October 5, 2024

ಪೊಲೀಸ್ ಸರ್ಕಾರದ ಒಂದು ಮುಖ್ಯ ಅಂಗ, ಪೊಲೀಸರು ಚೆನ್ನಾಗಿದ್ದರೆ, ರಾಜ್ಯದ ಸುರಕ್ಷತೆ, ಕಾನೂನು ವ್ಯವಸ್ಥೆ ಚೆನ್ನಾಗಿದ್ದರೆ, ಆ ರಾಜ್ಯ ಅಭಿವೃದ್ಧಿ ದಾರಿಯಲ್ಲಿ ಸಾಗುತ್ತಿದೆ ಎಂದರ್ಥ. ಇಡೀ ದೇಶಕ್ಕೆ ಕರ್ನಾಟಕ ಪೊಲೀಸ್ ಮಾದರಿ ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯಲ್ಲಿ ಸುಮಾರು 9.50 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಪೊಲೀಸ್ ವಸತಿ ಸಮುಚ್ಚಯ ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರಿಗೆ ಏನೆಲ್ಲಾ ಸವಲತ್ತು ಬೇಕೋ ಅದನ್ನು ಮಾಡಿಕೊಡುವುದು ಸರ್ಕಾರದ ಜವಬ್ದಾರಿ ಎಂದರು.

ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಮನೆಗಳಲ್ಲಿ ಪೊಲೀಸರು ವಾಸವಾಗುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪೊಲೀಸ್ ಗೃಹ ಕಾರ್ಯಕ್ರಮ ಜಾರಿಗೆ ತರಲಾಗಿತ್ತು. ಅದರಡಿಯಲ್ಲಿ ಸುಮಾರು 47 ಸಾವಿರ ಮನೆ ಈಗಾಗಲೇ ರಾಜ್ಯದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಯೋಜನೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ಎಲ್ಲಾ ಪೊಲೀಸರಿಗೆ ಮನೆಗಳನ್ನು ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.  ಈ ಯೋಜನೆಯಡಿ ಸವಲತ್ತು ಪಡೆದಿರುವ ಪೊಲೀಸರ ಸಂಖ್ಯೆ ಶೇ. 45 ರಷ್ಟಿದೆ. ಇದು, ಶೇ. 100 ಕ್ಕೆ ಬರಬೇಕು. ಹಾಗಾಗಿ ಕೇಳಿದ ತಕ್ಷಣ ಸಿಎಂ ಸಿದ್ದರಾಮಯ್ಯ ಅವರು 3 ಸಾವಿರ ಕೋಟಿ ರುಪಾಯಿ ಕೊಟ್ಟಿದ್ದರು.

ಈಗಲೂ ಕೂಡ ಪೊಲೀಸ್ ಗೃಹ ನಿರ್ಮಾಣ ಕ್ಕೆ ಇನ್ನು 2 ಸಾವಿರ ಕೋಟಿ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಇತ್ತೀಚೆಗೆ 400 ಕೋಟಿ ರು. ಬಿಡುಗಡೆಯಾಗಿದೆ ಎಂದು ಹೇಳಿದರು. ಪೊಲೀಸ್ ವಸತಿ ಯೋಜನೆ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಾರದು. ಅದು, ಗ್ರಾಮಾಂತರ ಪ್ರದೇಶಕ್ಕೆ ವಿಸ್ತರಿಸಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ. ಹಾಗಾಗಿ ಮೊದಲ ಆದ್ಯತೆಯನ್ನು ಗ್ರಾಮೀಣ ಪ್ರದೇಶಕ್ಕೆ ನೀಡಲಾಗುವುದು ಎಂದರು. ಪೊಲೀಸ್ ಠಾಣೆಗಳನ್ನು ಆಧುನೀಕರಣ ಮಾಡಲಾಗುತ್ತಿದೆ. ಠಾಣೆಗೆ ಹೋದರೆ ನಮ್ಮನ್ನು ಅಪರಾಧಿಯಂತೆ ಕಾಣುತ್ತಾರೆಂಬ ಭಾವನೆ ಜನರಿಂದ ಹೋಗಬೇಕು. ಪೊಲೀಸರು ಜನಸ್ನೇಹಿಯಾಗಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಗೊತ್ತಾಗದ ಹಾಗೆ ದೋಚುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ರಾಜ್ಯದ 40 ಠಾಣೆಗಳಲ್ಲಿ ಸೈಬರ್ ಕ್ರೈಂ ವಿಭಾಗಗಳನ್ನು ತೆರೆಯಲಾಗಿದೆ ಎಂದ ಅವರು, ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಕೆಲಸಕ್ಕೆ ಸ್ನಾತಕೋತ್ತರ ಪದವಿದಾರರು ಹಾಗೂ ಎಂಜಿನಿಯರ್‌ಗಳು ಬರುತ್ತಿದ್ದಾರೆ. ಅವರ ಜ್ಞಾನವನ್ನು ಇಲಾಖೆ ಬಳಸಿಕೊಳ್ಳುತ್ತಿದೆ ಎಂದರು. ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಮಾಡಿದ್ದೇವೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಸುಮಾರು 130 ಕೋಟಿ ರು. ವೆಚ್ಚದಲ್ಲಿ ಕಮಾಂಡ್ ಸೆಂಟರ್ ತೆರಲಾಗುವುದು. ಪೊಲೀಸ್ ಠಾಣೆಗಳಲ್ಲಿ ನಡೆಯುವ ದೈನಂದಿನ ಕೆಲಸವನ್ನು ಕೇಂದ್ರ ಸ್ಥಾನದಲ್ಲಿ ಉನ್ನತ ಅಧಿಕಾರಿಗಳು ನೋಡಬಹುದು ಎಂದರು.

ಕಾರ್ಯಕ್ರಮದಲ್ಲಿ ಶಾಸಕರುಗಳಾದ ಟಿ.ಡಿ. ರಾಜೇಗೌಡ, ನಯನಾ ಮೋಟಮ್ಮ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಆರ್. ಹಿತೇಂದ್ರ, ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಮುಖ್ಯ ಅಭಿಯಂತರರಾದ ಜಿ.ಎಚ್. ಮಂಜುನಾಥ್ ಉಪಸ್ಥಿತರಿದ್ದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಿಜಿಪಿ ಡಾ. ಕೆ. ರಾಮಚಂದ್ರರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಸ್ವಾಗತಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ