October 5, 2024

ಕಳೆದ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಫಿ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸುವುದಾಗಿ ತಿಳಿಸಿದ್ದರು. ಅದರಂತೆಯೇ ಹಲವಾರು ಅಭಿವೃದ್ಧಿ ಕೆಲಸಗಳೂ ನಡೆದವು. ಅದರಲ್ಲೂ ಪ್ರಮುಖ ಬೇಡಿಕೆಯಾಗಿದ್ದ ಕಾಫಿ ಬೆಳೆಗಾರರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎನ್ನುವುದನ್ನು ಅನುಷ್ಠಾನಕ್ಕೆ ತಂದು ಎರಡು ಅವಧಿಗೆ ಅಧ್ಯಕ್ಷರ ನೇಮಕವೂ ನಡೆಯಿತು. ಆದರೆ ಕಳೆದ ಒಂದು ವರ್ಷದಿಂದ ಖಾಲಿ ಇರುವ ಈ ಹುದ್ದೆಗೆ ಅಧ್ಯಕ್ಷರನ್ನು ನೇಮಕ ಮಾಡುವುದರಲ್ಲಿ ವಿಳಂಬ ಧೋರಣೆ ಏಕೆ ? ಕಾಫಿ ಮಂಡಳಿ ವಿಲೀನಕ್ಕೆ ತಯಾರಿ ನಡೆದಿದೆಯ ಎನ್ನುವ ಅನುಮಾನ ಕಾಡುವಂತಾಗಿದೆ.

ಭಾರತದಲ್ಲಿ ಪೆಟ್ರೋಲಿಯಂ ಮತ್ತು ಐಟಿ ಬಿಟಿ ಹೊರತುಪಡಿಸಿದರೆ ಕಾಫಿ ಉದ್ಯಮ ಸರ್ಕಾರಕ್ಕೆ ವಿದೇಶಿ ವಿನಿಮಯವನ್ನು ಹೆಚ್ಚಿನ ಪ್ರಮಾಣದಲ್ಲಿ ತರುತ್ತಿರುವ ಉದ್ಯಮವಾಗಿದ್ದರೂ ಸರ್ಕಾರದ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷ ನೇರವಾಗಿ ಕಾಫಿ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ. ಕಾಫಿ ಉದ್ಯಮವನ್ನು ಇನ್ನಷ್ಟು ಮೇಲ್ಮಟ್ಟಕ್ಕೆ ತೆಗುದುಕೊಂಡು ಹೋಗಬಹುದಾದ ಉದಯೋನ್ಮುಖ ಪ್ರತಿಭೆಗಳು ಕಾಫಿ ಕ್ಷೇತ್ರದಲ್ಲಿದ್ದಾರೆ. ಅಂತವರನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿ, ಕಾಫಿ ಕ್ಷೇತ್ರದ ಸಮಸ್ಯೆಗಳು ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ಕಾಫಿ ಉತ್ಪನ್ನ ಹೆಚ್ಚಿಸುವುದರಿಂದ ವಿದೇಶಿ ವಿನಿಮಯವೂ ಹೆಚ್ಚುತ್ತದೆ. ಅಂತೆಯೇ ಕಾಫಿ ಬೆಳೆಗಾರರ ಜೀವನಮಟ್ಟವೂ ಸುಧಾರಿಸುತ್ತದೆ.

ದೇಶದಲ್ಲಿ ಸುಮಾರು 2,50,000 ಕಾಫಿ ಬೆಳೆಗಾರರಿದ್ದು, ಅದರಲ್ಲಿ ಶೇಕಡ 98ರಷ್ಟು ಸಣ್ಣ ಬೆಳೆಗಾರರಿದ್ದಾರೆ. ಕಾಫಿ ಮಂಡಳಿಯು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದೆ. ಈ ಹಿಂದೆ ಈ ಸಂಸ್ಥೆಯನ್ನು ಅಧಿಕಾರಿಗಳೇ ನಿರ್ವಹಿಸುತ್ತಿದ್ದರಿಂದ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿರಲಿಲ್ಲ. ಆದ್ದರಿಂದ ಬೆಳೆಗಾರರ ಬಹು ವರ್ಷಗಳ ಬೇಡಿಕೆಯ ಫಲವಾಗಿ ಬೆಳೆಗಾರರನ್ನೇ ಅಧ್ಯಕ್ಷರನ್ನಾಗಿ ನೇಮಿಸಲು ಕೇಂದ್ರ ಬಿಜೆಪಿ ಸರ್ಕಾರ ಕ್ರಮ ಕೈಗೊಂಡು ಈಗಾಗಲೇ ಎರಡು ಅವಧಿಗೆ ನೇಮಕ ಮಾಡಿದ್ದೂ ಆಗಿದೆ. ಆದರೆ ಕಳೆದ ಒಂದು ವರ್ಷದಿಂದ ಖಾಲಿ ಇರುವ ಸ್ಥಾನವನ್ನು ತುಂಬದೆ ಮೀನಮೇಷ ಎಣಿಸುವ ಮೂಲಕ ಕಾಫಿ ಬೆಳೆಗಾರರನ್ನು ನಿರ್ಲಕ್ಷಿಸುತ್ತಿರುವುದು ಕಂಡುಬರುತ್ತಿದೆ.

ಕಾಫಿ ಮಂಡಳಿಗೆ ಅಧ್ಯಕ್ಷರ ನೇಮಕವಾಗದೇ ಮಂಡಳಿಯಿಂದ ಬೆಳೆಗಾರರ ಪರವಾದ ಯಾವ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ಅನೇಕ ರೀತಿಯ ಸಹಾಯಧನ ಯೋಜನೆಗಳು ಇದ್ದವು. ಇದರಿಂದ ಬಹಳಷ್ಟು ರೈತರಿಗೆ ತೋಟಗಳ ಅಭಿವೃದ್ಧಿ ಮಾಡಿ ಆರ್ಥಿಕವಾಗಿ ಮುಂದೆ ಬರಲು ಸಹಾಯವಾಗಿತ್ತು.

 

ಆದರೆ ಇತ್ತೀಚಿನ ದಿನಗಳಲ್ಲಿ ಕಾಫಿ ಮಂಡಳಿಯಿಂದ ರೈತರಿಗೆ ಹೆಚ್ಚಿನ ಯಾವುದೇ ಸಹಕಾರಗಳು ಕಂಡುಬರುತ್ತಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಕಾಫಿ ಮಂಡಳಿಗೆ ಅಧ್ಯಕ್ಷ ನೇಮಕ ಆಗದೇ ಇರುವುದು. ಆದುದರಿಂದ ಈ ಬಗ್ಗೆ ಕಾಫಿ ಬೆಳೆಯುವ ಪ್ರದೇಶಗಳ ಸಂಸದರು ವಿಶೇಷವಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕಾಫಿ ಮಂಡಳಿಗೆ ಶೀರ್ಘವಾಗಿ ಅಧ್ಯಕ್ಷರನ್ನು ನೇಮಕ ಮಾಡುವ ನಿಟ್ಟಿನಲ್ಲಿ ಸ್ಪಂದಿಸಬೇಕಾಗಿದೆ.

ವಿವಿಧ ಮಂಡಳಿಗಳ ವಿಲೀನ ಅವೈಜ್ಞಾನಿಕ!

ಕೇಂದ್ರ ಸರ್ಕಾರದ ಮಟ್ಟದಲ್ಲಿ ಕೃಷಿಗೆ ಸಂಬಂಧಿಸಿದ ವಿವಿಧ ಮಂಡಳಿಗಳನ್ನು ಒಂದು ಮಂಡಳಿಗೆ ವಿಲೀನ ಮಾಡುವ ನಿಲುವು ಕಂಡುಬರುತ್ತಿದೆ. ಉದಾಹರಣೆಗೆ ಮಾನವ ಆರೋಗ್ಯ ವ್ಯವಸ್ಥೆಯಲ್ಲಿ ತಲೆ ಕೂದಲಿನಿಂದ ಪಾದದವರೆಗಿನ ಎಲ್ಲಾ ಭಾಗಗಳಿಗೂ ಪ್ರತ್ಯೇಕ ವೈದ್ಯಕೀಯ ಸೇವೆ ಇರುವಲ್ಲಿ, ಅದೇ ಕೃಷಿ ಕ್ಷೇತ್ರಕ್ಕೆ ಬಂದಾಗ ತಾರತಮ್ಯ ಏಕೆ? ಆಯಾ ಬೆಳೆಗಳಿಗೆ ಆದಂತಹ ಬಹಳಷ್ಟು ಸಮಸ್ಯೆಗಳಿರುವಾಗ ಹತ್ತಾರು ಬೆಳೆಗಳಿಗೆ ಸಂಬಂಧಿಸಿದ ಅಭಿವೃದ್ಧಿ ಮಂಡಳಿಗಳನ್ನು ವಿಲೀನ ಮಾಡುವುದು ಅವೈಜ್ಞಾನಿಕ ಮತ್ತು ಕೃಷಿ ಅಭಿವೃದ್ಧಿಯ ಮೇಲೆ ತೀವ್ರತರ ದುಷ್ಪರಿಣಾಮವೂ ಬೀರುವುದರೊಟ್ಟಿಗೆ, ರೈತವರ್ಗಕ್ಕೂ ಅನಾನುಕೂಲ ಆಗಲಿದೆ. ನಿರ್ಧಾರ ಕೈಗೊಳ್ಳುವ ಮೊದಲು ಹತ್ತಾರು ಬಾರಿ ಯೋಚಿಸುವುದು ಒಳಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ