October 5, 2024

ಅನಂತ್ ಎಂ.ಎಸ್.

ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಕಳೆದ ಐದು ವರ್ಷಗಳ ಅಧಿಕಾರವಧಿಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಬರ, ಕಾಫಿ, ಅಡಿಕೆ ಬೆಳೆಗಾರರ ಸಮಸ್ಯೆ, ಕಾಡಾನೆಗಳ ಹಾವಳಿ, ಅರಣ್ಯ ಯೋಜನೆಗಳು, ಬೆಳೆ ಪರಿಹಾರ, ಸರ್ಫೇಸಿ ಕಾಯ್ದೆ ಸೇರಿದಂತೆ ಜಿಲ್ಲೆಯ ಜನರ ಪ್ರಮುಖ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಒಂದು ದಿನವೂ ಚರ್ಚೆ ಮಾಡಿಲ್ಲ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ಜನರ ಭಾವನೆ ಕೆರಳಿಸಿ ಕೋಮುಗಲಭೆ ಸೃಷ್ಟಿಗೆ ಯತ್ನಿಸಿರುವುದು, ರಾಜ್ಯದ ಕಾಂಗ್ರೆಸ್ ಸರಕಾರವನ್ನು ಟೀಕಿಸುತ್ತಾ ಕೀಳು ರಾಜಕಾರಣ ಮಾಡಿರುವುದೇ ಅವರ ಸಾಧನೆಯಾಗಿದೆ ಎಂದು ಜಿಪಂ ಮಾಜಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಎಸ್.ಅನಂತ್ ಟೀಕಿಸಿದ್ದಾರೆ.

ಈ ಸಂಬಂಧ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿಕ್ಕಮಗಳೂರು-ಉಡುಪಿ ಲೋಕಸಭೆ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿರುವ ಶೋಭಾ ಕರಂದ್ಲಾಜೆ ಅವರು ಸದ್ಯ ಕೇಂದ್ರದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವೆಯಾಗಿದ್ದಾರೆ. ಹಿಂದಿನ ಅವಧಿಯಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡದಿದ್ದರೂ ಕೋಮುವಾದವನ್ನೇ ಚುನಾವಣಾ ಅಸ್ತ್ರವನ್ನಾಗಿಸಿಕೊಂಡು ಮತ್ತೆ ಚುನಾವಣೆ ಗೆದ್ದಿರುವ ಅವರು ಈ ಅವಧಿಯಲ್ಲಿ ಸಚಿವೆ ಆಗಿ ಜಿಲ್ಲೆಗೆ ಏನಾದರೂ ಕೊಡುಗೆ ನೀಡುತ್ತಾರೆಂಬ ನಿರೀಕ್ಷೆ ಕಾಫಿನಾಡಿನ ಜನರು ಇಟ್ಟುಕೊಂಡಿದ್ದರು. ಆದರೆ ಕೇಂದ್ರ ಸಚಿವೆಯಾಗಿ ಕಳೆದ 5 ವರ್ಷಗಳ ಕಾಲ ದಿಲ್ಲಿಯಲ್ಲೇ ಬಿಡಾರ ಹೂಡುವ ಮೂಲಕ ಜಿಲ್ಲೆಯ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಜನರ ನಿರೀಕ್ಷೆಯನ್ನು ಈ ಬಾರಿಯೂ ಹುಸಿಗೊಳಿಸಿದ್ದಾರೆ. ಸಂಸದೆ ಶೋಭಾ ಅವರಿಂದಾಗಿ ಅವರ ಸುತ್ತಮುತ್ತಾ ಸುತ್ತುತ್ತಿದ್ದವರು ಮಾತ್ರ ಉದ್ಧಾರವಾಗಿದ್ದಾರೆಯೇ ಹೊರತು ಜಿಲ್ಲೆಯ ರೈತರು, ಬೆಳೆಗಾರರು, ಕಾರ್ಮಿಕರು, ಬಡವರು, ಅರಣ್ಯ ಭೂಮಿ ಸಂತ್ರರಿಗೆ ನಯಾ ಪೈಸೆಯ ಲಾಭವಾಗಿಲ್ಲ ಎಂದು ಆರೋಪಿಸಿದ್ದಾರೆ.

ಸದ್ಯ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣಕ್ಕೆ ಜಿಲ್ಲೆಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಅವರು ಜಿಲ್ಲೆಯ ಅಭಿವೃದ್ಧಿ, ಜಿಲ್ಲೆಗೆ ನೀಡಿರುವ ಕೊಡುಗೆ, ರೈತರು, ಕಾಫಿ, ಅಡಿಕೆ ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ಆದರೆ ಜಿಲ್ಲೆಗೆ ಬಂದಾಗಲೆಲ್ಲಾ ಅಯೋಧ್ಯೆ ವಿಚಾರವನ್ನೇ ಎಲ್ಲೆಡೆ ಪ್ರಸ್ತಾಪಿಸುತ್ತಾ ಜನರ ಭಾವನೆಗಳನ್ನು ಕೆರಳಿಸಿ ಮತ್ತೊಂದು ಬಾರಿ ಸಂಸದೆಯಾಗುವ ಕನಸು ಕಾಣುತ್ತಿದ್ದಾರೆ. ಕಳೆದ ೫ ವರ್ಷಗಳ ಕಾಲ ಕೋಮುವಾದಿ ಹಾಗೂ ಅವಕಾಶವಾದಿ ರಾಜಕಾರಣ ಮಾಡುತ್ತಾ ನಿದ್ರಾವಸ್ಥೆಯಲ್ಲಿದ್ದ ಅವರು, ಚುನಾವಣೆ ಸಂದರ್ಭದಲ್ಲಿ ಎಚ್ಚರಗೊಂಡಿದ್ದಾರೆ ಎಂದ ಅವರು, ಇಡೀ ಕ್ಷೇತ್ರದಲ್ಲಿ ಸಾವಿರಾರು ಸಮಸ್ಯೆಗಳಿದ್ದರೂ ಜನರ ಸಮಸ್ಯೆಗಳ ಬಗ್ಗೆ ಮಾತನಾಡದ ಅವರು, ಮುಂದಿನ ಚುನಾವಣೆಗಾಗಿ ವೋಟ್‌ಬ್ಯಾಂಕ್ ನಿರ್ಮಿಸಿಕೊಳ್ಳಲು ಕೋಮುವಾದಿ ಹೇಳಿಕೆ ನೀಡುತ್ತಾ ಜನರ ಮಧ್ಯೆ ಧ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಅತೀವೃಷ್ಟಿಯಾಗಿದ್ದು, ಕಾಫಿ ಬೆಳೆಗಾರರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈ ಬಾರಿ ಅನಾವೃಷ್ಟಿ ಹಾಗೂ ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆ ನಷ್ಟವಾಗಿದ್ದು, ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬ್ಯಾಂಕ್ ಸಾಲ ತೀರಿಸಲು ಸಾಧ್ಯವಾಗದೇ ಬ್ಯಾಂಕ್‌ಗಳು ಸರ್ಫೇಸಿ ಕಾಯ್ದೆಯ ಗುಮ್ಮ ಮುಂದಿಟ್ಟುಕೊಂಡು ಕಾಫಿ ತೋಟಗಳನ್ನು ಹರಾಜು ಹಾಕುತ್ತಿವೆ. ಬೆಳೆಗಾರರು ಅನೇಕ ಬಾರಿ ಕೇಂದ್ರದ ಬಳಿ ನಿಯೋಗ ತೆರಳಿ ಪರಿಹಾರಕ್ಕೆ ಅಂಗಲಾಚಿದರೂ ಕೇಂದ್ರ ಸರಕಾರ ನಯಾ ಪೈಸೆ ಪರಿಹಾರ ನೀಡದೇ ಅನ್ಯಾಯ ಮಾಡಿದೆ. ಅಡಿಕೆ ಬೆಳೆಗಾರರು ಅತೀವೃಷ್ಟಿ, ಅನಾವೃಷ್ಟಿ, ಅಡಿಕೆ ಬೆಳೆಗೆ ತಗುಲಿರುವ ರೋಗಗಳಿಂದ ಕಂಗಾಲಾಗಿದ್ದು, ಪರಿಹಾರ ಕಾಣದೇ ತೋಟಗಳನ್ನು ರಿಯಲ್ ಎಸ್ಟೇಟ್ ಮಾಫಿಯಾದವರಿಗೆ ಮಾರಿ ನಗರ ಸೇರುತ್ತಿದ್ದಾರೆ. ಜಿಲ್ಲೆಯ ಬಯಲು ಭಾಗದಲ್ಲಿ ತೀವ್ರ ಬರ ಇದ್ದು, ಬೆಳೆ ನಷ್ಟ, ಬೆಳೆ ಪರಿಹಾರಕ್ಕೆ ಕೇಂದ್ರ ಸರಕಾರದಿಂದ ನಯಾ ಪೈಸೆ ಅನುದಾನವೂ ಬಿಡುಗಡೆಯಾಗಿಲ್ಲ. ಈ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವೆ ಶೋಭಾ ಒಮ್ಮೆಯೂ ಚರ್ಚಿಸದೇ ನಿರ್ಲಕ್ಷ್ಯ ವಹಿಸಿ ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ಮೋಸ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಅರಣ್ಯ ಯೋಜನೆಗಳಿಂದಾಗಿ ಕೃಷಿಕರು, ಬೆಳೆಗಾರರು ಒಕ್ಕಲೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ದಾಳಿಗಳ ಹಾವಳಿಯಿಂದಾಗಿ ದಿನಕ್ಕೊಬ್ಬರಂತೆ ಸಾಯುತ್ತಿದ್ದರೂ ಕೇಂದ್ರ ಸಚಿವೆ ಶೋಭಾ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ. ಕಸ್ತೂರಿರಂಗನ್ ವರದಿ ಇಲ್ಲಿನ ಜನರ ಮೇಲೆ ತೂಗುಕತ್ತಿಯಾಗಿದೆ. ಚಿಕ್ಕಮಗಳೂರು-ಕಡೂರು ಹೆದ್ದಾರಿ ಯೋಜನೆ ನೆನೆಗುದಿಗೆ ಬಿದ್ದಿದೆ, ಚತುಸ್ಪಥ ರಸ್ತೆ, ಹೊಸ ರೈಲ್ವೆ ಯೋಜನೆಗಳು ಪ್ರಗತಿ ಕಂಡಿಲ್ಲ. ಇದಕ್ಕೆಲ್ಲ 10 ವರ್ಷಗಳ ಕಾಲ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರೇ ಕಾರಣರಾಗಿದ್ದು, ಇಂತಹ ಬೇಜವಬ್ದಾರಿ ಸಂಸದೆಗೆ ಈ ಬಾರಿ ಕಾಫಿನಾಡಿನ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಕೋಮುವಾದ, ಧ್ವೇಷದ ರಾಜಕಾರಣಕ್ಕೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ