October 5, 2024

ಡಿ. ಬಿ. ಚಂದ್ರೇಗೌಡರ ಹೆಸರು ಭಾರತದ ರಾಜಕೀಯ ಚರಿತ್ರೆಯಲ್ಲಿ ವಿಶಿಷ್ಠ ಸ್ಥಾನ ಪಡೆದಿದೆ. ದೇಶದ ಅತ್ಯುನ್ನತ ಸಂಸದೀಯ ಪಟುವಾಗಿ, ಸ್ಥಿತಪ್ರಜ್ಞಾ ಮುತ್ಸದ್ದಿಯಾಗಿ ಅವರು ಒಂದಿಡೀ ಜನಾಂಗವನ್ನು ಪ್ರಭಾವಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಡಿ.ಬಿ.ಚಂದ್ರೇಗೌಡರಂತಹ ಅಪರೂಪದ ವ್ಯಕ್ತಿಯನ್ನು ತಾನು ಕಂಡಿಲ್ಲ. ಜನರ ಸೇವೆಯನ್ನು ನಿಸ್ವಾರ್ಥದಿಂದ ಮಾಡಬೇಕೆಂಬುದುದೇ ಅವರ ಆಸೆಯಾಗಿತ್ತು. ಈ ಕಾರಣದಿಂದ ಅವರು ಹಣದ ಹಿಂದೆ ಹೋಗಲಿಲ್ಲ. ಜತೆಗೆ ಕುಟುಂಬ ರಾಜಕಾರಣ ಮಾಡಲೇ ಇಲ್ಲವೆಂದು ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ರವೀಂದ್ರ ರೇಷ್ಮೆ ಹೇಳಿದರು.

ಅವರು ಶುಕ್ರವಾರ ಸಂಜೆ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಏರ್ಪಡಿಸಿದ್ದ ಮಾಜಿ ಸಚಿವ, ಹಿರಿಯ ರಾಜಕಾರಣಿ ದಿವಂಗತ ಡಿ.ಬಿ.ಚಂದ್ರೇಗೌಡ ಅವರಿಗೆ ನುಡಿನಮನ ಮತ್ತು ಗೀತ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂದಿನ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ರಾಜಕೀಯದಲ್ಲಿ ತಾನು ಶಾಸಕ, ಮಂತ್ರಿ, ಮುಖ್ಯಮಂತ್ರಿಯಾಗಬೇಕೆಂದು ಲಾಬಿ ಮಾಡುವುದೇ ಸಾಮಾನ್ಯವಾಗಿಬಿಟ್ಟಿದೆ. ಆದರೆ ಡಿಬಿಸಿ ಅವರು ಯಾವ ಸ್ಥಾನಕ್ಕಾಗಿಯೂ ಆಸೆ ಪಡಲಿಲ್ಲ. ಇಂದಿರಾ ಗಾಂಧಿ ಜೀವನ ಚರಿತ್ರೆ ಪುಟಗಳನ್ನು ಮೆಲಕು ಹಾಕಿದರೆ ಡಿ.ಬಿ.ಚಂದ್ರೇಗೌಡ ಅವರ ಪಾತ್ರ ಅತ್ಯಂತ ಪ್ರಮುಖವಾದೆ. 1978ರಲ್ಲಿ ಡಿ.ಬಿ.ಸಿಯವರು ಇಂದಿರಾಗಾಂಧಿಯವರಿಗಾಗಿ ತಮ್ಮ ಲೋಕಸಭಾ ಸ್ಥಾನವನ್ನು ತ್ಯಜಿಸಿದ್ದರು. ಇಂದಿರಾಗಾಂಧಿಯವರು ರಾಜಕೀಯ ಮರುಹುಟ್ಟು ಪಡೆಯಲು ಕಾರಣರಾಗಿದ್ದರು. ಡಿಬಿಸಿ ಅವರು ಇಂದಿರಾಗಾಂಧಿ ಅವರ ಚರಿತ್ರೆಯ ಅವಿಭಾಜ್ಯ ಅಂಗವಾಗಿದ್ದರು. 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಸಮವಾಗಿತ್ತು. ಸ್ವತಃ ಇಂದಿರಾಗಾಂಧಿ ಅವರೇ ಸೋಲನುಭವಿಸಿದ್ದರು. ಆಗ ಡಿ.ಬಿ.ಚಂದ್ರೇಗೌಡ ಚಿಕ್ಕಮಗಳೂರಿನಿಂದ ಗೆದಿದ್ದರು.

ದುರಂತವೆಂದರೆ ಡಿಬಿಸಿ ಗೆದ್ದಾಗ ಪಕ್ಷ ಸೋಲುತ್ತಿತ್ತು. ಪಕ್ಷ ಗೆದ್ದಾಗ ಡಿಬಿಸಿ ಸೋಲುತ್ತಿದ್ದರು. ಡಿಬಿಸಿ ಸಭಾಧ್ಯಕ್ಷರಾಗಿದ್ದಾಗ ಅವರ ಮಾತಿನ ಲಹರಿ, ನಿರಂತರವಾಗಿ ಸಂಸದೀಯ ನಿಯಮಾವಳಿಯನ್ನು ಸದನದಲ್ಲಿ ಪ್ರಸ್ತಾಪಿಸುತ್ತಿದ್ದ ರೀತಿ ರೋಮಾಂಚನಕಾರಿಯಾಗಿರುತ್ತಿತ್ತು. ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ಡಿ.ಬಿ.ಸಿ. ಹೊಸ ಮೆರುಗನ್ನು ನೀಡಿದರು. ಪೂರ್ಣಚಂದ್ರವೆಂಬ ಡಿ.ಬಿ.ಚಂದ್ರೇಗೌಡ ಅವರ ಆತ್ಮಕಥೆ ಓದಿದರೆ ಕರ್ನಾಟಕದ ಸ್ವಾತಂತ್ರೋತ್ತರ ಚರಿತ್ರೆಯನ್ನೇ ಮೆಲುಕು ಹಾಕಿದಂತೆ ಆಗುತ್ತದೆ ಎಂದರು. ಡಿ.ಬಿ.ಸಿಯವರು ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಮತ್ತು ಅವಕಾಶ ಹೊಂದಿದ್ದರು. ಆದರೆ ಆಯಾ ಕಾಲಘಟ್ಟದ ರಾಜಕೀಯ ಬೆಳವಣಿಗೆಗಳು ಅವರು ಮುಖ್ಯಮಂತ್ರಿ ಹುದ್ದೆಗೇರಲು ಅಡ್ಡಿಯಾದವು ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಡಿ.ಬಿ.ಚಂದ್ರೇಗೌಡ ಅವರು 4 ಸದನಗಳನ್ನು ಪ್ರತಿನಿಧಿಸಿದ್ದ ಅಪರೂಪದ ದೀಮಂತ ರಾಜಕಾರಣಿಯಾಗಿದ್ದರು. ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗಳಿಲ್ಲವೆಂಬ ಕೊರಗು ಅವರಿಗಿತ್ತು.. ಈ ಹಿನ್ನಲೆಯಲ್ಲಿ ತಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಅವರು ಪ್ರೇರಣೆ ನೀಡಿದ್ದರು. ಅವರು ನನಗೆ ಗುರುವಿನಂತೆ ಮಾರ್ಗದರ್ಶನ ನೀಡುತ್ತಾ ನಾನು ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು. ಡಿ.ಬಿ.ಚಂದ್ರೇಗೌಡ ಅವರ ನಿಸ್ವಾರ್ಥ ರಾಜಕೀಯ ಸೇವೆ ಮತ್ತೆ ದೊರಕಬೇಕೆಂದರೆ ಡಿಬಿಸಿ ಅವರ ಮಕ್ಕಳು ರಾಜಕೀಯ ಕ್ಷೇತ್ರಕ್ಕೆ ಕಾಲಿಡಬೇಕೆಂದು ಮನವಿ ಮಾಡಿದರು.

ನಿವೃತ್ತ ಅರಣ್ಯಾಧಿಕಾರಿ, ಸಾಮಾಜಿಕ ಕಾರ್ಯಕರ್ತ ಮೇಗೂರು ಸುರೇಶ್ ಮಾತನಾಡಿ, ಡಿ.ಬಿ.ಚಂದ್ರೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ದ್ವೇಷದ ಸಂತೆಯಲ್ಲಿ ಪ್ರೀತಿ ಎಂಬ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಾ ಬಂದಿದ್ದರಿಂದ ಅಜಾತ ಶತ್ರುವಾಗಿದ್ದರು. ಹಾಗಾಗಿ ಅವರು ಎಲ್ಲಿ ಕಾಲಿಟ್ಟರೂ ಬೇಗ ಜನರ ವಿಶ್ವಾಸ ಪಡೆಯುತ್ತಿದ್ದರು. ಅಂತಹ ಮಹಾನ್ ವ್ಯಕ್ತಿತ್ವವುಳ್ಳ ಡಿಬಿಸಿ ಅವರು ಕುಟುಂಬ ರಾಜಕಾರಣವನ್ನು ಮಾಡದೇ ಮಾದರಿಯಾಗಿ ಉಳಿದರು. ಅವರು ಅಗಾಧವಾದ ಜ್ಞಾನವಂತರಾಗಿದ್ದು. ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ತನ್ನ ಬದುಕಿನಲ್ಲಿ ಅಕ್ಷರಶಃ ಅಳವಡಿಕೊಂಡಿದ್ದರು ಎಂದರು.

ತೀರ್ಥಹಳ್ಳಿಯ ಬರಹಗಾರ ನೆಂಪೆ ದೇವರಾಜ್ ಮಾತನಾಡಿ, ಡಿ.ಬಿ.ಚಂದ್ರೇಗೌಡ ಅವರು ಜನಸಾಮಾನ್ಯರೊಂದಿಗೆ ಬೆರೆಯುವ ವ್ಯಕ್ತಿತ್ವ ಹೊಂದಿದ್ದರು. ಜತೆಗೆ ಅವರ ಭಾಷಣೆ ಒಮ್ಮೆ ಆಲಿಸಿದರೆ ಮತ್ತೆ ಮತ್ತೆ ಕೇಳಬೇಕಿನಿಸುತ್ತಿತ್ತು. ವಿರೋಧ ಪಕ್ಷದಲ್ಲಿರುವವರು ಕೂಡ ಮನ ಪರಿವರ್ತನೆಯಾಗುವಂತೆ ಮಾತನಾಡುತ್ತಿದ್ದರು. ಅವರ ಜನಪ್ರಿಯತೆಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಎರಡು ಬಾರಿ ಚುನಾವಣೆಯಲ್ಲಿ ಗೆದ್ದಿರುವುದೇ ಸಾಕ್ಷಿಯಾಗಿದೆ. ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಡಿಬಿಸಿ ಅವರು ಮಾಡಿದ ಭಾಷಣದಿಂದ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು. ವಿರೋಧ ಪಕ್ಷಕ್ಕೆ ನಡುಕ ಉಂಟು ಮಾಡಿದ್ದಲ್ಲದೇ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದರು ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಅಮೇರಿಕಾ ಅಕ್ಕ ಸಂಘಟನೆಯ ಮಾಜಿ ಅಧ್ಯಕ್ಷ ಡಾ. ಹಳೇಕೋಟೆ ವಿಶ್ವಾಮಿತ್ರ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ, ಮೂಡಿಗೆರೆ ಬೆಳೆಗಾರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕಾಫಿಕೋರ್ಟ್ ಅಧ್ಯಕ್ಷ ಡಿ.ಬಿ. ಜಯಪ್ರಕಾಶ್, ಡಿ.ಬಿ.ಸಿ.ಯವರ ಪುತ್ರಿ ವೀಣಾ ಮಾತನಾಡಿದರು. ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆ ಮುಖಂಡರು, ಡಿಬಿಸಿ ಕುಟುಂಬದವರು ಉಪಸ್ಥಿತರಿದ್ದರು.

ಅವಿನ್ ಸ್ವರ ಸಂಗಮದ ಬಕ್ಕಿ ಮಂಜು, ಸುಚಿತ್ರ ಪ್ರಸನ್ನ ಹಾಡಿನ ಮೂಲಕ ನುಡಿನಮನ ಸಲ್ಲಿಸಿದರು.

ಸಮಾನ ಮನಸ್ಕ ವೇದಿಕೆಯ ಬಿ.ಕೆ. ಲಕ್ಷ್ಮಣಕುಮಾರ್, ಡಿ.ಬಿ.ಜಯಪ್ರಕಾಶ್, ಮಗ್ಗಲಮಕ್ಕಿ ಗಣೇಶ್, ಬಿ.ಎಲ್. ದಿನೇಶ್, ಬ್ರಿಜೇಶ್ ಕಡಿದಾಳು ಮುಂತಾದವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಪ್ರಸನ್ನ ಗೌಡಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ