October 5, 2024

ನಿರೂಪಣೆ : ಡಾ. ಸುಧಾ ಜೋಶಿ ಹೆಚ್.ಎಸ್.

ಸಂಸ್ಕೃತ ಉಪನ್ಯಾಸಕರು, ಮೈಸೂರು

 

ಹೊತ್ತು ಹೋದ ಬಳಿಕ ನಿನ್ನನಾರು ನೆನೆವರು? ಮೃತ್ಯು ಮುಟ್ಟುವ ಮುನ್ನ ಇರುವ ಹೊತ್ತು ನೀನು ಬಳಸೋ…! ಎನ್ನುವ ಶರಣರ ನುಡಿ ಹೊತ್ತಿನ (ಕಾಲದ) ಮಹತ್ವವನ್ನು ಸರಳವಾಗಿ ಹೇಳುತ್ತಾ ಆ ಕಾಲದ ಬಳಕೆಯನ್ನು ಜೀವಂತವಿರುವಾಗಲೇ ಮಾಡಬೇಕೆಂದು ಹೇಳುತ್ತಾರೆ. ‘ಕಾಲ’ ಇದೊಂದು ನಿರಂತರವಾಗಿ ರುವ ನಮ್ಮ ಲೆಕ್ಕಕ್ಕೆ ಸಿಗದ ಸೂಕ್ಷಾ್ಮತೀತ ಕಣ್ಣಿಗೆ ಕಾಣದಿರುವ ಬೃಹತ್ ಶಕ್ತಿ. ಇದು ಪ್ರಪಂಚದಲ್ಲೆಡೆ ಹರಡಿಕೊಂಡಿದೆ. ಪ್ರಪಂಚ ವನ್ನೇ ತನ್ನಡಿಗೆ ಹಾಕಿ ತುಳಿಯಬಲ್ಲ ಆಗಾಧ ಶಕ್ತಿ ಹೊಂದಿದ್ದರೂ ಸಹ ತನ್ನಿರುವು ಈ ರೀತಿಯಾಗಿದೆ ಎಂದು ತೋರಗೊಡದೆ ಮೌನವಾಗಿ ಮುಸುಕು ಹೊದ್ದು ಕೂತಿದೆ. ಇಷ್ಟೊಂದು ಶಕ್ತಿಯುತ ವಾದ ಈ ಕಾಲವನ್ನು ನಾವು ಕಡೆಗಣಿಸಿ ಹೋಗಲಾದರೂ ಸಾಧ್ಯವೇ …? ಎಂಬ ಪ್ರಶ್ನೆಗೆ ಉತ್ತರವಾಗಿ ಡಿ.ವಿ.ಜಿ.ಯವರು ಬಹಳ ಮಾರ್ಮಿಕವಾಗಿ ಇದರ ಅರಿವನ್ನು ಈ ರೀತಿ ತುಂಬುತ್ತಾರೆ.
ಕಾಲವಕ್ಷಯ ದೀಪವದರ ಪಾತ್ರೆಯ ಪಾರ|
ಬಾಳ್ ಅದರಿನಾದೊಂದು ಕಿರುಹಣತೆ ಮಿಣುಕು||
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು|
ತೈಲಧಾರೆಯ ಖಂಡ – ಮಂಕುತಿಮ್ಮ||
ಕಾಲ ಎನ್ನುವುದೊಂದು ಎಂದಿಗೂ ಕ್ಷಯವಾಗದ ದೀಪ, ಇದು ಇರುವ ಪಾತ್ರೆ ದೊಡ್ಡದು, ಇದರಲ್ಲಿ ನಮ್ಮ ಬಾಳು ಒಂದು ಕಿರುಹಣತೆ ಗಾಳಿಯಿಂದ ಅದೇನಾದರೂ ಆರಿತೆಂದರೆ ಇನ್ನೊಂದು ದೀಪ ತನ್ನಷ್ಟಕ್ಕೆ ಹತ್ತಿಕೊಳ್ಳುತ್ತದೆ ಕಾಲನ ದೀಪದಲ್ಲಿರುವ ತೈಲಧಾರೆ ಅಖಂಡವಾದುದು.
ಕಾಲ ಎಂಬುದು ನಿರಂತರವಾಗಿ ಉರಿಯುತ್ತಿರುವ ನಂದಾದೀಪ, ಇದು ಇರುವಂತಹ ಪಾತ್ರೆ ಅಂದರೆ ಇದರ ಇರಿವು ಹಾಗೂ ಹರವು ಅಪಾರ. ಇಡೀ ಪ್ರಪಂಚದಾದ್ಯಂತ ಎಲ್ಲೆಲ್ಲೂ ಹರಡಿಕೊಂಡಿದೆ ಇದು ನಮ್ಮ ಎಣಿಕೆಗೆ ನಿಲುಕಲಾರದಾಗಿದೆ. ಆದರೆ ಇದರ ಮಹತ್ವವನ್ನು ಅದು ನಮಗೆ ಅರಿವಿಲ್ಲದೆ ತಿಳಿಸುತ್ತಲೇ ಇರುತ್ತದೆ ಅದನ್ನು ಅರಿಯುವಲ್ಲಿ ನಾವು ವಿಫಲವಾಗುತ್ತಿದ್ದೇವೆ.

ಈ ಕಾಲವು ಯಾರನ್ನು ಯಾವುದನ್ನು ಲೆಕ್ಕಿಸದೇ ಓಡುತ್ತಲೇ ಇರುತ್ತದೆ. ಇಂತಹ ಬೃಹತ್ತಾದ ಅಷ್ಟೇ ಮಹತ್ತಾದ ಕಾಲಕ್ಕೆ ಹೋಲಿಸಿಕೊಂಡರೆ ನಮ್ಮ ಬಾಳೆನ್ನುವುದು ಒಂದು ಮಿಣುಕು ದೀಪ. ಈ ದೀಪವನ್ನು ಕಾಲವೆಂಬ ಗಾಳಿ ಜೋರಾಗಿ ಬೀಸಿ ತನಗೆ ಸಾಕೆನಿಸಿದಾಗ ತಾನೇ ಆರಿಸುತ್ತದೆ ಮತ್ತೆ ತಾನೆ ಪುನಃ ಹೊತ್ತಿಸುತ್ತದೆ. ಈ ದೀಪವನ್ನು ಉರಿಸಲು ಬೇಕಾಗಿರುವ ತೈಲವು ಇದರಲ್ಲಿ ಅಖಂಡವಾಗಿದ್ದು ಅದು ಎಂದೆಂದಿಗೂ ಬತ್ತಲಾರದಷ್ಟಿದೆ. ಇಲ್ಲಿ ಮಿಣುಕು ದೀಪವೆಂದರೆ ಮಾನವನ ಜೀವ, ಈ ಜೀವನದ ಕೊನೆ ಎಂಬುದು ಕಾಲನ ಅಧೀನ ಇದು ತನ್ನ ಅಧೀನದಲ್ಲಿರುವ ಜೀವಿಯ ಜೀವಿತವನ್ನು ಕೊನೆಗಾಣಿಸುವುದರಷ್ಟರಲ್ಲೇ ಇಲ್ಲ ಬದಲಿಗೆ ಮತ್ತೆಮತ್ತೆ ಹೊಸ ಜೀವಿಯನ್ನು ಸೃಷ್ಟಿಸುವ ಹೊಣೆಗಾರಿಕೆಯನ್ನು ಸಹ ತಾನೇ ಹೊತ್ತಿದ್ದು ಇದರ ಈ ಕೈಂಕರ್ಯಕ್ಕೆ ಕೊನೆ ಮೊದಲೆಂಬುದೇ ಇಲ್ಲವಾಗಿದೆ, ಇದರ ಆದಿ ಅಂತ್ಯದ ಅರಿವು ಹುಲುಮಾನವರಾದ ನಮಗೆ ತಿಳಿ ಯಲು ಅಸಾಧ್ಯವಾಗಿದೆ.
ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು?|
ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು?||
ನಿತ್ಯ ಸತ್ವವೇ ಭಿತ್ತಿ, ಜೀವಿತ ಕ್ಷಣಚಿತ್ರ|
ತತ್ವವೀ ಸಂಬಂಧ – ಮಂಕುತಿಮ್ಮ||
ಯಾವುದಾದರೊಂದು ಚಿತ್ರ ಬಿಡಿಸಬೇಕೆಂದರೆ ಅದಕ್ಕೊಂದು ಗೋಡೆ ಇರಲೇಬೇಕು, ಗೋಡೆ ಇಲ್ಲದಿದ್ದರೆ ಚಿತ್ರದ ಸೊಗಸು ಯಾರಿಗೂ ಕಾಣುವುದಿಲ್ಲ. ಪರಮಾತ್ಮನ ನಿತ್ಯ ಸತ್ವವೇ ಆ ಗೋಡೆ ಆ ಗೋಡೆಯ ಮೇಲಿನ ಚಿತ್ರವೇ ನಮ್ಮ ಜೀವನ ಚಿತ್ರ ಈ ಒಂದು ಸಂಬಂಧವೇ ತತ್ವ.
ನಾವು ಬರೆಯುವ ಬಣ್ಣ ಬಣ್ಣದ ಚಿತ್ರ ಎದ್ದು ಕಾಣಬೇಕೆಂದರೆ ಅದಕ್ಕೊಂದು ಆಧಾರ (ಹಿನ್ನೆಲೆ) ಇರಲೇಬೇಕು. ಆಧಾರವು ಇಲ್ಲದಿದ್ದರೆ ಅದರ ಸೊಬಗನ್ನು ಸವಿಯಲು ಸಾಧ್ಯವಿಲ್ಲ. ಇಲ್ಲಿ ಈ ಗೋಡೆಯನ್ನು ನಾವು ಪರಮಾತ್ಮ ತತ್ವ ಎಂದುಕೊಂಡಿದ್ದೇ ಆದರೆ ಅದು ನಿತ್ಯ ಸತ್ಯವಾದದ್ದು ಏಕೆಂದರೆ ಸೃಷ್ಟಿಕರ್ತ ಅವನು ಭೂಮಿಯ ಮೇಲಿನ ಜೀವಿಗಳ ನಿಯಾಮಕ ಅವನಣತಿಯಿಲ್ಲದೆ ಇಲ್ಲಿ ಏನು ನಡೆಯಲಾರದು. “ತೃಣಮಪಿ ನ ಚಲತಿ ತೇನವಿನಾ” ಎಂಬಂತೆ ಹುಲ್ಲುಕಡ್ಡಿಯೂ ಸಹ ಅವನಣತಿಯಿಲ್ಲದೆ ಚಲಿಸಲಾರದು.

ಆ ಒಂದು ಪರಮಾತ್ಮ ತತ್ವವು ನಿರಂತರವಾಗಿದ್ದು ಎಲ್ಲಾ ಜೀವಿಗಳ ಜೀವನವು ಬಣ್ಣ ಬಣ್ಣದ ಚಿತ್ರದಂತೆ ಅದರ ಆಧಾರದಲ್ಲಿನಿಂತಿದೆ.
ಈ ಪರಮಾತ್ಮ ತತ್ವದ ಗೋಡೆ ಅದು ಚಿರಕಾಲ ಇರುವಂತಹದ್ದು ಇದಕ್ಕೆ ಯಾವುದೇ ನಾಶವಿಲ್ಲ ಆದರೆ ಇದರೊಳಗೆ ಇರುವ ಜೀವನವೆನ್ನುವ ಚಿತ್ರ ಮಾತ್ರ ಕ್ಷಣಕಾಲ ಇರುವಂತಹದ್ದು. ಈ ಗೋಡೆ ಹಾಗೂ ಚಿತ್ರದ ನಡುವೆ ಇರುವ ಬಂಧವೇ ಸಂಬಂಧದ
ತತ್ವ. ಈ ತತ್ವದಲ್ಲಿ ವಿಶ್ವವೇ ಅಡಗಿದೆ, ಈ ರಹಸ್ಯದ ಆಳವನ್ನು ಹುಲುಮಾನವರಾದ ನಾವು ಅರಿಯುವುದು ಅಸಾಧ್ಯ. ಆದರೆ ಈ
ಆಧಾರವಿಲ್ಲದಿದ್ದರೆ ನಮ್ಮ ಬದುಕು ಮೂರಾಬಟ್ಟೆಯಾಗುತ್ತಿತ್ತು ಎಂಬುದಂತೂ ಸತ್ಯವಾದ ವಿಷಯವಾಗಿದೆ. ಈ ಒಂದು ಗೋಡೆಯೆಂಬ ಪರಮಾತ್ಮ ತತ್ವ ತನ್ನಡಲೊಳಗೆ ಇಡೀ ಲೋಕವನ್ನೆ ಅಡಗಿಸಿಕೊಂಡಿದ್ದರೂ ಸಹ ಏನೋ ಒಂದು ಸಾಮಾನ್ಯ ವಸ್ತುವಿನಂತಿದ್ದು ಇದರ ಅಂತರಾಳದಲ್ಲಿ ಅಡಗಿರುವ ಅಗಾಧ ಅರಿವಿನ ಆಳವನ್ನು ಸೃಷ್ಟಿಯ ರಹಸ್ಯದ ಸತ್ಯವನ್ನು ತನ್ನೊಳಗೆ ಬಚ್ಚಿಟ್ಟು ಕೊಂಡು ತಣ್ಣನೆ ಕುಳಿತುಕೊಂಡಿದೆ. ಈ ತತ್ವ ರಹಸ್ಯವನ್ನು ಬಲ್ಲೆವು ಎಂದು ನಾವು ಅಂದುಕೊಳ್ಳುವುದರಲ್ಲಿ ಅರ್ಥವೇ ಇಲ್ಲ.

ಇಂತಹ ಒಂದು ಪ್ರಪಂಚದಲ್ಲಿ ಮಾನವರಾದ ನಾವು ಹೇಗಿರಬೇಕೆಂದರೆ ಪಾರಮಾರ್ಥಿಕ ದೃಷ್ಟಿಯನ್ನಿಟ್ಟಕೊಂಡು ಬದುಕನ್ನು
ನಡೆಸಬೇಕು ಎಂಬುದನ್ನು ಡಿ.ವಿ.ಜಿ.ಯವರು ಈ ರೀತಿ ಹೇಳುತ್ತಾರೆ.
ಚೌಕಟ್ಟಿನಂತವದರೊಳು ಚಿತ್ರಪಟ ಸಾಂತ|
ಸಾಕಾರ ಘನತತಿ ನಿರಾಕಾರ ನಭದಿ||
ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ|
ಲೆಕ್ಕ ತಾತ್ವಿಕನಿಗಿದು – ಮಂಕುತಿಮ್ಮ||
ಒಂದು ದಿನ ಕೊನೆಗೊಳ್ಳುವ (ಸಾಂತ) ಲೌಕಿಕ ಜಗತ್ತಿನಲ್ಲಿ ಈ ಚಿತ್ರಪಟವ ಇರುವ ಚೌಕಟ್ಟು (ಗೋಡೆ) ಮಾತ್ರ ಅನಂತ ಇದಕ್ಕೆ
ಮಿತಿಯಿಲ್ಲ, ನಿರಾಕಾರವಾಗಿರುವ ಆಕಾಶದಲ್ಲಿ ಸಾಕಾರವಾಗಿ ಕಾಣುವ ಮೋಡಗಳಂತೆ ಇದು, ಇದೇ ರೀತಿ ನಾವು ಲೌಕಿಕ ವ್ಯವಹಾರವನ್ನು ದೂಡುವಾಗ ತಾತ್ವಿಕ ದೃಷ್ಟಿಯನ್ನಿಟ್ಟು ಮಾಡಬೇಕಾಗುತ್ತದೆ.

ನಿರ್ಲೌಕಿಕವಾದ ಜಗತ್ತಿನಲ್ಲಿ ನಮ್ಮ ಲೌಕಿಕ ಬದುಕೆಂಬುದು ಒಂದು ಮಾಯೆ, ಈ ಮಾಯೆಯು ಕಾಲನ ವಶ. ಜಗತ್ತಿನ ವ್ಯಾಪಾರದಲ್ಲಿ ಜೀವನ ನಡೆಸುವಾಗ ನಾವು ಒಬ್ಬ ತತ್ವಜ್ಞಾನಿಯಂತೆ ನಡೆದುಕೊಂಡು ವ್ಯವಹರಿಸಿದಾಗ ಈ ಮಾಯೆಯ ಅರಿವು ನಮಗಾಗುತ್ತದೆ. ಆಗ ನಾವು ಈ ಪ್ರಪಂಚ ವ್ಯವಹಾರದಲ್ಲಿದ್ದರೂ ಸಹ ಅದಕ್ಕೆ ಅಂಟಿಕೊಳ್ಳದೇ ಎಲ್ಲವೂ ನಿರಾಕಾರ ಭಗವಂತನ ಅಧೀನ ಆದ್ದರಿಂದ ಎಲ್ಲ ಆಗುಹೋಗುಗಳಿಗೂ ಸಮಚಿತ್ತರಾಗಿ ದೃಢಮನಸ್ಕರಾಗಿ ಇರಲು ಸಾಧ್ಯವಾಗುತ್ತದೆ. ನಮ್ಮ ಬದುಕೆಂಬ ಚಿತ್ರಪಟವಿರುವ ಜಗತ್ತಿನ ಚೌಕಟ್ಟು ಅನಂತ, ಅದರ ಆದಿ ಅಂತ್ಯ ಪರಿ ನಮಗೆ ಗೋಚರಿಸುವುದಿಲ್ಲ ಅಲ್ಲದೇ ಈ ಚೌಕಟ್ಟಿಗೆ ಮಿತಿಯೆಂಬುದೂ ಸಹ ಇರುವುದಿಲ್ಲ ಆದರೆ ಈ ಚೌಕಟ್ಟಿನೊಳಗೆ ಅಡಗಿರುವ ಜಗತ್ತು ಮಾತ್ರ ಒಂದು ದಿನ ಕೊನೆಗೊಳ್ಳುತ್ತದೆ.

ಆಕಾಶವು ಅನಂತವಾಗಿದ್ದು ಇದರ ಆದಿಯೆಲ್ಲಿದೆ, ಅಂತ್ಯವು ಎಲ್ಲಿದೆ ಎಂಬುದನ್ನು ನಾವು ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದರೂ ಸಹ ಕಂಡುಹಿಡಿಯಲು ಅಶಕ್ತರಾಗಿದ್ದೇವೆ. ಆದರೆ ಈ ಆಕಾಶದಲ್ಲಿರುವ ಗ್ರಹಗಳ ಬಗ್ಗೆ ನಾವು ತಿಳಿಯಬಲ್ಲವರಾಗಿದ್ದೇವೆ. ಈ ಅನಂತ ಆಕಾಶದಲ್ಲಿ ಅಡಗಿರುವ ಓಡುವ ಮೋಡಗಳಂತೆ ನಮ್ಮ ಬದುಕು ನಿರಂತರವಾಗಿ ಓಡುತ್ತಿರುತ್ತದೆ. ಯಾವಾಗ ಆ ಕಾಲನು ಇದನ್ನು ಅಂತ್ಯಗೊಳಿಸಲು ಬಯಸುತ್ತಾನೋ ಆಗ ಅವನು ಯಾರ ಅಣತಿಯನ್ನು ಸಹ ಕೇಳುವುದಿಲ್ಲ. ಈ ಪ್ರಪಂಚದ ವ್ಯವಹಾರದಲ್ಲಿ ನಾವು ನಿರ್ಲಿಪ್ತರಾಗಿದ್ದುಕೊಂಡು ನಮ್ಮ ಬದುಕನ್ನು ನಡೆಸಿಕೊಂಡು ಹೋಗುವ ಜಾಣತನ ಕಲಿತಲ್ಲಿ ಬದುಕಲ್ಲಿ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ.

ಜಗತ್ತಿನ ಜಿವಿಗಳನ್ನು ತನ್ನ ವಶದಲ್ಲಿಟ್ಟುಕೊಂಡು ನಿರಂತರವಾಗಿ ನಡೆಸುತ್ತಿರುವ ಕಣ್ಣಿಗೆ ಕಾಣದ ಆ ಕಾಲನಿಗೊಂದು ನಮಸ್ಕರಿಸುತ್ತಾ ಅವನ ಅಧೀನದಲ್ಲಿರುವ ನಮ್ಮನ್ನು ಸುಖಮಯವಾಗಿ ದಡ ಸೇರಿಸುವಂತೆ ಪ್ರಾರ್ಥಿಸೋಣವೇ…!!!

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ