October 5, 2024

ನಿರೂಪಣೆ : ಡಾ. ಸುಧಾ ಹೆಚ್.ಎಸ್,

ಸಂಸ್ಕೃತ ಉಪನ್ಯಾಸಕರು, ಮೈಸೂರು

 

ಈ ಜಗತ್ತಿನ ಸೃಷ್ಟಿಗೆ ಬ್ರಹ್ಮನೇ ಉಪಾದಾನ ಕಾರಣ ಮತ್ತು ನಿಮಿತ್ತ ಕಾರಣ. ಅವನು ಚರಾಚರ ಜಗತ್ತಿನಲ್ಲಿ ಓತಪ್ರೋತ ಆಗಿರುವನು. ಪ್ರತಿಯೊಂದು ಜೀವಿಯು ಬಂದಿರುವುದು ಬ್ರಹ್ಮನಿಂದ, ಹೋಗುವುದು ಸಹ ಬ್ರಹ್ಮನಲ್ಲಿಗೆ ಎಂದು ಉಪನಿಷತ್ತುಗಳು ಹೇಳುತ್ತವೆ.
ಓಂ ಬ್ರಹ್ಮಾದೇವಾನಾಂ ಪ್ರಥಮಃ ಸಂಬಭೂವ| ವಿಶ್ವಸ್ಯಕರ್ತಾ ಭುವನಸ್ಯ ಗೋಪ್ತಾ||
(ಮುಂಡಕೋಪನಿಷತ್ತು)
(ಬ್ರಹ್ಮನು ದೇವತೆಗಳಿಗೆ ಮೊದಲನೆಯವನಾಗಿ, ವಿಶ್ವಕ್ಕೆ ಕರ್ತನಾಗಿ, ಭುವನಕ್ಕೆ ರಕ್ಷಕನಾಗಿ ವ್ಯಕ್ತನಾದನು)
ಇಂತಹ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಜಗತ್ತಿನ ಬಗ್ಗೆ ಸತ್ಯ-ಮಿಥ್ಯದ ಜಿಜ್ಞಾಸೆ ಡಿ.ವಿ.ಜಿ.ಯವರಿಗಿದೆ. ಪರಬ್ರಹ್ಮನ ಸೃಷ್ಟಿಯಲ್ಲಿ ಅವರಿಗೆ ದ್ವಿತ್ವ ಭಾವನೆಯಿದ್ದು, ಸಾಕ್ಷಾತ್ ಪರಮಾತ್ಮನೇ ಎರಡು ವಿಧವಾಗಿ ಕಾಣಿಸುತ್ತಾನೆ (ಹರಿ-ಹರ).
ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿಥ್ಯೆಯೆನ್ನುವೊಡೆ|
ಸಂಬಂಧವಿಲ್ಲವೇನಾ ವಿಷಯಯುಗಕೆ||
ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ|
ನೆಮ್ಮುವುದಾರನೋ? ……….. ಮಂಕುತಿಮ್ಮ||
ಸೃಷ್ಟಿಯೆಲ್ಲಾ ಒಂದು ಮಾಯೆ! ಬ್ರಹ್ಮ ಮಾತ್ರ ಸತ್ಯ ಎಂದು ಅನ್ನುವುದಾದರೇ ಈ ಪ್ರಪಂಚವನ್ನು ಬ್ರಹ್ಮ ಸೃಷ್ಟಿಸಿದ ಅಂದಮೇಲೆ ಜಗತ್ತು-ಬ್ರಹ್ಮ ಈ ಎರಡಕ್ಕೂ (ವಿಷಯ ಯುಗ) ಸಂಬಂಧ ಇಲ್ಲ ಎಂದು ಹೇಗೆ ತಾನೇ ಹೇಳುವುದು? ಹಾಗಿದ್ದಲ್ಲಿ ನಮ್ಮ ಕಣ್ಣು ಮತ್ತು ಮನಸ್ಸೇ ನಮಗೆ ಸುಳ್ಳು ಹೇಳುತ್ತಿವೆ ಅಂದಾಗ ನಾವು ಇನ್ನಾರನ್ನು ನಂಬಲಿಕ್ಕೆ ಸಾಧ್ಯ?

ಈ ಸತ್ಯ-ಮಿಥ್ಯದೊಳಗಿನ ತೊಳಲಾಟದಲ್ಲಿ ಸಿಲುಕಿದ ಜೀವ ತನ್ನ ಇರುವಿಕೆಯನ್ನೇ ಮರೆಯಬೇಕಾದಂತಿದೆಯಲ್ಲ ಎನ್ನುವ ಆತಂಕ ಇಲ್ಲಿ ಕಾಣುತ್ತಿದೆ. ಹಾಗೆಂದೇ ಈ ಸತ್ಯ-ಮಿಥ್ಯೆಯ ಕಣ್ಣು-ಮುಚ್ಚಾಲೆ ಆಟ ಹೇಗಿದೆಯೆಂದರೆ ……
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ?|
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು?||
ಅಚ್ಚರಿಯತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ|
ಮುಚ್ಚಿಹವು ಸಾಜತೆಯ ಮಂಕುತಿಮ್ಮ||
‘ನಿಜ’ಅಂದರೆ ಏನು? ಅದು ಸುಳ್ಳಿನ ಹಿಂದೆ ಅವಿತುಕೊಂಡಿದೆಯಾ? ಆ ಮರೆಯಲ್ಲಿ ಕುಳಿತಂತಹದ್ದನ್ನು ನಾವು ‘ನಿಜ’ (ಸತ್ಯ) ಅಂತ ನಂಬಬೇಕೆ? ಇದೇನಿದು ಆಶ್ಚರ್ಯ! ಬ್ರಹ್ಮನ ಸೃಷ್ಟಿಯಲ್ಲಿ ಈ ‘ಸಹಜತೆ’ ಅನ್ನುವುದೇ ಮುಸುಕು ಹಾಕಿಕೊಂಡ ಗುಮ್ಮನಾಗಿದೆಯಲ್ಲಾ ….ಈ ಮುಸುಕನ್ನು ತೆಗೆದರೆ ತಾನೇ ನಮಗದರ ಅರಿವಾಗುವುದು. ಪ್ರಪಂಚದ ಜನರ ಸೋಗಲಾಡಿತನ ಒಂದೇ … ಎರಡೇ … ಊಸರವಳ್ಳಿಯಂತಹ ನಡತೆಯುಳ್ಳ ಮನುಷ್ಯರನ್ನ ಹೇಗೆ ನಂಬಬೇಕು? ಇವರಲ್ಲಿ ಏನಾದರೂ ಸಿದ್ಧಾಂತವಿದ್ದರೆ ತಾನೇ ನಂಬಿಕೆಗೆ ಅರ್ಹರಾಗುವುದು ಇಂತಹ ಒಳಗೊಂದು-ಹೊರಗೊಂದು ಇರುವವರನ್ನು ಸೃಷ್ಟಿ ಮಾಡಿದ್ದಾನೆ ಆ ಬ್ರಹ್ಮ ಎಂದರೆ ಅವನೇನು ಹುಚ್ಚ ಅಂತ ತಿಳಿಯಬೇಡಿ ಈ ಸೃಷ್ಟಿಯ ಹಿಂದೆ ಕೂಡ ಯಾರಿಗೂ ತಿಳಿಯದಿರುವ ನಿಯಮ ಇರಲೇಬೇಕು. ಆದರೆ ಬುದ್ಧಿವಂತ ಚಾಣಾಕ್ಷ ಬ್ರಹ್ಮ ಅವನ ಗುಟ್ಟನ್ನು ಯಾರಿಗೂ ಹೇಳಿಲ್ಲ, ಒಂದು ವೇಳೆ ಹೇಳಿದಿದ್ದರೆ ಈ ನರಮನುಷ್ಯ ತಾನೇ ಸೃಷ್ಟಿಕರ್ತನಾಗುತ್ತಿದ್ದ! ಆದ್ದರಿಂದ ಅದೊಂದು ರಹಸ್ಯವನ್ನು ತನ್ನಲ್ಲಿ ಬಚ್ಚಿಟ್ಟುಕೊಂಡು ಮಾನವನಿಗೆ ಸವಾಲುಗಳನ್ನು ಹಾಕುತ್ತಲೇ ಇದ್ದಾನೆ. ಒಂದು ವೇಳೆ ಈ ಗುಟ್ಟನ್ನು ಬಿಟ್ಟುಕೊಟ್ಟಿದ್ದೇ ಆದರೆ ಅದು ಅವನಿಗೆ ಒಂದು ಕೊರತೆಯಾಗಿ ಹುಲು ಮಾನವರು ಅವನನ್ನೇ ದುರಹಂಕಾರದಿಂದ ತುಳಿದು ಬಿಡುತ್ತಿದ್ದರೋ ಏನೋ …. ? ಅದಕ್ಕೆ
ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ|
ಸಲ್ಲದ ಕುಮಾರ್ಗದೊಳು ನಿನ್ನತಾಂ ನಡೆಸಿ||
ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ|
ಸೊಲ್ಲಿಪುದು ಸರಿಯೇನೋ? …. ಮಂಕುತಿಮ್ಮ||
ಈ ಜಗತ್ತೇ ಒಂದು ಮಾಯೆ ಎನ್ನುತ್ತಾ ನಮ್ಮ ಸುತ್ತಮುತ್ತೆಲ್ಲಾ ಆಡಂಬರ, ವೈಭೋಗ, ವೈಭವಗಳನ್ನು ಇಡುತ್ತಾ, ಆ ವೈಭೋಗದ ಬಿಸಿಲು ಕುದುರೆಯನ್ನೇರುವಂತೆ ಮನುಷ್ಯನನ್ನು ಪ್ರೇರೇಪಿಸುತ್ತಾ ಇಲ್ಲಸಲ್ಲದ ಆಸೆ ತೋರಿಸಿ ಯೋಗ್ಯವಲ್ಲದ ಕೆಟ್ಟದಾರಿಯಲ್ಲಿ ನಡೆಸುತ್ತಾ ಅಲ್ಲಲ್ಲಿ ಮನುಷ್ಯನನ್ನು ಎಡವಿ ಮುಗ್ಗರಿಸಿ ಬೀಳಿಸುತ್ತಾ, ನಾನು ಕೊಟ್ಟ ಸವಾಲುಗಳನ್ನು ನೀನು ಎದುರಿಸಲಾಗುವುದಿಲ್ಲ ಎಂದು ಕುಹಕ ನಗೆ ಬೀರುತ್ತಾ ಅಣಕಿಸುತ್ತಿದ್ದಾನೆ. ಹಾಗಾದರೆ ಈ ಬ್ರಹ್ಮರಚನೆಯ ಜಗತ್ತು ಕಣ್ಣಾ-ಮುಚ್ಚಾಲೆ ಆಟವಾಗಿ, ನಮ್ಮ ಆಸೆಗಳು, ಕಲ್ಪನೆಗಳೆಲ್ಲ ಮರೀಚಿಕೆ ಯಾಗುತ್ತಿವೆಯೇ? ಎಂಬ ಪ್ರಶ್ನೆಯನ್ನು ಹಾಕುತ್ತಾ ಬಹುಷಃ ಇದೇ ಇರಬಹುದೇನೋ “ವಿಧಿಬರಹ” ಎಂದು ಸಮಾಧಾನಮಾಡಿಕೊಳ್ಳುತ್ತಾ ಈ ಪ್ರಪಂಚದಲ್ಲಿ ಮಾನವನ ಅವಸ್ಥೆ ಇಷ್ಟೇ ಎಂದು ಮಾರ್ಮಿಕವಾಗಿ ಜೀವನದ ಸತ್ಯವನ್ನು ಬಿಚ್ಚಿಡುತ್ತಿದ್ದಾರೆ ಡಿ.ವಿ.ಜಿ.ಯವರು.

ಇಂತಹ ಊಸರವಳ್ಳಿಯ ಆಟ ಆಡುತ್ತಿರುವ ಪರಮಾತ್ಮ ಎಲ್ಲಿದ್ದೀಯಪ್ಪಾ ನೀನು ನಮಗೇಕೆ ಕಾಣಿಸುತ್ತಿಲ್ಲ ಎಂದು ಕಳಕಳಿ ಯಿಂದ ಕೇಳುತ್ತಿದ್ದಾರೆ. (ಈ ರೀತಿಯಾದ ಕಳಕಳಿಯನ್ನು ಶ್ರೀ ರಾಮ ಕೃಷ್ಣ ಪರಮಹಂಸರಲ್ಲಿ ನಾವು ಕಾಣುತ್ತೇವೆ) ಸಂಪೂರ್ಣವಾಗಿ ನಿನ್ನ ಇರುವಿಕೆಯನ್ನು ನಮಗೆ ತೋರಿಸದಿದ್ದರೂ ಚಿಂತೆಯಿಲ್ಲ ಒಂದು ಸಣ್ಣ ‘ಕಿಡಿ’ಯಾಗಿಯಾದರೂ ಸರಿ ಕಗ್ಗತ್ತಲಿನಲ್ಲಿ ಓಡಾಡುವಾಗ ‘ಮಿಂಚುಹುಳ’ದ ಬೆಳಕೇ ದಾರಿದೀಪವಾಗುವಂತೆ ನಿನ್ನ ಅರಿವಿಗೆ ನಮಗೆ ಅಷ್ಟೇ ಅಲ್ಪ ಬೆಳಕಾದರೂ ಸಾಕು ಎನ್ನುತ್ತಾ
ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ?|
ಶಶಿರವಿಗಳವನ ಮನೆಕಿಟಕಿಯಾಗಿರರೇಂ?||
ಮಸುಕುಬೆಳಕೊಂದಾದ ಸಂಜೆಮಂಜೇನವನು|
ಮಿಸುಕಿ ಸುಳಿಯುವ ಸಮಯ? …. ಮಂಕುತಿಮ್ಮ||
ಒಟ್ಟಾರೆ ಪರಮಾತ್ಮನ ಇರುವಿಕೆಯನ್ನು ಹೇಗಾದರೂ ಕಾಣಲೇಬೇಕೆಂಬ ತವಕದಿಂದ ಕವಿಯು ಹಗಲು ಹೊತ್ತು ನೀನು ಕಾಣಬಾರದು ಅಂತ ಏನಾದರೂ ನೀನು ನಿಯಮ ಮಾಡಿ ಕೊಂಡಿದ್ದರೆ ರಾತ್ರಿಹೊತ್ತಾದರೂ (ನಿಶೆ) ಕಾಣಬಹುದಲ್ಲ? ಹಗಲಿಗೆ ಸೂರ್ಯ ಒಡೆಯ, ರಾತ್ರಿಗೆ ಚಂದ್ರ ಒಡೆಯ ಇಂತಹ ಸೂರ್ಯ-ಚಂದ್ರರು ಇರುವಾಗ ಆ ಬೆಳಕಿನಲ್ಲಿ ನಿನ್ನ ಇರುವಿಕೆ ನಮ್ಮ ಗೋಚರಕ್ಕೆ ಬರಲಾರದೆ ಸಂಜೆಯ ಮಬ್ಬು ಬೆಳಕಲ್ಲಿ ನೀನೇನಾದರು ಬಂದು ಮರೆಯಾಗುತ್ತಿರುವೆಯೋ? … ಏನಾದರೂ ಆಗಲಿ ಒಂದೇ ಒಂದು ನಿನ್ನ ಇರುವಿಕೆಯ ಕುರುಹನ್ನು ತೋರಿಸಬಾರದೇ? ಎಂದು ಆ ಪರಮಾತ್ಮನಲ್ಲಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.

ಪ್ರಪಂಚದ ಎಲ್ಲ ಭಾಗಗಳನ್ನು ಆವರಿಸಿರುವ ಆ ಕಾಣದ ಶಕ್ತಿಯ ಅರಿವನ್ನು ಹಾಗೂ ಅದರ ಇರುವಿಕೆಯ ಶಕ್ತಿಯನ್ನು ಮಾನವ ಜನತೆಗೆ ಮಾಡಿಕೊಡುತ್ತಾ, ಆ ಕಾಣದ ಶಕ್ತಿಯನ್ನು ಕಾಣುವ ಹಂಬಲ ದಿಂದಾದರೂ ಅವನನ್ನು ಸ್ಮರಿಸಿ ಅವನಿಗೆ ಮೊರೆ ಹೋಗಬೇಕೆನ್ನುವ ತಾತ್ಪರ್ಯ ಇಲ್ಲಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ