇಂತಹ ಧರ್ಮ ಉದಯಕ್ಕೆ ಕಾರಣಕರ್ತರಾದ ಭಗವಾನ್ ಬುದ್ಧನ ಜನ್ಮದಿನವನ್ನು ಎಲ್ಲೆಡೆ ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಗೌತಮ ಬುದ್ಧನ ಜನ್ಮದಿನಕ್ಕೆ ವಿಶೇಷವಾದ ಗೌರವ ಇದೆ. ವಿಶ್ವ ಜ್ಞಾನಿಯಾಗಿರುವ, ಭಾರತದ ಸಂವಿಧಾನದ ಶಿಲ್ಪಿಯಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳ ಏಳಿಗೆ ಆಗುವುದಿದ್ದರೇ ಅದು ಬೌದ್ಧ ಧರ್ಮದಿಂದ ಮಾತ್ರ ಎಂಬ ಸತ್ಯವನ್ನು ಜಗತ್ತಿಗೆ ಸಾರುವ ಸಲುವಾಗಿ ಹಿಂದುವಾಗಿ ಹುಟ್ಟಿದ್ದೇನೆ, ಹಿಂದುವಾಗಿ ಸಾಯುವುದಿಲ್ಲ ಎಂದು ಹೇಳಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಬೌದ್ಧ ಧರ್ಮದ ಮಹತ್ವನ್ನು ತಿಳಿಸಿದ್ದಾರೆ. ಅಂಬೇಡ್ಕರ್ ಬೌದ್ಧಧರ್ಮಕ್ಕೆ ಮತಾಂತರಗೊಂಡ ಬಳಿಕ ದೇಶದಲ್ಲಿ ಬೌದ್ಧ ಧರ್ಮವನ್ನು ಅನುಸರಿಸುವವರ ಸಂಖ್ಯೆಯೂ ಪ್ರತೀ ವರ್ಷ ಹೆಚ್ಚುತ್ತಲೇ ಇದ್ದು, ಬೌದ್ಧ ಧರ್ಮ ಮತ್ತು ಬುದ್ಧನ ಸಂದೇಶಗಳು ಸದ್ಯ ಪ್ರತೀ ಮನೆಮನೆಗಳಿಗೂ ತಲುಪುತ್ತಿದೆ ಎಂದಿರುವ ಅವರು, ಬುದ್ಧ ಪೂರ್ಣಿಮೆಯನ್ನು ಬೌದ್ಧ ಧರ್ಮದ ಅನುಯಾಯಿಗಳು ಎಲ್ಲೆಡೆ ಆಚರಣೆ ಮಾಡುತ್ತಿದ್ದರೂ ಸರಕಾರಗಳು ಬುದ್ಧ ಪೂರ್ಣಿಮೆಯ ದಿನಕ್ಕೆ ವಿಶೇಷ ಗೌರವ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮನುಷ್ಯನ ಬದುಕು, ವ್ಯಕ್ತಿತ್ವದ ದಿಕ್ಕು ಬದಲಾಯಿಸುವ ಶಕ್ತಿ ಬುದ್ಧನ ಸಂದೇಶಗಳಲ್ಲಿದ್ದು, ಈ ಸಂದೇಶಗಳು ಪ್ರತಿಯೊಬ್ಬರ ಮನೆ, ಮನಗಳಿಗೂ ತಲಪುವಂತಾಗಬೇಕು.

ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಬುದ್ಧ ಪೂರ್ಣಿಮೆಯ ದಿನದಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು. ಈ ಮೂಲಕ ಬುದ್ಧ ಹುಟ್ಟಿದ ನಾಡಿನಲ್ಲಿ ಬೌದ್ಧ ಧರ್ಮ ಹಾಗೂ ಬುದ್ಧನ ಸಂದೇಶಗಳಿಗೆ ಸರಕಾರಗಳು ವಿಶೇಷ ಗೌರವ, ಮಹತ್ವ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರಾಜ್ಯ ಹಾಗೂ ದೇಶದಲ್ಲಿ ಸಮಾಜದ ಸುಧಾರಣೆಗೆ ಸಾವಿರಾರು ಧಾರ್ಮಿಕ ಸಂತರು ತಮ್ಮ ಸಂದೇಶ, ಹೋರಾಟಗಳ ಮೂಲಕ ಕೊಡುಗೆ ನೀಡಿದ್ದಾರೆ. ಇಂತಹ ಸಮಾಜ ಸುಧಾರಕರ ಸಂದೇಶಗಳಿಂದಾಗಿ ತಾರತಮ್ಯ, ಸಾಮಾಜಿಕ ಅಸಮಾನತೆಯಿಂದ ಕೂಡಿದ್ದ ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇಂತಹ ಸಮಾಜ ಸುಧಾರಕರಿಗೆ ಸರಕಾರಗಳು ಗೌರವ ಕೊಡುವ ಮತ್ತು ಅವರ ಸಂದೇಶಗಳನ್ನು ಸಾರುವ ನಿಟ್ಟಿನಲ್ಲಿ ಅವರ ಜನ್ಮದಿನ, ಜಯಂತಿಯ ದಿನದಂದು ಸರಕಾರಿ ರಜೆ ಘೋಷಣೆ ಮಾಡಿ ಗೌರವ ನೀಡಲಾಗುತ್ತಿದೆ. ನಮ್ಮ ದೇಶದ ಸಮಾಜ ಸುಧಾರಣೆಯಲ್ಲಿ ಬುದ್ಧ ಹಾಗೂ ಬೌದ್ಧಧರ್ಮದ ಕೊಡುಗೆಗೆ ಅನನ್ಯವಾದದ್ದು, ಈ ಹಿನ್ನೆಲೆಯಲ್ಲಿ ಗೌತಮ ಬುದ್ಧ ಅವರ ಜನ್ಮದಿನವಾದ ಬುದ್ಧ ಪೂರ್ಣಿಮೆಯ ದಿನದಂದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಸರಕಾರಿ ರಜೆ ಘೋಷಣೆ ಮಾಡುವ ಮೂಲಕ ಬುದ್ಧ ಹಾಗೂ ಬೌದ್ಧ ಧರ್ಮದ ಸಂದೇಶಗಳನ್ನು ಎಲ್ಲೆಡೆ ಸಾರಲು ಕ್ರಮಕೈಗೊಳ್ಳಬೇಕು ಎಂದು ಎಂ.ಎಸ್.ಅನಂತ್ ಆಗ್ರಹಿಸಿದ್ದಾರೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ