October 5, 2024

ದೇಶಕ್ಕೆ ಸಮರ್ಥ ಪ್ರಧಾನಿ ಅವಶ್ಯಕತೆ ಇರುವುದರಿಂದ ಮೋದಿ ಅವರಿಗೆ ಬೆಂಬಲ ನೀಡುತ್ತಿದ್ದೇನೆಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.

ಅವರು ಬುಧವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಜಂಟಿಯಾಗಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಪ್ರಧಾನಮಂತ್ರಿ ಸ್ಥಾನದ ಮಹತ್ವ ಅರಿವಿಲ್ಲದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅಲ್ಲದೇ ಕೊನೆ ಹಂತದಲ್ಲಿ ದೇವೇಗೌಡರು ಬಿಜೆಪಿ ಹಿಂದೆ ಹೋಗಿದ್ದಾರೆಂದು ತನ್ನ ಬಗ್ಗೆ ಕೂಡ ಹಗುರವಾಗಿ ಮಾತನಾಡುತ್ತಾರೆ. ನನ್ನ ಮನಸ್ಸಿಗೆ ವಯಸ್ಸಾಗಿಲ್ಲ. ಇನ್ನೂ ಶಕ್ತಿ ಇದೆ. ನಾನೇನು ಮುಂದೆ ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗುವುದಿಲ್ಲ. ಮುಖ್ಯಮಂತ್ರಿ ಆದವರಿಗೆ ಅಧಿಕಾರದ ಅಹಂ ಇರಬಾರದು. ಅದು ಇದ್ದರೆ ಆ ಪಕ್ಷ ಹೆಚ್ಚು ಕಾಲ ಉಳಿಯುವುದಿಲ್ಲ.

ದೇಶದಲ್ಲಿ ಬಿಎಸ್‍ಪಿ, ಸಿಪಿಐ, ಸಿಪಿಐಎಂಎಲ್, ಡಿಎಂಕೆ ಸೇರಿದಂತೆ ಅನೇಕ ಪಕ್ಷಗಳಿವೆ ಆದರೆ ಪ್ರಧಾನಿಯಾಗುವಂತಹ ಅರ್ಹತೆ ಇರುವ ವ್ಯಕ್ತಿ ಯಾವ ಪಕ್ಷದಲ್ಲೂ ಇಲ್ಲ. ಹಾಗಾಗಿ ತಾನು ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇನೆ. ಈ ನಿರ್ಧಾರ ತೆಗೆದುಕೊಳ್ಳುವಾಗ ತಾನು ಇಷ್ಟು ಸ್ಥಾನ ಬಿಟ್ಟುಕೊಡಿ ಎಂದು ಯಾವುದೇ ಷರತ್ತು ಹಾಕಿಲ್ಲ. ಈಗ 3 ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ಮಾಡುತ್ತಿದ್ದು, ಉಳಿದ 25 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. ಎಲ್ಲಾ 28 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಜಿ.ಪಂ, ತಾ.ಪಂ, ಗ್ರಾ.ಪಂ, ನಗರಸಭೆ, ನಗರಪಾಲಿಕೆ ಚುನವಣೆಯಲ್ಲಿ ಮಹಿಳೆಯರು ಸ್ಪರ್ಧಿಸಲು ಶೇ.33 ಮೀಸಲಾತಿ ಕೊಟ್ಟಿದ್ದು ನಾನೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆ, ಲೋಕಸಭೆಯಲ್ಲಿ ಅಂಗೀಕಾರ ಮಾಡಿದ್ದಾರೆ. ಇನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 73 ಮಹಿಳೆಯರು ಸ್ಪರ್ಧಿಸಿ ವಿಧಾನಸಭೆಯೊಳಗೆ ಪ್ರವೇಶಿಸಲು ಸಿದ್ದರಾಗಬೇಕು. ರಾಜ್ಯದಲ್ಲಿ 28 ಕ್ಷೇತ್ರದಲ್ಲೂ ದೇವೆಗೌಡರ ಅವಶ್ಯಕತೆ ಇದ್ದರೆ ಎಲ್ಲಾ ಕ್ಷೇತ್ರಕ್ಕೆ ತೆರಳಿ ಚುನಾವಣೆ ಪ್ರಚಾರ ಮಾಡಲು ಸಿದ್ದ. 28 ಕ್ಷೇತ್ರದಲ್ಲಿ ತಾನು ಕಂಡಂತೆ ಅತ್ಯಂತ ಸರಳ ಮತ್ತು ಪ್ರಾಮಾಣಿಕ ಅಭ್ಯರ್ಥಿಯೊಬ್ಬರಿದ್ದರೆ ಅದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಆಗಿದ್ದಾರೆ. ಹಾಗಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಸಂಸತ್‍ಗೆ ಕಳುಹಿಸಲು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಬೇಕೆಂದರು.

ಡಿಕೇಶಿ ಅವರು ತಮ್ಮ ಬದುಕಿಗಾಗಿ ಬೇರೆಯವರ ಬದುಕನ್ನು ಕಿತ್ತುಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಅನೇಕ ವರ್ಷದ ಹಿಂದೆ 9 ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಕಣ್ಣಿಗೆ ಬಟ್ಟೆ ಕಟ್ಟಿ 7 ದಿನ ಕೋಣೆಯಲ್ಲಿ ಕೂರಿಸಿ ಪೋಷಕರಿಂದ ಆಸ್ತಿ ಪತ್ರಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ. ಅಂತವರು ನೆಹರು ಕುಟುಂಬಕ್ಕೆ ಹತ್ತಿರವಾಗಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಭೀಮ ಇಲ್ಲದೇ ಭಾರತವಿಲ್ಲ, ಭಾರತವಿಲ್ಲದೆ ಭೀಮ ಇಲ್ಲ. ಭಾರತ ಅಖಂಡವಾಗಿದ್ದರೆ ಪಾಕಿಸ್ಥಾನದಲ್ಲಿಯೂ ಕೂಡ ಅಂಬೇಡ್ಕರ್ ಜಯಂತಿ ನಡೆಯುತ್ತಿತ್ತು. ಕಾಂಗ್ರೆಸ್‍ನವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನ ಕೊಟ್ಟ ದಿನವನ್ನು ಮೋದಿ ಸರಕಾರ ಬಂದ ಬಳಿಕ ನ.26ರಂದು ಸಂವಿಧಾನ ಗೌರವ ದಿನವೆಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಸಂವಿಧಾನ ಬದಲಾಯಿಸಲು ಸ್ವತಃ ಅಂಬೇಡ್ಕರ್ ಬಂದರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಮೋದಿ ಅವರೆ ಹೇಳಿದ್ದು, ಇನ್ನು ಸಂವಿಧಾನ ಬದಲಾಯಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಮಹಿಳೆಯರು ಕಾಂಗ್ರೆಸ್‍ನ ತಾತ್ಕಾಲಿಕ ಗ್ಯಾರಂಟಿಗೆ ಮರುಳಾಗಿ ಕಾಂಗ್ರೆಸ್‍ಗೆ ಮತ ನೀಡಿದರೆ ದೇಶಕ್ಕೆ ದ್ರೋಹ ಬಗೆದಂತೆ. ಕಾಂಗ್ರೆಸ್ ಸರಕಾರ ಬಂದು 10 ತಿಂಗಳಲ್ಲಿ 15 ರೂ ಇದ್ದ ಪಹಣಿ ಬೆಲೆ 30 ರೂ ಏರಿಕೆ, ಛಾಪಾ ಕಾಗದ 100 ರೂ, ವಾಹನ ತೆರಿಗೆ ಹೆಚ್ಚಳ, ವಿದ್ಯುತ್ ಉಚಿತವೆಂದು ಹೇಳಿ ಈಗ ದುಪ್ಪಟ್ಟು ಬಿಲ್ ಬರುತ್ತಿದೆ. ಹಾಗಾಗಿ ದೇಶಕ್ಕೆ ಮೋದಿ ಗ್ಯಾರಂಟಿ ಆಗಿರುವುದರಿಂದ ದೇಶದ ಅಭಿವೃದ್ಧಿ ಬಗ್ಗೆ ಸದಾ ಚಿಂತನೆ ಮಾಡುವ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಒತ್ತುವರಿ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ಮುಂದಾಗಿದ್ದು, ಬಿಜೆಪಿ ಸರಕಾರ. ಅದನ್ನು ವಿಧಾನ ಪರಿಷತ್‍ನಲ್ಲಿ ತಾನೇ ಸಭಾಧ್ಯಕ್ಷನಾಗಿ ಅಂಗೀಕಾರಕ್ಕೆ ಸಹಿ ಮಾಡಿದ್ದೇನೆ. ಆದರೆ ಈಗ ಕಾಂಗ್ರೆಸ್‍ನವರು ನಾವು ಮಾಡಿದ್ದು ಎಂದು ಚುನಾವಣೆ ಸಂದರ್ಭದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಎಷ್ಟೇ ಟೀಕೆಗಳು ಮಾಡಿದರೂ ಸಾಧನೆ ಮಾತ್ರ ಇತಿಹಾಸದಲ್ಲಿ ಉಳಿಯುತ್ತದೆ. ಕೋವಿಡ್ ಸಂದರ್ಭದಲ್ಲಿ ದೇಶದ ಜನ ಆತಂಕದಲ್ಲಿದ್ದಾಗ ಎಲ್ಲರಿಗೂ ಲಸಿಕೆ ನೀಡುವ ಮೂಲಕ ತಮ್ಮ ಬದುಕಿನ ಮೇಲೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಮೋದಿ ಮಾಡಿದ್ದಾರೆ. ಧರ್ಮಕ್ಕೆ ಕಂಟಕ ಬಂದಾಗ ಕೃಷ್ಣ ಪರಮಾತ್ಮ ಬಂದಂತೆ, ದೇಶಕ್ಕೆ ಕಂಟಕ ಎದುರಾದಾಗ ಶ್ರೀ ಕೃಷ್ಣ ರೂಪದಲ್ಲಿ ನರೇಂದ್ರ ಮೋದಿ ಬಂದಿದ್ದಾರೆ ಎಂದು ಹೇಳಿದರು.

ಎಸ್.ಎಲ್.ಭೋಜೇಗೌಡ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಈ ದೇಶ ಉಳಿಸುವ ಶಕ್ತಿ ಮೋದಿ ಬಿಟ್ಟರೆ ಬೇರಾರಿಗೂ ಅಂತಹ ಶಕ್ತಿಯಿಲ್ಲ. ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ನಮಸ್ತ, ಸದಾ ವತ್ಸಲೇ ಮಾತೃಭೂಮಿ ಶ್ಲೂಕವನ್ನು ಪ್ರತಿದಿನ ಕಾಂಗ್ರೆಸ್‍ನವರು ಇನ್ನಾದರೂ ಹೇಳುವ ಪ್ರಯತ್ನ ಮಾಡಿ. ಅದನ್ನು ಬಿಟ್ಟು ಪಾಕಿಸ್ಥಾನಕ್ಕೆ ಜೈ ಎನ್ನುವುದನ್ನು ಬಿಡಿ ಎಂದು ಹೇಳಿದರು.

ಉಡುಪಿ ಚಿಕ್ಕಗಮಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಈ ಹಿಂದೆ ವಿದೇಶಕ್ಕೆ ಚಿನ್ನವನ್ನು ಮಾರಾಟ ಮಾಡಿ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಿತ್ತು. ಆದರೆ ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಮಾಡಿ 5ನೇ ಸ್ಥಾನಕ್ಕೆ ತಂದಿದ್ದಾರೆ. ಅಲ್ಲದೇ ಈಗ 70 ವಿದೇಶಕ್ಕೆ ಸಾಲ ಕೊಡುವ ಸ್ಥಿತಿಗೆ ಬಂದಿದೆ. ರಾಜ್ಯ ಸರಕಾರ ತಮ್ಮ ಗ್ಯಾರಂಟಿಗೋಸ್ಕರ ಎಸ್ಸೀಎಸ್ಟಿ ಅಭಿವೃದ್ಧಿಗಾಗಿ ಶಾಸನ ಬದ್ದವಾಗಿ ಮೀಸಲಿಟ್ಟಿದ್ದ 11.5 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಸಿ ಎಸ್ಸೀಎಸ್ಟಿ ಸಮುದಾಯಕ್ಕೆ ದ್ರೂಹ ಬಗೆದಿದ್ದಾರೆ. 10.5 ಲಕ್ಷ ಕುಟುಂಬಕ್ಕೆ ಗೃಹಲಕ್ಷ್ಮಿ ಹಣ ಬಂದಿಲ್ಲ. ಇಂತಹ ಅನೇಕ ವಿಚಾರದ ಬಗ್ಗೆ ತಾನು ಸದನದಲ್ಲಿ ಪ್ರಶ್ನೆ ಮಾಡಿದ್ದು, ಸರಿಯಾದ ಉತ್ತರ ನೀಡಿಲ್ಲ. ಈಗ ಸಂಸತ್‍ಗೆ ಕಳುಹಿಸುವ ಜತೆಗೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದರೆ ಇಲ್ಲಿನ ಅಭಿವೃದ್ದಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆಂದು ಹೇಳಿದರು.

ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಎಂಎಲ್‍ಸಿ ಎಸ್.ಎಲ್.ಭೂಜೇಗೌಡ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ವೈಎಸ್‍ವಿ ಧತ್ತ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‍ಶೆಟ್ಟಿ, ತಾಲೂಕು ಅಧ್ಯಕ್ಷ ಗಜೇಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ತಾಲೂಕು ಅಧ್ಯಕ್ಷ ಡಿ.ಜೆ.ಸುರೇಶ್, ಶೈಂಗೇರಿ ಸುಧಾಕರ್‍ಶೆಟ್ಟಿ, ದೀಪಕ್ ದೊಡ್ಡಯ್ಯ, ಸುಶ್ಮಾವಿಭಾ, ಚೈತ್ರಶ್ರೀ, ಕಲ್ಮುರುಡಪ್ಪ, ಕುರುವಂಗಿ ವೆಂಕಟೇಶ್, ಜೆ.ಎಸ್.ರಘು ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ