October 5, 2024

ದೇಶದ ಕಾಫಿ ಬೆಳೆಗಾರರ ಸಮುದಾಯಕ್ಕೆ ದೊಡ್ಡ ಭರವಸೆ, ಆಶಾಭಾವನೆ ಮತ್ತು ಹೆಮ್ಮೆಯನ್ನು ತಂದುಕೊಟ್ಟಿದ್ದ ಉತ್ಸಾಹಿ ಉದ್ದಿಮೆದಾರ ವಿ.ಜಿ. ಸಿದ್ಧಾರ್ಥ ಹೆಗ್ಡೆಯವರ ಬದುಕು ದುರಂತ ಅಂತ್ಯ ಕಂಡು ಇಂದಿಗೆ ನಾಲ್ಕು ವರ್ಷಗಳು ತುಂಬಿದವು. ಯಾರೊಬ್ಬರೂ ಕನಸು ಮನಸಿನಲ್ಲಿಯೂ ಎಣಿಸದ ರೀತಿಯಲ್ಲಿ ಅವರು ಆತ್ಮಹತ್ಯೆ ಮೂಲಕ ತಮ್ಮ ಇಹಲೋಕ ಯಾತ್ರೆಗೆ ತಾವೇ ಪೂರ್ಣವಿರಾಮವಿಟ್ಟು ಮರಳಿಬಾರದೂರಿಗೆ ಪಯಣಿಸಿ ನಾಡನ್ನು ದುಃಖದ ಮಡುವಿಗೆ ದೂಡಿದ್ದರು.

ದೇಶದ ಹೆಮ್ಮೆಯ ಪುತ್ರ.
ವಿ.ಜಿ. ಸಿದ್ಧಾರ್ಥ ಹೆಗ್ಡೆ ಕೇವಲ ಕಾಫಿ ಬೆಳೆಗಾರರಿಗೆ ಮಾತ್ರವಲ್ಲ ಇಡೀ ದೇಶಕ್ಕೆ ಹೆಮ್ಮೆಯನ್ನು ತಂದ ಸಾಧಕರಾಗಿದ್ದರು. ಭಾರತದ ಮುಂಚೂಣಿ ಉದ್ದಿಮೆದಾರರಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದರು. ದೇಶದಲ್ಲಿ ಸಾವಿರಾರು ಜನರಿಗೆ ಉದ್ಯೋಗದಾತ ರಾಗಿದ್ದರು. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳಿಗೆ ಅನ್ನದಾತರಾಗಿದ್ದರು. ಭಾರತದ ಕಾಫಿಯ ಸವಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಎರಡು ದಶಕಗಳ ಕಾಲ ಭಾರತದ ಕಾಫಿ ಉದ್ದಿಮೆಯ ನಿಜ ಅರ್ಥದ ರಾಯಭಾರಿಯಾಗಿದ್ದರು.

ಅಪ್ರತಿಮ ಕನಸುಗಾರ
ನಮ್ಮ ಮಲೆನಾಡಿನ ಜನ ಅದರಲ್ಲೂ ಕಾಫಿ ಬೆಳೆಗಾರರ ವಲಯದಿಂದ ಉದ್ದಿಮೆದಾರರು ಬಹಳ ಅಪರೂಪ, ಬೆಳೆಗಾರರ ಯುವಕರು ಸಾಹಸಪ್ರಿಯರಲ್ಲ, ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂಬ ಮನೋಭಾವನೆ ಮೊದಲಿನಿಂದಲೂ ಬೆಳೆದು ಬಂದಿತ್ತು. ಅಂತಹ ಅಭಿಪ್ರಾಯವನ್ನು ಮೊತ್ತಮೊದಲು ಸುಳ್ಳಾಗಿಸಿದವರು ವಿ.ಜಿ. ಸಿದ್ಧಾರ್ಥ ಹೆಗ್ಡೆಯವರು. ಅವರದು ಮೂಲತಃ ಮೂಡಿಗೆರೆ ತಾಲ್ಲೂಕಿನ ಪ್ರತಿಷ್ಟಿತ ತನುಡಿ-ಶಂಕರಕೂಡಿಗೆ ಕುಟುಂಬ. 1959ರಲ್ಲಿ ಗಂಗಯ್ಯ ಹೆಗ್ಡೆ ಮತ್ತು ಶ್ರೀಮತಿ ವಾಸಂತಿ ದಂಪತಿಗಳ ಪುತ್ರರಾಗಿ ಜನಿಸಿದರು. ಸಿದ್ಧಾರ್ಥರವರ ತಾಯಿ ತೀರ್ಥಹಳ್ಳಿ ಕಡೆಯವರು. ಗಂಗಯ್ಯ ಹೆಗ್ಡೆ ಶಂಕರಕೂಡಿಗೆ ಯಿಂದ ಬಂದು ಬೇಲೂರು- ಮೂಡಿಗೆರೆ ಗಡಿಭಾಗದ ಚಟ್ಟನಹಳ್ಳಿ ಗ್ರಾಮದಲ್ಲಿ ತೋಟ ಖರೀದಿಸಿ ಕಾಫಿ ಕೃಷಿ ಅಭಿವೃದ್ಧಿಪಡಿಸಿದರು. ಸಿದ್ಧಾರ್ಥ ಹೆಗ್ಡೆಯವರ ತಂದೆ ಗಂಗಯ್ಯ ಹೆಗ್ಡೆಯವರಿಗೂ ನೂರಾರು ಎಕರೆ ಕಾಫಿ ತೋಟವಿತ್ತು. ಒಬ್ಬರೇ ಮಗ ಸಿದ್ದಾರ್ಥರವರು ಬಿಂದಾಸ್ ಬದುಕು ನಡೆಸುವುದಕ್ಕೆ ಬೇಕಾದಷ್ಟು ಪಿತ್ರಾರ್ಜಿತ ಆಸ್ತಿ ಇತ್ತು. ಆದರೆ ಕನಸುಗಾರ ಸಿದ್ಧಾರ್ಥ್ ತುಳಿದ ಹಾದಿಯೇ ವಿಭಿನ್ನವಾಗಿತ್ತು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಿದ್ಧಾರ್ಥ 1983-84 ರಲ್ಲಿ ಮುಂಬೈನ ಜೆ.ಎಂ. ಫೈನಾನ್ಸಿಯಲ್ ಲಿಮಿಟೆಡ್ ಕಂಪನಿಯಲ್ಲಿ ಷೇರು ಮಾರುಕಟ್ಟೆ ವಿಭಾಗದಲ್ಲಿ ಎರಡು ವರ್ಷ ಕಾರ್ಯನಿರ್ವಹಿಸಿದ್ದರು. ಅಲ್ಲಿ ಅವರು ಷೇರು ಮಾರುಕಟ್ಟೆ ಬಗ್ಗೆ ಪಡೆದ ಅನುಭವ ಮುಂದೆ ಅವರ ಬದುಕಿನ ದಿಕ್ಕು ಬದಲಿಸಿತು.
ಮುಂಬೈನಿಂದ ಬೆಂಗಳೂರಿಗೆ ಮರಳಿದ ಸಿದ್ಧಾರ್ಥ ತಮ್ಮ ತಂದೆಯಿಂದ ಒಂದಷ್ಟು ಹಣ ಪಡೆದು ಸುಮಾರು 30 ಸಾವಿರ ಮೂಲ ಬಂಡವಾಳದೊಂದಿಗೆ ಸಿವನ್ ಸೆಕ್ಯೂರಿಟೀಸ್ ಎಂಬ ತನ್ನದೇ ಆದ ಷೇರು ಕಂಪನಿ ಪ್ರಾರಂಭಿಸಿ, ಷೇರು ಉದ್ದಿಮೆ ಯಲ್ಲಿ ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ಮುಂದೆ ಆ ಕಂಪನಿಯನ್ನು ವೇ ಟು ವೆಲ್ತ್ ಎಂಬುದಾಗಿ ಬದಲಾಯಿಸುತ್ತಾರೆ.

ಕಾಫಿ ಉದ್ದಿಮೆಯೆಡೆಗೆ ಹರಿದ ಚಿತ್ತ
ಅದು 1990ರ ದಶಕದ ಆರಂಭದ ವರ್ಷಗಳು. ಭಾರತದ ಕಾಫಿ ಉದ್ದಿಮೆಯಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದ ಕಾಲಘಟ್ಟವದು. ಅದುವರೆಗೆ ದೇಶದ ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿಯನ್ನು ತಮ್ಮ ಇಚ್ಚೆಯಂತೆ ಮಾರಾಟ ಮಾಡುವ ಸ್ವಾತಂತ್ರ್ಯ ಇರಲಿಲ್ಲ. ಕಾಫಿ ಬೋರ್ಡ್ ಮೂಲಕವೇ ಕಾಫಿಯನ್ನು ಮಾರಾಟ ಮಾಡಬೇಕಾಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕ ಬೆಲೆಯಿದ್ದ ಕಾಫಿಗೆ ಭಾರತದಲ್ಲಿ ಮಾತ್ರ ಸಿಗುತ್ತಿದ್ದುದು ಮೂರುಕಾಸಿನ ಬೆಲೆ. 1992ರಲ್ಲಿ ಭಾರತಸರ್ಕಾರ ಕಾಫಿಯನ್ನು ಮುಕ್ತಮಾರುಕಟ್ಟೆಯಲ್ಲಿ ಮಾರಾಟಮಾಡಲು ಅನುವು ಮಾಡಿತು. ಅದು ದೇಶದ ಕಾಫಿ ಬೆಳೆಗಾರರಿಗೆ ನವಚೈತನ್ಯ ತುಂಬಿತು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕಾಫಿ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸಿದ್ದ ಸಿದ್ಧಾರ್ಥ 1993ರಲ್ಲಿ ಎ.ಬಿ.ಸಿ(ಅಮುಲ್ಗಮೇಟೆಡ್ ಬೀನ್ ಕಾಫಿ) ಎಂಬ ಕಂಪನಿ ಪ್ರಾರಂಭಿಸಿ ಅದರ ಮೂಲಕ ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಕಾಫಿ ಕ್ಯೂರಿಂಗ್‍ಗಳನ್ನು ಪ್ರಾರಂಭಿಸಿದರು. ಜೊತೆಗೆ ಕಾಫಿ ರಫ್ತು ವ್ಯವಹಾರದಲ್ಲಿಯೂ ತೊಡಗಿಸಿಕೊಂಡರು. ಎ.ಬಿ.ಸಿ ಇಂದು ವಾರ್ಷಿಕ 75 ಸಾವಿರ ಟನ್ ಕಾಫಿ ಸಂಸ್ಕರಣೆಯೊಂದಿಗೆ ಭಾರತದಲ್ಲಿ ಅತಿದೊಡ್ಡ ಕಾಫಿ ಸಂಸ್ಕರಣ ಮತ್ತು ಗ್ರೀನ್ ಕಾಫಿ ರಫ್ತುದಾರ ಕಂಪನಿಯಾಗಿ ಗುರುತಿಸಿಕೊಂಡಿತ್ತು.

ಎಸ್.ಎಂ.ಕೃಷ್ಣ ಅಳಿಯ :
1990ರಲ್ಲಿ ಸಿದ್ಧಾರ್ಥ ಅವರ ಉದ್ಯಮಶೀಲ ವ್ಯಕ್ತಿತ್ವ ಮತ್ತು ಅವರ ಕುಟುಂಬ ಹಿನ್ನಲೆಯಿಂದಾಗಿ ಕರ್ನಾಟಕದ ಪ್ರಭಾವಿ ರಾಜಕೀಯ ಮುಖಂಡರಾಗಿದ್ದ ಎಸ್.ಎಂ. ಕೃಷ್ಣಾ ಅವರ ಮಗಳು ಮಾಳವಿಕ ಅವರೊಂದಿಗೆ ವಿವಾಹವಾಗುತ್ತದೆ. ಅಂದಿನಿಂದ ಸಿದ್ಧಾರ್ಥ ಹೆಸರಿಗೆ ಎಸ್.ಎಂ. ಕೃಷ್ಣ ಅಳಿಯ ಎಂಬ ಹೆಚ್ಚುವರಿ ಬಿರುದು ಬರುತ್ತದೆ. ಮುಂದೆ ಎಸ್.ಎಂ. ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲ್ಲಿ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಸಿದ್ಧಾರ್ಥ ನೇರವಾಗಿ ರಾಜಕೀಯಕ್ಕೆ ಬರಲಿಲ್ಲವಾದರೂ ತನ್ನ ಮಾವನ ರಾಜಕೀಯ ಬುದುಕಿಗೆ ಸದಾ ಬೆಂಬಲವಾಗಿ ನಿಂತಿದ್ದರು.

ಕಾಫಿ ತೋಟಗಳು.
ಸಿದ್ಧಾರ್ಥ ಕುಟುಂಬ ಸುಮಾರು 140 ವರ್ಷಗಳಿಂದ ಕಾಫಿ ಬೆಳೆಯನ್ನು ರೂಢಿಸಿಕೊಂಡು ಬಂದಿತ್ತು. ಅವರ ಅಜ್ಜ ವೀರಪ್ಪಹೆಗ್ಡೆ, ತಂದೆ ಗಂಗಯ್ಯ ಹೆಗ್ಡೆ ಕಾಫಿ ಕೃಷಿಯಲ್ಲಿ ಅದಾಗಲೇ ದೊಡ್ಡ ಹೆಸರು ಮಾಡಿದ್ದರು. ಕಾಫಿ ಮುಕ್ತ ಮಾರುಕಟ್ಟೆಗೆ ಬಂದ ನಂತರ ಸಿದ್ಧಾರ್ಥ ಕಾಫಿ ತೋಟಗಳ ಖರೀದಿಯಲ್ಲಿ ತೊಡಗಿದರು. ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯ ವಿವಿದೆಡೆ ಅವರು ದೊಡ್ಡ ದೊಡ್ಡ ಕಾಫಿ ಎಸ್ಟೇಟ್‍ಗಳನ್ನು ಕೊಂಡರು.
ಕುದ್ರೆಗುಂಡಿ, ಕತ್ಲೆಖಾನ್, ಕಮ್ಮರಗೋಡು, ಚಂದ್ರಾಪುರ, ಬಸರಿಕಟ್ಟೆ ಹೀಗೆ ಅವರು ಹಲವು ಕಡೆ ತೋಟಗಳನ್ನು ಖರೀದಿಸಿ ಅಂದಾಜು ಸುಮಾರು 13 ಸಾವಿರ ಎಕರೆ ಕಾಫಿ ತೋಟದ ಮಾಲೀಕರಾಗಿದ್ದರು. ತಮ್ಮ ಎಲ್ಲಾ ತೋಟಗಳನ್ನು ಉತ್ತಮ ದರ್ಜೆಯಲ್ಲಿ ನಿರ್ವಹಣೆ ಮಾಡಿದ್ದರು. ತಮ್ಮ ಕೆಫೆ ಕಾಫೆ ಡೇ ಗಳಿಗೆ ಬಹುತೇಕ ತಮ್ಮ ತೋಟಗಳಲ್ಲಿ ಬೆಳೆದ ಕಾಫಿಯನ್ನು ಬಳಸುತ್ತಿದ್ದರು.

ಕೆಫೆ ಕಾಫಿ ಡೇ
ಭಾರತದ ಕಾಫಿಗೆ ವಿಶ್ವಮಾನ್ಯತೆ ತಂದುಕೊಡಬೇಕು ಎಂಬ ಮಹತ್ವದ ಕನಸು ಹೊತ್ತಿದ್ದ ಸಿದ್ಧಾರ್ಥ ಅವರು ಕಾಫಿ ಮಾರುಕಟ್ಟೆಯನ್ನು ವಿಸ್ತರಿಸುವುದರ ಬಗ್ಗೆ ಸದಾ ಒಂದಲ್ಲ ಒಂದು ಹೊಸ ಹೊಸ ಚಿಂತನೆಗಳನ್ನು ನಡೆಸುತ್ತಿದ್ದರು. ಅದಾಗಲೇ ಅವರು ಗುಣಮಟ್ಟದ ಕಾಫಿ ಪುಡಿಯನ್ನು ಮಾರಾಟ ಮಾಡುವ 200 ಮಳಿಗೆಗಳನ್ನು ದಕ್ಷಿಣ ಭಾರತದಾದ್ಯಂತ ತೆರೆದಿದ್ದರು.
ಅದು 1994ರ ಅವಧಿ ಜರ್ಮಿನಿಯ ಪ್ರಸಿದ್ಧ ಟಿಚಿಬೋ ಹೆಸರಿನ ಕಾಫಿ ಕೆಫೆಗಳ ಮಾಲೀಕರನ್ನು ಭೇಟಿಯಾಗಿದ್ದ ಸಿದ್ಧಾರ್ಥರವರಿಗೆ ಅಲ್ಲೊಂದು ಹೊಸ ಕನಸು ಚಿಗುರೊಡೆದಿತ್ತು. ಭಾರತದಲ್ಲಿ ಈ ಗುಣಮಟ್ಟದ ಕಾಫಿ ಕೆಫೆಗಳನ್ನು ಪ್ರಾರಂಭಿಸಬೇಕು ಎಂದು ತೀರ್ಮಾನಕ್ಕೆ ಬಂದರು. ಅದರ ಅಂಗವಾಗಿ 1994ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಮೊತ್ತಮೊದಲ ಕೆಫೆ ಕಾಫಿ ಡೇ ಮಳಿಗೆಯನ್ನು ಪ್ರಾರಂಭಿಸಿದರು. ‘ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಕಾಫಿ’ ಎಂಬ ಟ್ಯಾಗ್‍ಲೈನ್‍ನೊಂದಿಗೆ ಪ್ರಾರಂಭವಾದ ಕೆಫೆ ಕಾಫಿ ಡೇ ಔಟ್‍ಲೆಟ್‍ಗಳು ಭಾರತದ ನಗರ ಪ್ರದೇಶದ ಯುವಜನರಿಗೆ ಹೊಸ ಲೋಕವನ್ನು ತೆರೆದಿಟ್ಟವು. ಇಂಟರ್‍ನೆಟ್ ಬ್ರೌಸಿಂಗ್ ಸೌಲಭ್ಯದೊಂದಿಗೆ ಎಷ್ಟು ಹೊತ್ತಾದರೂ ಕುಳಿತು ರುಚಿಯಾದ ಕಾಫಿಯನ್ನು ಸವಿಯಲು ಉಲ್ಲಾಸದಾಯಕ ತಾಣಗಳಾಗಿದ್ದ ಕೆಫೆ ಕಾಫಿ ಡೇಗಳು ಬಹುಬೇಗ ಜನಪ್ರಿಯತೆ ಗಳಿಸಿದವು. ಇದೇ ಹುಮ್ಮಸ್ಸಿನಲ್ಲಿ ಸಿದ್ಧಾರ್ಥ ದೇಶದಾದ್ಯಂತ ಕೆಫೆ ಕಾಫಿ ಡೇ ಔಟ್‍ಲೆಟ್‍ಗಳನ್ನು ತೆರೆಯತೊಡಗಿದರು. ಅಂದಾಜು 1550ಕ್ಕೂ ಹೆಚ್ಚು ಕೆಫೆಗಳನ್ನು ಭಾರತದ ಪ್ರಮುಖ ನಗರಗಳಲ್ಲಿ ಪ್ರಾರಂಭಿಸಿದರು ಜೊತೆಗೆ ವಿದೇಶದ ಕೆಲ ನಗರಗಳಲ್ಲಿಯೂ ಔಟ್‍ಲೆಟ್‍ಗಳನ್ನು ತೆರೆದರು. ಈ ಮೂಲಕ ದೇಶವಿದೇಶದ ಕೋಟ್ಯಾಂತರ ಜನತೆಗೆ ನಮ್ಮ ದೇಶದ ಕಾಫಿಯ ಕಂಪಿನ ಹೊಸ ಅನುಭವನ್ನು ಕೆಫೆ ಕಾಫಿ ಡೇಗಳು ನೀಡಿದ್ದವು. ಕಾಫಿ ಮಾತ್ರವಲ್ಲ ಕಾಫಿ ಬೀಜದಿಂದ ವಿವಿಧ ರೀತಿಯ ಚಾಕಲೇಟ್ ಸೇರಿದಂತೆ ಅನೇಕ ತಿನಿಸುಗಳನ್ನು ಪರಿಚಯಿಸುವ ನಿಟ್ಟಿಯಲ್ಲಿಯೂ ಈ ಕೆಫೆಗಳು ಯಶಸ್ವಿಯಾಗಿದ್ದವು.

ಐ.ಟಿ. ಉದ್ದಿಮೆಯಲ್ಲಿ
ಸಿದ್ಧಾರ್ಥ ತನ್ನ ಉದ್ದಿಮೆ ಗಳನ್ನು ವಿಸ್ತರಿಸುತ್ತಿದ್ದ ಸಂದರ್ಭದಲ್ಲಿಯೇ ವಿಶ್ವದಲ್ಲಿ ಕಂಪ್ಯೂಟರ್ ಕ್ರಾಂತಿ ಪ್ರಾರಂಭವಾಗಿತ್ತು. ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯ ವ್ಯಾಪಕ ವಾಗಿ ವಿಸ್ತರಿಸತೊಡಗಿತ್ತು. ಭಾರತದ ಇನ್ಪೋಸಿಸ್, ವಿಪ್ರೋ ಸೇರಿದಂತೆ ಅನೇಕ ಕಂಪನಿಗಳು ವಿಶ್ವಮಟ್ಟದ ಹೆಸರು ಮಾಡತೊಡಗಿದ್ದವು. ಹಾಗಾಗಿ ಈ ಕ್ಷೇತ್ರವೂ ಕನಸುಗಾರ ಸಿದ್ಧಾರ್ಥ ಅವರ ಗಮನಸೆಳೆಯದೇ ಇರಲಿಲ್ಲ. ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಎಂಬ ಐ.ಟಿ. ಸಂಸ್ಥೆಯನ್ನು ಹುಟ್ಟುಹಾಕಿದರು. ನಂತರ 1999ರಲ್ಲಿ ಕೆಲ ಸಮಾನ ಮನಸ್ಕ ಪಾಲುದಾರರನ್ನೊಳಗೊಂಡ ‘ಮೈಂಡ್ ಟ್ರೀ’ ಎಂಬ ಐ.ಟಿ. ಕಂಪನಿಯನ್ನು ಪ್ರಾರಂಭಿಸಿದರು. 2000ರಲ್ಲಿ ಬೆಂಗಳೂರು ಹೊರವಲಯದಲ್ಲಿ ಸುಮಾರು 120 ಎಕ್ರೆ ವಿಸ್ತೀರ್ಣದಲ್ಲಿ ಅವರು ಸ್ಥಾಪಿಸಿದ್ದ ಗ್ಲೋಬಲ್ ಟೆಕ್ನಾಲಜಿ ಪಾರ್ಕ್ ಜಗತ್ತಿನ ಗಮನ ಸೆಳೆದಿತ್ತು. ಅಲ್ಲಿ ಐ.ಟಿ. ಕಂಪನಿಗಳನ್ನು ಸ್ಥಾಪಿಸಲು ಬೇಕಾದ ವಿಶ್ವದರ್ಜೆಯ ಮೂಲಭೂತ ಸೌಕರ್ಯವನ್ನು ಒದಗಿಸಿ ದ್ದರು. ಇಲ್ಲಿ ಅನೇಕ ಹೆಸರಾಂತ ಐ.ಟಿ. ಕಂಪನಿಗಳು ತಮ್ಮ ಘಟಕಗಳನ್ನು ಸ್ಥಾಪಿಸಿದವು.

ಪೀಠೋಪಕರಣ-ಸರಕುಸಾಗಾಣಿಕೆ ಉದ್ದಿಮೆ
ಸಿದ್ಧಾರ್ಥ ಅವರು ತಮ್ಮ ಕೆಫೆ ಕಾಫಿ ಡೇ ಮಳಿಗೆಗಳಿಗೆ ಬೇಕಾದ ಪೀಠೋಪಕರಣಗಳಿಗಾಗಿ ಸಾಕಷ್ಟು ವೆಚ್ಚ ಮಾಡುತ್ತಿದ್ದರು. ಆಗ ಅವರು ವೆಚ್ಚ ಕಡಿತ ಮಾಡಲು ತಮ್ಮ ಕಂಪನಿಯಿಂದಲೇ ಏಕೆ ಪೀಠೋಪಕರಣಗಳನ್ನು ತಯಾರಿಸಬಾರದು ಎಂದು ಯೋಚನೆ ಮಾಡಿದರು. ಚಿಕ್ಕಮಗಳೂರು ನಗರದಲ್ಲಿ ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪನಿ (ಆಚಿಜಿಜಿಛಿo) ಹೆಸರಿನಲ್ಲಿ ಪೀಠೋಪಕರಣ ತಯಾರಿಸುವ ಘಟಕವನ್ನು ಪ್ರಾರಂಭಿಸಿದರು. ಅದಕ್ಕಾಗಿ ಅವರು ದಕ್ಷಿಣ ಅಮೇರಿಕಾದ ಅಮೇಜಾನ್ ಫಾರೆಸ್ಟ್‍ನಿಂದ ಅತ್ಯುನ್ನತ ಗುಣಮಟ್ಟದ ಮರಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು.
ಸಿಕಾಲ್ ಲಾಜಿಸ್ಟಿಕ್ ಎಂಬ ಹೆಸರಿನ ಸರಕು ಸಾಗಾಣಿಕೆ ಕಂಪನಿಯನ್ನು 2011 ರಲ್ಲಿ ಸಿದ್ಧಾರ್ಥ ಅವರು ಖರೀದಿಸಿದ್ದರು. ಈ ಮೂಲಕ ದೇಶದ ಉದ್ದಗಲಕ್ಕೂ ತಮ್ಮ ಲಾಜಿಸ್ಟಿಕ್ ಕಂಪನಿಯ ಸರಕು, ತೈಲ ಸಾಗಾಣಿಕೆ ಮಾಡುವ ಜಾಲವನ್ನು ವಿಸ್ತರಿಸಿದ್ದರು.

ರೆಸಾರ್ಟ್ ಮತ್ತು ಪ್ರವಾಸೋದ್ಯಮ
ಸಿದ್ಧಾರ್ಥ್ ಅವರಿಗೆ ಪ್ರವಾಸೋದ್ಯಮದಲ್ಲಿಯೂ ಅತೀವ ಆಸಕ್ತಿ ಇದ್ದಿತು. ಅದರ ಅಂಗವಾಗಿ ಅವರು ಅತ್ಯುನ್ನತ ದರ್ಜೆಯ ಸೆರಾಯ್ ಹೋಟೆಲ್‍ಗಳನ್ನು ಸ್ಥಾಪಿಸಿದ್ದರು. ಚಿಕ್ಕಮಗಳೂರು, ಕಬಿನಿ, ಬಂಡೀಪುರ, ಅಂಡಮಾನ್‍ಗಳಲ್ಲಿ ಇವರ ಸೆರಾಯ್ ಹೋಟೆಲ್‍ಗಳು ಕಾರ್ಯನಿರ್ವ ಹಿಸುತ್ತಿವೆ. ಚಿಕ್ಕಮಗ ಳೂರಿಗೆ ಯಾರೇ ಅತಿಗಣ್ಯ ವ್ಯಕ್ತಿಗಳು ಬಂದರೂ ಉಳಿದುಕೊಳ್ಳಲು ಮೊದಲು ನೆನಪಾಗುತ್ತಿದ್ದುದು ಸೆರಾಯ್ ಹೋಟೆಲ್. ಅಷ್ಟರಮಟ್ಟಿಗೆ ಅಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ.

ಶೈಕ್ಷಣಿಕ ಕ್ಷೇತ್ರ
ಸಿದ್ಧಾರ್ಥ ಅವರು ಚಿಕ್ಕಮಗಳೂರನ್ನು ಹಲವು ರೀತಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಕನಸು ಕಂಡವರು. ಶೈಕ್ಷಣಿಕ ಕ್ಷೇತ್ರದಲ್ಲಿಯೂ ಅವರು ಈ ಚಿಂತನೆ ನಡೆಸಿದ್ದರು. ಅದರ ಅಂಗವಾಗಿ ಚಿಕ್ಕಮಗಳೂರು ಮೂಗ್ತಿಹಳ್ಳಿ ಕೆರೆ ಸಮೀಪ ಸುಮಾರು 45 ಎಕರೆ ಕ್ಯಾಂಪಸ್ ಹೊಂದಿರುವ ಅಂಬರ್ ವ್ಯಾಲಿ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾರಂಭಿಸಿದ್ದರು. ಇಲ್ಲಿ ರಾಜ್ಯದ ನಾನಾ ಭಾಗಗಳ ವಿದ್ಯಾರ್ಥಿಗಳಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ವ್ಯಾಸಾಂಗ ಮಾಡಿಕೊಂಡು ಕೆಲಸವಿಲ್ಲದೆ ಇರುವ ಯುವ ಸಮೂಹಕ್ಕೆ ಅನುಕೂಲವಾಗಲಿ ಎಂದು ಅಂಬರ್ ವ್ಯಾಲಿ ಶಾಲೆಯ ಸಮೀಪವೇ ವೇಕಷನಲ್ ಟ್ರೈನಿಂಗ್ ಸೆಂಟರ್ ಎಂಬ ತರಬೇತಿ ಕೇಂದ್ರವನ್ನು ತೆರೆದಿದ್ದರು. ಇಲ್ಲಿ ತರಬೇತಿ ಪಡೆದ ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಕೆಫೆ ಕಾಫಿ ಡೇ ಹಾಗೂ ಇತರೆ ಕಂಪನಿಗಳಲ್ಲಿ ಕೆಲಸ ನೀಡುತ್ತಿದ್ದರು.

ಕಾಫಿ ಡೇ ಮೋಟಾರ್ ರ್ಯಾಲಿ
ಕ್ರೀಡಾ ಚುಟುವಟಿಕೆ ಮತ್ತು ಯುವಕರ ಸಾಹಸ ಮನೋಭಾವನೆ ಉತ್ತೇಜಿಸುವ ನಿಟ್ಟಿನಲ್ಲಿ ಸಿದ್ಧಾರ್ಥ್ ಅವರು ಪ್ರಾರಂಭಿಸಿದ್ದ ಕಾಫಿ ಡೇ ರ್ಯಾಲಿಗಳು ಬಹಳ ಜನಪ್ರಿಯತೆ ಗಳಿಸಿದ್ದವು. ಕಳೆದ ಹಲವು ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ಅವರು ಅಂತರಾಷ್ಟ್ರೀಯ ಮಟ್ಟದ ಕಾಫಿ ಡೇ ಕಾರ್ ರ್ಯಾಲಿಗಳನ್ನು ನಡೆಸುತ್ತಿದ್ದರು. ತಮ್ಮ ಕಾಫಿ ತೋಟಗಳು, ಅಂಬರ್‍ವ್ಯಾಲಿ ಶಾಲಾ ಕ್ಯಾಂಪಸ್‍ನಲ್ಲಿ ಆಯೋಜಿಸುತ್ತಿದ್ದ ರ್ಯಾಲಿಯಲ್ಲಿ ಸ್ಥಳೀಯ ಪ್ರತಿಭೆಗಳ ಜೊತೆಗೆ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಖ್ಯಾತಿಗಳಿಸಿದ್ದ ರ್ಯಾಲಿಪಟುಗಳು ಭಾಗವಹಿಸುತ್ತಿದ್ದರು. ಸ್ಥಳೀಯ ಜನರು ಈ ಸಾಹಸ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಜೊತೆಗೆ ಅಂತರಾಷ್ಟ್ರೀಯ ಮೋಟಾರ್ ಸ್ಪೋಟ್ರ್ಸ್ ನಕ್ಷೆಯಲ್ಲಿ ಚಿಕ್ಕಮಗಳೂರು ತನ್ನನ್ನು ಗುರುತಿಸಿಕೊಳ್ಳುವಂತೆ ಮಾಡಿದ್ದರು.

ಡಾ. ರಾಜ್ ಬಿಡುಗಡೆಯಲ್ಲಿ ಪ್ರಮುಖ ಪಾತ್ರ
ಸಿದ್ಧಾರ್ಥ್ ಮಾವ ಎಸ್.ಎಂ. ಕೃಷ್ಣ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನರಹಂತಕ ವೀರಪ್ಪನ್‍ನಿಂದ ಅಪಹರಣಕ್ಕೊಳಗಾಗಿದ್ದ ವರನಟ ಡಾ. ರಾಜ್‍ಕುಮಾರ್ ಅವರನ್ನು ಸೆರೆಯಿಂದ ಬಿಡಿಸಿ ಕರೆತರುವಲ್ಲಿ ಸಿದ್ಧಾರ್ಥ್ ತೆರೆಮರೆಯಲ್ಲಿ ಕಾರ್ಯನಿರ್ವಹಿಸಿದ್ದರು. ಸಿದ್ಧಾರ್ಥ್ ಅವರ ಅಣ್ಣನ ಮಗ ವನ್ಯಜೀವಿ ತಜ್ಞ ಸೇನಾನಿ(ಕೃಪಾಕರ-ಸೇನಾನಿ)ಯು ಒಮ್ಮೆ ವೀರಪ್ಪನ್ ಅವರಿಂದ ಅಪಹರಣಕ್ಕೆ ಒಳಗಾಗಿ ಬಿಡುಗಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಮಾಜ ಕಾರ್ಯಕ್ಕೆ ಅಪಾರ ದೇಣಿಗೆ
ಸಿದ್ಧಾರ್ಥ ಅವರ ತಂದೆಯವರಾದ ಗಂಗಯ್ಯ ಹೆಗ್ಡೆ ಯವರು ಧಾನಧರ್ಮಕ್ಕೆ ಹೆಸರಾದವರು. ತಮ್ಮ ಗ್ರಾಮದ ಸುತ್ತಮುತ್ತಲ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ರೋಟರಿ ಸೇರಿದಂತೆ ಅನೇಕ ಸಂಸ್ಥೆಗಳ ಮೂಲಕ ಅವರು ಸೇವಾಕಾರ್ಯದಲ್ಲಿ ತೊಡಗಿಸಿಕೊಂಡವರು. ತಂದೆಯಂತೆಯೇ ಮಗ ಸಿದ್ಧಾರ್ಥ ಕೂಡ ಸಮಾಜ ಕಾರ್ಯಕ್ಕೆ ಅಪಾರ ದೇಣಿಗೆ ನೀಡುತ್ತಾ ಬಂದಿದ್ದರು.
ಕುವೆಂಪುವರ ಹತ್ತಿರದ ಸಂಬಂಧಿಯಾಗಿದ್ದ ಸಿದ್ಧಾರ್ಥ ಕುಪ್ಪಳ್ಳಿಯಲ್ಲಿ ಕುವೆಂಪು ಅವರ ಭವ್ಯ ಶಿಲಾ ಸ್ಮಾರಕ ನಿರ್ಮಾಣ ಮಾಡಲು ಪ್ರಮುಖ ಕಾರಣರಾಗಿದ್ದರು. ರಾಮಕೃಷ್ಣ ಮತ್ತು ಶಾರದಾ ಮಠದ ಭಕ್ತರಾಗಿದ್ದ ಸಿದ್ಧಾರ್ಥ ಕುಟುಂಬ ಚಿಕ್ಕಮಗಳೂರು ಸಮೀಪದ ಶಾರಾದ ಮಠಕ್ಕೆ 2ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟಿಸಿಕೊಟ್ಟಿದ್ದರು. ಅಲ್ಲಿ ಅನೇಕ ಸಮಾಜ ಸೇವಾಕಾರ್ಯಗಳು, ಮಹಿಳೆಯರಿಗೆ ಸ್ವಉದ್ಯೋಗ ತರಬೇತಿಗಳು ನಡೆಯುತ್ತಿದ್ದವು. ಕಳೆದ ಎರಡೂವರೆ ದಶಕದಿಂದ ನಮ್ಮ ಜಿಲ್ಲೆಯ ಯಾವುದೇ ಪ್ರಮುಖ ಧಾರ್ಮಿಕ, ಸಾಂಸ್ಕøತಿಕ, ಸಾಹಿತ್ಯಿಕ, ಕ್ರೀಡಾ, ಸಾರ್ವಜನಿಕ ಕಾರ್ಯಗಳಿಗೆ ಸಿದ್ಧಾರ್ಥ ಅವರು ಕೊಟ್ಟಿರುವ ದೇಣಿಗೆ ಬಹುಶಃ ಲೆಕ್ಕಕ್ಕೆ ಸಿಗದಷ್ಟು. ಯಾವುದೇ ಪ್ರಮುಖ ಕಾರ್ಯಕ್ರಮದಲ್ಲಿ ಮೊದಲು ನೆನಪಾಗುತ್ತಿದುದೇ ಸಿದ್ಧಾರ್ಥ ಒಡೆತನದ ಎ.ಬಿ.ಸಿ. ಕಂಪನಿ ಹೆಸರು. ಕೇಳಿದವರಾರಿಗೂ ಇಲ್ಲ ಅನ್ನದೇ ಅವರ ಕಂಪನಿ ಕಡೆಯಿಂದ ದೇಣಿಗೆ ನೀಡುತ್ತಿದ್ದರು.

ಕಾಫಿ ದೊರೆಯ ಬದುಕು ದುರಂತ ಅಂತ್ಯ

ಇಂತಹ ದೊಡ್ಡ ಸಾಧನೆಯನ್ನು ಮಾಡಿ ಯಶಸ್ಸಿನ ಉತ್ತುಂಗಕ್ಕೆ ಏರಿದ್ದ ಸಿದ್ದಾರ್ಥ ಹೆಗ್ಗಡೆಯವರು ಹೆಚ್ಚಾದ ಸಾಲದ ಹೊರೆಯಿಂದ ಹೊರಬರಲು ದಾರಿಕಾಣದೇ, ಸ್ವಾಭಿಮಾನಕ್ಕೆ ಅಂಜಿ 2019ರ ಜುಲೈ 29ರಂದು ಮಂಗಳೂರು ಸಮೀಪ ನೇತ್ರಾವತಿ ನದಿಗೆ ದುಮುಕಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಇಹಲೋಕ ಯಾತ್ರೆಗೆ ಅಂತಿಮ ವಿದಾಯ ಹೇಳಿದ್ದು ಮಾತ್ರ ದೊಡ್ಡ ದುರಂತವೇ ಸರಿ.

ಲೇಖನ : ಪ್ರಸನ್ನ ಗೌಡಳ್ಳಿ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ