October 5, 2024

ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ತನ್ನ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರೋತ್ಸಾಹ ಧನವನ್ನು ವಿತರಣೆ ಮಾಡಲಾಗಿದೆ.

ಇದರ ಅಂಗವಾಗಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ವ್ಯಾಪ್ತಿಯ 14 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ತಲಾ ರೂ. ಒಂದು ಲಕ್ಷ ದಂತೆ ಒಟ್ಟು ಹದಿನಾಲ್ಕು ಲಕ್ಷಗಳ ಪ್ರೋತ್ಸಾಹಧನವನ್ನು ವಿತರಿಸಲಾಯಿತು.

ಶನಿವಾರ ಮೂಡಿಗೆರೆ ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮತ್ತು ಮೂಡಿಗೆರೆ ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಅಧ್ಯಕ್ಷ ಹಳಸೆ ಶಿವಣ್ಣ ಅವರು ತಾಲ್ಲೂಕಿನ ವ್ಯಾಪ್ತಿಯ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರೋತ್ಸಾಹಧನದ ಚೆಕ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಳಸೆ ಶಿವಣ್ಣ ಅವರು ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ವರ್ಗದವರಿಗೆ ಉತ್ತಮ ಸೇವೆಗಳನ್ನು ನೀಡುತ್ತಿವೆ. ಪ್ರತಿಯೊಂದು ಸಹಕಾರ ಸಂಘವು ಸಮರ್ಪಕ ಮೂಲಸೌಕರ್ಯವನ್ನು ಹೊಂದಿ, ತಾಂತ್ರಿಕತೆಯನ್ನು ಅಳವಡಿಸಿಕೊಂಡು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ನಮ್ಮ ಹಿರಿಯರು ಯಾವುದೇ ಸವಲತ್ತುಗಳ ಇಲ್ಲದ ಸಮಯದಲ್ಲಿ ಕಷ್ಟಪಟ್ಟು ಸಹಕಾರ ಸಂಸ್ಥೆಗಳನ್ನು ಕಟ್ಟಿಬೆಳೆಸಿದ್ದಾರೆ. ಅವುಗಳನ್ನು ಉಳಿಸಿ ಬೆಳಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ. ಸಹಕಾರ ಸಂಘಗಳಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಸಂಘಗಳನ್ನು ಸದೃಢಗೊಳಿಸಿ ಸ್ವಾವಲಂಭಿಯಾಗಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು. ಡಿ.ಸಿ.ಸಿ. ಬ್ಯಾಂಕ್ ನೀಡಿರುವ ಒಂದು ಲಕ್ಷ ಅನುದಾನವನ್ನು ಉತ್ತಮ ಕೆಲಸಕ್ಕೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ, ಗೌಡಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ದಿವಾಕರ್ ಅವರು ಮಾತನಾಡಿ ಸಹಕಾರ ಸಂಘಗಳಲ್ಲಿ ಹೊಸ ಸಾಲಕ್ಕಾಗಿ ಮತ್ತು ಹೆಚ್ಚುವರಿ ಸಾಲಕ್ಕಾಗಿ ಬೇಡಿಕೆ ಬರುತ್ತಿದ್ದು, ಡಿ.ಸಿ.ಸಿ.ಬ್ಯಾಂಕ್ ಈ ನಿಟ್ಟಿನಲ್ಲಿ ಗಮನಹರಿಸಿ ರೈತರಿಗೆ ಹೆಚ್ಚುವರಿ ಸಾಲ ನೀಡಲು ಮುಂದಾಗಬೇಕು ಎಂದರು. ಡಿ.ಸಿ.ಸಿ. ಬ್ಯಾಂಕ್ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಪ್ರೋತ್ಸಾಹಧನ ನೀಡಿರುವುದು ಶ್ಲಾಘನೀಯ, ಇದಕ್ಕಾಗಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಪರವಾಗಿ ಬ್ಯಾಂಕಿನ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.

ಕಳಸ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ಮಾತನಾಡಿ ಮಲೆನಾಡು ಭಾಗದಲ್ಲಿ ಕಾಫಿ ತೋಟಗಳ ಮಾಲೀಕರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಹಕಾರ ಸಂಘಗಳು ಈಗ ನೀಡುತ್ತಿರುವ ಸಾಲದ ಪ್ರಮಾಣ ಕಾಫಿ ಬೆಳೆಗಾರರಿಗೆ ಯಾವುದಕ್ಕೂ ಸಾಲದಾಗಿದೆ. ಹಾಗಾಗಿ ಸಹಕಾರ ಬ್ಯಾಂಕ್ ವತಿಯಿಂದ ಕಡಿಮೆ ಬಡ್ಡಿದರದಲ್ಲಿ ಹೆಚ್ಚುವರಿ ಸಾಲವನ್ನು ನೀಡುವ ವ್ಯವಸ್ಥೆ ಆಗಬೇಕು. ಆಗ ರೈತರು ಇತರೆ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳ ಮೊರೆಹೋಗುವುದು ತಪ್ಪುತ್ತದೆ ಎಂದರು.

ಮೂಡಿಗೆರೆ ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ಅಧ್ಯಕ್ಷ ಎಂ.ವಿ. ಜಗದೀಶ್ ಮಾತನಾಡಿ  ಸರ್ಕಾರ ರೈತರಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಬೇಕು. ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಂಘಟನೆಗಳು ಸರ್ಕಾರದ ಗಮನಸೆಳೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ಪ್ರೋತ್ಸಾಹಧನ ವಿತರಣೆ ಮಾಡಿದ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಅವರನ್ನು ತಾಲ್ಲೂಕಿನ ಎಲ್ಲಾ ಸಹಕಾರ ಸಂಘಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ