October 5, 2024

ಕರಾವಳಿ ಮತ್ತು ಮಲೆನಾಡು, ಬಯಲು ಪ್ರದೇಶಗಳನ್ನೊಳಗೊಂಡ ವಿಭಿನ್ನ ಭೌಗೋಳಿಕ ಹಿನ್ನೆಲೆ ಹೊಂದಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ನಡೆಸಲು 2 ಜಿಲ್ಲೆಗಳ ನಡುವಿನ ಸಮನ್ವಯತೆ ಅನನ್ಯವಾದುದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಹೇಳಿದರು.

ಲೋಕಸಭೆ ಚುನಾವಣೆ ಹಿನ್ನಲೆ ಚಿಕ್ಕಮಗಳೂರು ನಗರದ ಪ್ರೆಸ್‌ಕ್ಲಬ್ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಡುಪಿ ಚುನಾವಣಾ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಟಿಯಲ್ಲಿ ಪಾಲ್ಗೊಂಡು ಮಾತನಾಡಿದರು.

2 ಜಿಲ್ಲೆಗಳ ಚುನಾವಣಾಧಿಕಾರಿಗಳು, ಪೋಲೀಸ್ ವರಿಷ್ಠಾಧಿಕಾರಿಗಳು ತಾಂತ್ರಿಕತೆಯನ್ನು ಬಳಸಿಕೊಂಡು 200 ಕಿ.ಮೀ.ಗಳಷ್ಟು ದೂರದ ಎರಡು ಜಿಲ್ಲೆಗಳ ನಡುವೆ ಸಮನ್ವಯತೆ ಸಾಧಿಸಿಕೊಂಡು ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಏಪ್ರಿಲ್ 26ರಂದು ನಡೆಯಲಿದ್ದು, ಎರಡು ಜಿಲ್ಲೆಗಳಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಧಿಕಾರಿ ಕೆ.ವಿದ್ಯಾಕುಮಾರಿ ತಿಳಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎರಡು ಜಿಲ್ಲೆಗಳನ್ನು ಸೇರಿಕೊಂಡ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು ಎರಡು ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ಸಮನ್ವಯ ಸಾಧಿಸಿ ಯಶಸ್ವಿಯಾಗಿ ಚುನಾವಣೆಯನ್ನು ನಡೆಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಕೇಂದ್ರ ಚುನಾವಣಾ ಇಲಾಖೆ ಆನ್‌ಲೈನ್ ಮೂಲಕ ಎರಡು ಜಿಲ್ಲೆಗಳ ಸಮನ್ವಯ ಸಾಧಿಸಲು ಅವಕಾಶ ನೀಡಿರುವುದ ರಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಕಾರ್ಕಳ ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಸೇರಿ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, 15,85,162 ಮತದಾರರನ್ನು ಒಳಗೊಂಡಿದೆ ಎಂದರು.

ಎರಡು ಜಿಲ್ಲೆಯ ಒಟ್ಟು 7,68,215 ಪುರುಷ ಮತದಾರರು ಹಾಗೂ 8,16,910 ಮಹಿಳಾ ಮತದಾರರನ್ನು ಒಳಗೊಂಡಿದೆ. ಉಡುಪಿ ಜಿಲ್ಲೆಗೆ ಒಳಪಡುವ ಕುಂದಾಪುರ ವಿಧಾನಸಭಾ ಕ್ಷೇತ್ರ 2,11,838, ಉಡುಪಿ 2,21,285, ಕಾಪು 1,92,599, ಕಾರ್ಕಳ 1,93,512 ಮತದಾರರನ್ನು ಒಳಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ 1,68,915, ಮೂಡಿಗೆರೆ 1,71, 642, ಚಿಕ್ಕಮಗಳೂರು 2,32,210 ಹಾಗೂ ತರೀಕೆರೆ 1,93,125 ಮತದಾರರನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿ ದರು.

ಉಡುಪಿ ಜಿಲ್ಲೆಯಲ್ಲಿ 866 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 976 ಮತಗಟ್ಟೆಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಕಲವು ಮತಗಟ್ಟೆಗಳನ್ನು ಸಖಿ ಮತಗಟ್ಟೆ, ವಿಕಲಚೇತನರ ಮತಗಟ್ಟೆ ಹಾಗೂ ಯುವ ಮತಗಟ್ಟೆಗಳನ್ನು ತೆರೆಯಲಾಗಿದೆ. ಪ್ರತಿ ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಮತಗಟ್ಟೆಗಳು ಸುಸಜ್ಜಿತವಾಗಿ ಇರಿಸಲಾಗಿದೆ ಎಂದು ಹೇಳಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ 19 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕ್ರಮಬದ್ಧವಲ್ಲದ ನಾಲ್ಕು ನಾಮಪತ್ರಗಳು ತಿರಸ್ಕೃತಗೊಂಡಿವೆ. 15ನಾಮಪತ್ರಗಳು ಸಿಂಧುವಾಗಿದ್ದು, 10ಮಂದಿ ಉಮೇದುವಾರರು ಪಟ್ಟಿಯಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಅವಕಾಶವಿದ್ದು, ನಂತರ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಿ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿದ ದಿನದಿಂದ ಚುನಾವಣಾ ಖರ್ಚುವೆಚ್ಚಗಳ ಲೆಕ್ಕಪತ್ರವನ್ನು ಇರಿಸಬೇಕು. ನಿಯೋಜಿಸಲ್ಪಟ್ಟ ವೆಚ್ಚ ವೀಕ್ಷಕರ ಪರಿಶೀಲನೆಗೆ ಹಾಜರು ಪಡಿಸಬೇಕು. ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನಾಂಕದವರೆಗೂ ಲೆಕ್ಕವನ್ನು ದಾಖಲಿಸಬೇಕು. ಚುನಾವಣೆ ಘೋಷಣೆಯಾದ ದಿನದಿಂದ 30 ದಿನದೊಳಗೆ ಸಂಪೂರ್ಣ ಲೆಕ್ಕವನ್ನು ಚುನಾವಣಾಧಿಕಾರಿ ಸಮ್ಮುಖದಲ್ಲಿ ಸಲ್ಲಿಸಬೇಕು ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎರಡು ಜಿಲ್ಲೆಗಳ ವ್ಯಾಪ್ತಿಯಲ್ಲಿ 28 ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಚುನಾವಣಾ ದೂರುಗಳನ್ನು ದಾಖಲಿಸಿಲು ಸಿವಿಜಲ್ ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದು ಇದುವರೆಗೂ 756 ದೂರುಗಳು ಬಂದಿವೆ ಎಂದರು.

ನಕ್ಸಲ್ ಚಟುವಟಿಕೆ ಕ್ಷೀಣಿಸಿದ ಹಿನ್ನಲೆಯಲ್ಲಿ ನಕ್ಸಲ್ ಭಾದಿತ ಪಟ್ಟಿಯಲ್ಲಿದ್ದ ಪ್ರದೇಶಗಳು ಮುಕ್ತವಾಗಿದ್ದು, ಎರಡು ಜಿಲ್ಲೆಗಳಲ್ಲಿ 366 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಇಲ್ಲಿಗೆ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಎಲ್ಲಿ ಮತದಾನ ಪ್ರಕ್ರಿಯೇ ಕಡಿಮೆ ಪ್ರಮಾಣದಲ್ಲಾಗಿದೆ ಆ ಪ್ರದೇಶಗಳಿಗೆ ಹೆಚ್ಚಿನ ಗಮನಹರಿಸಿ ಮನೆ ಮನೆಗಳಿಗೆ ತೆರಳಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಕಳೆದ ಚುನಾವಣೆಗಿಂತ ಶೇಕಡವಾರು ಹೆಚ್ಚಿನ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಮಾತನಾಡಿ ವಿಭಿನ್ನ ಭೌಗೋಳಿಕ ಹಿನ್ನೆಲೆ, ಸಂಸ್ಕೃತಿ, ಹವಾಮಾನ ಹೊಂದಿರುವ ಘಟ್ಟದ ಕೆಳಗೆ ಮತ್ತು ಮೇಲಿನ ಎರಡು ಜಿಲ್ಲೆಗಳು ಒಗ್ಗೂಡಿ ನಡೆಸುವ ಚುನಾವಣಾ ಪ್ರಕ್ರಿಯೆಯ ಬಗ್ಗೆ ಜಿಲ್ಲೆಯ ಜನರಿಗಿದ್ದ ಕುತೂಹಲ ತಣಿಸಲು ನಡೆಸಿದ ವಿಭಿನ್ನ ಪ್ರಯತ್ನವೇ ಪ್ರೆಸ್‌ಕ್ಲಬ್‌ನ ಉಡುಪಿ ಭೇಟಿ ಎಂದರು. ಪ್ರೆಸ್‌ಕ್ಲಬ್‌ನ ಮನವಿಯನ್ನು ಪುರಸ್ಕರಿಸಿ ಎರಡು ಜಿಲ್ಲೆಗಳ ಅಧಿಕಾರಿಗಳು ಸ್ಪಂದಿಸಿ ನಮ್ಮ ಈ ಪ್ರವಾಸವನ್ನು ಸಾಕಾರಗೊಳಿಸಿದ್ದಾರೆ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಉಡುಪಿ ಜಿಲ್ಲೆ ಅಪರ ಜಿಲ್ಲಾಧಿಕಾರಿ ಮಮತ ದೇವಿ, ವಾರ್ತಾಧಿಕಾರಿ ಮಂಜುನಾಥ್ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ