October 5, 2024

ನಲವತ್ತು ದಿನ ಅಮೇಜಾನ್ ಅರಣ್ಯದಲ್ಲಿ ಬದುಕಿಳಿದಿದ್ದ ಮಕ್ಕಳು
ದಕ್ಷಿಣ ಅಮೇರಿಕಾದ ಅಮೇಜಾನ್ ಕಾಡಿನಲ್ಲಿ ಪತನವಾಗಿದ್ದ ಲಘು ವಿಮಾನದಲ್ಲಿದ್ದು ಜೀವ ಉಳಿಸಿಕೊಂಡಿದ್ದ ನಾಲ್ವರು ಮಕ್ಕಳು ನಲವತ್ತು ದಿನದ ನಂತರ ಜೀವಂತವಾಗಿ ಸಿಕ್ಕಿರುವ ಘಟನೆ ವಿಶ್ವದಾದ್ಯಂತ ಸಂಚಲನಕ್ಕೆ ಕಾರಣವಾಗಿದೆ.

ಮೇ 1ರಂದು ಕೊಲಂಬಿಯ ದೇಶದ ಲಘು ವಿಮಾನವೊಂದು ಅಮೇಜಾನ್ ದಟ್ಟ ಅರಣ್ಯದಲ್ಲಿ ಪತನವಾಗಿತ್ತು. ಎಂಜಿನ್ ದೋಷದಿಂದಾಗಿ ವಿಮಾನ ಪತನವಾಗಿತ್ತು. ವಿಮಾನ ಪತನಕ್ಕಿಂತ ಸ್ವಲ್ಪ ಮೊದಲು ಪೈಲಟ್ ಎಂಜಿನ್ ದೋಷವಾಗಿರುವ ಬಗ್ಗೆ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದ. ಅಪಘಾತವಾದ ವಿಮಾನದಲ್ಲಿ ನಾಲ್ಕು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು.

ವಿಮಾನ ಅರಣ್ಯದಲ್ಲಿ ಪತನವಾದಾಗ ವಿಮಾನದ ಪೈಲಟ್, ಮತ್ತೋರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬದುಕಿಳಿದ ನಾಲ್ಕು ಮಕ್ಕಳ ತಾಯಿ ತೀವ್ರವಾಗಿ ಗಾಯಗೊಂಡು ನಾಲ್ಕು ದಿನದ ನಂತರ ಸಾವನ್ನಪ್ಪಿದ್ದರು. ಆದರೆ 11 ತಿಂಗಳ ಮಗು ಸೇರಿದಂತೆ ಒಂದೇ ತಾಯಿಯ ನಾಲ್ಕು ಮಕ್ಕಳು ಬದುಕುಳಿದಿದ್ದರು.

ವಿಮಾನ ದಟ್ಟ ಅರಣ್ಯದಲ್ಲಿ ಪತನವಾಗಿದ್ದರಿಂದ ವಿಮಾನ ಪತನವಾಗಿದ್ದ ಜಾಗವನ್ನು ಗುರುತಿಸಲು ಕೊಲಂಬಿಯಾ ಸೇನೆಗೆ 15 ದಿನಗಳು ಹಿಡಿದವು. ಮೇ 15ರಂದು ವಿಮಾನ ಬಿದ್ದ ಸ್ಥಳಕ್ಕೆ ಸೇನೆ ತಲುಪಿತ್ತು. ಅಲ್ಲಿ ಅವರಿಗೆ ವಿಮಾನದ ಅವಶೇಷಗಳು ಮತ್ತು ಮೂರು ಮೃತದೇಹಗಳು ಮಾತ್ರ ಪತ್ತೆಯಾಗಿದ್ದವು.

ಹಾಗಾದರೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಮಕ್ಕಳು ಬದುಕಿಳಿದಿರಬಹುದೇ ಅಥವಾ ಅವರ ಮೃತದೇಹಗಳನ್ನು ಯಾವುದಾದರೂ ಪ್ರಾಣಿಗಳು ತಿಂದು ಹಾಕಿರಬಹುದೇ ಎಂದು ಸೇನೆಗೆ ಸಂಶಯ ಕಾಡತೊಡಗಿತ್ತು. ಆದರೆ ಮೃತದೇಹಗಳನ್ನು ತಿಂದು ಹಾಕಿರುವ ಬಗ್ಗೆ ಯಾವುದೇ ಕುರುಹುಗಳು ಸಿಗಲಿಲ್ಲ. ಹಾಗಾಗಿ ಸೇನೆ ಆ‌ ಮಕ್ಕಳನ್ನು ಹುಡಕುವ ಕಾರ್ಯಾಚರಣೆಗೆ ಇಳಿಯಿತು. ಇದಕ್ಕೆ ಸ್ಥಳೀಯ ಜನರ ಸಹಕಾರವನ್ನು ಪಡೆಯಿತು.

ಹುಡುಕಾಟ ನಡೆಸುವಾಗ ಮಕ್ಕಳು ಅರ್ಧಂಬರ್ಧ ತಿಂದಿದ್ದ ಹಣ್ಣಿನ ಅವಶೇಷಗಳು, ಒಂದೆರಡು ಕಡೆ ಮಕ್ಕಳ ಹೆಜ್ಜೆಗುರುತು ಕಂಡುಬಂದಿದ್ದವು.

ಹಾಗಾಗಿ ಬದುಕಿಳಿದಿರುವ ಬಗ್ಗೆ ಸೇನೆಗೆ ಖಚಿತವಾಯಿತು. ಮಕ್ಕಳು ಹಸಿವಿನಿಂದ ಬಳಲದಿರಲಿ ಎಂದು ಹೆಲಿಕಾಪ್ಟರ್ ಮೂಲಕ ಆಹಾರದ ಪೊಟ್ಟಣಗಳನ್ನು ವಿಮಾನ ಪತನವಾದ ಸ್ಥಳದ ಸುತ್ತಮುತ್ತಲಲ್ಲಿ ಎಸೆಯಲಾಗುತ್ತಿತ್ತು.

ಪತನವಾದ ಲಘು ವಿಮಾನ

ಅಂತಿಮವಾಗಿ ಅಪಘಾತವಾದ 40ದಿನಗಳ ನಂತರ ಮಕ್ಕಳನ್ನು ಪತ್ತೆಹಚ್ಚುವಲ್ಲಿ ಸೇನೆ ಯಶಸ್ವಿಯಾಗಿತ್ತು.

ಅಮೆಜಾನ್ ದಟ್ಟ ಕಾಡಿನಲ್ಲಿ 40 ದಿನಗಳ ಬಳಿಕ ಪತ್ತೆಯಾದ ನಾಲ್ವರು ಮಕ್ಕಳಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಮಕ್ಕಳು ಬಳಲಿದ್ದಾರೆ. ಆದರೆ ಖುಷಿಯಾಗಿದ್ದಾರೆ. ಆಟವಾಡಲು ಬಯಸುತ್ತಿದ್ದಾರೆ. ಓದಲು ಪುಸ್ತಕಗಳನ್ನು ನೀಡುವಂತೆ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳು ಕಾಡಿನಲ್ಲಿ ಸೇವಿಸಲು ಯೋಗ್ಯವಾದ ಬೀಜಗಳು, ಹಣ್ಣುಗಳು ಮತ್ತು ಬೇರನ್ನು ತಿಂದು ಬದುಕಿದ್ದಾರೆ. ಅದರ ಜೊತೆಗೆ ರಕ್ಷಣಾ ಪಡೆಗಳು ಹೆಲಿ ಕಾಪ್ಟರ್ ಮೂಲಕ ಅನೇಕ ಕಡೆ ಬೀಳಿಸಿ ದ್ದ ಅಹಾರವನ್ನೂ ಸೇವಿಸಿದ್ದಾರೆ ಎಂದು ಕೊಲಂಬಿಯಾದ ಆದಿವಾಸಿ ಜನರ ರಾಷ್ಟ್ರೀಯ ಸಂಸ್ಥೆ (ಒಪಿಐಎಸಿ) ಹೇಳಿದೆ.

ಮಕ್ಕಳೆಲ್ಲರೂ ಒಡಹುಟ್ಟಿದವರಾಗಿದ್ದು,
11 ತಿಂಗಳಿಂದ 13 ವರ್ಷದೊಳಗಿನ ವಯೋಮಾನದವರಾಗಿದ್ದಾರೆ. ಕಾಡಿನ ಬಗ್ಗೆ ಇದ್ದ ಜ್ಞಾನದಿಂದ ಮಕ್ಕಳು ಬದಕುಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಕ್ಕಳಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಅವರಿಗೆ ಘನಾಹಾರ ನೀಡಲಾಗುತ್ತಿಲ್ಲ. 2-3 ವಾರಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು’
ಎಂದು ಕೊಲಂಬಿಯ ರಕ್ಷಣಾ ಸಚಿವ ಇವಾನ್ ವೆಲಸ್‌ಕ್ವೀಸ್ ತಿಳಿಸಿದ್ದಾರೆ.

ಕೊಲಂಬಿಯಾ ಅಧ್ಯಕ್ಷ ಗಸ್ಟೊವೊ ಪೆಟ್ರೊ ಮತ್ತವರ ಕುಟುಂಬ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದೆ.

‘ದಟ್ಟ ಕಾಡಿನಲ್ಲಿ ನಾಲ್ವರು ಮಕ್ಕಳು ಬದುಕುಳಿದಿದ್ದಕ್ಕೆ ಅವರಿಗೆ ಸ್ಥಳೀಯ ಪರಿಸರದ ಕುರಿತು ಇದ್ದ ಜ್ಞಾನ ಮತ್ತು ಪರಿಸರದ ಜೊತೆಗಿದ್ದ ಸಂಬಂಧವೇ ಕಾರಣ. ಅಂಥ ಕಲಿಕೆಯು ಮಕ್ಕಳು ತಾಯಿಯ ಗರ್ಭದಲ್ಲಿದ್ದಾಗಲೇ ಆರಂಭ ವಾಗುತ್ತದೆ’ ಎಂದು ಒಪಿಐಎಸಿ ಶ್ಲಾಘಿಸಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ