October 5, 2024

 

ನಮ್ಮೆಲ್ಲರ ನೆಚ್ಚಿನ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಬದುಕಿದ್ದರೆ ಅವರಿಗೆ ಇಂದು 85 ವರ್ಷ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ರಚಿಸಿದ ಸಾಹಿತ್ಯ ಮತ್ತು ಅವರ ಸಹಜ ಬದುಕಿನ ಹಾದಿ ನಮ್ಮನ್ನು ಸದಾ ಕಾಡುತ್ತದೆ.

ತೇಜಸ್ವಿಯವರ ಕೊನೆಯ ಕೃತಿ ಮಾಯಾಲೋಕ. ಬಹುಶಃ ಅವರು ಮೂಡಿಗೆರೆ ಪರಿಸರದಲ್ಲಿ ತಾವು ಇದ್ದಷ್ಟೂ ಕಾಲ ಇಲ್ಲಿನ ಜನಜೀವನವನ್ನು ಕಂಡು ಅದನ್ನು ಅಕ್ಷರಶಃ ಕೃತಿಗಿಳಿಸಿರುವುದು ಆ ಕೃತಿಯನ್ನು ಓದುತ್ತಾ ಹೋದಂತೆ ನಮ್ಮ ಅನುಭವಕ್ಕೆ ಬರುತ್ತದೆ.

ಮಯಾಲೋಕ ಇದುವರೆಗೆ ಆರು ಮರುಮುದ್ರಣಗಳನ್ನು ಕಂಡಿದೆ. ಇದು ಲ್ಯಾಂಡ್‌ಸ್ಕೇಪ್ ಅಳತೆಯಲ್ಲಿ ಅಡ್ಡಡ್ಡವಾಗಿ ಮುದ್ರಣವಾಗಿದೆ. ಪುಸ್ತಕದ ರಕ್ಷಾಪುಟದ ವಿನ್ಯಾಸವೇ ಪುಸ್ತಕದೊಳಗಿನ ಕಥನದ ಮುನ್ಸೂಚನೆ ನೀಡುವಂತಿದೆ. ನೈಜ ಚಿತ್ರಗಳನ್ನು ಬಳಸಿ ಪುಸ್ತಕದ ರಕ್ಷಾಪುಟವನ್ನು ವಿನ್ಯಾಸ ಮಾಡಲಾಗಿದೆ. ಮುಖಪುಟದಲ್ಲಿ ಒಂದು ಗೂಡ್ಸ್ ಆಟೋದಲ್ಲಿ ಪ್ರಾಣಿಗಳನ್ನು ಹಿಡಿಯುವ ಬಲೆ ಹಗ್ಗ, ಈಟಿ ಭರ್ಜಿಗಳ ಜೊತೆಗೆ ತಮ್ಮ ನಾಯಿಗಳನ್ನು ಹೇರಿಕೊಂಡು ತಲೆಗೆ ಟವಲ್ ಸುತ್ತಿದ್ದ ನಾಲ್ಕಾರು ಲುಂಗಿದಾರಿ ಪುರುಷರು ಸವಾರಿ ಮಾಡುತ್ತಿದ್ದರೆ ಮತ್ತೊಂದು ಚಿತ್ರ ಬಣ್ಣಬಣ್ಣದ ಉಡುಗೆಗಳನ್ನು ತೊಟ್ಟ ಆರು ಜನ ಪುಟ್ಟ ಬಾಲಕೀಯರು ಯಾರದೋ ಅನಿರೀಕ್ಷಿತ ಕರೆಗೆ ಕುತೂಹಲದಿಂದ ಹಿಂತಿರುಗಿ ನೋಡುವಂತಹ ಚಿತ್ರವಿದೆ. ಹಿಂದಿನ ರಕ್ಷಾಪುಟದಲ್ಲಿ ಮೂಡಿಗೆರೆ ಜನತೆಗೆ ಪರಿಚಿತ ಮುಖಗಳಾದ ಇಬ್ಬರು ಚಿಂದಿ ಆಯುವ ಮಹಿಳೆಯರು ಬಹುಶಃ ತಾಯಿ ಮಗಳು ತಮ್ಮ ಸರಂಜಾಮು ಸಹಿತ ಮಾತನಾಡುತ್ತಾ ನಿಂತಿದ್ದಾರೆ. ಹಾಗೂ ಮತ್ತೊಂದು ಚಿತ್ರದಲ್ಲಿ ಏಳೆಂಟು ಮಂದಿ ಪುರುಷರು ಮಹಿಳೆಯರು ಗಂಪಿನಲ್ಲಿ ನಿಂತು ಮಾತನಾಡುತ್ತಿದ್ದಾರೆ.

ಮಾಯಾಲೋಕ ಪುಸ್ತಕದ ಒಳಪುಟಗಳಲ್ಲಿಯೂ ನಾನಾರೀತಿಯ ಚಿತ್ರಗಳನ್ನು ಮುದ್ರಿಸಲಾಗಿದೆ. ಅಲ್ಲಿರುವ ವಿಷಯಕ್ಕೂ ಚಿತ್ರಕ್ಕೂ ಒಂದಕ್ಕೊಂದು ಸಂಬಂಧ ಇಲ್ಲದಂತೆ ಕಂಡರೂ ಅವೆಲ್ಲವೂ ನಮ್ಮ ಸುತ್ತಮುತ್ತಲಿನ ನಿತ್ಯದ ಬದುಕಿನಲ್ಲಿ ನಾವು ಕಾಣುವ ಚಿತ್ರಗಳೇ ಆಗಿವೆ. ಇದರಲ್ಲಿರುವ ಬರೀ ಚಿತ್ರಗಳನ್ನೇ ನೋಡುತ್ತಾ ಹೋದರೆ ನಮ್ಮ ಮನಸ್ಸಿನಲ್ಲಿಯೇ ಒಂದು ಮಾಯಾಲೋಕ ಸೃಷ್ಟಿಯಾಗುತ್ತಾ ಹೋಗುತ್ತದೆ. 246 ಪುಟಗಳ ಈ ಕೃತಿಗೆ ಮಾಯಾಲೋಕ ಒಂದು ಎಂದು ಹೆಸರಿಟ್ಟಿರುವುದನ್ನು ನೋಡಿದರೆ ತೇಜಸ್ವಿಯವರು ಇಂತಹ ಮಾಯಾಲೋಕದ ಸರಣಿಗಳನ್ನೇ ಓದುಗರಿಗೆ ಉಣಬಡಿಸಬೇಕೆಂಬ ಹಂಬಲ ಮತ್ತು ವಸ್ತುವಿಷಯವನ್ನು ತಮ್ಮ ಮನಸ್ಸಿನಲ್ಲಿ ಹೊಂದಿದ್ದರು ಎಂಬುದು ಅರಿವಾಗುತ್ತದೆ. ನಮ್ಮೆಲ್ಲರ ದುರಾದೃಷ್ಟ ಮಾಯಾಲೋಕ-1 ಬಿಡುಗಡೆಯಾದ ಮರುವರ್ಷವೇ ಅವರು ನಮ್ಮನ್ನು ಅಗಲಿದರು.

ಅವರ ಕರ್ವಾಲೋ, ಚಿದಂಬರ ರಹಸ್ಯ, ಅಬಚೂರಿನ ಪೋಸ್ಟಾಪೀಸು, ಜುಗಾರಿ ಕ್ರಾಸ್, ಪರಿಸರದ ಕತೆ ಮುಂತಾದವುಗಳಲ್ಲಿ ತೇಜಸ್ವಿ ಪರೋಕ್ಷವಾಗಿ ಕೃತಿಯಲ್ಲಿ ನಿರೂಪಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಮಾಯಾಲೋಕದಲ್ಲಿ ನಿರೂಪಕನ ಜೊತೆಜೊತೆಗೆ ಸ್ವತಃ ಅವರೇ ನೇರವಾಗಿ ಪಾತ್ರದಾರಿಯಾಗಿರುವುದು ವಿಶೇಷ.

ತೇಜಸ್ವಿಯವರ ಬಹುತೇಕ ಕೃತಿಗಳಂತೆ ಮಾಯಾಲೋಕಕ್ಕೆ ಮುನ್ನುಡಿ ಹಿನ್ನುಡಿಯ ಮುಮ್ಮೇಳ ಹಿಮ್ಮೇಳಗಳಿಲ್ಲ. ತೇಜಸ್ವಿಯರು ಎರಡೇ ಪ್ಯಾರದಲ್ಲಿ ತಮ್ಮ ಲೇಖಕರ ನುಡಿಯಲ್ಲಿ ಕೃತಿಯ ಪ್ರವೇಶಕ್ಕೆ ಸಜ್ಜುಗೊಳಿಸುತ್ತಾರೆ. ಅವರು ತಮ್ಮ ನುಡಿಗಳಲ್ಲಿ ಬರೆದಿರುವಂತೆ “ನಾಲ್ಕು ದಶಕದ ಹಿಂದೆ ಅಬಚೂರಿನ ಪೋಸ್ಟಾಪೀಸು ಕಥಾಸಂಕಲನಕ್ಕೆ ಮೊದಲ ಮಾತುಗಳನ್ನು ಬರೆಯುತ್ತಾ ಬದಲಾಗುತ್ತಿರುವ ಸನ್ನಿವೇಶಗಳ ಸವಾಲುಗಳನ್ನು ಎದುರಿಸಲು ನಾವು ಹೊಸದಿಗಂತಗಳತ್ತ ಹೋಗಬೇಕಾಗಿರುವುದನ್ನು ಜ್ಞಾಪಿಸಿದ್ದೆ. ಈಗ, ಇಪ್ಪತ್ತೊಂದನೇ ಶತಮಾನ ಪ್ರಾರಂಭವಾಗುತ್ತಿದ್ದಂತೆ ಅಂಥದೇ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ನಿಂತಿದ್ದೇವೆAದು ಅನ್ನಿಸುತ್ತಿದೆ. ನಮ್ಮೆದುರು ಬದಲಾವಣೆಗಳ ಮಹಾಪೂರವೇ ಹರಿಯುತ್ತಿದೆ. ಹೊಸ ನುಡಿಗಟ್ಟುಗಳು, ಹೊಸ ಉಕ್ತಿಭಂಗಿ, ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ನಾವೀಗ ಗಮನ ಹರಿಸಿ ಹೊಸದಿಗಂತಗಳತ್ತ ಅನ್ವೇಷಣೆ ಹೊರಡಬೇಕಾಗಿದೆ.

ಈ ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸ್ಕೆಚ್ ಮತ್ತು ರೇಖಾ ಚಿತ್ರಗಳು ಕೃತಿಯ ಸಾಂದರ್ಭಿಕ ವಿವರಣೆಯಾಗಿ ಕೊಟ್ಟಿರುವ ಚಿತ್ರಗಳಲ್ಲ. ಹಾಗೆ ಕಂಡುಬAದರೂ ಅದು ಕೇವಲ ಆಕಸ್ಮಿಕವಷ್ಟೇ ಹೊರತು ಉದ್ದೇಶಪೂರ್ವಕವಲ್ಲ. ಇದೊಂದು ಕೊಲಾಜ್ ಮಾದರಿಯ ಕಲಾಕೃತಿ. ಇಲ್ಲಿ ಕಥಾ ಪ್ರತಿಮೆಗಳೂ, ದೃಶ್ಯಪ್ರತಿಮೆಗಳೂ ಓದುತ್ತ ಹೋದಂತೆ ಒಂದರಮೇಲೊಂದು ಸಂಯೋಜನೆಗೊಳ್ಳುತ್ತಾ ಮಾಯಾಲೋಕವನ್ನು ಸೃಷ್ಟಿಸುತ್ತವೆ. ಇದೊಂದು ಬೆಟ್ಟು ತೋರಿಸಿ ನಿರ್ದೇಶಿಸಲಾರದಷ್ಟು ಸೂಕ್ಷö್ಮ ಮತ್ತು ಪರೋಕ್ಷ ಸಂವಹನ ಕ್ರಿಯೆಯಾದುದರಿಂದ ನಾನು ಇದಕ್ಕಿಂತ ಹೆಚ್ಚಿನ ವಿವರಣೆ ಕೊಡಲಾರೆ” ಎಂದು ತೇಜಸ್ವಿಯವರೇ ಹೇಳಿಕೊಂಡಿದಾರೆ
ಮಾಯಾಲೋಕ ಕೃತಿಯನ್ನು ತಾವು ಬಹುತೇಕರು ಓದಿರಬಹುದು, ಅದರಲ್ಲಿ ಬರುವ ಮೂರು ಮುಖ್ಯ ಸ್ಥಳಗಳ ಹೆಸರು ಗೊಂದಲಗೇರಿ, ಊರಳ್ಳಿ ಮತ್ತು ಮಕ್ಕಿಗದ್ದೆ. ಗೊಂದಲಗೇರಿ ಎಂದರೆ ಅದು ಮೂಡಿಗೆರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನು ಊರಳ್ಳಿ ಮತ್ತು ಮಕ್ಕಿಗದ್ದೆ ತೇಜಸ್ವಿಯವರ ತೋಟದ ಸಮೀಪ ಬರುವ ಯಾವುದೋ ಎರಡು ಪುಟ್ಟ ಹಳ್ಳಿಗಳು. ಆ ಹಳ್ಳಿಗಳು ಯಾವು ಎಂದು ನನಗೆ ಗೊತ್ತು ಆದರೆ ಈ ಸಾರಾಯಿ ಕಾಯ್ಸೋ ವಿಚಾರ ಇರೋದ್ರಿಂದ್ರ ಇದನ್ನ ಇಲ್ಲಿ ಹೇಳಿದ್ರೆ ಕಾದಂಬರಿಯ ಪಾತ್ರಗಳು ನಾಳೆ ನನ್ನ ಹುಡುಕಿಕೊಂಡು ಬರಬಹುದು, ಬಿರಿಯಾನಿ ಕರಿಯಪ್ಪ ಮತ್ತು ಯಂಗ್ಟ ತೇಜಸ್ವಿಯವರನ್ನು ಹುಡುಕಿಕೊಂಡು ಬಂದ ಹಾಗೆ.

ಮಾಯಾಲೋಕದಲ್ಲಿ ಬರುವ ಪಾತ್ರಗಳೆಲ್ಲಾ ಜನಸಾಮಾನ್ಯರದೇ ಆಗಿವೆ. ಅವರ ಕರ್ವಾಲೋ, ಚಿದಂಬರ ರಹಸ್ಯ ಮುಂತಾದ ಕೃತಿಗಳಲ್ಲಿ ಬರುವಂತೆ ಮಾಯಲೋಕದಲ್ಲಿ ವಿಜ್ಞಾನಿಗಳು, ಸಂಶೋಧಕರು, ಪ್ರಾಧ್ಯಾಪಕರು ಮುಂತಾದ ಯಾವ ವೈಟ್ ಕಾಲರ್‌ನ ಯಾವ ಪಾತ್ರಗಳು ಇಲ್ಲ. ಹಳ್ಳಿಗಾಡಿನಲ್ಲಿ ವಿವಿಧ ವೃತ್ತಿಗಳನ್ನು ಮಾಡುವ ಎಲ್ಲಾ ಜನಾಂಗದ, ಎಲ್ಲಾ ಸ್ತರದ ಜನಗಳು ಇಲ್ಲಿ ಪಾತ್ರದಾರಿಗಳಾಗಿದ್ದಾರೆ. ಬಹುಮುಖ್ಯವಾಗಿ ಕಾದಂಬರಿಯ ನಿರೂಪಕನ ಪಾತ್ರದಲ್ಲಿ ಸ್ವತಃ ತೇಜಸ್ವಿಯವರು ಕಾಣಿಸಿಕೊಂಡಿದ್ದಾರೆ.

ಊರಳ್ಳಿಯ ಕೃಷಿಕ ಅಣ್ಣಪ್ಪಣ್ಣ, ಕ್ಷೌರಿಕ ವೃತ್ತಿಯ ಬಾಬು, ಸಕಲ ಕಲಾ ವಲ್ಲಭ ಕರಾಟೆ ಮಂಜ, ಜಗದೀಶ ಆಲಿಯಾಸ್ ಜಗ್ಗು, ಸೂರಿ, ಅಣ್ಣಪ್ಪಣ್ಣನ ಹೆಂಡತಿ ರುಕ್ಮಿಣಿ, ಬಾಬು ಹೆಂಡತಿ ಗಂಗೆ, ಕರಾಟೆ ಮಂಜನ ಅಮ್ಮ ಈರಿ. ಮಕ್ಕಿಗದ್ದೆಯ ಕಮ್ಮಾರ ಕಂ ವಾಟರ್‌ಮೆನ್ ಇಕ್ಬಾಲ್ ಸಾಬಿ, ಕುಮರಿ ಶೆಟ್ಟಿ, ಬಾಳೂರು ಬಸಣ್ಣ, ಸೈಕಲ್ ಶಾಫ್ ಜಾನ್ ಬೆಟ್ಟಯ್ಯ, ರೈತಸಂಘದ ಮೀಸೆ ಉಗ್ರಪ್ಪ, ಲಕ್ಷ್ಮಣ, ಪ್ರಕಾಶವಾಣಿ ಪತ್ರಿಕೆ ಸಂಪಾದಕ ಪ್ರಕಾಶ, ಕೆ.ಇ.ಬಿ. ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ, ಲೈನ್‌ಮ್ಯಾನ್ ರ‍್ಮುಗಂ. ಕೆ.ಇ.ಬಿ.ಸ್ಟೋರ್ ಕೀಪರ್ ರಾಮಯ್ಯ. ಎಂ.ಎಲ್.ಎ. ಮಾರಪ್ಪ, ತರಕಾರಿ ವ್ಯಾಪಾರಿ ಜಲೀಲ್ ಸಾಬ್, ಬಜ್ಜಿ ಮಾಡುವ ಫಾತೀಮಾ, ಮುನ್ಸಿಪಾಲಿಟಿ ಅಧ್ಯಕ್ಷ ಚಿಕ್ವೀರು ಮತ್ತು ಆತನ ರೌಡಿ ಗ್ಯಾಂಗ್, ಮಣ್ಣುಕೆಲಸ ಮಾಡುವ ತಿಮ್ಮಾಬೋವಿ ಮತ್ತವನ ಹೆಂಡತಿ, ಜೂಲನಾಯ್ಕನ ಹೆಂಡತಿ ಯಾಡಿ, ಕುಡುಕ ಸುಬ್ಬ…..ಹೀಗೆ ಈ ಕೃತಿಯಲ್ಲಿ ತೇಜಸ್ವಿಯವರು ಸೃಷ್ಟಿಸಿರುವ ಪಾತ್ರಗಳೆಲ್ಲಾ ಸಮಾಜದ ಸಾಮಾನ್ಯರಲ್ಲಿ ಸಾಮಾನ್ಯ ಜನರೇ ಹೆಚ್ಚಾಗಿದ್ದಾರೆ.

ಮಾಯಾಲೋಕ ಕೃತಿಯ ಹಿನ್ನಲೆಯಲ್ಲಿ ಬೀಕರ ಬರಗಾಲದ ಛಾಯೆ ಆವರಿಸಿಕೊಂಡಿದೆ. ಇಲ್ಲಿ ಬರುವ ಬಹುತೇಕ ಪ್ರಸಂಗಗಳು ಬರಗಾಲದ ಕಾರಣದಿಂದ ಉಂಟಾಗಿರುವ ನೀರಿನ ಕೊರತೆ, ವಿದ್ಯುತ್ ಅಭಾವದ ಕಾರಣದಿಂದ ರೂಪುಗೊಂಡಿರುವಂತಹವು. ಪ್ರಾಕೃತಿಕ ಋತುಮಾನಗಳಲ್ಲಿ ಉಂಟಾಗುವ ವ್ಯತ್ಯಯ ನಾಗರೀಕ ಸಮಾಜದ ಮೇಲೆ, ಜೀವಚರಗಳ ಮೇಲೆ ಉಂಟುಮಾಡುವ ತಲ್ಲಣಗಳನ್ನು ತೇಜಸ್ವಿಯವರು ಈ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ.

ಕೇವಲ ನಾಲ್ಕೈದು ತಿಂಗಳಲ್ಲಿ ಗೊಂದಲಗೇರಿ ಮತ್ತು ಸುತ್ತಮುತ್ತ ನಡೆಯುವ ಘಟನಾವಳಿಗಳೆ ಮಾಯಾಲೋಕದ ವಸ್ತುವಿಷಯಗಳು. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಚಿಕ್ಕ ಪ್ರದೇಶದಲ್ಲಿ ಒಂದು ಕಾದಂಬರಿಗಾಗುವಷ್ಟು ಕಥಾನಕಗಳು ಸೃಷ್ಟಿಯಾಗುತ್ತವೆ ಎಂದರೆ ಜಗತ್ತು ಮೇಲ್ನೋಟಕ್ಕೆ ನಿಶ್ಚಲವಾಗಿದೆ ಎನಿಸಿದರು ಒಳಗಿಂದೊಳಗೆ ಎಷ್ಟೊಂದು ಚಲನಶೀಲವಾಗಿದೆ ಎಂಬುದನ್ನು ಕೃತಿಯು ನಿರೂಪಿಸುತ್ತದೆ.

* ಪ್ರಸನ್ನ ಗೌಡಳ್ಳಿ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ