October 5, 2024

ಅರಣ್ಯ ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ರೆಸಾರ್ಟ್ ಒಂದನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಸಕಲೇಶಪುರ ತಾಲ್ಲೂಕಿನ ದೇವಾಲಕೆರೆ ಸಮೀಪದ ಅಚ್ಚನಹಳ್ಳಿಯ ಸ್ಟೋನ್ ವ್ಯಾಲಿ ಎಂಬ ಹೆಸರಾಂತ ರೆಸಾರ್ಟ್ ಗೆ ಅರಣ್ಯ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ನಿನ್ನೆ ಅರಣ್ಯ ಇಲಾಖೆ ವತಿಯಿಂದ ಜಂಟಿಯಾಗಿ ನಡೆದ ಕಾರ್ಯಾಚರಣೆಯಲ್ಲಿ ರೆಸಾರ್ಟ್ ಅನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.
ಹಾಸನ ಡಿ.ಸಿ.ಎಫ್. ಮಾರ್ಗದರ್ಶನದಲ್ಲಿ ಸಕಲೇಶಪುರ ಎ.ಸಿ.ಎಫ್ ಮತ್ತು ಆರ್.ಎಫ್.ಓ. ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ಸಕಲೇಶಪುರ, ಹಾಸನ, ಯಸಳೂರು, ಬೇಲೂರು ಮತ್ತು ಅರಕಲಗೋಡು ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಅಚ್ಚನಹಳ್ಳಿಯ ಮೂರುಕಣ್ಣುಗುಡ್ಡ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಗೆ ಸೇರಿದ ಸುಮಾರು 14 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಅದರಲ್ಲಿ ರೆಸಾರ್ಟ್ ನಿರ್ಮಾಣ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಸುಭಾಷ್ ಸ್ಪೀಪನ್ ಮತ್ತು ಅವರ ಕುಟುಂಬದ ಇತರೆ ಮೂವರು ಪಾಲುದಾರರಾಗಿ ಈ ರೆಸಾರ್ಟ್ ನಿರ್ಮಾಣ ಮಾಡಿದ್ದರು ಎಂದು ತಿಳಿದುಬಂದಿದೆ.

ಅರಣ್ಯ ಪ್ರದೇಶ ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ ಎಂದು ಸಕಲೇಶಪುರ ಈ ಹಿಂದಿನ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಅಗಸೆ ದೂರು ದಾಖಲಿಸಿದ್ದರು. ಹಾಸನ ವಿಚಕ್ಷಣ ದಳದ ಡಿಸಿಎಫ್ ಎನ್. ರವೀಂದ್ರ ಕುಮಾರ್ ಪ್ರಕರಣದ ತನಿಖೆ ನಡೆಸಿ 2022ರ ಜುಲೈ 26ರಂದು ರೆಸಾರ್ಟ್ ತೆರವುಗೊಳಿಸುವಂತೆ ಆದೇಶ ನೀಡಿದ್ದರು.

ರೆಸಾರ್ಟ್ ತೆರವಿಗೆ ನೀಡಿದ್ದ ಆದೇಶ ಕಳೆದ ಒಂದು ವರ್ಷದಿಂದ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಒಂದು ವರ್ಷದ ನಂತರ ಅರಣ್ಯ ಅಧಿಕಾರಿಗಳು ಆದೇಶದ ಪ್ರಕಾರ ಕ್ರಮ ಜರುಗಿಸಿದ್ದು, ನಿನ್ನೆ ರೇಸಾರ್ಟ್ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ದಾಳಿವೇಳೆ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕಾಟೇಜ್ ಗಳು, ಸ್ವಿಮ್ಮಿಂಗ್ ಫೂಲ್, ಕಿಸನ್, ಆಟದ ಮೈದಾನ ನಿರ್ಮಾಣ ಮಾಡಿರುವುದು ಕಂಡುಬಂದಿತ್ತು. ದಾಳಿ ವೇಳೆ ರೆಸಾರ್ಟ್ ಮಾಲೀಕರ ಪೋಷಕರು ಮನೆಯಲ್ಲಿದ್ದುದು ಕಂಡು ಬಂದಿತ್ತು. ಹಾಗೆಯೇ 15 ಮಂದಿ ಪ್ರವಾಸಿಗರು ರೆಸಾರ್ಟ್‍ನಲ್ಲಿ ಇದ್ದರು. ಅವರನ್ನೆಲ್ಲ ಹೊರಗೆ ಕಳುಹಿಸಿ ಅರಣ್ಯ ಅಧಿಕಾರಿಗಳು 28 ಕೊಠಡಿಗಳು ಸೇರಿದಂತೆ ಎಲ್ಲವನ್ನು ಸೀಜ್ ಮಾಡಿ ರೆಸಾರ್ಟ್ ಗೇಟ್ ಗೆ ಬೀಗ ಹಾಕಿ ವಶಪಡಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಆರ್.ಎಫ್.ಓ. ಶಿಲ್ಪಾ ಅವರು 1920ರಲ್ಲಿ ಈ ಪ್ರದೇಶವನ್ನು ಶೋಲಾ ಅರಣ್ಯ ಎಂದು ಗುರುತಿಸಲಾಗಿದೆ. ಶೋಲಾ ಅರಣ್ಯ ಒತ್ತುವರಿ ಮಾಡಿ ಈ ರೆಸಾರ್ಟ್ ನಿರ್ಮಾಣ ಮಾಡಲಾಗಿತ್ತು. ಇದೀಗ ರೆಸಾರ್ಟ್ ಇದ್ದ ಅರಣ್ಯ ಪ್ರದೇಶವನ್ನು ವಶಪಡಿಸಿಕೊಂಡಿದ್ದು, ಅಲ್ಲಿರುವ ಕಟ್ಟಡಗಳನ್ನು ಕಾನೂನು ರೀತಿ ಕೆಡವುದಕ್ಕೆ ಕ್ರಮ ವಹಿಸಲಾಗುವುದು ಎಂದಿದ್ದಾರೆ.

ಅರಣ್ಯ ಇಲಾಖೆ ಇದೇ ರೀತಿ ಸಕಲೇಶಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಿರುವ ಎಲ್ಲಾ ರೆಸಾರ್ಟ್‍ಗಳ ಮೇಲೆ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಮೂರುಕಣ್ಣು ಗುಡ್ಡ ಪ್ರದೇಶದಲ್ಲಿ 7983 ಎಕರೆ ಅರಣ್ಯ ಪ್ರದೇಶವಿದ್ದು ಇದರಲ್ಲಿ 1300 ಎಕರೆ ಒತ್ತುವರಿಯಾಗಿದೆ ಎಂದು ಅಂದಾಜಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಇದೇ ಪ್ರದೇಶದಲ್ಲಿ ಅರಣ್ಯದೊಳಗೆ ಆಫ್ ರೋಡ್ ಈವೆಂಟ್ ನಡೆಸಿದ್ದ ಸಂದರ್ಭದಲ್ಲಿ ದಾಳಿ ನಡೆಸಿ 10 ಜೀಪುಗಳನ್ನು ವಶಪಡಿಸಿಕೊಂಡು 15 ಜನರ ಮೇಲೆ ಕೇಸು ದಾಖಲಿಸಿದ್ದರು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ