October 5, 2024

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿ.ಜೆ.ಪಿ.ಗೆ ದೊಡ್ಡ ಆಘಾತ ನೀಡಿದೆ. ಇತ್ತ ಐದಕ್ಕೆ ಐದೂ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುವ ಕಾಂಗ್ರೇಸ್ ಜಿಲ್ಲೆಯಲ್ಲಿ ತನ್ನ ಗತವೈಭವವನ್ನು ಮರುಸ್ಥಾಪಿಸಿದೆ.

ಶೃಂಗೇರಿಯಿಂದ ಟಿ.ಡಿ. ರಾಜೇಗೌಡ, ತರೀಕೆರೆಯಿಂದ ಜಿ.ಹೆಚ್. ಶ್ರೀನಿವಾಸ್, ಮೂಡಿಗೆರೆಯಿಂದ ನಯನ ಮೋಟಮ್ಮ, ಚಿಕ್ಕಮಗಳೂರಿನಿಂದ ಹೆಚ್.ಡಿ. ತಮ್ಮಯ್ಯ, ಕಡೂರಿನಿಂದ ಕೆ.ಎಸ್. ಆನಂದ್ ಕಾಂಗ್ರೇಸ್ ಪಕ್ಷದ ಶಾಸಕರಾಗಿ ಹೊರಹೊಮ್ಮಿದ್ದಾರೆ.

2004ಕ್ಕಿಂತ ಮುನ್ನ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೇಸ್ ತನ್ನ ಪಾರಮ್ಯ ಮೆರೆಯುತ್ತಿತ್ತು. ಆಗಾಗ ಜನತಾ ಪಕ್ಷ, ಜನತಾದಳ ಕೆಲ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿತ್ತು.

ಆದರೆ 2004ರಿಂದ ಜಿಲ್ಲೆಯಲ್ಲಿ ಬಿ.ಜೆ.ಪಿ. ಪರ್ವ ಪ್ರಾರಂಭವಾಗಿತ್ತು. ಸತತ ನಾಲ್ಕು ಅವಧಿಯಿಂದ ಐದರಲ್ಲಿ ಕನಿಷ್ಠ ನಾಲ್ಕು ಕ್ಷೇತ್ರಗಳನ್ನು ಬಿ.ಜೆ.ಪಿ. ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿತ್ತು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿ ಯವರು ಸತತ ನಾಲ್ಕು ಬಾರಿ ಜಯಭೇರಿ ಬಾರಿಸಿದ್ದರು. 2004ರಿಂದ ಈಚೆಗೆ ಮೂಡಿಗೆರೆ, ಶೃಂಗೇರಿ, ತರೀಕೆರೆ ಕ್ಷೇತ್ರಗಳನ್ನು ಬಹತೇಕ ಬಿ.ಜೆ.ಪಿ. ಗೆದ್ದುಕೊಳ್ಳುತ್ತಿತ್ತು. ಕಳೆದ ಚುನಾವಣೆಯಲ್ಲಿ ಕಡೂರು ಕ್ಷೇತ್ರವನ್ನು ಸಹ ಬಿ.ಜೆ.ಪಿ. ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 2018ರ ಚುನಾವಣೆಯಲ್ಲಿ ಶೃಂಗೇರಿ ಹೊರತುಪಡಿಸಿ ಉಳಿದ ನಾಲ್ಕು ಕಡೆ ಬಿ.ಜೆ.ಪಿ. ತನ್ನ ಬಾವುಟ ಹಾರಿಸಿತ್ತು.

1999ರಲ್ಲಿ ಜಿಲ್ಲೆಯಿಂದ ಕಾಂಗ್ರೇಸ್ ಪಕ್ಷದ ಮೂರು ಮಂದಿ ರಾಜ್ಯದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದರು. ಡಿ.ಬಿ.ಚಂದ್ರೇಗೌಡರು, ಸಗೀರ್ ಅಹಮದ್ ಮತ್ತು ಮೋಟಮ್ಮನವರು ಎಸ್.ಎಂ. ಕೃಷ್ಣಾ ಅವರ ಸಂಪುಟದಲ್ಲಿ ಮಂತ್ರಿಗಳಾಗಿದ್ದರು.

ಅದೇ ಅವಧಿಯಲ್ಲಿ ದತ್ತಪೀಠ ಹೋರಾಟ ಮುನ್ನಲೆಗೆ ಬಂದಿದ್ದು, ಜಿಲ್ಲೆಯಾದ್ಯಂತ ತನ್ನ ಬೇರುಗಳನ್ನು ಗಟ್ಟಿಮಾಡಿಕೊಂಡ ಬಿ.ಜೆ.ಪಿ. 2004 ರ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

ಕಳೆದ ಎರಡು ದಶಕಗಳಿಂದ ಸತತ ಸೋಲುಗಳಿಂದ ಸೊರಗಿಹೋಗಿದ್ದ ಕಾಂಗ್ರೇಸ್ ಪಕ್ಷ ಇನ್ನೇನು ಜಿಲ್ಲೆಯಲ್ಲಿ ನೆಲೆಕಳೆದುಕೊಂಡಿತು ಎನ್ನುವ ಸನ್ನಿವೇಶದಲ್ಲಿ ಈಗ ಮತ್ತೆ ಮರುಜೀವ ಪಡೆದುಕೊಂಡಿದೆ.
ಐದಕ್ಕೆ ಐದೂ ಕ್ಷೇತ್ರಗಳನ್ನು ಗೆದ್ದು ಸ್ವತಃ ಕಾಂಗ್ರೇಸ್ ಕಾರ್ಯಕರ್ತರೇ ನಂಬಲಾರದಂತಹ ಫಲಿತಾಂಶ ಹೊರಹೊಮ್ಮಿದೆ.

ಚುನಾವಣೆ ಸಂದರ್ಭದಲ್ಲಿ ಐದರಲ್ಲಿ ಎರಡು ಸ್ಥಾನಗಳನ್ನು ಕಾಂಗ್ರೇಸ್ ಗೆಲ್ಲಬಹುದು ಎಂದು ವಿಶ್ಲೇಷಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ, ಸಮೀಕ್ಷೆಗಳನ್ನು ಮೀರಿ ಕಾಂಗ್ರೇಸ್ ಇಲ್ಲಿ ಸಾಧನೆ ಮಾಡಿದೆ.

ಸಿ.ಟಿ.ರವಿಯವರ ಸೋಲು ದೊಡ್ಡ ಸುದ್ದಿಯಾಗಿದೆ. ರಾಜ್ಯದ ಮುಂಚೂಣಿ ನಾಯಕರಾಗಿ, ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ.ರವಿಯವರು ನಾಲ್ಕು ತಿಂಗಳ ಹಿಂದೆ ತನ್ನದೇ ಬಳಗದಲ್ಲಿದ್ದು ನಂತರ ಕಾಂಗ್ರೇಸ್ ಸೇರಿ ಅಭ್ಯರ್ಥಿಯಾಗಿದ್ದ ಹೆಚ್.ಡಿ. ತಮ್ಮಯ್ಯ ವಿರುದ್ಧ ಸೋತಿರುವುದು ಅವರಿಗೆ ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗದಿರುವಂತಹ ಫಲಿತಾಂಶ.

ಕಡೂರಿನಲ್ಲಿ ಗೆಲುವು ಖಚಿತ ಎಂದೇ ಭರವಸೆಯಲ್ಲಿದ್ದ ಬೆಳ್ಳಿಪ್ರಕಾಶ್ ಸೋಲು ಅವರಿಗೆ ಆಘಾತ ತಂದಿದೆ. ತರೀಕೆರೆಯಲ್ಲಿ ಶಾಸಕ ಡಿ.ಎಸ್. ಸುರೇಶ್ ಪರಾಭವಗೊಂಡಿದ್ದಾರೆ. ಮೂಡಿಗೆರೆಯಲ್ಲಿ ಹೊಸ ಅಭ್ಯರ್ಥಿ ದೀಪಕ್ ದೊಡ್ಡಯ್ಯ ತೀವ್ರ ಪೈಪೋಟಿಯ ನಡುವೆಯೂ ಅಲ್ಪಮತಗಳಿಂದ ಸೋಲನುಭವಿಸಿದ್ದಾರೆ. ಶೃಂಗೇರಿಯಲ್ಲಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಡಿ.ಎನ್. ಜೀವರಾಜ್ ಕೇವಲ 201 ಮತಗಳಿಂದ ಸೋಲನುಭವಿಸಿ ಸತತ ಎರಡನೇ ಅವಧಿಗೆ ನಿರಾಶೆ ಅನುಭವಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕ್ಷೇತ್ರಗಳ ಮತಹಂಚಿಕೆಯನ್ನು ಗಮನಿಸಿದಾಗ ಬಿ.ಜೆ.ಪಿ. ಬಹುತೇಕ ಕ್ಷೇತ್ರಗಳಲ್ಲಿ ಕಳೆದ ಬಾರಿ ಪಡೆದುಕೊಂಡ ಮತಗಳನ್ನು ಪಡೆದುಕೊಂಡಿದೆ. ಕೆಲವು ಕಡೆ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನೇ ಪಡೆದಿದೆ. ಆದರೆ ಕಡೂರು, ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆ.ಡಿ.ಎಸ್. ನಿರೀಕ್ಷೆಯಂತೆ ಮತಪಡೆಯದೇ ಇದ್ದುದ್ದು, ಆ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೇಸ್ ಕಡೆ ವಾಲಿರುವುದು ಕಂಡು ಬರುತ್ತದೆ.

ಚಿಕ್ಕಮಗಳೂರಿನಲ್ಲಿ ಜೆ.ಡಿ.ಎಸ್. ಎಂಎಲ್ಸಿ ಎಸ್.ಎಲ್. ಬೋಜೇಗೌಡರು ನೇರವಾಗಿ ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹಾಗೆಯೇ ಕಡೂರಿನಲ್ಲಿ ತೀವ್ರ ಸ್ಪರ್ಧೆ ನೀಡುತ್ತಾರೆ ಎನ್ನಲಾದ ವೈ.ಎಸ್.ವಿ. ದತ್ತಾ ಕಳಪೆ ಸಾಧನೆ ತೋರಿದ್ದು, ಶೃಂಗೇರಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ಜೆ.ಡಿ.ಎಸ್. ನ ಸುಧಾಕರ್ ಶೆಟ್ಟಿಯವರು ನಿರೀಕ್ಷೆಗಿಂತ ಅತಿಕಡಿಮೆ ಮತಪಡೆದದ್ದು, ಮೂಡಿಗೆರೆಯಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಪಿ. ಕುಮಾರಸ್ವಾಮಿಯವರ ಪರವಾಗಿದೆ ಎನ್ನಲಾಗಿದ್ದ ದೊಡ್ಡ ಸಂಖ್ಯೆಯ ಮತಗಳು ಅವರ ಪರವಾಗಿ ಚಲಾವಣೆಯಾಗದೇ ಇದ್ದುದ್ದು ಹೀಗೆ ಜಿಲ್ಲೆಯಲ್ಲಿ ಜೆ.ಡಿ.ಎಸ್. ಕಳಪೆ ಸಾಧನೆ ಒಂದು ರೀತಿಯಲ್ಲಿ ಕಾಂಗ್ರೇಸ್ ಗೆ ವರವಾಗಿ ಪರಿಣಮಿಸಿರುವುದು ಕಂಡು ಬರುತ್ತದೆ.

ಜಿಲ್ಲೆಯಲ್ಲಿ ಬಿ.ಜೆ.ಪಿ ಸೋಲಿಗೆ ಕೆಲ ಸ್ವಯಂಕೃತ ತಪ್ಪುಗಳು ಕಾರಣವಾಗಿವೆ. ಗೆದ್ದೇ ಗೆಲ್ಲುತ್ತೇವೆ ಎಂಬ  ಅತಿಯಾದ ಆತ್ಮವಿಶ್ವಾಸ, ಮೂಡಿಗೆರೆ ಕ್ಷೇತ್ರದಲ್ಲಿ ಉಂಟಾದ ಗೊಂದಲ, ಸಿ.ಟಿ.ರವಿಯವರ ಕೆಲವು ಹೇಳಿಕೆಗಳು, ಬದಲಾದ ಜಾತಿಸಮೀಕರಣ, ಹತೋಟಿ ಮೀರಿದ ಭ್ರಷ್ಟಾಚಾರ, ಬೆಲೆ ಏರಿಕೆ, ಕಾಂಗ್ರೇಸ್ ನ ಗ್ಯಾರಂಟಿ ಕಾರ್ಡ್ ಪ್ರಭಾವ ಇವೆಲ್ಲ ಜಿಲ್ಲೆಯಲ್ಲಿ ಬಿ.ಜೆ.ಪಿ. ಹಿನ್ನಡೆಗೆ ಪ್ರಮುಖ ಅಂಶಗಳಾಗಿವೆ.

ಒಟ್ಟಾರೆ ಈ ಫಲಿತಾಂಶ ಜಿಲ್ಲೆಯಲ್ಲಿ ಬಿ.ಜೆ.ಪಿ.ಗೆ ದೊಡ್ಡ ಆಘಾತ ನೀಡಿದ್ದರೆ, ಕಾಂಗ್ರೇಸ್ ಪಕ್ಷಕ್ಕೆ ಮರುಜೀವ ನೀಡಿದೆ, ಜೆ.ಡಿ.ಎಸ್. ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಜಿಲ್ಲೆಯಲ್ಲಿ ಅಪ್ರಸ್ತುತವಾಗುವ ಮುನ್ನೆಚ್ಚರಿಕೆ ನೀಡಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ