October 5, 2024

ಕರ್ನಾಟಕ ರಾಜ್ಯದಾದ್ಯಂತ ಈಗಾಗಲೇ ಆರಂಭವಾಗಿರುವ 5,8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದ್ದು, ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ಮುಂದೂಡಿದೆ.

5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದ್ದ ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪರೀಕ್ಷೆಗಳನ್ನು ನಡೆಸದಂತೆ ತಡೆ ನೀಡಿದೆ.

ಸುಪ್ರೀಂ ಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ 5, 8, 9ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಶಿಕ್ಷಣ ಇಲಾಖೆ ಮುಂದೂಡಿದೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿಬಿ ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಏಕ ಸದಸ್ಯ ಪೀಠ ಮಾರ್ಚ್ 6 ರಂದು ಬೋರ್ಡ್ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.

ರಾಜ್ಯಾದ್ಯಂತ 45,000 ಶಾಲೆಗಳ 28 ಲಕ್ಷ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆ ಬರೆಯುತ್ತಿದ್ದು, ಅವರ ಭವಿಷ್ಯ ಈಗ ಅತಂತ್ರವಾಗಿದೆ. ಇನ್ನು 11 ತರಗತಿ ಪರೀಕ್ಷೆಗಳು ಈಗಾಗಲೇ ಫೆಬ್ರವರಿ 28 ರಂದೇ ಮುಕ್ತಾಯಗೊಂಡಿವೆ. 5, 8 ಮತ್ತು 9ನೇ ತರಗತಿಗೆ ಮಾರ್ಚ್ 11 ರಿಂದ ಪರೀಕ್ಷೆಗಳು ಆರಂಭವಾಗಿತ್ತು.

ಸುತ್ತೋಲೆ ಪ್ರಮುಖ ಅಂಶಗಳೇನು?

  1. 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಕಾರ್ಯವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗುತ್ತಿದೆ.
  2. ಸದರಿ ಮೌಲ್ಯಾಂಕನವನ್ನು ಹೈಕೋರ್ಟ್ ಏಕಸದಸ್ಯ ಪೀಠವು ರದ್ದುಪಡಿಸಿ ನೀಡಿದ್ದ ತೀರ್ಪಿಗೆ ವಿಭಾಗೀಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿರುತ್ತದೆ.
  3. ಸದರಿ ವಿಭಾಗೀಯ ಪೀಠವು ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಘನ ಸರ್ವೋಚ್ಛ ನ್ಯಾಯಾಲಯವು ರದ್ದುಪಡಿಸಿರುತ್ತದೆ.
  4. ಹಾಗಾಗಿ 5ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಾಂಕ: 13.03.2024 ರಿಂದ 14.03.2024 ರವರೆಗೆ ಹಾಗೂ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ:13.03.2024 ರಿಂದ 16.03.2024 ರವರೆಗೆ ನಡೆಸಬೇಕಿರುವ ಮೌಲ್ಯಾಂಕನವನ್ನು ಮುಂದೂಡಲಾಗಿರುತ್ತದೆ.
  5. ಸದರಿ ಮಾಹಿತಿಯನ್ನು ಸಂಬಂಧಿಸಿದ ಉಪನಿರ್ದೇಶಕರು(ಆಡಳಿತ) ಮತ್ತು ಬ್ಲಾಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಮುಖ್ಯ ಶಿಕ್ಷಕರು/ ಪ್ರಾಂಶುಪಾಲರಿಗೆ ತಿಳಿಸಿ ಸೂಕ್ತ ಕ್ರಮವಹಿಸುವುದು.
  6. ಈ ಕಚೇರಿಯ ಮುಂದಿನ ಆದೇಶದವರೆಗೆ ಈಗಾಗಲೇ ಕ್ಷೇತ್ರಶಿಕ್ಷಣಾಧಿಕಾರಿಗಳ ಹಂತಕ್ಕೆ ಸರಬರಾಜಾಗಿರುವ ಪ್ರಶ್ನೆಪತ್ರಿಕೆಗಳನ್ನು ತಮ್ಮ ಹಂತದಲ್ಲಿ ಸಂರಕ್ಷಿಸಿ ಸುರಕ್ಷಿತವಾಗಿಡಲು ಎಲ್ಲಾ ಬ್ಲಾಕುಗಳ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ರವರು ಸೂಕ್ತ ಕ್ರಮವಹಿಸುವುದು

ಏನಿದು ವಿವಾದ ?

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ   ಮತ್ತು ಸರ್ಕಾರ ಜಂಟಿಯಾಗಿ 5,8,9 ಮತ್ತು 11ನೇ ತರಗತಿಗೆ ಈ ಬಾರಿ ಪಬ್ಲಿಕ್‌ ಪರೀಕ್ಷೆ ನಡೆಸಲು 2023ರ ಡಿಸೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿದ್ದವು.

ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು.

ಖಾಸಗಿ ಶಾಲೆಗಳ ಸಂಘಟನೆಯ ವಾದವನ್ನು ಆಲಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ ಸರ್ಕಾರ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿತ್ತು. ಅಂದರೆ ಪಬ್ಲಿಕ್‌ ಪರೀಕ್ಷೆ ನಡೆಸದಂತೆ ಸೂಚನೆ ನೀಡಿತ್ತು.

ಪಬ್ಲಿಕ್‌ ಪರೀಕ್ಷೆಗೆ ತಡೆ ನೀಡಿದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಮಾರ್ಚ್‌ 9ರಂದು ಮೇಲ್ಮನವಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಏಕಸದಸ್ಯ ಪೀಠವು ವಿಧಿಸಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಅಂದರೆ ಮಾರ್ಚ್‌ 11ರಂದು ಆರಂಭವಾಗುವ 5,8,9ನೇ ತರಗತಿಯ ಪರೀಕ್ಷೆಗಳು ಯಥಾವತ್ತಾಗಿ ನಡೆಯಲಿದೆ ಎಂದು ತಿಳಿಸಲಾಗಿತ್ತು.

11ನೇ ತರಗತಿ ಪರೀಕ್ಷೆಗಳು ಆಗಲೇ ನಡೆದು ಮುಕ್ತಾಯವಾಗಿವೆ. 5,8,9ನೇ ತರಗತಿ ಪರೀಕ್ಷೆಗಳು ಮಾರ್ಚ್‌ 11ರಂದು ಆರಂಭವಾಗಿ ಆಗಲೇ ಎರಡು ಪರೀಕ್ಷೆಗಳು ಮುಗಿದಿವೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಯಥಾವತ್ತಾಗಿ ಪರೀಕ್ಷೆ ನಡೆಸಲು ಅವಕಾಶ ನೀಡಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿವೆ. ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಿದ ಸುಪ್ರೀಂಕೋರ್ಟ್‌ ಮಂಗಳವಾರ (ಮಾರ್ಚ್‌ 12) ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡಿದೆ.

ಮುಂದೇನಾಗಬಹುದು ?

  1. ಸದ್ಯದ ಸೂಚನೆ ಪ್ರಕಾರ, ಈಗ ನಡೆಯುತ್ತಿರುವ ಪರೀಕ್ಷೆಯನ್ನು ಮುಂದೂಡುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ.
  2. ಮುಂದಿನ ಆದೇಶದ ವರೆಗೆ ಪರೀಕ್ಷೆಗಳನ್ನು ಮುಂದೂಡುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಶಾಲೆಗಳು ಪರೀಕ್ಷೆಯನ್ನು ಮುಂದೂಡಿವೆ.
  3. ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ ಮಧ್ಯಂತರ ಆದೇಶದ ಬಗ್ಗೆ ತ್ವರಿತ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಹೈಕೋರ್ಟ್‌ಗೆ ಸೂಚಿಸಿದೆ.
  4. ಹೈಕೋರ್ಟ್‌ ವಿಚಾರಣೆಯ ವೇಳೆ ಹೈಕೋರ್ಟ್‌ ಸ್ವಂತ ವಿವೇಚನೆಯನ್ನು ಬಳಸಲಿ ಮತ್ತು ಸುಪ್ರೀಂಕೋರ್ಟ್‌ನ ಅಭಿಪ್ರಾಯಗಳಿಂದ ಪ್ರಭಾವಿತವಾಗದಿರಲಿ ಎಂದು ಹೇಳಿದೆ.
  5. ಅಂದರೆ ಹೈಕೋರ್ಟ್‌ನ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿ ತನ್ನ ತೀರ್ಪನ್ನು ನೀಡಬಹುದಾಗಿದೆ. ಮತ್ತು ಇದು ಅಂತಿಮವಾಗಿರುವ ಸಾಧ್ಯತೆ ಇದೆ.

About Author

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ