October 5, 2024

ಏಕದಿನ ವಿಶ್ವಕಪ್ ಅಭಿಯಾನದ ತನ್ನ ಮೊದಲ ಪಂದ್ಯದಲ್ಲಿ ಅತಿಥೇಯ ಭಾರತ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಶುಭಾರಂಭ ಮಾಡಿದೆ.
ನಿನ್ನೆ ಚೆನೈನಲ್ಲಿ ನಡೆದ ಹಗಲು ರಾತ್ರಿ ಪಂದ್ಯದಲ್ಲಿ ಭಾರತ 6 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಭಾರತದ ಬಿಗಿ ಬೌಲಿಂಗ್ ಎದುರು ರನ್ ಗಳಿಸಲು ತಿಣುಕಾಡಿತು. ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಕೇವಲ 199 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಆಸ್ಟ್ರೇಲಿಯಾ ಆರಂಭಿಕ ಮಿಚಲ್ ಮಾರ್ಷ್ ಅವರ ವಿಕೆಟ್ ಅನ್ನು ಕೇವಲ ಐದು ರನ್ ಗಳಿಗೆ ಕಳೆದುಕೊಂಡಿತು. ನಂತರ ಜೊತೆಯಾದ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇನ್ನಿಂಗ್ ಗೆ ಜೀವ ತುಂಬುವ ಕೆಲಸ ಮಾಡಿದರು. ಎರಡನೇ ವಿಕೆಟ್‌ಗೆ 69 ರನ್ ಗಳ ಜೊತೆಯಾಟ ಆಡಿದರು.

ಆದರೆ ಆನಂತರ ನಡೆದದ್ದೇ ಬೇರೆ. ಭಾರತದ ಸ್ಪಿನ್ನರ್ ಗಳು ದಾಳಿಗಿಳಿಯುತ್ತಿದ್ದಂತೆ ತರಗೆಲೆಗಳಂತೆ ವಿಕೆಟ್ ಗಳು ಉದುರಲು ಆರಂಭಿಸಿದವು. ಭಾರತದ ಪರವಾಗಿ ಜಡೇಜಾ 3 ವಿಕೆಟ್, ಬುಮ್ರಾ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್, ಅಶ್ವಿನ್, ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಉರುಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 49.3 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು.

ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ಆಸ್ಟ್ರೇಲಿಯಾ ವೇಗಿಗಳ ಮಾರಕ ಬೌಲಿಂಗ್ ಎದುರು ಭಾರತ ಕೇವಲ 2 ರನ್ ಗಳು ಆಗುವಷ್ಟರಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡಿತು. ಆರಂಭಿಕರಾದ ನಾಯಕ ರೋಹಿತ್ ಶರ್ಮ(0) ಇಸಾನ್ ಕಿಸನ್(0) ಮತ್ತು ಶ್ರೇಯಸ್ ಅಯ್ಯರ್(0) ಮೂವರು ಶೂನ್ಯ ಸಂಪಾದನೆಯೊಂದಿಗೆ ಫೆವಿಲಿಯನ್ ಹಾದಿ ಹಿಡಿದರು.

ಇಂತಹ ಸಂಕಷ್ಟ ಸಂದರ್ಭದಲ್ಲಿ ಕ್ರೀಸಿಗಿಳಿದ ವಿರಾಟ್ ಕೋಹ್ಲಿ ಮತ್ತು ಕೆ.ಎಲ್. ರಾಹುಲ್ ತಂಡಕ್ಕೆ ಆಸರೆಯಾದರು. ನಿದಾನಗತಿಯಲ್ಲಿ ರನ್ ಗಳಿಸುತ್ತಾ ವಿಕೆಟ್ ಪತನವಾಗದಂತೆ ಎಚ್ಚರಿಕೆ ವಹಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 165 ರನ್ ಗಳನ್ನು ಕಲೆ ಹಾಕಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದು ನಿಲ್ಲಿಸಿದರು. ಈ ಹಂತದಲ್ಲಿ 116 ಎಸೆತಗಳಲ್ಲಿ 85 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ನಿರ್ಗಮಿಸಿದರು.
115 ಎಸೆತಗಳಲಿ ಅಜೇಯ 97 ರನ್ ಗಳಿಸಿದ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ (ಅಜೇಯ 11) ಜೊತೆಗೂಡಿ ಇನ್ನೂ 52 ಎಸೆತಗಳು ಬಾಕಿ ಇರುವಂತೆಯೇ ಕೇವಲ 4 ವಿಕಟ್ ಕಳೆದುಕೊಂಡು ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು.

ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಭಾರತವನ್ನು ಗೆಲುವಿನ ಹಳಿಗೆ ತಂದ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಅಮೂಲ್ಯವಾದ 2 ಅಂಕಗಳನ್ನು ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

About Author

Leave a Reply

Your email address will not be published. Required fields are marked *