October 5, 2024

ನಿನ್ನೆ ರಾಜ್ಯದ ನಾನಾ ಕಡೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿತ್ತು. ಕೆ.ಆರ್.ಪುರಂ ತಾಲ್ಲೂಕಿನ ತಹಸೀಲ್ದಾರ್ ಆಗಿದ್ದ ಅಜಿತ್ ರೈ ನಿವಾಸ ಹಾಗೂ ಆಸ್ತಿಗಳ ಮೇಲೂ ಲೋಕಾಯುಕ್ತರು ದಾಳಿ ನಡೆಸಿದ್ದರು. ಈ ದಾಳಿ ವೇಳೆ ಅಜಿತ್ ರೈ ಆಸ್ತಿ ಮೌಲ್ಯ ಕಂಡು ಲೋಕಾಯುಕ್ತರೇ ಬೆಚ್ಚಿ ಬಿದ್ದಿದ್ದು, ತನ್ನ ಆದಾಯಕ್ಕಿಂತ ಅದೆಷ್ಟೋ ಪಟ್ಟು ಅಧಿಕ ಆಸ್ತಿ ದಾಖಲೆಗಳು ಸಿಕ್ಕಿದ ಬೆನ್ನಿಗೆಯೇ ಅಜಿತ್ ರೈ ನನ್ನು ಲೋಕಾಯುಕ್ತರು ಬಂಧಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಬೆಂಗಳೂರು ನಗರ ಘಟಕ ಲೋಕಾಯುಕ್ತ ಎಸ್ಪಿ ಕೆ.ವಿ. ಅಶೋಕ್ ಕುಮಾರ್ ; ಬುಧವಾರ ತಡರಾತ್ರಿ ಆರೋಪಿಯನ್ನು ವಶಕ್ಕೆ ಪಡೆದಿದ್ದೆವು. ಗುರುವಾರ ಬೆಳಿಗ್ಗೆ ಬಂಧಿಸಿದ್ದೇವೆ. ಈವರೆಗೂ 150ಕ್ಕೂ ಅಧಿಕ ಎಕರೆ ಜಮೀನು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಆಸ್ತಿಗಳ ಮೂಲ ಮತ್ತು ಖರೀದಿಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಒದಗಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಬಂಧಿಸಲಾಗಿದೆ ಎಂದಿದ್ದಾರೆ.

ಅಜಿತ್ ರೈ ಗೆ ಸೇರಿದ ಚಂದ್ರಾ ಲೇಯೌಟ್ ಮನೆ, ಸಹಕಾರಿ ನಗರದ ಬಂಗಲೆ ಸೇರಿದಂತೆ ಒಟ್ಟು 10 ಕಡೆ ಏಕಕಾಲದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದರು.
ಅಜಿತ್ ರೈ ಸಹಕಾರಿ ನಗರದ ಬಂಗಲೆಯಲ್ಲಿ 40ಲಕ್ಷ ನಗದು ಮತ್ತು 1.9 ಕೋಟಿ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ. 150 ಎಕರೆಯಷ್ಟು ಜಮೀನು ಹೊಂದಿರುವ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ತನ್ನ ಸಂಬಂಧಿಕರು ಮತ್ತು ಕುಟುಂಬದವರ ಹೆಸರಿನಲ್ಲಿ ಜಮೀನು ಖರೀದಿಸಿದ್ದು, ಈ ಜಮೀನೆಲ್ಲಾ ಬೆಂಗಳೂರು ನಗರಕ್ಕೆ ಹೊಂದಿಕೊಂಡಂತೆಯೇ ಇವೆ. ದೊಡ್ಡಬಳ್ಳಾಪುರದ ಸಮೀಪದಲ್ಲಿ 98 ಎಕರೆ ಜಮೀನಿನ ದಾಖಲೆ ದೊರಕಿದ್ದು, ಇದೊಂದೇ ಜಮೀನು ಸುಮಾರು 300 ಕೋಟಿ ಬೆಲೆಬಾಳುವಂತಹುದು ಎಂದು ಅಂದಾಜಿಸಲಾಗಿದೆ. ಈ ಜಮೀನಿನಲ್ಲಿ ಅಜಿತ್ ರೈ ಕುದುರೆ ರೇಸ್ ತರಬೇತಿ ಶಾಲೆ ತೆರೆಯಲು ತಯಾರಿ ನಡೆಸಿದ್ದ ಎಂದು ತಿಳಿದುಬಂದಿದೆ. ಅದಲ್ಲದೇ ಕಲ್ಲೂರು ಸಮೀಪದ 30 ಎಕರೆ ಜಮೀನಿನ ದಾಖಲೆ ಲಭ್ಯವಾಗಿದೆ.

ಈ ಪ್ರಕರಣದ ಬಗ್ಗೆ ಲೋಕಾಯುಕ್ತರು ವಿಶೇಷ ಆಸಕ್ತಿ ತೆಳೆದು ತನಿಖೆ ಕೈಗೊಂಡಿದ್ದಾರೆ. ಅಜಿತ್ ರೈ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಲ್ಯಾಂಡ್ ಕ್ರೂಸರ್, ಇನ್ನೋವಾ, ಫಾರ್ಚೂನರ್, ಮಿನಿ ಕೂಪರ್ ಅಲ್ಲದೇ ದುಬಾರಿ ಬೆಲೆಯ DUCATI ಬೈಕ್ ಹೊಂದಿರುವುದು ಕಂಡುಬಂದಿದೆ. ಅಜಿತ್ ರೈ ಗೆ ಸೇರಿದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಲೋಕಾಯುಕ್ತ ಪೊಲೀಸರು ಬ್ಯಾಂಕ್ ಗಳಿಗೆ ಪತ್ರಬರೆದಿದ್ದಾರೆ.

ಪುತ್ತೂರು-ಮೂಡಿಗೆರೆ ಮೂಲದ ಅಜಿತ್ ರೈ
ಸದರಿ ಅಜಿತ್ ರೈ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸೊರೆಕೆಯವನು. ಅಜಿತ್ ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮದ ಯುವತಿಯನ್ನು ವಿವಾಹವಾಗಿ ಅಳಿಕಟ್ಟಿನ ಮೇಲೆ ಬಣಕಲ್ ಸುಭಾಷ್ ನಗರದಲ್ಲಿರುವ ಹೆಂಡತಿಯ ಮನೆಯಲ್ಲೇ ವಾಸವಾಗಿದ್ದು, ಬಣಕಲ್ ನಲ್ಲೂ ಸಹ ಇತ್ತೀಚೆಗೆ ದೊಡ್ಡ ಬಂಗಲೆ ಕಟ್ಟಿಸಿದ್ದ. ಪುತ್ತೂರಿನಲ್ಲಿ ಕೋಟ್ಯಾಂತರ ಬೆಲೆಬಾಳುವ ಬಂಗಲೆ ಹೊಂದಿದ್ದಾನೆ ಎನ್ನಲಾಗಿದೆ.

ಅಜಿತ್ ತಂದೆ ಸರ್ವೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದಾಗ ನಿಧನ ಹೊಂದಿದ್ದರು. ಅಜಿತ್ ಅನುಕಂಪದ ಅದಾರದಲ್ಲಿ 2005 ರಲ್ಲಿ ಕಂದಾಯ ಇಲಾಖೆಯಲ್ಲಿ ರೆವೆನ್ಯೂ ಇನ್ಸ್ ಪೆಕ್ಟರ್ ಆಗಿ ಕೆಲಸ ಗಿಟ್ಟಿಸಿಕೊಂಡು ನಂತರ ಡೆಪ್ಯೂಟಿ ತಹಸೀಲ್ದಾರ್ ಆಗಿ, ತಹಸೀಲ್ದಾರ್ ಆಗಿ ಭಡ್ತಿ ಪಡೆದು ಕೆಲ ವರ್ಷಗಳಿಂದ ಬೆಂಗಳೂರು ಭಾಗಕ್ಕೆ ನಿಯೋಜನೆಗೊಂಡಿದ್ದ ಎಂದು ತಿಳಿದುಬಂದಿದೆ. ಅತಿ ಕಡಿಮೆ ಅವಧಿಯಲ್ಲಿ ಇಷ್ಟು ಮೌಲ್ಯದ ಆಸ್ತಿ ಮಾಡಿರುವುದನ್ನು ಕಂಡು ಸ್ವತಃ ಲೋಕಾಯುಕ್ತರೇ ನಿಬ್ಬೆರಗಾಗಿದ್ದಾರೆ.

ಬೆಂಗಳೂರು ರಾಜಕಾಲುವೆ ಒತ್ತುವರಿದಾರರಿಗೆ ಸಹಕರಿಸಿ ಅಮಾನತ್ತಾಗಿದ್ದ.
ಸದರಿ ಅಜಿತ್ ಕುಮಾರ್ ರೈ ಕೆ.ಆರ್.ಪರಂ ತಹಸೀಲ್ದಾರ್ ಆಗಿದ್ದಾಗ ಬೆಂಗಳೂರು ನಗರದ ರಾಜಕಾಲುವೆ ಒತ್ತುವರಿದಾರರೊಂದಿಗೆ ಶಾಮೀಲಾಗಿ ಒತ್ತುವರಿ ತೆರವು ಮಾಡಲು ಕಾನೂನಾತ್ಮಕ ತೊಡಕು ಉಂಟುಮಾಡಿದ್ದ ಆರೋಪದಲ್ಲಿ 2022ರ ನವೆಂಬರ್ ನಲ್ಲಿ ಅಮಾನತ್ತಾಗಿದ್ದ.

ಮಳೆಯಿಂದಾಗಿ ಬೆಂಗಳೂರು ನಗರದಲ್ಲಿ ಮನೆ ಹಾಗೂ ಬಡಾವಣೆಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗುತ್ತಿದ್ದುದಕ್ಕೆ ನೀರು ಹರಿಯುವ ರಾಜಕಾಲುವೆ ಒತ್ತುವರಿಯೇ ಕಾರಣವೆಂದು ಬಿಬಿಎಂಪಿ ಕಳೆದ ವರ್ಷ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಿತ್ತು. ಆ ಸಂದರ್ಭದಲ್ಲಿ ತಹಸೀಲ್ದಾರ್ ಆಗಿದ್ದ ಅಜಿತ್ ರೈ ಒತ್ತುವರಿದಾರರೊಂದಿಗೆ ಶಾಮೀಲಾಗಿ ಒತ್ತುವರಿ ತೆರವಿಗೆ ಅಡಚಣೆ ಆಗುವಂತೆ ಕಾನೂನು ತೊಡಕು ಉಂಟುಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು. ಆಗ ಬಿಬಿಎಂಪಿ ಮುಖ್ಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾಪನೆಯನ್ನು ಪರಿಗಣಸಿ ಸರ್ಕಾರ ಅಜಿತ್ ರೈ ನನ್ನು ಅಮಾನತು ಮಾಡಿತ್ತು.

ಅಜಿತ್ ರೈ ಅಕ್ರಮಗಳು ಬಗೆದಷ್ಟು ಬಯಲಾಗುತ್ತಿದ್ದು, ಇನ್ನು ಎಲ್ಲೆಲ್ಲಿ ಎಷ್ಟೆಷ್ಟು ಅಕ್ರಮ ಆಸ್ತಿಗಳನ್ನು ಹೊಂದಿದ್ದಾನೆ ಎಂಬುದರ ಬಗ್ಗೆ ಲೋಕಾಯುಕ್ತರು ತನಿಖೆ ಕೈಗೊಂಡಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ