October 5, 2024

ಬಿಹಾರದ ಮಾಜಿ ಸಿಎಂ, ಜನ ನಾಯಕ ಎಂದು ಖ್ಯಾತರಾಗಿದ್ದ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕರ್ಪೂರಿ ಠಾಕೂರ್ ಅವರು 1970ರಿಂದ 1971ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ಸಮಾಜವಾದಿ ಮತ್ತು ಭಾರತೀಯ ಕ್ರಾಂತಿ ದಳ ಪಕ್ಷದಲ್ಲಿದ್ದರು. ಮತ್ತೆ 1977ರಿಂದ 1979ರವರೆಗೆ ಎರಡನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿದ್ದರು. ಆಗ ಜನತಾ ಪಾರ್ಟಿಯಲ್ಲಿದ್ದರು.

ಯಾರಿವರು ಕರ್ಪೂರಿ ಠಾಕೂರ್ ? 

ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಅತ್ಯಂತ ಹಿಂದುಳಿದ ರಾಜ್ಯವಾಗಿದ್ದ ಬಿಹಾರದ ದುರ್ಬಲ ವರ್ಗಗಳ ಅಭ್ಯುದಯಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ದೀಮಂತ ಜನನಾಯಕ, ದೇಶದ ಪ್ರಪ್ರಥಮ ಅತಿ ಹಿಂದುಳಿದ ವರ್ಗದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ಕರ್ಪೂರಿ ಠಾಕೂರ್.

ಬಿಹಾರದ ಸಮಷ್ಟೀಪುರದ ಪಿತೋಜಿಯ ಗ್ರಾಮದಲ್ಲಿ ಗೋಕುಲ್ ಠಾಕೂರ್ ಮತ್ತು ರಾಮ್ ದುಲಾನಿಯವರ ಮಗನಾಗಿ 1924ರ ಜನವರಿ 24 ರಂದು ಜನಿಸಿದ ಕರ್ಪೂರಿ ಠಾಕೂರ್ ಬಿಹಾರದ ಮುಖ್ಯಮಂತ್ರಿಯಾಗಿ ದಶಕಗಳ ಕಾಲ ಜನಸೇವೆ ಕೈಗೊಂಡು 1988ರಲ್ಲಿ ನಿಧನರಾದರು.

ತಂದೆ ಗೋಕುಲ್ ಠಾಕೂರ್ ಜೀವನ ನಿರ್ವಹಣೆಗೆ ಕ್ಷೌರಿಕ ವ್ಯತ್ತಿಯನ್ನು ಅವಲಂಬಿಸಿದ್ದರು. ಕಡುಬಡತನದಲ್ಲಿ ಕಾಲಿಗೆ ಚಪ್ಪಲಿ ಇಲ್ಲದೆ ಪ್ರತಿದಿನ ಆರು ಕಿ.ಮೀ ನಡೆದುಕೊಂಡು ಮೆಟ್ರಿಕ್ಯುಲೇಷನ್ ಉತ್ತೀರ್ಣರಾದ ಕರ್ಪೂರಿ ಠಾಕೂರ್ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ.

ಇವರ ಹಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ ಪ್ರಮುಖ ಭಾಷಣಕಾರರಾಗಿ ಬರಬೇಕಾಗಿದ್ದ ಸಮಾಜವಾದಿ ನಾಯಕ ರಮಾನಂದನ್ ಮಿಶ್ರಾ ಸಭೆಗೆ ತಡವಾಗಿ ಆಗಮಿಸಿದ ಕಾರಣ ಸ್ನೇಹಿತರ ಒತ್ತಾಯದ ಮೇರೆಗೆ ಭಾಷಣಕ್ಕಿಳಿದ ಕರ್ಪೂರಿಯವರ ಅದ್ಭುತ ಭಾಷಣಕ್ಕೆ ನೆರೆದ ಮಂದಿ ಚಪ್ಪಳೆ ತಟ್ಟಿ ಅಭಿನಂದಿಸುತ್ತಾರೆ. ಈ ವೇಳೆ ಸಭೆಗೆ ಆಗಮಿಸಿದ ಮಿಶ್ರಾ ಈ ಯುವಕನ ಭಾಷಣವನ್ನು ಕೇಳಿ ಸಂತೋಷಗೊಂಡು ನೀನು ಮುಂದಿನ ಪೀಳಿಗೆಯ ನಾಯಕ ಎಂದು ಹುರಿದುಂಬಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಉಪಾಧ್ಯಾಯರಾಗಿ ಕೆಲವು ವರ್ಷಗಳ ಕಾಲ ದುಡಿದ ಕರ್ಪೂರಿ ಠಾಕೂರ್, ಲೋಹಿಯಾ ವಿಚಾರಧಾರೆಗಳಿಗೆ ಪ್ರಭಾವಿತರಾಗಿ ಸಮಾಜವಾದಿ ಕಾರ್ಯಕರ್ತರಾಗಿ, ಜನನಾಯಕರಾಗಿ ಹಂತ ಹಂತವಾಗಿ ಬೆಳೆದು, ಚುನಾವಣಾ ಅಖಾಡಕ್ಕಿಳಿದು 1952ರಿಂದ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಾರೆ. ಒಂದು ಬಾರಿ ಲೋಕಸಭಾ ಸದಸ್ಯರು ಆಗಿದ್ದರು.

ಕರ್ಪೂರಿ ಠಾಕೂರ್ ಅವರಿಗೆ ಬಿಹಾರದ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಜೊತೆಗೆ ಶಿಕ್ಷಣ ಸಚಿವರಾಗಿ ದುಡಿಯುವ ಅವಕಾಶ ದೊರೆತ ಸಂಸರ್ಭದಲ್ಲಿ ತಮ್ಮ ರಾಜ್ಯದ ಮಕ್ಕಳ ಶ್ಯೆಕ್ಷಣಿಕ ಪ್ರಗತಿಗೆ ಮುಳ್ಳಾಗಿದ್ದ ಇಂಗ್ಲಿಷ್ ಭಾಷೆಯನ್ನು ಕಡ್ಡಾಯವಾಗಿ ಕಲಿಯುವ ಪದ್ಧತಿ ರದ್ದುಮಾಡಿ ಗ್ರಾಮೀಣ ಪ್ರದೇಶ ಮತ್ತು ಹಿಂದುಳಿದ ವರ್ಗದ ಮಕ್ಕಳಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ಇದ್ದ ಭಯ ನಿವಾರಿಸಿದರು.

1970 ರಿಂದ 1971 ಮತ್ತು 1977 ರಿಂದ 1979ರ ಅವಧಿಯಲ್ಲಿ ಎರಡು ಬಾರಿ ಬಿಹಾರದ ಮುಖ್ಯಮಂತ್ರಿ ಯಾಗಿ ಅಧಿಕಾರದಲ್ಲಿದ್ದರು. ಈ ಸಂದರ್ಭದಲ್ಲಿ ಠಾಕೂರ್ ಮಾಡಿದ ಹಲವಾರು ಕಾರ್ಯಗಳು ಇವರನ್ನು ಇಂದಿಗೂ ಬಿಹಾರದ ಜನತೆ ಸ್ಮರಿಸುವಂತೆ ಮಾಡಿದೆ. ದುಡಿಯುವ ಜನರ ಆರ್ಥಿಕ ಅವನತಿಗೆ ಕಾರಣವಾಗಿದ್ದ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ ಹೆಣ್ಣುಮಕ್ಕಳ ಮುಖದಲ್ಲಿ ಸಂತಸ ಮೂಡಿಸಿದರು. ಪ್ರಥಮ ಬಾರಿಗೆ ಆಯೋಗವನ್ನು ರಚಿಸಿ ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಿದರು. ಭೂರಹಿತರ ಪರವಾಗಿ ಕ್ರಾಂತಿಕಾರಿ ಕಾನೂನುಗಳನ್ನು ರೂಪಿಸಿದರು.

ಅವರು ಅನೇಕ ಹಿಂದುಳಿದ ವರ್ಗದ ಮತ್ತು ದಲಿತ ನಾಯಕರ ಬೆಳವಣಿಗೆಗೆ ಕಾರಣಕರ್ತರಾದರು. ಲಾಲೂಪ್ರಸಾದ್ ಯಾದವ್, ನಿತೀಶ್ ಕುಮಾರ್, ರಾಮವಿಲಾಸ್ ಪಾಸ್ವಾಸ್ ಹೀಗೆ ಅನೇಕ ನಾಯಕರು ಇವರ ಮಾರ್ಗದರ್ಶನದಲ್ಲಿ ಬೆಳೆದರು. ಬಡತನವನ್ನು ಅಪ್ಪಿಕೊಂಡಿದ್ದ ಇವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಸಾಧಾರಣ ಜೀವನವನ್ನು ನಡೆಸುತ್ತಿದ್ದರು. ತಮ್ಮ ಉಡುಗೆ, ತೊಡುಗೆಯಲ್ಲಿ ಎಂದು ಸಹ ಆಡಂಬರವನ್ನು ತೊರಲಿಲ್ಲ. ಕರ್ಪೂರಿ ಠಾಕೂರ್ ಮುಖ್ಯಮಂತ್ರಿಯಾದರೂ ಅವರ ತಂದೆ ಮಗನಿಂದ ಏನನ್ನೂ ನಿರೀಕ್ಷಿಸದೆ ರಾಜ್ಯದ ಜನರಿಗೆ ಒಳಿತು ಮಾಡಲೆಂದು ಬಯಸುತ್ತಾ ಸಾಧಾರಣವಾದ ಬದುಕು ಸಾಗಿಸಿದರು ಎಂದರೆ ನಂಬಲಸಾಧ್ಯ.

ಕರ್ಪೂರಿ ಠಾಕೂರ್ ಅವರಿಂದಾಗಿ ಬಿಹಾರದಲ್ಲಿ ಹಿಂದುಳಿದ ವರ್ಗ ಮತ್ತು ಶೋಷಿತ ಜನರು ಮುಖ್ಯ ವಾಹಿನಿಗೆ ಬರುವಂತಾದರು. ಅವರನ್ನು ಬಿಹಾರದ ಜನತೆ ಜನನಾಯಕ ಎಂದು ಕರೆಯುತ್ತಾರೆ. ಇವರು ನಿಧನದ ನಂತರ ಇವರು ಹುಟ್ಟಿದ ಪಿತೋಜಿಯ ಗ್ರಾಮ ಕರ್ಪೂರಿ ಠಾಕೂರ್ ಗ್ರಾಮವಾಗಿ ಮರುನಾಮಕರಣವಾಯಿತು. ಇವರ ಹೆಸರಿನಲ್ಲಿ ಪ್ರತಿಮೆಗಳು ಅನಾವರಣಗೊಂಡವು, ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ನಿರ್ಮಾಣವಾದವು.

ದೇಶದ ಬಹುತೇಕ ಸಮಾಜವಾದಿ ನಾಯಕರಿಗೆ ಇವರ ಬದುಕು ಸ್ಪೂರ್ತಿಯಾಯಿತು. ಸಮಾಜವಾದದ ವಿಚಾರವನ್ನು ಮಾತನಾಡಿದಷ್ಟು ಸುಲಭವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಕಠಿಣ ಬದ್ಧತೆಯ ಸಮಾಜವಾದಿ ನಾಯಕರಾದ ಕರ್ಪೂರಿ ಠಾಕೂರ್ ಶತಮಾನೋತ್ಸವ ಸಮಾರಂಭ ಕರ್ನಾಟಕದಲ್ಲಿಯೂ ನಡೆಯುತ್ತಿದೆ.

ಇಂತಹ ಧೀಮಂತ ಹಿಂದುಳಿದ ಮತ್ತು ಸಮಾಜವಾದಿ ಜನನಾಯಕ ಕರ್ಪೂರಿ ಠಾಕೂರ್ ಅವರು ಭಾರತದ ರಾಜಕೀಯ ಚರಿತ್ರೆಯಲ್ಲಿ ಅಜರಾಮರ ಸ್ಥಾನವನ್ನು ಪಡೆದಿದ್ದಾರೆ. ಈ ವರ್ಷ ಅವರ ಜನ್ಮ ಶತಮಾನೋತ್ವವವೂ ಹೌದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಅತ್ಯಂತ ಶ್ಲಾಘನೀಯವಾಗಿದೆ.

ಎಂ.ಕೆ. ಷಣ್ಮುಖಾನಂದ ಭಂಡಾರಿ
ಅಧ್ಯಕ್ಷರು, ಹಿಂದುಳಿದ ವರ್ಗ ವಿಭಾಗ
ಬ್ಲಾಕ್ ಕಾಂಗ್ರೇಸ್, ಮೂಡಿಗೆರೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ