October 5, 2024

ಮಲೆನಾಡಿನ ಚಿತ್ರಣ, ಗ್ರಾಮೀಣಭಾಷೆಯ ಸೊಗಡನ್ನು ಹೊಂದಿರುವ ‘ಯಾವುದೀ ಹೊಸ ಒಗಟು?’ ಕಾದಂಬರಿ ಸಿನಿಮೀಯ ಗುಣಗಳನ್ನೂ ಹೊಂದಿದ್ದು ಓದಿ ಮರೆಯಲಾಗದ ಕಥಾಹಂದರ ಕಾಣಬಹುದೆಂದು ಪ್ರಾಚಾರ್ಯ, ನಾಟಕ ಅಕಾಡೆಮಿ ಮಾಜಿಸದಸ್ಯ ಹೆಚ್.ಎಂ. ನಾಗರಾಜರಾವ್ ಕಲ್ಕಟ್ಟೆ ಅಭಿಪ್ರಾಯಿಸಿದರು.

ಸುಪ್ರಭಾತ ಮತ್ತು ಕಲ್ಕಟ್ಟೆ ಪುಸ್ತಕದ ಮನೆ ನಗರದ ಶೃಂಗೇರಿ ಶಂಕರಮಠ ಪ್ರವಚನ ಮಂದಿರದಲ್ಲಿ ಸಸಿಹಿತ್ಲುಸುಬ್ರಮಣ್ಯರ ‘ಯಾವುದೀ ಹೊಸ ಒಗಟು?’ ಕೌತುಕಮಯ ಕಾದಂಬರಿ ಲೋಕಾರ್ಪಣಾ ಸಮಾರಂಭದಲ್ಲಿ ಭಾನುವಾರ ಅವರು ಕೃತಿ ಪರಿಚಯಿಸಿದರು.

ಸಾಮಾಜಿಕ ಸ್ಥಿತಿಗತಿ, ಮನೆಯವಾತಾವರಣ ಅರ್ಥಮಾಡಿಕೊಳ್ಳಲು ಕಾದಂಬರಿಗಳು ಹಿಂದಿನಿಂದಲೂ ನೆರವಾಗಿವೆ. ಇಲ್ಲೂ ಅಂಥದ್ದೆ ಪ್ರಯತ್ನ ಕಾಣಬಹುದು. ಹೆಣ್ಣಿನ ಸಾಮಾಜಿಕ ತುಮುಲಗಳನ್ನು ಕೌಟುಂಬಿಕ ವಿಚಾರಗಳಲ್ಲಿ ಆಕೆ ತೋರಿಸುವ ಕಾಳಜಿ ಕುತೂಹಲಕರವಾಗಿ ಕಟ್ಟಿಕೊಟ್ಟಿದ್ದಾರೆ ಎಂದ ನಾಗರಾಜರಾವ್, ಸಾಂಸಾರಿಕ ಕಥೆಯಲ್ಲಿನ ಎಳೆಗಳು ಹೊಳವುಗಳು, ಭಿನ್ನವ್ಯಕ್ತಿತ್ವಗಳ ಸಂಘರ್ಷ, ಒಳಿತು ಕೆಡುಕುಗಳ ಹಾವುಏಣಿಯಾಟ, ಮಧ್ಯಮವರ್ಗದ ಕನಸುಗಳು, ಹೆಣ್ಣಿನ ಮನಸ್ಥಿತಿ ಚಿತ್ರಣ ಇಲ್ಲಿದೆ ಎಂದರು.

90ರ ದಶಕದ ಶುದ್ಧ ಸಾಂಸರಿಕ ಚಲನಚಿತ್ರಗಳ ಪರಿಮಳ ಪುಸ್ತಕದಲ್ಲಿದೆ. ಬರವಣಿಗೆಯ ಬಗ್ಗೆ ಆತ್ಮವಿಶ್ವಾಸ ಕಾಣುತ್ತದೆ ಎಂದ ನಾಗರಾಜರಾವ್, ಕಥೆಯಲ್ಲಿನ ತಿರುವುಗಳು ಕುತೂಹಲಕ್ಕೆ ಎಡೆಮಾಡಿ ಕೊಡುತ್ತದೆ. ಪಾತ್ರದೊಳಗೆ ಹರಿಯುವ ನದಿಯಂತಹ ಕಥೆಯನ್ನು ಸುಬ್ರಮಣ್ಯ ನೀಡಿದ್ದಾರೆಂದು ಶ್ಲಾಘಿಸಿದರು.

ಸಾಹಿತಿ ಉಪನ್ಯಾಸಕ ಡಾ.ಬೆಳವಾಡಿ ಮಂಜುನಾಥ್ ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿ ದೈನಂದಿನ ಘಟನೆಗಳನ್ನು ಆಧರಿಸಿದ ಕಾದಂಬರಿ ಇದಾಗಿದ್ದು ಪ್ರಸ್ತುತ ಕಾಲಘಟ್ಟದ ಅನೇಕ ಸಮಸ್ಯೆಗಳಿಗೆ ಉತ್ತರವೆನೋ ಎನ್ನುವಂತೆ ಹೆಣೆಯಲಾಗಿದೆ. ಕೃತಿಯ ಕೇಂದ್ರ ಯಾವುದು ಎಂಬುದೇ ಇಲ್ಲಿಯ ಪ್ರಮುಖ ಒಗಟು. ಇಲ್ಲಿರುವ 18ಪಾತ್ರಗಳಲ್ಲಿ 17ಸಮರ್ಥವಾಗಿ ಕೃತಿಕಾರರು ಕಟ್ಟಿಕೊಟ್ಟಿದ್ದಾರೆಂದರು. ಸಾಹಿತ್ಯಪ್ರಕಾರಗಳಲ್ಲಿ ಕಾದಂಬರಿ ಜನಪ್ರಿಯ ಮತ್ತು ಪ್ರಭಾವಿ. ಪ್ರಗತಿಶೀಲ ಪ್ರಕಾರವನ್ನು ಬೆಳಸಿದ್ದೆ ಕಾದಂಬರಿಗಳು. ಪ್ರಪಂಚಕ್ಕೆ ಕಾದಂಬರಿ ಹೆಸರುಕೊಟ್ಟಿದ್ದೆ ಭಾರತ. ಬಾಣಭಟ್ಟ ಸಂಸ್ಕøತದಲ್ಲಿ ಮೊದಲ ಕಾದಂಬರಿ ಬರೆದವರು. ಬಂಕಿಮಚಂದ್ರರ ಬಂಗಾಳಿ ಕೃತಿ ತಾವರ್‍ಚಂದ್ ಕನ್ನಡೀಕರಿಸಿದ ಭಾರತದ ಗದ್ಯರೂಪಿ ಮೊದಲ ಕಾದಂಬರಿ. ಮುದ್ರಾಮಂಜೂಷಾ ಪ್ರಸಿದ್ಧ ಐತಿಹಾಸಿಕ ಕಾದಂಬರಿ. ನವೋದಯ ಕಾಲದಲ್ಲಿ ದೊಡ್ಡ ಕಾದಂಬರಿಗಳು ಬಂದವು ಎಂದು ವಿವರಿಸಿದರು. ಕಾವ್ಯ ಹೆಚ್ಚು ಪ್ರಚಾರದಲ್ಲಿದ್ದ ಕಾಲಘಟ್ಟ ಸರಿದು ಕಾದಂಬರಿಯನ್ನು ಜನ ಓದುತ್ತಿದ್ದರು. ಪ್ರಗತಿಶೀಲ ಪ್ರಕಾರ ಕನ್ನಡದಲ್ಲಿ ಓದುವ ಸಮೂಹ ಬೆಳೆಸಿತು. ನವ್ಯಸಾಹಿತ್ಯದಲ್ಲಿ ವೈಯಕ್ತಿಕ ವಿಚಾರ ಹೆಚ್ಚಾಗಿದ್ದರೆ, ನಂತರ ಬಂದಿದ್ದೆ ಬಂಡಾಯ. ದಲಿತರ ನೋವು ಅನುಭವಿಸಿದವರೇ ಬರೆದರೆ ಸಹಜವಾಗಿರುತ್ತದೆಂಬ ಚರ್ಚೆ ವ್ಯಾಪಕಗೊಂಡು ದಲಿತ ಸಾಹಿತ್ಯ ಬಂತು. ಆಡುಮಾತಿನಲ್ಲಿ ದೇವನೂರು ಮಹಾದೇವ, ಕೃಷ್ಣ ಮತ್ತಿತರರು ಬರೆದರೆಂದು ಕನ್ನಡ ಸಾಹಿತ್ಯಪ್ರಕಾರಗಳನ್ನು ವಿಶ್ಲೇಷಿಸಿದ ಡಾ.ಬೆಳವಾಡಿ ಮಂಜುನಾಥ್, ಪ್ರಗತಿಶೀಲ ಕಾಲದಲ್ಲಿ ಕೃತಿಕಾರನಿಗೆ ಸ್ವಾತಂತ್ರ್ಯ ಅಧಿಕ. ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳೆಂಬ ಮೂರುವಿಧದ ಕಾದಂಬರಿಗಳು ಬಂದಿವೆ ಎಂದರು.

ಹಿರಿಯಪತ್ರಕರ್ತ ಸ.ಗಿರಿಜಾಶಂಕರ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕಾದಂಬರಿಯಲ್ಲಿ ವಸ್ತು, ಧಾಟಿ, ಭಾಷೆ ಚನ್ನಾಗಿದೆ. ಸಹೃದಯಿ ಓದುಗ ಕೃತಿಯನ್ನು ಓದಿ ಚಪ್ಪರಿಸಿದಾಗಲೇ ನಿಜವಾದ ಕೃತಿ ಬಿಡುಗಡೆ. ಓದಿ, ಅಧ್ಯಯನಮಾಡಿ, ಬದುಕಿನ ಏರಿಳಿತಕಂಡು ಬರೆದಿರುವ ಕಾದಂಬರಿ ಇದು. ಸಂಕೀರ್ಣತೆ ಇದ್ದರೆ ಹಲವು ಕಾಲಘಟ್ಟದಲ್ಲಿ ನಿಲ್ಲುತ್ತದೆ ಎಂದರು.

ಅನೇಕ ಲೋಪದೋಷಗಳಿರುವುದು ಸಹಜವಾದರೂ ಕೆಟ್ಟ ಕಾದಂಬರಿ ಅಲ್ಲ. ಕಾದಂಬರಿಗಿಂತ ಕಾವ್ಯ ಸುಬ್ರಮಣ್ಯ ಅವರಿಗೆ ಹೆಚ್ಚಿನ ಕೀರ್ತಿ ತರುತ್ತದೆ ಎಂದು ಅಭಿಪ್ರಾಯಿಸಿದ ಗಿರಿಜಾಶಂಕರ್, ಒಳ್ಳೆಯ ಕಾದಂಬರಿಕಾರರಾಗಿ ಅಜರಾಮರಾಗಿ ಕನ್ನಡ ಸಾಹಿತ್ಯದಲ್ಲಿ ಉಳಿಯಬೇಕೆಂದು ಹಾರೈಸಿದರು.

ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಸೂರಿಶ್ರೀನಿವಾಸ ಶುಭಹಾರೈಸಿ ಜಿಲ್ಲೆಯಲ್ಲಿ ಇತ್ತೀಚಿಗೆ ಪ್ರಕಟಗೊಂಡಿರುವ ಕಾದಂಬರಿಗಳ ವಿಮರ್ಶೆಯನ್ನು ಸಾಹಿತ್ಯಪರಿಷತ್ ಏರ್ಪಡಿಸಿ ಅದರಲ್ಲಿರುವ ವಸ್ತು, ವಿಷಯ, ಭಾಷೆ, ಓಘ, ಮತ್ತಿತರ ಸಂಗತಿಗಳ ಪರಾಮರ್ಶೆಗೆ ಅವಕಾಶ ಕಲ್ಪಿಸುವುದಾಗಿ ನುಡಿದರು.

ಕೃತಿಕಾರ ಸಸಿಹಿತ್ಲು ಸುಬ್ರಮಣ್ಯ ಈ ಕಾದಂಬರಿಯಲ್ಲಿ ಸಸ್ಪೆನ್ಸ್, ಭಾವೋದ್ವೇಗ, ಆದರ್ಶ, ಮಮತೆ, ಕರುಣೆ, ಕ್ರೌರ್ಯ, ವ್ಯಂಗ್ಯ, ವಿಡಂಬನೆ, ಪ್ರೀತಿ, ಮದ, ದ್ವೇಷ, ಮತ್ಸರ ಮುಂತಾದ ಎಲ್ಲಾ ರಸಗಳ ಹದವಾದ ಮಿಶ್ರಣ ಹೊಂದಿದ್ದು ಓದುಗರಿಗೆ ಭ್ರಮನಿರಸನ ಎಲ್ಲೂ ಆಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಲ್ಕಟ್ಟೆಪುಸ್ತಕದಮನೆ ವ್ಯವಸ್ಥಾಪಕಿ ಶಿಕ್ಷಕಿ ರೇಖಾನಾಗರಾಜ್ ಮಾತನಾಡಿ ವಾಟ್ಸ್‍ಪ್, ಮೊಬೈಲ್ ಬರಹಗಳನ್ನೆ ಸಾಹಿತ್ಯವೆಂದುಕೊಂಡಿರುವ ಕಾಲಘಟ್ಟದಲ್ಲಿ 300ಪುಟಗಳ ಕೌತುಕಮಯ ಕಾದಂಬರಿರಚನೆಗೊಂಡಿರುವುದು ಸುಬ್ರಮಣ್ಯ ಅವರ ತಾಳ್ಮೆ, ಸೃಜನಶೀಲತೆಯನ್ನು ತೋರಿಸುತ್ತದೆ ಎಂದರು.

ಯೋಗಶಿಕ್ಷಕಿ ಗಾಯತ್ರಿಸುಬ್ರಮಣ್ಯ ಸ್ವಾಗತಿಸಿ, ಸತ್ಯನಾರಾಯಣ ನಿರೂಪಿಸಿ, ಸಂದೇಶಕುಮಾರ್ ವಂದಿಸಿದರು. ಮಲ್ಲಿಗೆಸುಧೀರ್ ಮತ್ತು ಕೆ.ಎನ್.ನಾಗಭೂಷಣ ಲೇಖಕರ ಕವನಕ್ಕೆ ಧ್ವನಿಯಾದರು. ಅನೂಷಾ ಮತ್ತು ಸಂಜನಾ ಪ್ರಾರ್ಥಿಸಿದರು. ಮುಖಪುಟದ ಕಲಾವಿದ ಗಣೇಶ ಎಸ್.ರಾವ್ ಸೇರಿದಂತೆ ಮುಖ್ಯಅತಿಥಿಗಳನ್ನು ಸನ್ಮಾನಿಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ