October 5, 2024

ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕøತ ಉಪನ್ಯಾಸಕರು,
ಮೈಸೂರು.
ಮೊ. 9448233119

ಮನುಷ್ಯನ ಮನದ ಮುಖಗಳು ಹಲವಾರು. ಯಾರೂ ಸಹ ಅದನ್ನು ಹೀಗೇ ಎಂದು ಊಹೆ ಮಾಡಲಾರರು. ಏಕೆಂದರೆ ಊಸರುವಳ್ಳಿಯಂತೆ ಬದಲಾಯಿಸುವ ಬಣ್ಣ, ಕ್ಷಣಕ್ಕೊಂದು ಚಿಂತನೆ ಹಲವಾರು ರೀತಿಯಲ್ಲಿ ಬದಲಾಗುವ ಈ ಮನುಜನ ಸ್ವಭಾವವನ್ನು ಯಾರಿಂದಲೂ ಸಹ “ಇದಮಿತ್ಥಂ” ಎಂದು ಹೇಳುವುದು ಅಸಾಧ್ಯವಾದುದು. ಲೋಕದ ವ್ಯವಹಾರದಲ್ಲಿ ಮನುಷ್ಯನ ಚಿಂತನೆ ಒಳ್ಳೆಯದೂ ಇರಬಹುದು ಕೆಟ್ಟದ್ದೂ ಇರಬಹುದು. ಅದು ಆಯಾಯ ಘಟನೆಗಳನ್ನು, ಸಂದರ್ಭಗಳನ್ನು ಹೊತ್ತು ಸಾಗುತ್ತದೆ. ಇದನ್ನು ನಮ್ಮ ಡಿ.ವಿ.ಜಿ.ಯವರು ಈ ರೀತಿ ಮಾರ್ಮಿಕವಾಗಿ ಹೇಳಿದ್ದಾರೆ.
ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು? |
ಅಂತರಗಭೀರಗಳ ತಾನ್ ಕಂಡವರಾರು? ||
ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ |
ಸ್ವಂತಕೇ ದುರ್ದರ್ಶ ಮಂಕುತಿಮ್ಮ ||
“ತನ್ನ ಅಂತರಂಗವನೆಲ್ಲಾ ಬಿಚ್ಚಿ ತೋರಿಸುವವರಾರೂ ಇಲ್ಲ; ಅಂತರಾಳದಲ್ಲಿ ಹುದುಗಿರುವ (ಅಂತರಗಭೀರ) ಭಾವನೆಗಳನ್ನು ಯಾರುತಾನೆ ಬಲ್ಲವರು ! ಅದರ ಒಳಹೊಕ್ಕು ನೋಡಿದಾಗ ಗಂಟುಗಳು ಎಲ್ಲೆಲ್ಲೂ ಕಾಣಿಸುತ್ತವೆ. ಹಾಗೆಯೇ ಈ ಗಂಟುಗಳು ನಮ್ಮ ದೃಷ್ಟಿಗೆ ಕಷ್ಟಕರವಾಗಿಯೇ ಗೋಚರವಾಗುತ್ತವೆ”.
ಇಲ್ಲಿ ಅಂತರಂಗದ ಗಂಟುಗಳೆಂದರೆ ಭಾವನೆಗಳ ವಿಕಾರ. ಯಾವಾಗ ಏನು ಬೇಕಾದರೂ ಯೋಚಿಸಬಲ್ಲ ದುರ್ಬಲ ಮನಸ್ಸು ಕ್ಷಣಕ್ಕೊಂದು ಆಲೋಚನೆಯನ್ನು ತಂದಿಡುತ್ತದೆ. ಆದ್ದರಿಂದ ನಾವು ಯಾವುದೇ ಮನುಷ್ಯನ ಮನಸ್ಸಿನ ಭಾವನೆಗಳನ್ನು ಅವರ ಮೇಲ್ನೋಟದ ವ್ಯಕ್ತಿತ್ವದಿಂದ ಅಳೆಯಲಾಗುವುದಿಲ್ಲ. ಆದ್ದರಿಂದಲೇ “ಹೇಗಿದ್ದವನು ಹೇಗೆ ಬದಲಾದ!” ಎನ್ನುವ ಉದ್ಗಾರವನ್ನು ಕಾಣುತ್ತಲೇ ಇರುತ್ತೇವೆ. ಈ ಭಾವನೆಗಳ ಆಳವನ್ನು ಯಾರಿಂದಲೂ ಅಳೆಯು ವುದು ಸಾಧ್ಯವಿಲ್ಲದ ಮಾತು, ಏಕೆಂದರೆ ಈ ಭಾವಗಳು ಬದಲಾದಂತೆಲ್ಲ ನಡವಳಿಕೆ ಕೂಡ ಬದಲಾಗುತ್ತಲೇ ಹೋಗುತ್ತದೆ. ಆದ್ದರಿಂದ ಮನುಜನ ಮನಸ್ಸು ಕ್ಷಣಕ್ಷಣಕ್ಕೂ ಅಗೋಚರ, ಇದು ಎಷ್ಟರಮಟ್ಟಿಗೆ ಎಂದರೆ ತನ್ನಷ್ಟಕ್ಕೆ ತಾನೇ ಅದನ್ನು ಅರ್ಥಮಾಡಿಕೊಳ್ಳ ಲಾಗದಂತಹ ದುಸ್ಥಿತಿ. ಕೆಲವು ಸಂದರ್ಭಗಳಲ್ಲಿ ಮನಸ್ಸು ತನ್ನ ಹತೋಟಿ ಕಳೆದುಕೊಂಡಾಗ ಏನೇನೋ ಮಾತುಗಳು ಬಾಯಿಂದ ಬರುತ್ತದೆ, ಅದಾದ ನಂತರ “ನಾನ್ಯಾಕೆ ಹೀಗೆ ಆಡಿದೆ?” ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿಯೇ ಹುಟ್ಟಿಕೊಂಡು ನಮಗೆ ನಾವೇ ಪ್ರಶ್ನಾರ್ಹರಾಗುತ್ತೇವೆ. ಇಂತಹ ಚಂಚಲ ಮನಸ್ಸನ್ನು ಗಟ್ಟಿಯಾಗಿ ಹಿಡಿಯಬೇಕೆಂದರ ಸಾಕಷ್ಟು ಸಂಯಮ ಹಾಗೂ ಸಾಧನೆ ಬೇಕಾಗುತ್ತದೆ.
ಇಂತಹ ಮನಸ್ಸಿನ ಭಾವನೆಗಳ ತಾಕಲಾಟವನ್ನು ಕಡಿಮೆ ಗೊಳಿಸಿಕೊಳ್ಳಬೇಕು ಅದು ಹೇಗೆ…? ಎಂದರೆ ಡಿ.ವಿ.ಜಿ.ಯವರು ಅದನ್ನು ತುಂಬಾ ಅರ್ಥಗರ್ಭಿತವಾಗಿ ಹೇಳುತ್ತಾರೆ.
ಮನುಜಲೋಕವಿಕಾರಗಳು ನೀನಳಿಸುವೊಡೆ |
ಮನಕೊಂದು ದರ್ಪಣವ ನಿರವಿಸೆಂತಾನುಂ ||
ಅನುಭವಿಪರವರಂದು ತಮ್ಮಂತರಂಗಗಳ |
ಅನುಪಮಾಸಹ್ಯಗಳ ಮಂಕುತಿಮ್ಮ ||
“ಮನುಜಲೋಕದ ವಿಕಾರಗಳನ್ನು ನೀನು ಅಳಿಸಲೇಬೇಕು ಎಂದಾದರೆ ನಿಮ್ಮ ನಿಮ್ಮ ಮನಸ್ಸಿಗೆ ಒಂದು ಕನ್ನಡಿಯನ್ನು ನಿರ್ಮಿಸಿಕೊಳ್ಳಿ ಆಗ ಅದರೊಳಗೆ ನಿಮ್ಮ ಅಂತರಂಗದ ಭಾವವಿಕಾರ ಗಳನ್ನು ನೋಡಿದಾಗ ನಮಗೆ ಅಸಹ್ಯ ಎನಿಸುತ್ತದೆ”.
ಪ್ರಪಂಚ ವಿಚಿತ್ರವಾದ ಜನರಿಂದ ಕೂಡಿದೆ ಎನ್ನುತ್ತೇವೆ. “ಒಂದು ಕೈಯಲ್ಲಿರುವ ಬೆರಳುಗಳೇ ಸಮನಾಗಿಲ್ಲ ಅಂತಹುದರಲ್ಲಿ ಒಂದು ಮನೆ ಜನ ಸರಿಯಿರುತ್ತಾರೆಯೇ…?” ಎಂದು ಪ್ರಶ್ನಿಸಿ ಕೊಳ್ಳುತ್ತೇವೆ. ಈ ರೀತಿಯ ಪ್ರಶ್ನೆಗಳು ಉತ್ತರವನ್ನು ಕಂಡುಕೊಳ್ಳಬೇಕು ಎಂದಾದರೆ ನಮ್ಮ ನಮ್ಮ ಮನಸ್ಸಿಗೆ ನಾವೇ ಮೊದಲು ಪ್ರಶ್ನೆ ಮಾಡಿಕೊಳ್ಳಬೇಕು. ಅದನ್ನು ನಾವು ಒಳ್ಳೆಯ ನಡತೆಯತ್ತ ಬದಲಾಯಿಸಿಕೊಳ್ಳಬೇಕು. “ಇಡೀ ಪ್ರಪಂಚದಲ್ಲಿ ಸತ್ಯ ಹೇಳುವ ವಸ್ತು ಒಂದೇ ಒಂದು ಅದು ಕನ್ನಡಿ” ಆದ್ದರಿಂದ ನಾವು ಕನ್ನಡಿಯ ಮುಂದೆ ನಿಂತಾಗ ಅದು ನಮ್ಮ ನೈಜ ಪ್ರತಿಬಿಂಬವನ್ನು ತೋರಿಸುತ್ತದೆಯೇ ಹೊರತು ಬೇರೆ ಏನನ್ನೂ ಅಲ್ಲ. ಆದ್ದರಿಂದ ನಮ್ಮ ಮನಸ್ಸಿನೊಳಗೆ ನಾವು ನಮ್ಮ ಭಾವವಿಕಾರಗಳಿಗೆ ಕನ್ನಡಿ ಹಿಡಿದಾಗ ಅದು ತನ್ನ ನೈಜತೆಯನ್ನು ಮಾತ್ರ ತೋರಿಸುತ್ತದೆ, ಆದ್ದರಿಂದ ಪ್ರತಿಯೊಬ್ಬರೂ ಸಹ ತಾನು ಬದಲಾಗಬೇಕು ಎಂದಾದಲ್ಲಿ ತನ್ನ ಮನಸ್ಸನ್ನು ಬದಲಿಸುವತ್ತ ಹೆಜ್ಜೆಯಿಡಬೇಕು, ಆ ಹೆಜ್ಜೆ ನೈಜತೆಯಿಂದ ಕೂಡಿರಬೇಕು. ನಮ್ಮ ಅಂತರಂಗದ ಮಾತುಗಳನ್ನು ನೇರವಾಗಿ ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಹಾಗೆಯೇ ಮೊಟ್ಟಮೊದಲಿಗೆ ನಾನು ಬದಲಾಗಬೇಕು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಕ್ಷುಲ್ಲಕ ಕಾರಣಗಳಿಗೆ ಹೊಡೆದಾಡುವ ಮನುಷ್ಯ ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗಲಾರೆ ಎಂಬ ನಗ್ನಸತ್ಯವನ್ನು ಅರಿತುಕೊಂಡಾಗ ಈ ಕನ್ನಡಿ ಒಂದು ಅರ್ಥವನ್ನು ಪಡೆದುಕೊಳ್ಳುತ್ತದೆ. ಆಗ ಅದರ ಸೃಷ್ಟಿಯೂ ಕೂಡ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. “ಮುಖ ಮನಸ್ಸಿನ ಕನ್ನಡಿ” ಎಂದು ಹೇಳುವ ಮಾತಿದೆ, ಏಕೆಂದರೆ ಮನಸ್ಸಿನ ಭಾವನೆಗಳನ್ನು ನಮ್ಮ ಮುಖ ಹೊರಹಾಕುತ್ತದೆ. ಆದ್ದರಿಂದ ಈ ಭಾವವಿಕಾರಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ನಮ್ಮ ಮನಸ್ಸಿನ ಕನ್ನಡಿಯನ್ನು ಧೂಳು ಹಿಡಿದು ಮಸುಕಾಗದಂತೆ ನೋಡಿಕೊಳ್ಳಬೇಕು. ಇರುವ ಒಂದು ಜನ್ಮವನ್ನು ಸಾರ್ಥಕಮಾಡಿಕೊಳ್ಳಬೇಕು ಎಂಬುದು ಈ ಒಂದು ಕಗ್ಗದಲ್ಲಿ ಡಿ.ವಿ.ಜಿ.ಯವರು ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ. ಇಂತಹ ಹತ್ತು ಹಲವು ಭಾವವಿಕಾರತೆಯನ್ನು ಹೊಂದಿದ ಮನುಜನಲ್ಲಿ ನೈಜತೆಯನ್ನು ಕಾಣುವ ಹಂಬಲ ದಾರ್ಶನಿಕ ಪ್ರಯತ್ನ ಪಡುತ್ತಾನೆ ಅವನ ಪ್ರಯತ್ನ ಹೇಗಿತ್ತು ಎಂಬುದನ್ನು ನೋಡಿ.
ಸತ್ಯವಂತನನರಸಲೆನುತ ಪೇಟೆಗಳೊಳಗೆ |
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು ||
ಕಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು |
ತಾತ್ತ್ವಿಕ ಡಯೋಜೆನಿಸ್ ಮಂಕುತಿಮ್ಮ ||
ಗ್ರೀಸ್ ದಾರ್ಶನಿಕ ಡಯೋಜೆನಿಸ್ ಎಂಬುವವನು ಸತ್ಯವಂತರನ್ನು ಹುಡುಕುತ್ತೇನೆ ಎಂದು ಹಾಡಹಗಲಿನಲ್ಲಿ ದೀವಟಿಗೆ (ದೀಪ) ಹಿಡಿದು ಪೇಟೆ ಬೀದಿಗಳಲ್ಲೆಲ್ಲಾ ಸಂಚಾರ ಮಾಡಿ ಯಾರೊಬ್ಬರು ಸತ್ಯವಂತರಿಲ್ಲ ಎಂದು ಬೇಸರಮಾಡಿಕೊಂಡು ಸಾರ್ವಜನಿಕ ಪ್ರದೇಶದಲ್ಲಿ ಜನರ ಉಪಯೋಗಕ್ಕೆಂದು ಕಟ್ಟಿದ ತೊಟ್ಟಿಯೊಳಗೆ ವಾಸಿಸಲು ಪ್ರಾರಂಭಿಸಿದನಂತೆ.
ಸಾರ್ವಜನಿಕರ ಉಪಯೋಗಕ್ಕಾಗಿ ಕಟ್ಟಿದ ನೀರಿನ ತೊಟ್ಟಿಯೊಳಗೆ ವಾಸಿಸಿದ ಎಂಬುದು ಮೇಲ್ನೋಟಕ್ಕೆ ಹಾಸ್ಯಾಸ್ಪದ ಎನಿಸುತ್ತದೆ. ಆದರೆ ಇದರ ಹಿಂದಿರುವ ಲೋಕದ ಸ್ವಭಾವದ ಅರಿವು ಆಗಿನ ಕಾಲಕ್ಕೆ ಬೆಚ್ಚಿಬೀಳಿಸುವಂತಿದೆ ಎಂದಾದಲ್ಲಿ ಈಗ ಕೇಳಬೇಕೆ…! ಹಾಡುಹಗಲು ಸೂರ್ಯನ ಬೆಳಕಿರುವಾಗ ದೀಪ ಹಿಡಿದು ಹುಡುಕಿದವನನ್ನು ಮೂರ್ಖ ಎನ್ನುತ್ತೇವೆ. ಆದರೆ ಅಂತಹ ಪ್ರಖರವಾದ ಸೂರ್ಯನ ಬೆಳಕಿನಲ್ಲೂ ಕಾಣದೆ ಈ ಸತ್ಯ ಎನ್ನುವುದು ಎಲ್ಲಾದರೂ ಅಡÀಗಿದ್ದೀತೆ…? ಎಂಬ ಜಿಜ್ಞಾಸೆ ಬರಬೇಕು ಎಂದಾದಲ್ಲಿ ಈ ಸತ್ಯವಂತರು ಎಷ್ಟು ಜನರಿದ್ದರಪ್ಪ ಅನ್ನುವ ಪ್ರಶ್ನೆ ಸಹಜವಾಗಿಯೇ ನಮ್ಮ ಅರಿವಿಗೆ ಬರಬೇಕು. ಸತ್ಯವಂತರನ್ನು ಹುಡುಕುವ ಪ್ರಯತ್ನ ಇಂದಿನದಲ್ಲ ತಲತಲಾಂತರದಿಂದಲೂ ನಡೆಯುತ್ತಲೇ ಇದೆ ಎಂದಾಯಿತು ಎಂಬುದು ಎಂತಹ ವಿಪರ್ಯಾಸ! ಈ ಸತ್ಯದ ಶೋಧ ಈಗಲೂ ನಡೆಯುತ್ತಲೇ ಇದೆ, ಆದರೆ ಇದಕ್ಕೊಂದು ಅಂತ್ಯ ಸಿಗುತ್ತಿಲ್ಲ.
ಮನುಷ್ಯನ ಆಸೆ ಆಕಾಂಕ್ಷೆಗಳು ಹೆಚ್ಚಾದಂತೆಲ್ಲಾ ಮನಸ್ಸಿನ ವಿಕಾರಗಳು ಬದಲಾಗುತ್ತವೆ. ಎಲ್ಲವನ್ನೂ ಪಡೆದುಕೊಳ್ಳಬೇಕು ಎಂಬ ಹೆಬ್ಬಯಕೆ ನಮ್ಮನ್ನು ನಾನಾ ರೀತಿಯಲ್ಲಿ ನಡೆಸುತ್ತದೆ. ಅದಕ್ಕೆಂದೇ ಗೌತಮ ಬುದ್ಧ “ಆಸೆಯೇ ದುಃಖಕ್ಕೆ ಮೂಲ” ಎಂದಿದ್ದಾನೆ. ಈ ಆಸೆಯನ್ನು ತೀರಿಸಿಕೊಳ್ಳಲು ಹಿಡಿಯುವ ಅನೇಕ ಮಾರ್ಗಗಳು ನಮ್ಮ ವ್ಯಕ್ತಿತ್ವವನ್ನೇ ಬದಲು ಮಾಡುತ್ತದೆ. ಈ ವ್ಯಕ್ತಿತ್ವಕ್ಕೆ “ಕಪ್ಪು-ಚುಕ್ಕೆ” ಬಂದಿತೆಂದರೆ ಸಾಕು ಅದು “ಬಿಳಿ ಹಾಳೆಯ ಮೇಲೆ ಕರಿ ಚುಕ್ಕಿಯಿಟ್ಟಂತೆ”.
ಹಾಗೆಂದೂ ಭಾವನೆಗಳೇ ಬೇಡ ಎಂದಲ್ಲ ಬೇಕು ಅದು ನಮ್ಮ ವ್ಯಕ್ತಿತ್ವಕ್ಕೆ ಮೆರುಗು ಕೊಡುವಂತೆ ಇರಬೇಕು. ನಮ್ಮ ವ್ಯಕ್ತಿತ್ವ ನಮಗೆ ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತದೆ. ಎಷ್ಟು ಐಶ್ವರ್ಯವಂತರಾದರೂ ಸಹ ಒಳ್ಳೆಯ ಗುಣವಿಲ್ಲ ಎಂದರೆ ಅವರಿಗೆ ಮರ್ಯಾದೆ ಇರುವುದಿಲ್ಲ. ಕೆಲವರು ಅವರ ಹಣಕ್ಕೆ ಮರುಳಾದ ಹೊಗಳುಭಟ್ಟರು ಇಂತಹವರನ್ನು ಎತ್ತಿಹಿಡಿಯುತ್ತಾರೆ. ಎಷ್ಟು ದಿನ ಎತ್ತಿ ಹಿಡಿದಾರು…? ಹಿಡಿದ ಕೈ ಸೋಲಲೇ ಬೇಕು, ಸೋತೇ ಸೋಲುತ್ತದೆ ಆಗ ಪಾತಾಳಕ್ಕೆ ಬೀಳುವುದಂತೂ ಸತ್ಯವಾದ ಸಂಗತಿ. ಆದ್ದರಿಂದ ಪಾತಾಳದಲ್ಲಿ ಸಿಲುಕಿ ನರಳುವ ಬದಲು ಇರುವಾಗಲೇ ನಮ್ಮ ಅಂತರಂಗಕ್ಕೊಂದು ನಿರ್ಮಲವಾದ ಕನ್ನಡಿಯನ್ನು ಇಟ್ಟು ಭಾವನೆಗಳ ಮೇಲಿನ ಧೂಳನ್ನು ತೆಗೆದು ಸ್ವಚ್ಛಗೊಳಿಸಿ ಸುಂದರವಾದ ಬದುಕನ್ನು ಕಾಣುವ ಪ್ರಯತ್ನ ಮಾಡೋಣ.
***********

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ