October 5, 2024

ಚಿಕ್ಕಮಗಳೂರು ಜಿಲ್ಲೆಯ ಬಿ.ಜೆ.ಪಿ. ವಿವಿಧ ಮಂಡಲಗಳಿಗೆ ಅಧ್ಯಕ್ಷರ ಘೋಷಣೆಯಾಗಿದ್ದು, ಮೂಡಿಗೆರೆ ಮಂಡಲ ಅಧ್ಯಕ್ಷರ ಘೋಷಣೆ ಬೆನ್ನಿಗೆಯೇ ಪಕ್ಷದಲ್ಲಿ ಅಸಮಧಾನ ಭುಗಿಲೆದ್ದಿದ್ದು, ಮುಖಂಡರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ.

ಮೂಡಿಗೆರೆ ಮಂಡಲ ಅಧ್ಯಕ್ಷರಾಗಿ ಪಕ್ಷದ ಹಿರಿಯ ಮುಖಂಡ ಟಿ.ಎಂ. ಗಜೇಂದ್ರ ಅವರ ನೇಮಕ ಆದ ಸುದ್ದಿ ಹರಡುತ್ತಿದ್ದಂತೆ ಇಂದು ಬಿ.ಜೆ.ಪಿ. ಮೂಡಿಗೆರೆ ಕಛೇರಿಯಲ್ಲಿ ಹೈಡ್ರಾಮಾ ನಡೆಯಿತು.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಬೂತ್ ಸಂಚಾಲಕರ ನೇಮಕಕ್ಕೆ ಸಂಬಂಧಿಸಿದಂತೆ ಇಂದು ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ, ಮುಖಂಡರಾದ ದೀಪಕ್ ದೊಡ್ಡಯ್ಯ, ರಾಜಪ್ಪ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ಮುಂತಾದವರು ಭಾಗವಹಿಸಿದ್ದರು. ಸಭೆಗೆ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಸಭೆ ಮುಗಿಯುವ ಹಂತದಲ್ಲಿ ಮಂಡಲದ ನೂತನ ಅಧ್ಯಕ್ಷರ ನೇಮಕದ ಸುದ್ದಿ ಹರಡಿತ್ತು.

ಆಗ ಸ್ಥಳದಲ್ಲಿದ್ದ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ.ರತನ್ ಅವರ ಮೇಲೆ ತೀವ್ರವಾಗಿ ಹಲ್ಲೆಯಾಗಿದ್ದು, ಅವರು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ದಾಖಲಾಗಿದ್ದಾರೆ. ರತನ್ ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತನ್ನ ಮೇಲೆ ಪಿ.ಜಿ.ಅನುಕುಮಾರ್ ಮತ್ತು ಕನ್ನೇಹಳ್ಳಿ ಭರತ್ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ತನಗೂ ನೂತನ ಅಧ್ಯಕ್ಷರ ನೇಮಕಕ್ಕೂ ಸಂಬಂಧವಿಲ್ಲ. ಆದರೆ ನನ್ನ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

 

ಈ ನಡುವೆ ಮಂಡಲ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಮತ್ತು ಬಣಕಲ್ ಹೋಬಳಿ ಬಿ.ಜೆ.ಪಿ. ಅಧ್ಯಕ್ಷ ಪಿ.ಜಿ.ಅನುಕುಮಾರ್(ಪಟ್ಟದೂರು ಪುಟ್ಟಣ್ಣ) ತಮ್ಮ ಬೆಂಬಲಿಗರೊಂದಿಗೆ ಬಿ.ಜೆ.ಪಿ. ಕಛೇರಿ ಎದುರು ಧರಣಿ ನಡೆಸಿ ವರಿಷ್ಠರ ತೀರ್ಮಾನದ ವಿರುದ್ಧ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂ.ಪಿ.ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದು ತಮ್ಮ ಹಠ ಸಾಧಿಸಿದ್ದ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಪರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದ ಗುಂಪಿನಲ್ಲಿಯೇ ಈಗ ಭಿನ್ನಾಭಿಪ್ರಾಯ ಮೂಡಿ ಪರಸ್ಪರ ಬಡಿದಾಡಿಕೊಳ್ಳುವ ಹಂತಕ್ಕೆ ಬಂದು ನಿಂತಿದೆ.

ಮೂಡಿಗೆರೆ ಮಂಡಲ ಅಧ್ಯಕ್ಷ ಸ್ಥಾನಕ್ಕೆ 12 ಮಂದಿ ಆಕಾಂಕ್ಷಿಗಳು ತಮ್ಮ ಅಹವಾಲು ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕಾಗಿ ಸಾಕಷ್ಟು ಲಾಭಿ ನಡೆಸಲಾಗುತ್ತಿತ್ತು. ಇತ್ತೀಚೆಗೆ ಪಕ್ಷದ ಪಿ.ಜಿ.ಅನುಕುಮಾರ್ ಬಣದ ಕಾರ್ಯಕರ್ತರು ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರ ನಿವಾಸಕ್ಕೆ ತೆರಳಿ ತಮ್ಮ ಅಹವಾಲು ಸಲ್ಲಿಸಿದ್ದರು.

ಅಂತಿಮವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಟಿ.ಎಂ. ಗಜೇಂದ್ರ ಅವರ ಹೆಸರನ್ನು ಇಂದು ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳಿಸಿ ಇಂದು ನೇಮಕ ಮಾಡಲಾಗಿತ್ತು. ಈ ನೇಮಕದ ಹಿನ್ನಲೆಯಲ್ಲಿ ಪಕ್ಷದಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಅಸಮಧಾನ ಸ್ಪೋಟಗೊಂಡಿದ್ದು,  ಬೀದಿ ರಂಪವಾಗಿ ಮಾರ್ಪಟ್ಟಿದೆ.

ಈ ಬೆಳವಣಿಗೆಯಿಂದ ಮೂಡಿಗೆರೆ ಬಿ.ಜೆ.ಪಿ. ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಇಂತಹ ಘಟನೆ ನಡೆದಿರುವುದು ಪಕ್ಷದ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಒಟ್ಟಾರೆ ಮೂಡಿಗೆರೆ ತಾಲ್ಲೂಕಿನಲ್ಲಿ ಬಿ.ಜೆ.ಪಿ. ಒಡೆದ ಮನೆಯಂತಾಗಿದ್ದು, ಮಂಡಲ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಪಕ್ಷ ವಿವಿಧ ಬಣಗಳಾಗಿ ಹೋಳಾಗಿದೆ.

ಈಗ ಉದ್ಭವಿಸಿರುವ ಬಿಕ್ಕಟ್ಟನ್ನು ಪಕ್ಷದ ಮುಖಂಡರು ಯಾವ ರೀತಿ ನಿಭಾಯಿಸುತ್ತಾರೆ, ಮುಂದೆ ಈ ಘಟನೆ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ