October 5, 2024

ಹಬ್ಬಗಳ ರಾಜ ಯುಗಾದಿ. ಸಮಚಿತ್ತದ ಬದುಕನ್ನು ಕಲಿಸುವ ಹಬ್ಬ ಯುಗಾದಿ ಎಂದು ಕನ್ನಡ ಶಿಕ್ಷಕಿ ಕೆ.ಎಂ.ಹೇಮಮಾಲಿನಿ ಓಂಕಾರಪ್ಪ ನುಡಿದರು.

ಶ್ರೀಪಾರ್ವತಿ ಮಹಿಳಾ ಮಂಡಳಿ ಚಿಕ್ಕಮಗಳೂರು ನಗರದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ಯುಗಾದಿ ಸಂಭ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.

ಹಿಂದೂ ಪಂಚಾಂಗದ ಪ್ರಕಾರ ಹೊಸವರ್ಷದ ಹೊಸದಿನವೇ ಯುಗಾದಿ. ಬ್ರಹ್ಮಾಂಡ ಸೃಷ್ಟಿಯ ದಿನವಿದು. ಪ್ರಕೃತಿಯಲ್ಲಿ ಹಚ್ಚಹಸಿರು ಚಿಗುರು ಕಾಣುವ ಸಂದರ್ಭ ಇದು ಸಂಮೃದ್ಧಿಯ ಸಂಕೇತ. ಕಷ್ಟ ಬಂದಾಗ ಹಿಗ್ಗದೆ, ಸುಖ ಬಂದಾಗ ಕುಗ್ಗದೆ ಸಮಚಿತ್ತದಿಂದ ಬದುಕನ್ನು ಮುನ್ನಡೆಸುವ ಸಂದೇಶ ಇದರಲ್ಲಿದೆ.

ಸೂರ್ಯೋದಯದಲ್ಲಿ ಅರಿಶಿನ ಬೇವಿನೊಂದಿಗೆ ಎಣ್ಣೆ ಅಭ್ಯಂಜನ ಚರ್ಮಕಾಯಿಲೆ ಹಾಗೂ ಉಷ್ಣಸಂಬಂಧಿಗಳ ತೊಂದರೆಗಳ ನಿವಾರಣೆಗೆ ಸಹಕಾರಿ. ಮಾವು ಬೇವಿನ ತೋರಣ ಬೇಸಿಗೆಯ ತಾಪ ತಗ್ಗಿಸಿ, ತಂಪು ಶುದ್ಧಗಾಳಿ ಮನೆಯೊಳಗೆ ಸೂಸುವ ಸಂದರ್ಭ. ಹೊಸಬಟ್ಟೆ ಹಾಕಿಕೊಳ್ಳುವುದರಿಂದ ಸಂಭ್ರಮ ಸಂತೋಷದೊಂದಿಗೆ ಹೊಸತನದ ಭಾವ ಮೂಡುತ್ತದೆ. ಬೇವು ಬೆಲ್ಲ ಸೇವನೆ ಬದುಕಿನಲ್ಲಿ ಕಷ್ಟಸುಖಗಳ ಸಮಿಶ್ರಣ ಸಂಕೇತಿಸುತ್ತದೆ ಎಂದರು.

ಯುಗಾದಿಯ ಹೋಳಿಗೆ ಊಟ ನೆಂಟರಿಷ್ಟರು ಬಂಧು ಬಳಗದ ಕೂಡು ಕುಟುಂಬದ ಬೆಸುಗೆ. ಇಷ್ಟ ದೇವರ ಪೂಜೆ ಪರಂಪರೆಯ ಮುಂದುವರೆಕೆ. ಸಂಜೆ ಚಂದ್ರದರ್ಶನ, ಪಂಚಾಂಗಶ್ರವಣ ಯುಗಾದಿಯ ಪ್ರಮುಖ ಅಂಶ. ಬೇವು ಬೆಲ್ಲ ಹಂಚಿಕೆ ಸೌಹಾರ್ದತೆಯ ಪ್ರತೀಕ. ಹಿರಿಯರ ಕಾಲಿಗೆ ನಮಸ್ಕರಿಸುವುದರಿಂದ ನಮ್ಮ ಶರೀರಕ್ಕೂ ಸ್ವಲ್ಪ ವ್ಯಾಯಾಮವಾಗುತ್ತದೆ. ರಾಶಿಬಲ ಮಳೆ ಬೆಳೆ ವರ್ಷದ ಆಗುಹೋಗುಗಳನ್ನು ಅರಿತು, ಕೃಷಿ ಚಟುವಟಿಕೆ ಸ್ವರೂಪ ನಿರ್ಧಾರಕ್ಕೆ ಪಂಚಾಂಗ ಶ್ರವಣ ಸಹಕಾರಿ. ಕೆಲವು ಕಡೆ ಬಂಗಾರ ಧರಿಸಿ ಹೊಲ ಗದ್ದೆಗಳಲ್ಲಿ ಗೆರೆಹೊಡೆದು ಬೇಸಾಯ ಸಾಂಕೇತಿಕವಾಗಿ ಪ್ರಾರಂಭಿಸುವ ಪದ್ಧತಿಯೂ ಇದೆ ಎಂದರು.

ಬೇವು ಸಹಜವಾಗಿ ಪ್ರಕೃತಿಯಲ್ಲಿ ಸಿಗುತ್ತದೆ. ಬೆಲ್ಲ ನಾವು ಕಬ್ಬಿನಹಾಲಿನಿಂದ ತಯಾರಿಸಿಕೊಳ್ಳಬೇಕು ಅಂದರೆ ಕಷ್ಟ ಸಹಜವಾಗಿ ಬರುತ್ತದೆ, ಸುಖವನ್ನು ನಾವು ಸಂಪಾದಿಸಿಕೊಳ್ಳಬೇಕು. ಪಿತ್ತಕೋಶ ಸಂರಕ್ಷಣೆಗೆ ಬೇವು ಸಹಕಾರಿಯಾದರೆ, ದೇಹದ ಉಷ್ಣತೆ ಸಮತೋಲನಕ್ಕೆ ಬೆಲ್ಲ ಅನುಕೂಲಕರ. ಇವೆರಡನ್ನೂ ಒಟ್ಟಿಗೆ ತಿನ್ನುವುದರಿಂದ ದೇವವು ವಜ್ರಕಾಯವಾಗುತ್ತದೆ ಎಂಬ ಪ್ರತೀತಿ. ದೇಹ ಮತ್ತು ಮನಸ್ಸು ಸುಸ್ಥಿತಿಯಲ್ಲಿದ್ದರೆ ನಾವು ಒಳ್ಳೆಯ ಕೆಲಸ ಕಾರ್ಯ ಮಾಡಲು ಅನುಕೂಲವಾಗುತ್ತದೆ ಎಂದು ಹೇಮಮಾಲಿನಿ ನುಡಿದರು.

ಯುಗಾದಿ ಸೇರಿದಂತೆ ನಮ್ಮ ಎಲ್ಲ ಹಬ್ಬ ಹರಿದಿನಗಳು ಪರಿಸರದೊಂದಿಗೆ ತಳುಕು ಹಾಕಿಕೊಂಡಿದೆ. ವೈಜ್ಞಾನಿಕ, ವೈಚಾರಿಕ ಸಂಗತಿಗಳನ್ನು ಅನುಸರಿಸಿಯೆ ಸನಾತನ ಪದ್ಧತಿಯಲ್ಲಿ ಹಬ್ಬ ಹರಿದಿನಗಳನ್ನು ಜೋಡಿಸಿದ್ದಾರೆ. ಇದನ್ನು ಮೆಲುಕು ಹಾಕುವ ಪಾರ್ವತಿ ಮಹಿಳಾಮಂಡಳಿ ಕಾರ್ಯ ಸಂಸ್ಕøತಿಯನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ವಪೂರ್ಣವಾದದ್ದು ಎಂದ ಹೇಮಮಾಲಿನಿ, ಇರುವುದೊಂದೇ ಭೂಮಿಯನ್ನು ಸುರಕ್ಷಿತವಾಗಿ ಕಾಪಿಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಶ್ರೀಪಾರ್ವತಿ ಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಋತುಗಳಲ್ಲಿ ವಸಂತ ಋತು ಶ್ರೇಷ್ಠ. ಹಿಂದೂಗಳ ಹಬ್ಬಗಳಲ್ಲಿ ಯುಗಾದಿಹಬ್ಬ ಶ್ರೇಷ್ಠ. ಕ್ರೋಧಿನಾಮ ಸಂವತ್ಸರ ಮನಸ್ಸಲ್ಲಿರುವ ಕ್ರೋಧ ಕಲ್ಮಷ ತೊಡೆದು, ಎಲ್ಲರ ಜೀವನದಲ್ಲೂ ಸಂತಸದ ಹೊನಲು ತುಂಬಲಿ, ವರ್ಷದ ಪ್ರಾರಂಭದ ಮೊದಲದಿನವಾಗಿದ್ದು, ಚಂದ್ರಮಾನ ಯುಗಾದಿ ಚಂದ್ರನ ಬೆಳಕಿಗೆ ಹಾಗೂ ಚಲನೆಗೆ ಸೂರ್ಯನೇ ಆಧಾರ. ಸೃಷ್ಟಿಯ ಅದ್ಭುತ ಬದಲಾವಣೆ ಎಂದರು.

ಮಂಡಳಿಯ ಕಾರ್ಯದರ್ಶಿ ಭವಾನಿವಿಜಯಾನಂದ ಪ್ರಾಸ್ತಾವಿಸಿ ಯುಗಾದಿಯಂದು ದೇವರಿಗೆ ಬೇವು-ಬೆಲ್ಲವನ್ನು ಸಮರ್ಪಿಸಿ ಪ್ರಸಾದವೆಂದು ತಿಳಿದು ಸ್ವೀಕರಿಸುವ ಅಪೂರ್ವಘಳಿಗೆ, ಕಷ್ಟ-ಸುಖಗಳ ಸಂಕೇತ ಎಂದರು.

ಹಿರಿಯ ಸದಸ್ಯೆ ದಾಕ್ಷಾಯಣಿ ಗುರುಕಾಂತಾರಾಧ್ಯ ಕಾರ್ಯಕ್ರಮ ಉದ್ಘಾಟಿಸಿ ಎಲ್ಲರಿಗೂ ಹೊಸವರ್ಷದ ಶುಭ ಹಾರೈಸಿದರು. ಉಪಾಧ್ಯಕ್ಷೆ ಶೈಲಾಬಸವರಾಜು ಕಾರ್ಯಕ್ರಮ ನಿರೂಪಿಸಿ, ರೇಣುಕಗೀತೆ ಹಾಡಿದರು.

ಸದಸ್ಯರಾದ ಚಂಪಾ ವೇದಘೋಷ ಮಾಡಿದ್ದು, ಶೈಲಜಾ ಸ್ವಾಗತಿಸಿ, ರೇಣುಕಾಕುಮಾರ್ ವಂದಿಸಿದರು. ರೂಪಾತೀರ್ಥ ಅತಿಥಿಪರಿಚಯಿಸಿ, ಶೈಲಾಶಿವು ಮತ್ತು ಜಯಾಚಂದ್ರ ಪ್ರಾರ್ಥಿಸಿದರು, ಪದಾಧಿಕಾರಿಗಳಾದ ಮಂಜುಳಾಮಹೇಶ್, ಸೌಭಾಗ್ಯಜಯಣ್ಣ, ವೇದಿಕೆಯಲ್ಲಿದ್ದರು. ಭಾವಗೀತೆಗಳ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧಾ ವಿಜೇತರಿಗೆ ದಾಕ್ಷಾಯಣಿ ಬಹುಮಾನ ವಿತರಿಸಿದರು.

ವಿದ್ಯಾರ್ಥಿನಿ ಹುಬ್ಬಳಿಯ ನೇಹಾ ಹಿರೇಮಠ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಭೆ, ಅಮಾನವೀಯವಾಗಿ ಹತ್ಯೆ ಮಾಡಿದ ದುಷ್ಕರ್ಮಿಗೆ ಕಠಿಣಶಿಕ್ಷೆ ವಿಧಿಸುವುದರೊಂದಿಗೆ ಇಂತಹ ಕೃತ್ಯ ಮರುಕಳಿಸದಂತೆ ಕಾನೂನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ