October 5, 2024

ವಿವಾಹಿತ ಮಹಿಳೆಯ ಅನುಮಾನಾಸ್ಪದ ಸಾವಿಗೆ ಟ್ವಿಸ್ಟ್ ಸಿಕ್ಕಿದೆ. ಪತಿಯೇ ರಾಗಿಮುದ್ದೆಯಲ್ಲಿ ಸಯನೈಡ್ ಹಾಕಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾನೆ.

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ದೇವರುಂದ ಸಮೀಪದ ಹಕ್ಕೆರುದ್ದಿ ಎಂಬಲ್ಲಿ ಸೋಮವಾರ ಶ್ವೇತಾ(32 ವರ್ಷ) ಎಂಬ ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿದ ಸಾವನ್ನಪ್ಪಿದ್ದರು. ಆಕೆಯ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಕತೆಕಟ್ಟಿ ಪತ್ನಿಯ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದ. ಆ ಸಂದರ್ಭದಲ್ಲಿ ಮೃತ ಮಹಿಳೆಯ ಸಂಬಂಧಿಕರು ಮಧ್ಯಪ್ರವೇಶಿಸಿ ಇದು ಹೃದಯಾಘಾತವಲ್ಲ, ಪತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶ್ವೇತಾ ಸಹೋದರ ನೀಡಿದ ದೂರಿನ ಆಧಾರದಲ್ಲಿ ದರ್ಶನ್ ನನ್ನು ಗೋಣಿಬೀಡು ಪೊಲೀಸರು ವಶಕ್ಕೆ ಪಡೆದಿದ್ದರು. ಮೃತದೇಹವನ್ನು ಚಿಕ್ಕಮಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿಲ್ಲ ಎಂದು ಮೇಲ್ನೋಟಕ್ಕೆ ತಿಳಿದುಬಂದಿತ್ತು. ಇದರಿಂದ ಅನುಮಾನಗೊಂಡು ದರ್ಶನ್ ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪತ್ನಿಯನ್ನು ತಾನೇ ಕೊಂದಿರುವುದಾಗಿ ಬಾಯಿಬಿಟ್ಟಿದ್ದಾನೆ.

ಭಾನುವಾರ ರಾತ್ರಿ ಊಟ ಮಾಡುವಾಗ ರಾಗಿಮುದ್ದೆಯಲ್ಲಿ ಸಯನೈಡ್ ಹಾಕಿ ಪತ್ನಿಗೆ ನೀಡಿದ್ದು, ಇದರಿಂದ ಶ್ವೇತಾ ಮಲಗಿದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ನಂತರ ಪತ್ನಿ ಕೈಗೆ ವಿಷದ ಇಂಜೆಕ್ಷನ್ ಚುಚ್ಚಿ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಯೋಚಿಸಿದ್ದು, ಆದರೆ ಆ ಫ್ಲಾನ್ ಕೈಬಿಟ್ಟು ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು, ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಚಿಕ್ಕಮಗಳೂರು ಆಸ್ಪತ್ರೆಗೆ ಕೊಂಡೊಯ್ದಂತೆ ಮಾಡಿ ಮರಳಿ ಮನೆಗೆ ತಂದು ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿದ್ದ.

ಮೂಡಿಗೆರೆ ತಾಲ್ಲೂಕಿನ ದೇವರುಂದ ಹಕ್ಕೆರುದ್ದಿ ಗ್ರಾಮದ ಬಾಬು ಪೂಜಾರಿ ಎಂಬುವವರ ಪುತ್ರ ದರ್ಶನ್ ಪೂಜಾರಿ ಕಳೆದ 7 ವರ್ಷದ ಹಿಂದೆ ಶ್ವೇತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ಇವರಿಬ್ಬರು ಬೆಂಗಳೂರಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತಮ್ಮದೇ ಆದ ಟ್ರೂ ಮೆಡಿಕ್ಸ್ ಎಂಬ ಮೆಡಿಕಲ್ ಲ್ಯಾಬೋರೇಟರಿ ಪ್ರಾರಂಭಿಸಿದ್ದರು. ದಂಪತಿಗಳಿಗೆ ಒಬ್ಬ ಗಂಡು ಮಗನಿದ್ದಾನೆ.

ಈಗ್ಗೆ ಒಂದು ವಾರದ ಹಿಂದೆ ದರ್ಶನ್ ಪತ್ನಿ ಮಗನೊಂದಿಗೆ ತನ್ನ ಸ್ವಂತ ಊರು ಹಕ್ಕೇರುದ್ದಿಗೆ ಬಂದಿದ್ದನು. ಈ ನಡುವೆ ದರ್ಶನ್ ಗೆ ಆತನ ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳೊಂದಿಗೆ ಅಕ್ರಮ ಸಂಬಂಧ ಇತ್ತು ಎಂದು ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ತಿಳಿದುಬಂದಿದೆ. ದರ್ಶನ ಪತ್ನಿ ಶ್ವೇತಾ ಆ ಮಹಿಳೆಯೊಂದಿಗೆ ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗಿತ್ತು. ಶ್ವೇತಾ ಸಹೋದರ ತಾನು ಠಾಣೆಗೆ ನೀಡಿರುವ ದೂರಿನಲ್ಲಿಯೂ ಸಹ ಆ ಮಹಿಳೆಯ ಹೆಸರನ್ನು ಉಲ್ಲೇಖಿಸಿದ್ದರು.

ತನ್ನ ಅಕ್ರಮ ಸಂಬಂಧಕ್ಕೆ ಪತ್ನಿ ಅಡ್ಡಿಪಡಿಸುತ್ತಿದ್ದಾಳೆ ಎಂದು ಪತ್ನಿಯನ್ನೇ ಕೊಲೆ ಮಾಡಿ ಅದನ್ನು ಹೃದಯಾಘಾತವೆಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕಲು ದರ್ಶನ್ ಸಂಚು ರೂಪಿಸಿದ್ದ ಎನ್ನಲಾಗಿದೆ. ಆದರೆ ಮೃತ ಶ್ವೇತಾ ಅವರ ಪೋಷಕರು ಮತ್ತು ಸಂಬಂಧಿಕರ ಸಕಾಲಿಕ ಮಧ್ಯಪ್ರವೇಶದಿಂದ ಹಾಗೂ ಪೊಲೀಸರ ತನಿಖೆಯಿಂದ ದರ್ಶನ್ ಬಣ್ಣ ಬಯಲಾಗಿದೆ.

ಎಸ್ಪಿ ವಿಕ್ರಂ ಅಮಟೆ, ಅಡಿಷನಲ್ ಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಶೈಲೇಂದ್ರ, ಮಾರ್ಗದರ್ಶನದಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ, ಗೋಣಿಬೀಡು ಪಿಎಸೈ ಹರ್ಷಗೌಡ ಮತ್ತು ಸಿಬ್ಬಂದಿಗಳು ಪ್ರಕರಣದ ತನಿಖೆ ಕೈಗೊಂಡಿದ್ದರು. ಬುಧವಾರ ಮಧ್ಯಾಹ್ನ ಆರೋಪಿಯನ್ನು ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆ ಸಂಚಿಯಲ್ಲಿ ದರ್ಶನ್ ಒಬ್ಬನೇ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಆತನೊಬ್ಬನನ್ನೇ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ವೇಳೆ ಇದರಲ್ಲಿ ಬೇರೆಯವರ ಪಾತ್ರ ಕಂಡು ಬಂದರೆ ಅವರ ಮೇಲೂ ಪ್ರಕರಣ ದಾಖಲಿಸುತ್ತೇವೆ, ದರ್ಶನ್ ರಾಗಿಮುದ್ದೆಯಲ್ಲಿ ವಿಷವಿಕ್ಕಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಯಾವ ಮಾದರಿ ವಿಷ ಎಂಬುದು ಖಚಿತವಾಗುತ್ತದೆ ಎಂದು ಜಿಲ್ಲಾ ಎಸ್ಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ಒಟ್ಟಾರೆ ಪ್ರೀತಿಸಿ ಮದುವೆಯಾಗಿದ್ದ ಮತ್ತು ಇನ್ನೂ ಬಾಳಿಬದುಕಬೇಕಾಗಿದ್ದ ಪತ್ನಿಯನ್ನು ತಾನೇ ಕೈಯಾರೆ ಕೊಲೆ ಮಾಡಿ ದರ್ಶನ್ ಇದೀಗ ಜೈಲು ಪಾಲಾಗಿದ್ದಾನೆ. ಅಮ್ಮನ್ನನ್ನು ಕಳೆದುಕೊಂಡ ಪುತ್ರ ಈಗ ತಬ್ಬಲಿಯಾಗಿದ್ದಾನೆ.

ಪ್ರಕರಣದಿಂದ ಸಂಬಂಧಿಕರು ಮತ್ತು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಶ್ವೇತಾ ಅವರ ಮೃತದೇಹವನ್ನು ತವರು ಮನೆಯವರು ಕಳಸಕ್ಕೆ ಕೊಂಡೊಯ್ದು ಅಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ