October 5, 2024

ನಮ್ಮ ಚಿಕ್ಕಮಗಳೂರು ಜಿಲ್ಲೆಯ ಕಳಸದ ರವಿ ರೈ ನಿರ್ಮಾಪಕರಾಗಿ ನಿರ್ಮಿಸಿರುವ ಬಹುನಿರೀಕ್ಷಿತ ಸಿನಿಮಾ “ಟೋಬಿ” ಇದೇ ಆಗಸ್ಟ್ 25ರಂದು ತೆರೆಕಾಣಲಿದೆ. ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ.

ಕಳಸದ ಉದ್ಯಮಿ ರವಿ ರೈ ಅವರು ಈ ಸಿನಿಮಾದ ನಿರ್ಮಾಪಕ ರಾಗಿ ಲೈಟರ್ ಬುದ್ದ ಮತ್ತು ಅಗಸ್ತ್ಯ ಫಿಲಂಸ್ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದಾರೆ. ಈಗಾಗಲೇ ರಾಜ್ ಬಿ.ಶೆಟ್ಟಿ, ಪ್ರವೀಣ್ ಶಿಯಾನ್ ಅವರ  ಜೊತೆಗೂಡಿ ಲೈಟರ್ ಬುದ್ಧ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದ ರವಿ ರೈ ಇದೀಗ ತಮ್ಮದೇ ಸ್ವಂತ “ಅಗಸ್ತ್ಯ ಫಿಲಂಸ್” ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

ರವಿ ರೈ ಅವರು ‘ಮೈ ನೇಮ್ ಈಸ್ ಅಣ್ಣಪ್ಪ’ ಎನ್ನುವ ತುಳು ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಚಿತ್ರರಂಗಕ್ಕೆ ಹೆಜ್ಜೆ ಇರಿಸಿದ್ದರು. ನಂತರ ವೃಷಬ್ ಶೆಟ್ಟಿಯವರ ಜೊತೆಗೂಡಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆ ಸಿನಿಮಾವೂ ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ನಂತರ ಲೈಟರ್ ಬುದ್ದ ಸಂಸ್ಥೆಯಿಂದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನಿರ್ಮಾಣದಲ್ಲಿ ಸಹಭಾಗಿಯಾಗಿದ್ದರು.

ಬಹುನಿರೀಕ್ಷಿತ ‘ಟೋಬಿ’ ಸಿನಿಮಾದ ಬಗ್ಗೆ ಮಾತನಾಡಿರುವ ರವಿ ರೈ ಇದೊಂದು ವಿಭಿನ್ನ ಚಿತ್ರಕಥೆ ಹೊಂದಿರುವ ಸಿನಿಮಾವಾಗಿದೆ. ರಾಜ್ ಬಿ. ಶೆಟ್ಟಿಯವರ ಕತೆ ಮತ್ತು ಮನೋಜ್ಞ ಅಭಿನಯ ಮತ್ತು ಬಾಸಿಲ್ ಅಲ್ ಚಳಕ್ಕಲ್ ಅವರ ಕ್ರಿಯಾತ್ಮಕ ನಿರ್ದೇಶನ ಇದ್ದು ಈ ಸಿನಿಮಾ ನಿರ್ಮಾಣ ಮಾಡಲು ನನಗೆ ಅವಕಾಶ ಸಿಕ್ಕಿದ್ದು ಅತೀವ ಖುಷಿ ನೀಡಿದೆ. ಇದೊಂದು ಫ್ಯಾನ್ ಇಂಡಿಯಾ ಸಿನಿಮಾ ಆಗೋದರಲ್ಲಿ ಯಾವುದೇ ಸಂಶಯವಿಲ್ಲ. ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ, ಪ್ರವೀಣ್ ಶಿಯಾನ್ ಅವರು ಸದಾ ನನ್ನನ್ನು ಬೆನ್ನುತಟ್ಟಿದ್ದಾರೆ. ನಾನು ಹುಟ್ಟುಹಾಕಿರುವ ಅಗಸ್ತ್ಯ ಫಿಲಂಸ್ ಯಾವಾಗಲೂ ಲೈಟರ್ ಬುದ್ಧ ಸಂಸ್ಥೆಯ ಅಂಗಸಂಸ್ಥೆಯಾಗಿ ಸದಾ ಜೊತೆಗಿರುತ್ತದೆ ಎಂದಿದ್ದಾರೆ.

‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ರಾಜ್ಯದಲ್ಲಿ ಮನೆಮಾತಾಗಿ ಕನ್ನಡ ಸಿನಿಮಾ ರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ರಾಜ್ ಬಿ. ಶೆಟ್ಟಿ ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

“ಟೋಬಿ” ಚಿತ್ರದ ಹೆಸರೇ ಕುತೂಹಲಕಾರಿಯಾಗಿದ್ದು, ಚಿತ್ರದ ಪೋಸ್ಟರ್‍ಗಳು ಮತ್ತಷ್ಟು ಕುತೂಹಲ ಮೂಡಿಸಿದೆ. ನಾಯಕ ನಟ ರಾಜ್ ಬಿ. ಶೆಟ್ಟಿ ಮೂಗಿಗೆ ದೊಡ್ಡ ರಿಂಗ್ ಹಾಕಿಕೊಂಡು, ಮುಖದ ತುಂಬಾ ರಕ್ತದ ಕಲೆಗಳು, ಕಣ್ಣಲ್ಲಿರುವ ಆಕ್ರೋಶದ ಜೊತೆಗೆ ಮಿಸ್ಸಿಂಗ್ ಎಂಬ ಅಡಿಬರಹ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನೇ ಬಹಳ ವಿಭಿನ್ನವಾಗಿ ಆಯೋಜಿಸಿ ಚಿತ್ರ ರಸಿಕರು ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ರಾಜ್ ಶೆಟ್ಟಿಯವರೊಂದಿಗೆ ಈ ಚಿತ್ರದಲ್ಲಿ ಸಂಯುಕ್ತ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಮುಖ್ಯ ತಾರಾಗಣದಲ್ಲಿದ್ದಾರೆ.

ಚಿತ್ರವನ್ನು ಬಾಸಿಲ್ ಅಲ್ ಚಳಕ್ಕಲ್ ನಿರ್ದೇಶನ ಮಾಡುತ್ತಿದ್ದಾರೆ. ಇದುವರೆಗೂ ಸಹನಿರ್ದೇಶಕರಾಗಿ ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಚಳಕ್ಕಲ್ ಈ ಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ನಿರ್ದೇಶನ ಮಾಡಿದ್ದಾರೆ.

ರಾಜ್ ಬಿ. ಶೆಟ್ಟಿಯವರೇ ಈ ಚಿತ್ರದ ಕಥೆಯನ್ನು ಬರೆದಿದ್ದಾರೆ. ಅವರೇ ಹೇಳಿರುವಂತೆ ಈವರೆಗೆ ನಾವು ಮಾಡಿರುವ ಚಿತ್ರಗಳೆಲ್ಲವೂ ಹೊಸ ಪ್ರಯತ್ನವಾಗಿತ್ತು. ಅದೇ ರೀತಿ ಟೋಬಿ ಕೂಡ ಒಂದು ಮಾಸ್ ಸಿನಿಮಾ. ಇದನ್ನು ಬರೆಯುವ ಮುನ್ನ ನನಗಾದ ಅನುಭವವೇ ಇದಕ್ಕೆ ಸ್ಪೂರ್ತಿ, ಮನದಲ್ಲಿರುವ ಸಿಟ್ಟನ್ನು ಕ್ರಿಯಾತ್ಮಕವಾಗಿ ತೆರೆಯ ಮೇಲೆ ತರುವ ಸಾಹಸವೇ ಈ ಚಿತ್ರ. ಈ ಚಿತ್ರ ನನ್ನನ್ನು ಓರ್ವ ತಂತ್ರಜ್ಞನಾಗಿಯೂ ರೂಪಿಸಿದೆ ಎಂದಿದ್ದಾರೆ.

ಒಟ್ಟಾರೆ ಟೋಬಿ ಸಿನಿಮಾ ಬಿಡುಗಡೆಗೂ ಮುನ್ನವೇ ಬಹಳಷ್ಟು ಕತೂಹಲ ಕೆರಳಿಸಿದೆ. ಆಗಸ್ಟ್ 25ರಂದು ರಾಜ್ಯದಾದ್ಯಂತ ತೆರೆಕಾಣಲಿದೆ. ಚಿತ್ರತಂಡದ ಪ್ರಯತ್ನಕ್ಕೆ ಯಶಸ್ಸು ದೊರಕಲಿ ಮತ್ತು ರವಿ ರೈ ಕಳಸ ಅವರು ಹುಟ್ಟುಹಾಕಿರುವ ಅಗಸ್ತ್ಯ ಸಿನಿಮಾ ನಿರ್ಮಾಣ ಸಂಸ್ಥೆಗೆ ಈ ಚಿತ್ರ ಹೊಸ ತಿರುವು ನೀಡಲಿ ಎಂದು  ಶುಭ ಹಾರೈಸೋಣ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ