October 5, 2024

ಗ್ರಾಮೀಣ ಭಾಗದ ಬಡವರ ಒಂದೆರಡು ಎಕರೆ ಜಮೀನಿನಲ್ಲಿರುವ ಕೃಷಿಯನ್ನು ನಾಶಪಡಿಸಿ ಆ ಜಾಗವನ್ನು ಖುಲ್ಲಾಗೊಳಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಯಾವುದೇ ಕಾರಣಕ್ಕೂ ಬಡವರ ಜಮೀನು ಖುಲ್ಲಾಗೊಳಿಸಲು ಮುಂದಾಗಬಾರದು ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಗುರುವಾರ ಮೂಡಿಗೆರೆ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವ ವೇಳೆ ಪಾರಂ ನಂ 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಅದೆ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಅಕ್ರಮ ಸಕ್ರಮ ಸಮಿತಿ ಇನ್ನೂ ರಚಿಸಿಲ್ಲ. ಸಮಿತಿ ರಚನೆಯಾದ ಬಳಿಕ ಫಲಾನುಭವಿಗಳಿಗೆ ಜಾಗ ಹಸ್ತಾಂತರಿಸುವ ಮೊದಲು ಅವರಿಗೆ ಅಧಿಕಾರಿಗಳು ಕಿರುಕುಳ ನೀಡಬಾರದು. ಸರ್ಕಾರಿ ಕಟ್ಟಡ, ಹಾಸ್ಟೆಲ್, ಶಾಲೆ, ಪಶು ಆಸ್ಪತ್ರೆ, ಅಂಗನವಾಡಿ ಕಟ್ಟಡ ನಿರ್ಮಿಸಲು ಮುಂದಾದರೆ ಅರಣ್ಯ ಇಲಾಖೆ ಅಧಿಕಾರಿಗಳು ಜಾಗ ನಮ್ಮದೆಂದು ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೆ ಕುಂದೂರು ಗ್ರಾಮದ ದುರ್ಗಮ ಅರಣ್ಯದಲ್ಲಿ ವಾಸಿಸುತ್ತಿರುವ 11 ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚಿಸಿ 3 ತಿಂಗಳು ಕಳೆದರೂ ಅಧಿಕಾರಿಗಳು ಅವರ ಸ್ಥಳಾಂತರಕ್ಕೆ ಮುಂದಾಗಿಲ್ಲ. ಕೂಡಲೆ ಅವರನ್ನು ಸುರಕ್ಷಿತ ಸ್ಥಳದಲ್ಲಿ ಸ್ಥಳಾಂತರಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ತಾಲೂಕಿನಲ್ಲಿ 17 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ 9 ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳಿದ್ದಾರೆ. ಹೊರನಾಡು, ಬಾಳೆಹೊಳೆ, ಜಾವಳಿ, ಸುಂಕಸಾಲೆ, ನಿಡುವಾಳೆ, ಬೆಟ್ಟಗೆರೆ ಸೇರಿ 8 ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. ಸಮುದಾಯ ಆರೋಗ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ಎಲ್ಲೆಡೆ ಜ್ವರ ಕಾಣಿಸಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ಜ್ವರ ಕಾಣಿಸಿಕೊಂಡ ತಕ್ಷಣ ಅವರನ್ನು ತಪಾಸಣೆಗೋಳಪಡಿಸಲಾಗಿದೆ ಎಂದು ಟಿಎಚ್ಒ ಡಾ.ಸುಂದರೇಶ್ ಮಾಹಿತಿ ನೀಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ನಾಯನ ಮೋಟಮ್ಮ ಖಾಲಿಯಿರುವ 8 ವೈದ್ಯರ ಹುದ್ದೆಯನ್ನು 15 ದಿನದಲ್ಲಿ ಭರ್ತಿ ಮಾಡಲಾಗುವುದು. ವೈದ್ಯರು ಕರ್ತವ್ಯ ನಿರ್ವಹಿಸದೆ ಬೇಕಾಬಿಟ್ಟಿ ವರ್ತಿಸಿರುವ ಬಗ್ಗೆ ದೂರುಗಳು ಬರುತ್ತವೆ. ಕರ್ತವ್ಯ ಲೋಪವೇಸಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ತಾಲೂಕು ಆರೋಗ್ಯಾಧಿಕಾರಿ ಪ್ರತಿ ದಿನ ಕನಿಷ್ಠ 3 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಸೂಚಿಸಿದರು.

ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 15 ವೈದ್ಯಾಧಿಕಾರಿಗಳ ಹುದ್ದೆ ಇದೆ. 9 ಹುದ್ದೆ ಭರ್ತಿಯಿದೆ. 6 ಹುದ್ದೆ ಖಾಲಿಯಿದೆ. ಓರ್ವ ವೈದ್ಯಾಧಿಕಾರಿಯನ್ನು ನಿಯೋಜನೆ ಮೇರೆಗೆ ಕಳುಹಿಸಲಾಗಿದೆ. ಅವರು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ಅವರ ವರ್ತನೆ ಸರಿ ಇಲ್ಲ. ಸಾರ್ವಜನಿಕರೊಂದಿಗೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಯಾರು ಏನು ಹೇಳಿದರೂ ಕೇಳುತ್ತಿಲ್ಲ. ಅವರನ್ನು ವಾಪಾಸು ಕರೆಸಿಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಡಯಾಲಿಸಿಸ್ ಘಟಕದಲ್ಲಿ 3 ಯಂತ್ರವಿದ್ದರೂ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇನ್ನೊಂದು ಯಂತ್ರ ಕಳೆದ ಒಂದುವರೆ ತಿಂಗಳಿನಿಂದ ಕೆಟ್ಟು ನಿಂತಿದೆ ಎಂದು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಾಂಭವಿ ತಿಳಿಸಿದಾಗ. ಆಸ್ಪತ್ರೆಯಲ್ಲಿ ಮಧುಮೇಹದ ಮಾತ್ರೆ ಸಿಗುತ್ತಿಲ್ಲವೆಂದು ದೂರುಗಳು ಬಂದಿವೆ. ಸರ್ಕಾರ ನಿಗದಿ ಪಡಿಸಿದಷ್ಟು ಹೆರಿಗೆ ಆಗುತ್ತಿಲ್ಲ. ಹೆರಿಗೆಗಾಗಿ ಬರುವ ಮಹಿಳೆಯರನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಇಬ್ಬರು ಹೆರಿಗೆ ವಿಭಾಗದ ವೈದ್ಯರಿದ್ದರು ಹೆರಿಗೆಗಾಗಿ ಬರುವ ಮಹಿಳೆಯರನ್ನು ಬೇರೆ ಆಸ್ಪತ್ರೆಗೆ ಕಳುಹಿಸುವ ಅಗತ್ಯವೆನಿದೆ. ಸಿಸರಿಯನ್ ಅಥವಾ ನಾರ್ಮಲ್ ಹೆರಿಗೆಂದು ಬರುವ ಮಹಿಳೆಯರನ್ನು ಬೇರೆ ಆಸ್ಪತ್ರೆಗೆ ಕಳುಹಿಸದಂತೆ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರಿನ 227 ಕಾಮಗಾರಿ ಪೈಕಿ 174 ಕಾಮಗಾರಿ ಪ್ರಗತಿಯಲ್ಲಿದೆ. ಸದ್ಯದಲ್ಲೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ವರ್ಷದ ಏಪ್ರಿಲ್ ವರೆಗೆ ಕುಡಿಯುವ ನೀರಿಗೆ ತೊಂದರೆಯಾಗದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ನಾಗರಾಜ್ ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ನಯನ ಮೋಟಮ್ಮ ಈ ಬಾರಿ ಮಳೆ ಕಡಿಮೆಯಾಗಿ ಬರ ಪರಿಸ್ಥಿತಿ ಇದೆ. ನದಿ, ಕೆರೆಗಳಲ್ಲಿ ನೀರಿನ ಮಟ್ಟವನ್ನು ಆಗಾಗ ತಿಳಿದುಕೊಳ್ಳಬೇಕು ಎಂದು ಸೂಚಿಸಿದರು.

ಹಿಂದಿನ ಅನುದಾನದಲ್ಲಿ 18 ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಹಿರೇಬೈಲ್, ಮಲ್ಲೇಶನ ಗುಡ್ಡ, ಬಾಳೆಹೊಳೆ, ಮಣ್ಣಿನ ಪಾಲ್ ಸೇರಿದಂತೆ 19 ರಸ್ತೆ ಕಾಮಗಾರಿ ಇನ್ನು ಆರಂಭಿಸಿಲ್ಲ. ಬೆಟ್ಟದಮನೆ ಗ್ರಾಮದ ಹೇಮಾವತಿ ನದಿಯ ಹಳೆಯ ಸೇತುವೆ 2021ರಲ್ಲಿ ಕುಸಿದಿತ್ತು ಅದನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ತಿಳಿಸಿದಾಗ. ತಾಲ್ಲೂಕಿನ ವಿವಿಧ ರಸ್ತೆಗಳು ಸಂಪೂರ್ಣ ಗುಂಡಿಯಾಗಿದೆ. ರಸ್ತೆ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಸಹಿಸಲು ಸಾಧ್ಯವಿಲ್ಲ. ತಾಲೂಕಿನ ಎಲ್ಲಾ ರಸ್ತೆ ಕಾಮಗಾರಿ ಇನ್ನು 3 ತಿಂಗಳಲ್ಲಿ ಪೂರ್ಣಗೊಳಿಸಬೇಕು. ಜನ್ನಾಪುರದಿಂದ ಕಿರುಗುಂದದವರೆಗೆ 6 ಕಿ.ಮೀ. ರಸ್ತೆ ಸಂಪೂರ್ಣ ಗುಂಡಿಯಾಗಿದೆ. ಬದಿಯ ಪೊದೆ ಕತ್ತರಿಸದೆ ರಸ್ತೆಗೆ ಚಾಚಿಕೊಂಡಿದೆ. ಬದಿಯಲ್ಲಿ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಬೆಟ್ಟದಮನೆಯ ಹೇಮಾವತಿ ನದಿ ಸೇತುವೆ ಕಾಮಗಾರಿ ಆರಂಭಿಸಿ 6 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಶಾಸಕಿ ನಯನ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಿರ್ಮಿತಿ ಕೇಂದ್ರದಿಂದ ನಡೆಯುತ್ತಿರುವ ಕಾಮಗಾರಿ ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ಅಬಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಮೀನುಗಾರಿಕೆ, ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು, ತಾಪಂ ಇಒ ಡಾ.ಸಿ.ರಮೇಶ್ ಇದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ